ಗುಲ್ಬರ್ಗಾ

ನಕಲಿ ಅವರೆ ಬೆಳೆದು ಕಂಗಾಲಾದ ರೈತ

Published On :

ಕ.ಪ್ರ.ವಾರ್ತೆ  ಗುಲ್ಬರ್ಗ  ಆ.25
ಅವರೇಕಾಯಿ ಬೆಳೆದು ಲಾಭ ಗಳಿಸುವ ಸಲುವಾಗಿ ಅಪಾರ ಶ್ರಮ, ಹಣ ವ್ಯಯ ಮಾಡಿದ್ದ ರೈತನೊಬ್ಬ ನಕಲಿ ಬಿತ್ತನೆ ಬೀಜಗಳಿಂದ ಮೋಸ ಹೋಗಿ ಅತ್ತ ಹಣವೂ ಇಲ್ಲ, ಇತ್ತ ಬೆಳೆಗೆ ಬೆಲೆಯೂ ಇಲ್ಲದೆ ಕಂಗಾಲಾಗಿದ್ದಾನೆ.
ಆಳಂದ ತಾಲೂಕಿನ ಲಾಡ ಚಿಂಚೋಳಿ ಗ್ರಾಮದ ಪ್ರಗತಿಪರ ರೈತ ನಾಗೇಂದ್ರಪ್ಪ ಚಿಕ್ಕಬಸ್ತಿ ಈಗ ನಷ್ಟಕ್ಕೆ ಸಿಲುಕಿಸುವ ರೈತ.
ನಾಗೇಂದ್ರಪ್ಪ ಅವರು ತಮ್ಮ 2 ಎಕರೆ ಹೊಲದಲ್ಲಿ ಅವರೇಕಾಯಿ ಬೀಜಗಳು ಬಿತ್ತಿದ್ದರು. ಕಳೆದ ಮೇ ತಿಂಗಳಲ್ಲಿ ಆಳಂದ ಪಟ್ಟಣದ ಅಧಿಕೃತ ಅಂಗಡಿಯೊಂದರಲ್ಲಿ ಅವರೇ ಬಿತ್ತನೆ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿದ್ದರು. ಅವರೇ ಗಿಡಗಳೀಗ ಸಮೃದ್ಧವಾಗಿ ಬೆಳೆದು ನಿಂತಿವೆ. ಆದರೆ, ಅವರೆ ಕಾಯಿಗಳ ಆಕಾರ ಮಾತ್ರ ದಪ್ಪ ದಪ್ಪವಾಗಿ ಬೆಳೆದಿದ್ದು, ಆಹಾರ ಸೇವನೆಗೆ ಯೋಗ್ಯವಿಲ್ಲದಂತಾಗಿದೆ. ದನಗಳಿಗೆ ಹಾಕುವ ಅವರೆ ಕಾಯಿ ಇವಾಗಿವೆ ಎಂಬ ನೋವು ಈಗ ರೈತನನ್ನು ಬಾಧಿಸುತ್ತಿದೆ.
ಬೆಲೆಯಿಲ್ಲದ ಅವರೆ:  ಮಾರುಕಟ್ಟೆಗೆ ಅವರೆ ಕಾಯಿಗಳು ತೆಗೆದುಕೊಂಡು ಹೋದರೆ ಇಂಥ ದಪ್ಪ ಆಕಾರದ ಅವರೆ ಕಾಯಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ ಖರೀದಿಗಾಗಿ ಯಾರು ಮುಂದಾಗದೇ ಕ್ಯಾರೇ ಎನ್ನುತ್ತಿಲ್ಲ. ಬೆಳೆದ ಕಾಯಿಗಳು ಮಾರುಕಟ್ಟೆಯಿಂದ ಬೆಲೆಯಿಲ್ಲದೆ ಸಾಗಣೆ ವೆಚ್ಚ ಭರಿಸಿ ಹಿಂದಿರುಗಿ ರೈತ ಬರುವಂತಾಗಿದೆ. ಇಂಥ ನಕಲಿ ಬೀಜಗಳ ಮಾರಾಟದಿಂದ ರೈತರು ಮೋಸ ಹೋಗಿದ್ದಾರೆ. ಸಂಬಂಧಿಸಿದ ಕೃಷಿ ಅಧಿಕಾರಿಗಳು ರೈತರ ನೆರವಿಗೆ ಬಂದಿಲ್ಲ. ನಕಲಿ ಬೀಜಗಳ ಕುರಿತು ದೂರು ನೀಡಲಾಗಿದೆ. ಆದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗೇಂದ್ರಪ್ಪ ಆರೋಪಿಸಿದ್ದಾರೆ.
ಕಬ್ಬಿನ ಗದ್ದೆಯ ಸಾಲುಗಳಲ್ಲಿ ಅವರೆ ಬೀಜಗಳು ಬಿತ್ತಿ ಬೆಳೆಯಲಾಗಿದೆ. ಅಂದಾಜು 1.2 ಲಕ್ಷ ಲಾಭದ ಬೆಳೆ ಹಾನಿಯಾಗಿದೆ. ಕೂಡಲೇ ಕೃಷಿ ಇಲಾಖೆಯ ಅಧಿಕಾರಿಗಳು ಕಂಗಾಲಾದ ರೈತರ ನೆರವಿಗೆ ಮುಂದಾಗಬೇಕು. ಜೊತೆಗೆ ನಕಲಿ ಬೀಜ ಮಾರಾಟ ಮಾಡಿದ ಅಂಗಡಿಯ ಮಾಲಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.