ಗುಲ್ಬರ್ಗಾ

ಹಳ್ಳಿ ಸೊಗಡಿನಲ್ಲಿ ನೈಜ ಕನ್ನಡ: ಡಾ.ಚಂದ್ರು

Published On :

ಗುಲ್ಬರ್ಗ:  ಗ್ರಾಮೀಣ ಮಟ್ಟದ ರೈತಾಪಿ ಜನ ಮತ್ತು ತಾಯಂದಿರ ಬಾಯಲ್ಲಿ ಮಾತ್ರ ಇಂದು ನಿಜವಾದ ಕನ್ನಡ ಭಾಷೆ ಉಳಿದುಕೊಂಡಿದೆ. ಇದನ್ನು ಕಳೆದುಕೊಳ್ಳದೇ ಮಣ್ಣಿನ ವಾಸನೆಯ ಭಾಷೆಯ ಮಹತ್ವವನ್ನು ಅರಿತುಕೊಂಡು ಉಳಿಸಬೇಕಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಹಾಗೂ ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಜೇವರ್ಗಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣ, ಭಾಷಾ ಸಾಮರಸ್ಯ ಹಾಗೂ ತತ್ವಪದ ಗಾಯನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡಕ್ಕೆ ಧಕ್ಕೆ ಬಾರದಂತೆ: ಕನ್ನಡ ಭಾಷೆಗೆ 200 ವರ್ಷದ ಇತಿಹಾಸವಿದೆ. ಆದರೆ ಬ್ರಿಟಿಷರ ಬಳುವಳಿಯಾದ ಆಂಗ್ಲ ಭಾಷೆಯು ಇಡೀ ಪ್ರಪಂಚವನ್ನು ಆವರಿಸಿಕೊಂಡಿದೆ. ಎಲ್ಲ ಭಾಷೆಗಳನ್ನು ಪ್ರೀತಿಸುವುದರೊಂದಿಗೆ ಕನ್ನಡಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಮಾತೃಭಾಷೆ ಬಿಡದಿರಿ: ರಾಜ್ಯದಲ್ಲಿರುವ ಸುಮಾರು 6 ಕೋಟಿ ಜನರಲ್ಲಿ ಸುಮಾರು ಒಂದು ಕೋಟಿ ಜನ ಬೆಂಗಳೂರಿನಲ್ಲಿ ವಾಸಿಸುತ್ತಾರೆ. ಇವರಲ್ಲಿ ಹೆಚ್ಚಿನ ಜನ ಇಂಗ್ಲಿಷಿಗೆ ಅಂಟಿಕೊಂಡು ಕನ್ನಡವನ್ನು ಮರೆತಿದ್ದಾರೆ. ವಿಭಿನ್ನ ಸಂಸ್ಕೃತಿಯ ಮಧ್ಯೆ ಬಾಳುವ ನಾವುಗಳು ಮಾತೃಭಾಷೆಯನ್ನು ಬಿಟ್ಟುಕೊಡಬಾರದು ಎಂದರು.
ರಾಜ್ಯದ ಆಡಳಿತದಲ್ಲಿ ಹಾಗೂ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಆಚರಣೆಗೆ ತರಬೇಕೆಂದು ತಿಳಿಸಲಾಗಿದೆ. ಹೊರ ರಾಜ್ಯಗಳ ಅಧಿಕಾರಿಗಳು ಕನ್ನಡಭಾಷೆಯನ್ನು ಕಡ್ಡಾಯವಾಗಿ ಕಲಿತು ಪತ್ರವ್ಯವಹಾರ ಕನ್ನಡದಲ್ಲಿ ಮಾಡಬೇಕು. ಬ್ಯಾಂಕಿನ ವ್ಯವಹಾರವನ್ನು ಕನ್ನಡದಲ್ಲಿ ಮಾಡಬೇಕೆಂದು ರಾಜ್ಯದ ಮುಖ್ಯಮಂತ್ರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್, ಜಿಪಂ ಸದಸ್ಯ ಗುರುಲಿಂಗಪ್ಪಗೌಡ ಪಾಟೀಲ್, ಜೇವರ್ಗಿ ತಹಸೀಲ್ದಾರ್ ಎಂ.ಎನ್. ಗೋಠೆ, ಬಸವೇಶ್ವರ ಬಿ.ಇಡಿ. ಕಾಲೇಜಿನ ಪ್ರಾಚಾರ್ಯ ಶರಣಗೌಡ ಬಿರಾದಾರ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಬಸವರಾಜ ಪೊಲೀಸ್ ಪಾಟೀಲ್, ಡಾ. ರಂಗರಾಜ ವನದುರ್ಗ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ್, ಕರ್ನಾಟಕ ಜಾನಪದ ಪರಿಷತ್ತಿನ ಜೇವರ್ಗಿ ಘಟಕದ ತಾಲೂಕಾಧ್ಯಕ್ಷ ಎಸ್.ಕೆ. ಬಿರಾದಾರ, ಕೋಶಧ್ಯಕ್ಷ ಎಸ್.ಎ. ಪಡಶೆಟ್ಟಿ, ಕಾರ್ಯದರ್ಶಿ ಶಿವಕುಮಾರ್ ದೇವತ್ಕಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸನ್ಮಾನ: ಕಟ್ಟಿಸಂಗಾವಿಯ ಸಿದ್ದಯ್ಯಪ್ಪ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರೊ. ಗಿರಿಮಲ್ಲ ಹರವಾಳ, ಡಾ. ಶ್ರೀಶೈಲ್ ನಾಗರಾಳ, ಡಾ. ಮಾಯಾದೇವಿ ಮಾಲಿಪಾಟೀಲ್, ಡಾ. ಹಣಮಂತರಾವ ದೊಡ್ಡಮನಿ, ಅಮೃತೇಶ ಕಲಶೆಟ್ಟಿ, ಡಾ. ಶಾಮರಾವ ಪಾಟೀಲ್ ದಿಕ್ಸಂಗಾ(ಬಿ), ಮಾಳಪ್ಪ ಹುಲೆಪ್ಪಗೋಳ ಕುಸನೂರ, ಡಾ. ಸೋಮಶಂಕರ ವಿಶ್ವನಾಥಮಠ ಬಸವಕಲ್ಯಾಣ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.