ಗುಲ್ಬರ್ಗಾ

ಉಸ್ತುವಾರಿ ಸಚಿವರು ಸುಸ್ತೋಸುಸ್ತು

Published On :

ಕ.ಪ್ರ.ವಾರ್ತೆ, ಯಾದಗಿರಿ, ಆ.26
ಜಿಲ್ಲೆಯಲ್ಲಿ ಯಾವ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ, ಜವಳಿ ಪಾರ್ಕ್ನ ಸ್ಪಷ್ಟ ರೂಪುರೇಷೆಗಳೇನು ಎಂಬಿತ್ಯಾದಿ ಮಾಹಿತಿ ನೀಡುವಂತೆ ಸುದ್ದಿಗಾರರು ಕೇಳಿದ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸಲಾಗದೇ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ತೀವ್ರ ಮುಜುಗರ ಎದುರಿಸಿದ ಘಟನೆ ಸೋಮವಾರ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಸೋಮವಾರ ಸರ್ಕಾರದ ನೂರು ದಿನ, ನೂರಾರು ನಿರ್ಣಯ ಎಂಬ ಹೊತ್ತಗೆ ಬಿಡುಗಡೆಗೊಳಿಸಿ ಅವರು, ಸರ್ಕಾರದ ಸಾಧನೆ ಬಗ್ಗೆ ಹೇಳತೊಡಗಿದರು. ಜಿಲ್ಲೆಯಲ್ಲಿ 10 ಸಾವಿರ ಕೋಟಿ ರು. ಬಂಡವಾಳದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜವಳಿ ಪಾರ್ಕ್ ಸ್ಥಾಪನೆಯಾಗುತ್ತಿದ್ದು, ಹತ್ತಾರು ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ತಿಳಿಸಿದರು. ಅಲ್ಲದೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ನೂರು ದಿನಗಳಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ನೂರು ದಿನಗಳಿಂದಲೂ ಜವಳಿ ಪಾರ್ಕ್ ಸ್ಥಾಪನೆ ಬಗ್ಗೆ ಹೇಳುತ್ತಲೇ ಇದ್ದೀರಿ. ಯಾವ ಕಂಪನಿ ಬರುತ್ತಿದೆ? ಭೂಸ್ವಾಧೀನ ಪ್ರಕ್ರಿಯೆ ಯಾವ ಹಂತದಲ್ಲಿದೆ, ಎಷ್ಟು ರೈತರಿಗೆ ಭೂಪರಿಹಾರ ವಿತರಿಸಲಾಗಿದೆ ಎಂಬ ಮಾಹಿತಿ ನೀಡುವಂತೆ ಸುದ್ದಿಗಾರರು ಪಟ್ಟು ಹಿಡಿದರು. ಸರಿಯಾದ ಅಂಕಿಅಂಶ ಮಾಹಿತಿ ಇಲ್ಲದ್ದರಿಂದ ಉತ್ತರಿಸಲು ತಡಕಾಡಿದರು. ಸುಮಾರು ರು. 25 ಕೋಟಿ ಪರಿಹಾರ ನೀಡಲಾಗಿದೆ. ಪ್ರತಿ ಎಕರೆಗೆ 6 ಲಕ್ಷ ರು. ಪರಿಹಾರ ನೀಡಲಾಗಿದೆ. ಹೆಚ್ಚಿನ ಪರಿಹಾರ ಬೇಕೆಂದು ರೈತರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ವಿಳಂಬವಾಗಿದೆ ಎಂದು ಹೇಳಿದರು.
ತಡೆಯಾಜ್ಞೆಯಿಂದ ಪಾರ್ಕ್ ಸ್ಥಾಪನೆ ವಿಳಂಬ: ಅಷ್ಟಕ್ಕೇ ಬಿಡದ ಸುದ್ದಿಗಾರರು, ಜವಳಿ ಪಾರ್ಕ್ ಆರಂಭಿಸಲು 1 ಸಾವಿರ ಎಕರೆ ಬೇಕೆಂದು ಹೇಳುತ್ತಿದ್ದೀರಿ. ಹಾಗಾದರೆ ಸದ್ಯ 25 ಕೋಟಿ ರು. ಪರಿಹಾರ ನೀಡಿರುವ ರೈತರ ಜಮೀನಿನಲ್ಲಿ ಪಾರ್ಕ್ ಸ್ಥಾಪಿಸಬಹುದಲ್ಲ ಎಂದು ಪ್ರಶ್ನೆ ಎಸೆದರು. ಆಗ ವಿಷಯಾಂತರ ಮಾಡಲು ಸಚಿವರು ಯತ್ನಿಸಿದರೂ ಪತ್ರಕರ್ತರು ಬಿಡದೇ ಮತ್ತೆ ಅದೇ ವಿಷಯವನ್ನು ಕೆದಕಿದರು. ನಂತರ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ ಮಧ್ಯಪ್ರವೇಶಿಸಿ, ತಾಲೂಕಿನ ಬಾಡಿಯಾಳ, ಕಡೇಚೂರು ಗ್ರಾಮಗಳಲ್ಲಿ ಒಟ್ಟು 3232 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. 1005 ರೈತರು ಜಮೀನು ಕಳೆದುಕೊಂಡಿದ್ದು, ಅವರ ಪೈಕಿ ಸದ್ಯ 175 ರೈತರ 678 ಎಕರೆಗೆ 39.40 ಕೋಟಿ ರು. ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.
ಕಚೇರಿ ಆರಂಭಿಸುತ್ತೇನೆ: ಉಸ್ತುವಾರಿ ಸಚಿವರಾಗಿ ಇಷ್ಟು ದಿನಗಳಾದರೂ ಇಲ್ಲಿ ನಿಮ್ಮ ಕಚೇರಿಯನ್ನು ಆರಂಭಿಸಿಲ್ಲ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ನಿಮ್ಮನ್ನು ಎಲ್ಲಿ ಭೇಟಿಯಾಗಬೇಕು. ಹೆಚ್ಚಿನ ದಿನ ತಾವು ಗುಲ್ಬರ್ಗದಲ್ಲೇ ಇರುತ್ತಿದ್ದು, ಜಿಲ್ಲೆಗೆ ಬರುವುದೇ ಅಪರೂಪವಾಗಿದೆ. ನಿಮ್ಮ ಕಚೇರಿಯನ್ನು ಯಾವಾಗ ಆರಂಭಿಸುತ್ತೀರಿ ಎಂದು ಸುದ್ದಿಗಾರರು ಪ್ರಶ್ನಿಸಿದರು. ನಾನು ಜನರ ನಡುವೆಯೇ ಇರುತ್ತೇನೆ. ಎಲ್ಲರ ಸಂಪರ್ಕದಲ್ಲೇ ಇದ್ದೇನೆ. ಆದ್ದರಿಂದ ಪ್ರತ್ಯೇಕ ಕಚೇರಿ ಅಗತ್ಯವಿಲ್ಲ ಎಂದು ಒಮ್ಮೆ ಹೇಳಿ, ನಂತರ ಎಚ್ಚೆತ್ತುಕೊಂಡು ಶೀಘ್ರದಲ್ಲಿ ಕಚೇರಿ ಆರಂಭಿಸುವುದಾಗಿ ತಿಳಿಸಿದರು.
ವಾರ ಟೈಮ್ ಕೊಡಿ: ಜಿಲ್ಲೆ ಅಭಿವೃದ್ಧಿಗೆ ಎಷ್ಟು ಅನುದಾನ ಬಂದಿದೆ, ಸದ್ಯ ಯಾವ ಕಾಮಗಾರಿ ನಡೆಯುತ್ತಿದೆ ಎಂಬುದನ್ನು ತಿಳಿಸಬೇಕು. ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳಿಲ್ಲದೇ ಜನ ರೋಸಿಹೋಗಿದ್ದಾರೆ. ಈ ಬಗ್ಗೆ ತಾವು ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ಕಾಮಗಾರಿಗೆ ಅನುದಾನದ ಕೊರತೆಯೇ ಇಲ್ಲ ಎಂದು ಹೇಳಿದರೇ ಹೊರತು ಒಂದೂ ಅಂಕಿಸಂಖ್ಯೆ ನೀಡಲು ಸಾಧ್ಯವಾಗಲಿಲ್ಲ. ಜಿಲ್ಲೆಯ ಹಾಲು ಉತ್ಪಾದಕರಿಗೆ ಸಹಾಯಧನ ಸಿಗದಿರುವ ಬಗ್ಗೆ ಕೇಳಿದ ಪ್ರಶ್ನೆಗೂ ಸಚಿವರಿಂದ ಉತ್ತರಿಸಲಾಗಲಿಲ್ಲ. ಕೊನೆಗೆ ಸುದ್ದಿಗಾರರು ಬೇಸತ್ತು, ಯಾವುದೇ ಮಾಹಿತಿ ಇಲ್ಲದೇ ಸುದ್ದಿಗೋಷ್ಠಿ ಮಾಡಬೇಡಿ ಎಂದು ಮನವಿ ಮಾಡಿದರು. ಆಗ ಸಚಿವ ಚಿಂಚನಸೂರ ಅವರು, ವಾರದೊಳಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ. ಅದಕ್ಕಾಗಿ ಒಂದು ವಾರ ಸಮಯಾವಕಾಶ ನೀಡಿ ಎಂದು ಕೋರಿದರು.  ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ, ಜಿಪಂ ಅಧ್ಯಕ್ಷ ಶರಣಿಕಕುಮಾರ ದೋಖಾ ಇದ್ದರು.
----

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.