ಗುಲ್ಬರ್ಗಾ

ನೂತನ ರೈಲು ನಿರ್ಣಯಕ್ಕೆ ಸ್ವಾಗತ

Published On :

ಗುಲ್ಬರ್ಗ: ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಬೀದರ್- ಯಶವಂತಪುರ (ನೂತನ ರೈಲು) ಸಂಚರಿಸುವ ಕುರಿತು ತೆಗೆದುಕೊಂಡ ನಿರ್ಣಯವನ್ನು ಗುಲ್ಬರ್ಗದ ಹೈ.ಕ. ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಗೌರವ ಕಾರ್ಯದರ್ಶಿ ಬಸವರಾಜ ಹಡಗಿಲ್ ಸ್ವಾಗತಿಸಿದ್ದಾರೆ. ನೂತನವಾಗಿ ಸಂಚರಿಸುತ್ತಿರುವ ಈ ರೈಲಿಗೆ ವಾಡಿ ಜಂಕ್ಷನ್ (ಮೇನ್) ನಿಲ್ದಾಣದಲ್ಲಿ ನಿಲುಗಡೆಯನ್ನು ಕಲ್ಪಿಸಿದಲ್ಲಿ ಗುಲ್ಬರ್ಗ ಭಾಗದ ಪ್ರಯಾಣಿಕರಿಗೆ ಹಾಗೂ ಬೆಂಗಳೂರಿನಿಂದ ಬರುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಗುಲ್ಬರ್ಗದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜನ್ನು ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
ನಕಲಿ ರೇಲ್ವೆ ಟಿಸಿಗೆ ಧರ್ಮದೇಟು
ಗುಲ್ಬರ್ಗ: ಟಿಕೇಟ್ ಕಲೆಕ್ಟರ್ ಎಂದು ಹೇಳಿಕೊಂಡು ರೈಲಿನಲ್ಲಿ ಪ್ರಯಾಣಿಕರಿಗೆ ಹಣವನ್ನು ಸುಲಿಗೆ ಮಾಡುತ್ತಿದ್ದ ಸಂದರ್ಭದಲ್ಲಿ ಅನುಮಾನ ಬಂದ ಯುವಕನನ್ನು ಪ್ರಯಾಣಿಕರೇ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಭಾನುವಾರ ಮುಂಬೈ ಎಕ್ಸಪ್ರೆಸ್ ರೈಲಿನ ವಿಕಲಾಂಗ ಬೋಗಿಯಲ್ಲಿ ನಡೆದಿದೆ. ತಾಂಡೂರ ತಾಂಡಾದ ಅಜರುದ್ದೀನ್ ತಂದೆ ಚಾಂದಪಾಶಾ (24) ಎಂಬಾತ ನಕಲಿ ಟಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಟಿಸಿ ಎಂದೇ ಭಾಸವಾಗುವಂತೆ ಕೊರಳಲ್ಲಿ ಟೈ, ಕೈಯಲ್ಲಿ ಬ್ಯಾಗ್, ನೇಮ್ ಪ್ಲೇಟ್ ಹೊಂದಿದ್ದ ನಕಲಿ ಟಿಸಿಯು ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದ. ಇದರಿಂದ ಸಂಶಯಗೊಂಡ ಬೋಗಿಯಲ್ಲಿದ್ದ ಪ್ರಯಾಣಿಕರು ಧೈರ್ಯದಿಂದ ವಿಚಾರಣೆ ಮಾಡಿದಾಗ ತಡವರಿಸಿದ ನಕಲಿ ಟಿಸಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ನಕಲಿ ಟಿಸಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ವಾಡಿ ಪೊಲೀಸರು ತಿಳಿಸಿದ್ದಾರೆ.
ಇಂದು ಧರಣಿ
ಗುಲ್ಬರ್ಗ: ಹದಗೆಟ್ಟ ಆರೋಗ್ಯ ಕೇಂದ್ರಗಳ ವ್ಯವಸ್ಥೆಯನ್ನು ಸುಧಾರಿಸಿ ಹೆಚ್ಚುತ್ತಿರುವ ಶಿಶು ಮತ್ತು ಮಕ್ಕಳ ಮರಣ ಮತ್ತು ತಾಯಿಂದಿರ ಮರಣವನ್ನು ತಡೆಯುವಂತೆ ಒತ್ತಾಯಿಸಿ ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕ ಆ.27 ರಂದು ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಿದೆ. ಜಿಲ್ಲಾದ್ಯಂತ ನೂರಾರು ಮಕ್ಕಳು ಹುಟ್ಟುವ ಮುಂಚೆ, ಹುಟ್ಟಿದ ಮೇಲೆ ಮರಣವನ್ನು ಹೊಂದುತ್ತಿರುವುದು ದುರಂತವೇ ಸರಿ. ತಾಯಿಂದಿರ ಮರಣಗಳು ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರು ಜೀವನ್ಮರಣದ ನಡುವೆ ಹೋರಾಡುವಂತ ಪರಿಸ್ಥಿತಿ ನಮ್ಮ ಜಿಲ್ಲೆಯಲ್ಲಿ ಬಂದೊದಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಸಂರಕ್ಷಣಾ ಘಟಕದ ಪದಾಧಿಕಾರಿಗಳು ಭಾಗವಹಿಸಬೇಕೆಂದು ಆನಂದರಾಜ, ವಿಠ್ಠಲ್ ಚಿಕಣಿ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.