ಕ್ಯಾನ್ಸರ್ ಆಸ್ಪತ್ರೆ ಅವ್ಯವಸ್ಥೆಗೆ ಸಿಡಿಮಿಡಿ
ಕನ್ನಡಪ್ರಭ ವಾರ್ತ್ಣೆ ಗುಲ್ಬರ್ಗ್ಣ ಆ.27
ರಾಜ್ಯದ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ. ಹುನಗುಂದ ಅವರು ಮಂಗಳವಾರ ಮಧ್ಯಾಹ್ನ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ವೈದ್ಯರ ವಿರುದ್ಧ ಹರಿಹಾಯ್ದರು.
ಹುನಗುಂದ ಅವರು ಕ್ಯಾನ್ಸರ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಅಸಮಾಧಾನಗೊಂಡರು. ಈ ಆಸ್ಪತ್ರೆಗೆ ಪೂರ್ಣ ಪ್ರಮಾಣದ ವೈದ್ಯರೊಂದಿಗೆ ಸಮರ್ಪಕವಾಗಿ ಸಕಲ ಸೌಲಭ್ಯ ಕಲ್ಪಿಸಿ ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಬಂದ್ ಮಾಡಲು ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ಆಸ್ಪತ್ರೆಯ ಮೇಲ್ವಿಚಾರಕ ಡಾ. ವಸಂತ ಹರಸೂರ ಅವರಿಗೆ ಹೇಳಿದರು. ಕಿದ್ವಾಯಿ ಆಸ್ಪತ್ರೆಯ ಅಧೀನದಲ್ಲಿ ನಡೆಯುತ್ತಿರುವ ಆಸ್ಪತ್ರೆಗೆ ಪೂರ್ಣ ಪ್ರಮಾಣದ ವೈದ್ಯರಿಲ್ಲ. ತಾವು ಮತ್ತು ಇನ್ನೊಬ್ಬ ವೈದ್ಯರು ಇಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ಮೇಲ್ವಿಚಾರಕ ಡಾ. ವಸಂತ ಹರಸೂರ ಹೇಳಿದರು.
ವೈದ್ಯರು, ಸೌಕರ್ಯದ ಕೊರತೆ: 1996ರಿಂದ 2007ರವರೆಗೆ ಎಂಆರ್‌ಎಂಸಿ ಅಧೀನದಲ್ಲಿ ಕಾರ್ಯನಿರ್ವಹಿಸಿದ ಈ ಆಸ್ಪತ್ರೆ ಸರಿಯಾಗಿಯೇ ನಡೆಯುತ್ತಿತ್ತು. 2007ರಿಂದ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಅಧೀನಕ್ಕೆ ಒಳಪಟ್ಟಿತ್ತು. ಅದು 2010ರವರೆಗೆ ಸಮರ್ಪಕವಾಗಿ ನಡೆದಿತ್ತು. ಕಳೆದ ಎರಡು ವರ್ಷಗಳಿಂದ ಇಲ್ಲಿ ಪೂರ್ಣ ಪ್ರಮಾಣದ ವೈದ್ಯರಿಲ್ಲ. ಸೌಲಭ್ಯಗಳ ಕೊರತೆಯೂ ಇದೆ. ಆದರೂ ಕಳೆದ ಮಾರ್ಚ್‌ನಿಂದ ಚಿಕಿತ್ಸೆ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. 90 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹರಸೂರ ಮಾಹಿತಿ ನೀಡಿದರು.
ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡಿದ್ದು, ಹಲವಾರು ಕಡೆ ಬಿರುಕು ಬಿಟ್ಟಿದೆ. ಯಾವುದೇ ಸಂದರ್ಭದಲ್ಲೂ ಬೀಳುವ ಸಾಧ್ಯತೆಗಳಿವೆ. ಹೀಗಾಗಿ ಕೂಡಲೇ ಈ ಕಟ್ಟಡ ದುರಸ್ತಿಗೊಳಿಸಬೇಕು. ಇಲ್ಲವೇ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕಾಗಿದೆ ಎಂದರು.
ಸರ್ಕಾರಿ ಆಸ್ಪತ್ರೆಗೆ ಭೇಟಿ: ಹುನಗುಂದ ಅವರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ, ಸಿಬ್ಬಂದಿ ಮತ್ತು ಸೌಲಭ್ಯಗಳ ಕುರಿತು ವೈದ್ಯಕೀಯ ಅಧಿಕಾರಿ ಆಸೀಫ್ ಅಲಿ ಅವರಿಂದ ಮಾಹಿತಿ ಪಡೆದುಕೊಂಡರು. ಮೊದಲು ಈ ಆಸ್ಪತ್ರೆಯು 750 ಬೆಡ್‌ಗಳನ್ನು ಹೊಂದಿತ್ತು. ಕಳೆದ ಮೂರು ವರ್ಷಗಳಿಂದ 450 ಬೆಡ್‌ಗಳಿಗೆ ಸೀಮಿತಗೊಳಿಸಲಾಗಿದೆ. ಆಸ್ಪತ್ರೆ ಪಕ್ಕದಲ್ಲಿಯೇ 500 ಬೆಡ್‌ಗಳ ಹೊಸ ಆಸ್ಪತ್ರೆ ಸಿದ್ಧಗೊಂಡಿದ್ದು, ಬರುವ ಮೂರ್ನಾಲ್ಕು ತಿಂಗಳಲ್ಲಿ ಆರಂಭಗೊಳ್ಳಲಿದೆ ಎಂದು ಆಸೀಫ್ ಅಲಿ ಹೇಳಿದರು.
ಬೇಸರ: ಆಸ್ಪತ್ರೆಯಲ್ಲಿ ನ್ಯೂರಾಲಜಿ ಮತ್ತು ಕಾರ್ಡಿಯಾಲಜಿ ಘಟಕ ಇಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಹುನಗುಂದ ಅವರು, ಈ ಎರಡು ಘಟಕಗಳ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಹೇಳಿದರು. ಆಸ್ಪತ್ರೆಯ ಮಕ್ಕಳ ವಿಭಾಗ, ಹೆರಿಗೆ ವಿಭಾಗ, ಸುಟ್ಟಗಾಯ ಚಿಕಿತ್ಸಾ ಕೇಂದ್ರ, ಅಡುಗೆ ಕೋಣೆ, ಶಸ್ತ್ರಚಿಕಿತ್ಸೆ ಕೋಣೆ, ಕ್ಷ-ಕಿರಣ, ಉಪ ಔಷಧಿ ಉಗ್ರಾಣಗಳಿಗೆ ಭೇಟಿ ನೀಡಿ ಪರಿಶೀಲಿಸಿ ಆಸ್ಪತ್ರೆ ಸ್ವಚ್ಛವಾಗಿಟ್ಟಿಕೊಳ್ಳಬೇಕು ಎಂದು ಸಿಬ್ಬಂದಿಗಳಿಗೆ ತಾಕೀತು ಮಾಡಿದರು. ಅಲ್ಲದೆ ವೈದ್ಯರು ಸೇವಾ ಮನೋಭಾವದಿಂದ ಮತ್ತು ಮಾನವೀಯತೆ ದೃಷ್ಟಿಯಿಂದ ಚಿಕಿತ್ಸೆ ನೀಡಿ ರೋಗ ಗುಣಪಡಿಸಬೇಕೆಂದು ಕಿವಿಮಾತು ಹೇಳಿದರು.
ನಂತರ ಹೊಸ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಡಾ. ಎಂ.ಜಿ. ದಡಿವೆ ಇತರರು ಉಪಸ್ಥಿತರಿದ್ದರು. ಹುನಗುಂದ ಅವರು ಆ.28 ರಂದು ಬೆ.10.30ರಿಂದ ಮ.1ರವರೆಗೆ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸುವರು. ಮ.3ರಿಂದ 4.30ರವರೆಗೆ ಗುಲ್ಬರ್ಗ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

