ಗ್ರಾಪಂ ಅವ್ಯವಹಾರ ತನಿಖೆಗೆ ಆಗ್ರಹ
ಶಹಾಪುರ: ತಾಲೂಕಿನ ಬೆಂಡೆಬೆಂಬಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಾರ್ಯಾಲಯಕ್ಕೆ ಸಕಾಲದಲ್ಲಿ ಬಾರದೇ ಬಡವರಿಗೆ ತಲುಪುವ ಹಲವಾರು ಯೋಜನೆಗಳು ನೆನೆಗುದಿಗೆ ಬಿದ್ದಿರುವುದಲ್ಲದೆ ಕೆಲವು ಆಕ್ರಮಗಳು ನಡೆದಿವೆ ಎಂದು ಆರೋಪಿಸಿ ಜೆಡಿಎಸ್ ಎಸ್ಸಿ ಘಟಕದ ಉಪಾಧ್ಯಕ್ಷ ಬಿ.ಎಚ್. ಶರಣರಡ್ಡಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಕುರಿತು ತಿಳಿಸಿರುವ ಅವರು, ಸರ್ಕಾರದ ಪ್ರಮುಖವಾದ ಬಿಆರ್ಜಿಎಫ್ ಯೋಜನೆ, ಕರವಸೂಲಿ, ಇಂದಿರಾ ಆವಾಸ್ ಮನೆಗಳಲ್ಲಿನ ಅವ್ಯವಹಾರ, ಶೌಚಾಲಯದ ನಿರ್ಮಾಣದ ಅನುದಾನ ದುರ್ಬಳಕೆ, ಕೋರ್ ಗ್ರೀನ್ ಶುಗರ್ ಫ್ಯಾಕ್ಟರಿಯಿಂದ ಬಂದ ಕರ ವಸೂಲಿ ಬಗ್ಗೆ ಪರಿಶೀಲಿಸಿ 13ನೇ ಹಣಕಾಸು ಯೋಜನೆಯನ್ವಯ ಹಣ ಖರ್ಚು ಮಾಡಿದ ಮಾಹಿತಿಯ ಬಗ್ಗೆ ಪಿಡಿಒ ದೂರವಿರಿಸಿ ತನಿಖೆ ಮಾಡಬೇಕು. ಇಡೀ ಬೆಂಡೆಬೆಂಬಳಿ ಗ್ರಾಪಂ ಸೌಲಭ್ಯ ವಂಚಿತವಾಗಿದ್ದು, ಮೇಲಾಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಶರಣುರಡ್ಡಿ ಮತ್ತು ತಾಯಪ್ಪ ಗಡ್ಡೆಸುಗೂರು, ಶಿವಶರಣ ಛಲವಾದಿ, ಯಲ್ಲಪ್ಪ ಹೊಸ್ಮನಿ, ಮರೆಪ್ಪ ಶಿವುಕುಮಾರ ಇತರರು ಆಗ್ರಹಿಸಿದ್ದಾರೆ.
ಮೊರಾರ್ಜಿ ಶಾಲೆಗೆ ಕೊಳವೆಬಾವಿ
ಯಾದಗಿರಿ: ಕೊಂಕಲ್ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೇಲ್ಚಾವಣಿ ನಿರ್ಮಾಣ ಮಾಡಲು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 5 ಲಕ್ಷ ಹಾಗೂ ಕೊಳವೆಬಾವಿಯ ಸೌಲಭ್ಯವನ್ನು ಶೀಘ್ರದಲ್ಲಿ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ್ ಹೇಳಿದರು. ತಾಲೂಕಿನ ಕೊಂಕಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡವನ್ನು ಉದ್ಫಾಟಿಸಿ ಮಾತನಾಡಿದ ಅವರು, ಅತ್ಯುತ್ತಮ ವಾತಾವರಣದಲ್ಲಿ ಒಳ್ಳೆಯ ಕಟ್ಟಡ ನಿರ್ಮಾಣವಾಗಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಇಲ್ಲಿ ವಿಪುಲ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಈ ಶಾಲೆಗೆ ಈಗ ಅಗತ್ಯವಿರುವ ಮೇಲ್ಚಾವಣಿಗೆ 5 ಲಕ್ಷ ನೀಡುವುದರ ಜತೆಗೆ ಶೀಘ್ರದಲ್ಲಿಯೇ ಕೊಳವೆಬಾವಿ ಕೊರೆಯಿಸಿಕೊಡಲಾಗುವುದೆಂದು ಅವರು ಭರವಸೆ ನೀಡಿದರು.ಜಿಪಂ ಹಂಗಾಮಿ ಅಧ್ಯಕ್ಷ ಶರಣಿಕಕುಮಾರ ದೋಖಾ, ತಾಪಂ ಅಧ್ಯಕ್ಷೆ ಶ್ರೀಲಕ್ಷ್ಮಿ ಚಂಡ್ರಕಿ, ಜಿಪಂ ಸದಸ್ಯ ಭೀಮರಾವ ಕಂದಕೂರ, ಜಿಪಂ ಸಿಇಒ ಎಸ್.ಎ. ಜಿಲಾನಿ ಇದ್ದರು.
ಪ್ರಸಿದ್ಧ ಧಾರ್ಮಿಕ
ಕ್ಷೇತ್ರವಾಗಿ ಬೆಳೆಯಲಿ
ಶಹಾಪುರ: ವರವಿ, ಲಿಂಗನಬಂಡಿ, ಗೋನಾಲ, ತಿಂಥಣಿಯಂತೆ ಶಹಾಪುರದ ಮೌನೇಶ್ವರ ಬೆಟ್ಟವು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗುವುದರಲ್ಲಿ ಸಂಶಯವಿಲ್ಲ ಎಂಬುದಕ್ಕೆ ಬೆಟ್ಟದಲ್ಲಿ ಅಪಾರ ಭಕ್ತರು ಸೇರಿ 2 ದಿನ ಭಕ್ತಿಪೂರ್ವಕ ಜಾತ್ರೆ ನಡೆಸಿರುವುದು ಸಾಕ್ಷಿಯಾಗಿದೆ ಎಂದು ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಹೇಳಿದರು. ಬೆಟ್ಟದ ಮೌನೇಶ್ವರ ಜಾತ್ರೆ ಸಂಪನ್ನಗೊಂಡು ಪಟ್ಟಣದ ಹಳೆಪೇಟೆಯ ಕಾಳಿಕಾ ದೇವಸ್ಥಾನದಲ್ಲಿ ಗುಹಾಪ್ರವೇಶ ಕಾರ್ಯಕ್ರಮದ ನಂತರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

