ಗುಲ್ಬರ್ಗಾ

ಮಾಜಿ ಎಂಎಲ್ಸಿ ವಿಠ್ಠಲ್ ಹೆರೂರ್ ವಿಧಿವಶ

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ   ಡಿ.3
ವಿಧಾನ ಪರಿಷತ್ ಮಾಜಿ ಸದಸ್ಯ, ಸರ್ಕಾರದ ಮಾಜಿ ಮುಖ್ಯ ಸಚೇತಕ ವಿಠ್ಠಲ್ ಹೆರೂರ್(61) ಸೋಮವಾರ ಮಧ್ಯರಾತ್ರಿ 2 ಗಂಟೆಗೆ ವಿಧಿವಶರಾದರು.
ಅನಾರೋಗ್ಯ ನಿಮಿತ್ತ ಕಳೆದ ವಾರದಿಂದ ಆಸ್ಪತ್ರೆಗೆ ದಾಖಲಾಗಿದ್ದನ್ನು ಅರಿತಿದ್ದ ಹೆರೂರ್ ಅವರ ಸಾವಿರಾರು ಅಭಿಮಾನಿಗಳು ಎರಡು ದಿನದಿಂದ ಆಸ್ಪತ್ರೆ ಎದುರು ಠಳಾಯಿಸಿದ್ದರು. ಸೋಮವಾರ ಸಂಜೆಯಂತೂ ಹೆರೂರ್ ದೇಹಸ್ಥಿತಿ ವಿಷಮಿಸುತ್ತ ಸಾಗುತ್ತಿದ್ದಂತೆಯೇ ಭಾವುಕ ಅಭಿಮಾನಿಗಳಲ್ಲಿ ದುಃಖ ಉಮ್ಮಳಿಸಿತ್ತು. ಪೊಲೀಸರು ಆಸ್ಪತ್ರೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಿದ್ದರು.
ರಾಜಕೀಯ ಸೇವೆ: ಅಫಜಲ್ಪುರ ತಾಲೂಕಿನ ದೇವಲಗಾಣಗಾಪುರ ಮಂಡಲ ಪ್ರಧಾನಗಿರಿಯಿಂದ ತಮ್ಮ ರಾಜಕೀಯ ಬದುಕು ಆರಂಭಿಸಿದ್ದ ಹೆರೂರ್ 2004- 05ರಲ್ಲಿ ವಿಧಾನ ಪರಿಷತ್‌ಗೆ ಆಯ್ಕೆಯಾದರಲ್ಲದೆ, ಅದೇ ವರ್ಷ ಸರ್ಕಾರದ ಮುಖ್ಯ ಸಚೇತಕರಾಗಿಯೂ ನೇಮಕಗೊಂಡರು. ಜೆಡಿಎಸ್, ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಹೀಗೆ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಸಕ್ರೀಯ ಸದಸ್ಯರಾಗಿ ಲೋಕಸಭೆ(ಬಿಎಸ್ಪಿಯಿಂದ), ರಾಜ್ಯ ವಿಧಾನಸಭೆ (ಬಿಜೆಪಿ, ಜೆಡಿಎಸ್‌ನಿಂದ)ಗೆ ಸ್ಪರ್ಧಿಸಿದವರು. 2013ರ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗಮನ ಸೆಳೆದಿದ್ದರು.
ಸಮಾಜ ಸಂಘಟಕರು: ಕೋಲಿ ಸಮಾಜ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಹೆರೂರ್ ಸಮಾಜಕ್ಕೆ ಎಸ್ಟಿ ಪಟ್ಟ ಬೇಕೆಂದು ಅನೇಕ ಹೋರಾಟ ಮಾಡಿದವರು. ಗಾಣಗಾಪುರ, ಅಫಜಲ್ಪುರ, ಗುಲ್ಬರ್ಗ ಹಾವೇರಿ ಜಿಲ್ಲೆ ಚೌಡದಾನಾಪುರ ಹಾಗೂ ರಾಜಧಾನಿ ಬೆಂಗಳೂರು ಹೀಗೆ ಅನೇಕ ಕಡೆಗಳಲ್ಲಿ ಇವರು ಹೋರಾಟಗಳನ್ನು, ಸಮಾಜ ಸಂಘಟನೆ ಸಮಾವೇಶಗಳನ್ನು ನಡೆಸಿ ಜನಮನ ಸೆಳೆದವರು.
ಇದಲ್ಲದೆ ಬಂಡಾಯ ಸಾಹಿತ್ಯ ಚಿಂತಕರಾಗಿ, ಆ ಸಾಹಿತ್ಯ ನೆಲೆಯಲ್ಲಿ ಬಲು ಹತ್ತಿರದಿಂದ ತಮ್ಮನ್ನು ಗುರುತಿಸಿಕೊಂಡವರಾಗಿ ಅನೇಕ ಚಿಂತನಾ ಕಾರ್ಯಕ್ರಮಗಳನ್ನು ಸಂಘಟಿಸಿದ ಕೀರ್ತಿ ಇವರಿಗೆ ಸಲ್ಲಬೇಕು.
ಇವರ ಸತತ ಪರಿಶ್ರಮದ ಫಲವಾಗಿಯೇ ರಾಜ್ಯ ಸರ್ಕಾರ ಗುಲ್ಬರ್ಗ ವಿವಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಸ್ಥಾಪಿಸುವಂತಾಯಿತು. ಇವರ ಹೋರಾಟಗಳಿಂದಲೇ ನಿಜಶರಣ ಅಂಬಿಗರ ಚೌಡಯ್ಯನವರ ಅನೇಕ ವಚನಗಳು, ಚರಿತ್ರೆ, ಕೃತಿಗಳು ಬೆಳಕಿಗೆ ಬಂದವು ಎಂದರೂ ಅತಿಶಯೋಕ್ತಿಯಾಗದು.
ಗಣ್ಯರ ಕಂಬನಿ: ಹೆರೂರ್ ನಿಧನಕ್ಕೆ ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ನೆಲೋಗಿ, ಅಮರನಾಥ ಪಾಟೀಲ್, ಮಾಜಿ ಎಂಎಲ್ಸಿ ಶಶಿಲ್ ನಮೋಶಿ, ಗುಲ್ಬರ್ಗ ಕಾಡಾ ಮಾಜಿ ಅಧ್ಯಕ್ಷ ಗಿರೀಶ ಮಟ್ಟಣ್ಣನವರ, ಹೋರಾಟಗಾರ ಕೇದಾರಲಿಂಗಯ್ಯ ಹಿರೇಮಠ, ಹಿಂದುಳಿದ ನರ್ಗ ಆಯೋಗದ ಮಾಜಿ ಸದಸ್ಯ ತಿಪ್ಪಣ್ಣ ಕಮಕನೂರ್, ಜಿಪಂ ಮಾಶಾಳ ಸದಸ್ಯ ಪ್ರಕಾಶ ಜಮಾದಾರ್ ಸೇರಿದಂತೆ ಅನೇಕರು ಕಂಬನಿ ಮಿಡಿದ್ದಾರೆ.
ಇಂದು ಅಂತ್ಯಸಂಸ್ಕಾರ :  ವಿಠ್ಠಲ್ ಹೆರೂರ್ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರವನ್ನು ಬುಧವಾರ ಅವರ ಹುಟ್ಟೂರು ಗಾಣಗಾಪುರದಲ್ಲಿ ತಾವೇ ಶಾಲೆಯನ್ನು ಆರಂಭಿಸಿದ್ದು ಅಲ್ಲಿಯೇ ನಡೆಸಲು ಸಮಾಜ ಮುಖಂಡರು, ಕುಟುಂಬ ವರ್ಗ ನಿರ್ಧರಿಸಿದ್ದಾರೆ. ಪಾರ್ಥೀವ ಶರೀರವನ್ನು ಪ್ರಮುಖ ಬೀದಿಗುಂಟ ಮೆರವಣಿಗೆ ಮೂಲಕ ಗಂಗಾನಗರದಲ್ಲಿ ಸಾರ್ವಜನಿಕ ದರುಶನಕ್ಕೆ ಇಡಲಾಗಿತ್ತು. ಅಲ್ಲಿಂದ ಮತ್ತೆ ಮೆರವಣಿಗೆ ಮೂಲಕ ಚೌಡಾಪುರ ಮಾರ್ಗವಾಗಿ ಗಾಣಗಾಪುರಕ್ಕೆ ಕರೆದೊಯ್ಯಲಾಯ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.