ಗಾರ್ಡ್ ನಿಯೋಜನೆ; ಬ್ಯಾಂಕ್ಗಳಿಗೆ ಡೆಡ್ಲೈನ್
ಗುಲ್ಬರ್ಗ: ಬೆಂಗಳೂರಿನ ಎಟಿಎಂನಲ್ಲಿ ಇತ್ತೀಚೆಗೆ ಹಣ ಪಡೆಯುವಾಗ ಮಹಿಳೆ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಘಟನೆಯ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾ ಪೊಲೀಸ್ ವಿಳಂಬವಾಗಿಯಾದರೂ ಎಚ್ಚೆತ್ತುಕೊಂಡು ನಗರ ಹಾಗೂ ಜಿಲ್ಲೆಯಲ್ಲಿರುವ ಬ್ಯಾಂಕ್ ಎಟಿಎಂಗಳಲ್ಲಿ ಗ್ರಾಹಕರ ಸುರಕ್ಷತೆ ನಿಯಮ ಅದೆಷ್ಟು ಪಾಲಿಸಲಾಗುತ್ತಿದೆ ಎಂಬುದನ್ನು ಪರಿಶೀಲಿಸಲು ಮುಂದಾಗಿದೆ.
ಜಿಲ್ಲೆಯ ಎಲ್ಲ ಬ್ಯಾಂಕಿನ ಎಟಿಎಂಗಳಲ್ಲಿ ಡಿ.31ರೊಳಗೆ ಸೆಕ್ಯೂರಿಟಿ ಗಾರ್ಡ್ಗಳನ್ನು ನಿಯೋಜನೆ ಮಾಡದಿದ್ದರೆ ಅವುಗಳನ್ನು ಬಂದ್ ಮಾಡಲಾಗುವುದೆಂದು ಇಲ್ಲಿನ ಜಿಲ್ಲಾ ಪೊಲೀಸ್ ಬ್ಯಾಂಕ್ಗಳಿಗೆ ಎಚ್ಚರಿಕೆ ನೀಡಿದೆ.
ಜಿಲ್ಲೆಯಲ್ಲಿ ಇಂತಹ ಘಟನೆಗಳು ಆಗದಂತೆ ಎಲ್ಲ ಬ್ಯಾಂಕಿನ ಎಟಿಎಂಗಳಲ್ಲಿ ಕಡ್ಡಾಯವಾಗಿ ಸೆಕ್ಯೂರಿಟಿ ಗಾರ್ಡ್ಗಳನ್ನು ನೇಮಿಸಿ ಗ್ರಾಹಕರ ಸುರಕ್ಷತೆ ವಿಚಾರದಲ್ಲಿ ಸಹಕರಿಸಬೇಕು. ಈ ಗಡವಿನೊಳಗೆ ಸುರಕ್ಷತೆ ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದಲ್ಲಿ ಕಟ್ಟುನಿಟ್ಟು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಅಮೀತ್ ಸಿಂಗ್ ಬ್ಯಾಂಕ್ಗಳ ಅಧಿಕಾರಿಗಳ ಸಭೆ ಕರೆದು ತಾಕೀತು ಮಾಡಿದ್ದಾರೆ.
ಜಿಲ್ಲೆಯಲ್ಲಿ 8 ಪ್ರಕರಣ ದಾಖಲು: ಎಟಿಎಂಗಳಲ್ಲಿ ಹಣ ಕಳ್ಳತನ ಸೇರಿದಂತೆ ಒಟ್ಟು ಎಟಿಎಂ ಕುರಿತು ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 8 ಪ್ರಕರಣ ದಾಖಲಾಗಿವೆ. ಬರುವ ದಿನಗಳಲ್ಲಿ ಬ್ಯಾಂಕ್ಗಳಲ್ಲಿ ಮತ್ತು ಎಟಿಎಂಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗಳು ಬುಧವಾರ ಇಲ್ಲಿನ ಪೊಲೀಸ್ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ಕರೆದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದರು.
74 ಎಟಿಎಂಗಳಲ್ಲಿ ಮಾತ್ರ ಗಾರ್ಡ್: ಜಿಲ್ಲೆಯಲ್ಲಿ ಎಸ್ಬಿಐ, ಎಸ್ಬಿಎಚ್, ಕೆನರಾ, ಆಕ್ಸಿಸ್, ಐಸಿಐಸಿಐ, ಕಾರ್ಪೋರೇಷನ್, ಎಚ್ಡಿಎಫ್ಸಿ, ಆಂಧ್ರ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ಗಳ ಒಟ್ಟು 127 ಎಟಿಎಂಗಳಿವೆ. ಈ ಪೈಕಿ 125 ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 124 ಎಟಿಎಂಗಳಲ್ಲಿ ಸಿಸಿ ಟಿವಿ ಕ್ಯಾಮರ್ ಅಳವಡಿಸಲಾಗಿದೆ. ಕೇವಲ 74 ಎಟಿಎಂಗಳಲ್ಲಿ ಮಾತ್ರ ಸೆಕ್ಯೂರಿಟಿ ಗಾರ್ಡ್ಗಳು ನಿಯೋಜನೆ ಮಾಡಲಾಗಿದೆ.
ನಗರದಲ್ಲಿರುವ ಕಾರ್ಯನಿರತ ಟಿಎಂಗಳ ಪೈಕಿ ಸಿಂಹಪಾಲು ಗಾರ್ಡ್ಗಳು ಇಲ್ಲದ ಎಟಿಎಂಗಳೇ ಇವೆ. ಇದು ಗಾಹಕರ ಸುರಕ್ಷತೆ ವಿಚಾರದಲ್ಲಿ ತೀವ್ರ ಆತಂಕ ಹುಟ್ಟುಹಾಕಿದೆ ಎಂದು ಎಸ್ಪಿ ವಿವರಿಸಿದರು.
ಗುಣಮಟ್ಟದ ಸಿಸಿಟಿವಿ, ಅಲರಾಮ್ ಕಡ್ಡಾಯ: ಈಗಿರುವ ಬಹುತೇಕ ಎಟಿಎಂಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳು ಕಳಪೆಯಾಗಿದ್ದು, ವಿದ್ಯುತ್ ಪೂರೈಕೆ ಸ್ಥಗಿತಗೊಂಡ ನಂತರ ಅವುಗಳ ಪ್ರಕ್ರಿಯೆ ನಿಲ್ಲುತ್ತದೆ. ಕ್ಯಾಮರಾಗಳಲ್ಲಿ ಬಂದ ದೃಶ್ಯಗಳು ಸಮರ್ಪಕವಾಗಿ ಗೋಚರವಾಗುತ್ತಿಲ್ಲ. ಹೀಗಾಗಿ ಬ್ಯಾಂಕಿನ ಅಧಿಕಾರಿಗಳು ಎಲ್ಲ ಬ್ಯಾಂಕ್ಗಳಲ್ಲಿ, ಎಟಿಎಂಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳು ಮತ್ತು ಅಲರಾಮ್ಗಳನ್ನು ಮುಖ್ಯದ್ವಾರ ಮತ್ತು ಒಳಗಡೆ ಅಳವಡಿಸಬೇಕೆಂದು ಹೇಳಿದರು.
31ರ ನಂತರ ಪರಿಶೀಲನೆ: ಈ ಕುರಿತು ತಕ್ಷಣ ತಮ್ಮ ಮೇಲಧಿಕಾರಿಗಳಿಗೆ ತಿಳಿಸಿ ವ್ಯವಸ್ಥೆ ಮಾಡಬೇಕು. ಡಿ.31ರ ನಂತರ ಪೊಲೀಸ್ ತಂಡ ಎಲ್ಲ ಬ್ಯಾಂಕ್ ಮತ್ತು ಎಟಿಎಂಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ತಂಡ ಭೇಟಿ ನೀಡಿದಾಗ ಅವುಗಳು ಕಂಡು ಬರದಿದ್ದರೆ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ನಡೆಯುವ ಕಾರ್ಯಚಟುವಟಿಕೆಗಳನ್ನು ಗಮನಿಸಲು ಎಲ್ಲ ಬ್ಯಾಂಕ್ಗಳಲ್ಲಿ ಅಧಿಕಾರಿಗಳು ಸೆಟ್ಲೈಟ್ ವ್ಯವಸ್ಥೆ ಮಾಡಿಕೊಳ್ಳಬೇಕು. ಆ ಮೂಲಕ ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಜನತೆಯ ಚಲನವಲನ ಗಮಿನಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ದೂರು ನೀಡಬೇಕು.
ಸೆಟ್ಲೈಟ್ ವ್ಯವಸ್ಥೆ ಮಾಡಿಕೊಳ್ಳಿ: ಶನಿವಾರ ಮತ್ತು ಭಾನುವಾರ ಬ್ಯಾಂಕ್ ಬಂದ್ ಆಗಿರುವ ಸಂದರ್ಭದಲ್ಲಿ ಸೆಟ್ಲೈಟ್ ವ್ಯವಸ್ಥೆ ಗಮನಿಸಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಿ ಎಂದು ಎಸ್ಪಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸಲಹೆ ನೀಡಿದರು. ಎಟಿಎಂಗಳಲ್ಲಿ ಸೆಕ್ಯೂರಿಟಿ ಗಾರ್ಡ್ಗಳು ಎಟಿಎಂಗಳಲ್ಲಿ ಒಬ್ಬರಿಗೆ ಮಾತ್ರ ಹಣ ಪಡೆದುಕೊಳ್ಳಲು ಒಳಗಡೆ ಬಿಡಬೇಕು, ಅನುಮಾನಾಸ್ಪದ ವ್ಯಕ್ತಿಗಳು ಕಂಡಬಂದಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ ಇಲ್ಲವೇ ಪೊಲೀಸರಿಗೆ ಕರೆ ಮಾಡಬೇಕೆಂದು ಹೇಳಿದರು.
ಪೊಲೀಸ್ ತಂಡ ಎಲ್ಲ ಎಟಿಎಂಗಳಿಗೆ ಪ್ರತಿ ನಿತ್ಯ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಹೀಗಾಗಿ ಸೆಕ್ಯೂರಿಟಿ ಗಾರ್ಡ್ ಏಜೆನ್ಸಿಯವರು ತಮ್ಮ ಗಾರ್ಡ್ಗಳಿಗೆ ಸೂಕ್ತ ನಿರ್ದೇಶನ ನೀಡಿ ಕಾರ್ಯನಿರ್ವಹಿಸುವಂತೆ ಸೂಚಿಸಬೇಕೆಂದು ಹೇಳಿದರು.
ಎಟಿಎಂಗಳಲ್ಲಿ ಸೆಕ್ಯೂರಿಟಿ ಗಾರ್ಡ್ಗಳಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ತರಬೇತಿ ನೀಡುವ ಕುರಿತು ಬ್ಯಾಂಕ್ ಅಧಿಕಾರಿಯೊಬ್ಬರು ಎಸ್ಪಿ ಗಮನ ಸೆಳೆದಾಗ, ಮೊದಲು ಎಲ್ಲ ಬ್ಯಾಂಕ್ಗಳಲ್ಲಿ ಗಾರ್ಡ್ಗಳನ್ನು ನೇಮಿಸಿ ನಂತರ ಖಂಡಿತ ಅವರಿಗೆ ತರಬೇತಿ ನೀಡುತ್ತೇವೆ ಎಂದರು.
ಸಭೆಯಲ್ಲಿ ಬ್ಯಾಂಕ್ ಅಧಿಕಾರಿಗಳು, ಪತ್ರಕರ್ತರು, ಹಿರಿಯ ಅಧಿಕಾರಿಗಳಿಂದ ಸಲಹೆ- ಸೂಚನೆ ಪಡೆಯಲಾಯಿತು. ವಿವಿಧ ಬ್ಯಾಂಕ್ ಹಿರಿಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

