ಮುಖ್ಯಶಿಕ್ಷಕ ನಿಯೋಜನೆ ರದ್ದತಿಗೆ ಆಗ್ರಹ
ಸುರಪುರ: ತಾಲೂಕಿನ ಯಣ್ಣೀವಡಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುವಿಗೆ ಬೇರಡೆಗೆ ನಿಯೋಜಿಸಿರುವ ಆದೇಶ ರದ್ದುಪಡಿಸಬೇಕೆಂದು ಆಗ್ರಹಿಸಿ ನಾನಾ ಸಂಘಟನೆಗಳ ಮುಖಂಡರು ಮತ್ತು ಶಾಲೆಯ ಮಕ್ಕಳ ಪಾಲಕ- ಪೋಷಕರು ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದುಗಡೆ ಬುಧವಾರ ಆಗ್ರಹಿಸಿದರು.
ಯಣ್ಣೀವಡಗೇರಿಯ ಕರ್ನಾಟಕ ರಕ್ಷಣಾ ವೇದಿಕೆ ಘಟಕ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ, ಕನಕದಾಸ ಯುವಕ ಸಂಘ ಮತ್ತು ಗ್ರಾಮದ ಶಾಲಾ ಮಕ್ಕಳ ಪಾಲಕ- ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ನಿಯೋಜನೆ ರದ್ದುಪಡಿಸುವಂತೆ ಒತ್ತಾಯಿಸಿದರು.
ನಾನಾ ಸಂಘಟನೆಗಳು ಮುಖಂಡರು ಈ ಸಂದರ್ಭದಲ್ಲಿ ಮಾತನಾಡಿ, ಶಾಲೆಯ ಮುಖ್ಯಗುರು ನಮ್ಮೂರು ಶಾಲೆಗೆ ಬಂದಾಗಿನಿಂದ ಶಾಲೆಯಲ್ಲಿ ಗುಣಮಟ್ಟದ ಕಲಿಕೆಯಿಂದ ಮಕ್ಕಳ ಸಂಖ್ಯೆ ಹೆಚ್ಚಾಯಿತು. ಪಾಠದ ಜೊತೆಯಲ್ಲಿ ಆಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಎಂ ಪ್ರೋತ್ಸಾಹ ನೀಡಿದರು. ಫಲಿತಾಂಶದಲ್ಲಿ ಕೂಡಾ ಗಣನೀಯ ಪ್ರಗತಿಯಾಗಿದೆ ಎಂದು ತಿಳಿಸಿದರು.
ಯಾರೋ ಕೊಟ್ಟ ದೂರಿನ ಮೇರೆಗೆ ಶಾಲೆಯ ಮುಖ್ಯ ಗುರುವನ್ನು ಬೇರೆಡೆಗೆ ವರ್ಗಾಯಿಸಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಶಾಲೆಯ ಶಿಕ್ಷಣ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇವರ ಮೇಲಿನ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದರು.
ಮುಖ್ಯ ಗುರುವಿನ ನಿಯೋಜನೆ ಆದೇಶ ರದ್ದುಪಡಿಸಿ ಅವರನ್ನು ಮತ್ತೆ ಯಣ್ಣೀವಡಗೇರಾ ಶಾಲೆಗೆ ಕಳುಹಿಸಬೇಕು. ಇಲ್ಲವಾದರೆ ಶಾಲೆಗೆ ಬೀಗ ಹಾಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂದುಗಡೆ ನ್ಯಾಯ ಸಿಗುವವರೆಗೂ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರವೇಯ ಹಣಮಂತ ಮೇಟಿ, ಮುತ್ತಣ್ಣ ಕವಡಿಮಟ್ಟಿ, ನಿಂಗಪ್ಪ ಪೂಜಾರಿ, ಸಿದ್ದಪ್ಪ, ಭೀಮಪ್ಪ ಮೇಲಿನಗುಂಡಿ, ಚಂದ್ರು ಮಕಾಶಿ, ಬೀರಲಿಂಗ ಗಡ್ಡಿ, ಕನಕ ಯುವಸೇನೆಯ ಮುದಕಪ್ಪ ಮಾರನಾಳ, ಜಟ್ಟೆಪ್ಪ, ಸಿದ್ದಪ್ಪ, ಶಿವಪ್ಪ, ಬಸವರಾಜ, ಲಕ್ಷ್ಮಣ, ತಿಪ್ಪಣ್ಣ, ಕ್ರಾಂತಿ ವೀರ ಸಂಗೋಳ್ಳಿ ರಾಯಣ್ಣ ಯುವಕ ಸಂಘದ ಹುಲಗಪ್ಪ, ಸಾಯಬಣ್ಣ, ಸಿದ್ದರಾಮಪ್ಪ, ರೇವಣಸಿದ್ದ, ಮಾಳಪ್ಪ ಅನೇಕರಿದ್ದರು. ಬಿಇಒಗೆ ಮನವಿ ಪತ್ರ ಸಲ್ಲಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

