ಗುಲ್ಬರ್ಗಾ

ಎಸ್ಟಿಗೆ ಕೋಲಿ ಸಮಾಜ; ಸರ್ಕಾರಕ್ಕೆ ಒತ್ತಡ

Published On :

ಕನ್ನಡಪ್ರಭ ವಾರ್ತೆ, ಬೀದರ್, ಡಿ.8
ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತಂತೆ ವರದಿ ತರಿಸಿಕೊಂಡು ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವ ಯತ್ನ ಮಾಡುವುದಾಗಿ ಜವಳಿ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ಭರವಸೆ ನೀಡಿದರು.
ತಾಲೂಕಿನ ಅಷ್ಟೂರ್ ಗ್ರಾಮದ ಮಾತೆ ಮಾಣಿಕೇಶ್ವರಿ ಆಶ್ರಮದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಸನ್ಮಾನಿತರಾಗಿ ಮಾತನಾಡಿ, ರಾಜ್ಯದಲ್ಲಿರುವ ಕೋಲಿ ಸಮಾಜದ ಸುಮಾರು 50 ಲಕ್ಷ ಜನಸಂಖ್ಯೆ ಅತ್ಯಂತ ಹಿಂದುಳಿದ ಜನರಾಗಿದ್ದಾರೆ. ನೌಕರಿ ಮಾಡಲು ಶಿಕ್ಷಣ ಹೊಂದಿಲ್ಲ, ವ್ಯಾಪಾರ ಮಾಡಲು ಹಣ ಹೊಂದಿಲ್ಲ ಹಾಗೆಯೇ ಕೃಷಿ ಭೂಮಿಯಿಲ್ಲದವರಾಗಿದ್ದಾರೆ ಎಂದರು.
ನ್ಯಾಯ ಕಲ್ಪಿಸಲು ಹೋರಾಡುವೆ: ಪ್ರತಿ ಹಂತದಲ್ಲಿಯೂ ನನ್ನ ಸಮಾಜ ತೀವ್ರವಾಗಿ ಹಿಂದುಳಿದಿದೆ. ನನಗೆ ಸಮಾಜವೇ ಸರ್ವಸ್ವ ಜೀವ ಇರುವವರೆಗೆ ಸಮಾಜಕ್ಕೆ ನ್ಯಾಯ ಒದಗಿಸಿಕೊಟ್ಟೇ ಕೊಡುತ್ತೇನೆ. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಹಾಗೂ ಆಸ್ಕರ್ ಫನಾಂರ್ಡಿಸ್ ಅವರ ಸಹಕಾರ ನನಗಿದೆ. ಹಾಗಾಗಿ ಕೋಲಿ, ಕಬ್ಬಲಿಗ ಸಮಾಜಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶ್ರಮಿಸುವೆ ಎಂದರು.
ಸಂಸದ ಧರಂಸಿಂಗ್ ಮಾತನಾಡಿ, ಸಮಾಜ ಕಲ್ಯಾಣ ಮಂತ್ರಿಯಾಗಿದ್ದಾಗ ಟೋಕರಿ, ಕೋಲಿ ಸಮಾಜವನ್ನು ಗ್ರೂಪ್(ಎ)ನಲ್ಲಿ ಸೇರಿಸಿದ್ದೇನೆ ಎಂದರು. ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಮಾತನಾಡಿ ಸಮಾಜ ಅಭಿವೃದ್ಧಿ ಜರೂರಿ ಎಂದರು. ಮುಖಂಡ ಬಿ. ನಾರಾಯಣ ಮಾತನಾಡಿ, ಬಸವಕ್ಯಾಣದಿಂದ ಶಾಸಕನಾಗಿಯೇ ಸಾಯುತ್ತೇನೆ. ಇನ್ನೂ 25 ವರ್ಷ ಆಯುಷ್ಯ ಇದೆ ನನಗೆ ಸಮಾಜ ಸಹಕರಿಸಬೇಕೆಂದರು.
ಪೂಜ್ಯ ಸಂಗಮ ತಾಯಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮಾತೇ ಬಸವಾಂಜಲಿ, ಸಿದ್ದರಾಮ ಶರಣರು ಬೆಲ್ದಾಳ, ಪೂಜ್ಯ ಶಾಂತಿಬಾಬಾ, ಹಣಮಂತಪ್ಪ ಮುತ್ಯ ರಾಜಗಿರಾ ನೇತೃತ್ವ ವಹಿಸಿ ಮಾತನಾಡಿದರು. ಜಿಪಂ ಸದಸ್ಯ ಡಾ. ಶೈಲೇಂದ್ರ ಬೆಲ್ದಾಳೆ, ಆರ್ಎಫ್ಒ ದೇವೇಂದ್ರಪ್ಪ ಸೇರಿದಂತೆ ಮತ್ತಿತರರು ಇದ್ದರು. ಸುನೀಲ ಭಾವಿಕಟ್ಟಿ ಪ್ರಾಸ್ತವಿಕ ಮಾತನಾಡಿದರು. ಬಾಬುರಾವ ಪ್ರಭಾಜಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.