ಗೊಂಡ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಣೆ
ಕ.ಪ್ರ.ವಾರ್ತೆ ಚಿಂಚೋಳಿ ಡಿ. 10
ತಾಲೂಕಿನಲ್ಲಿರುವ ಗೊಂಡ ಮತ್ತು ಕಾಡು ಕುರುಬ ಜಾತಿಯವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಆಗುತ್ತಿರುವ ತೊಂದರೆ ಖಂಡಿಸಿ ಚಂದಾಪುರ ಮಿನಿ ವಿಧಾನಸೌಧ ಆವರಣದಲ್ಲಿ ಕಳೆದ 6 ದಿನಗಳಿಂದ ತಾಲೂಕು ಗೊಂಡ ಸಂಘರ್ಷ ಸಮಿತಿಯಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಡಾ. ಉಮೇಶ ಜಾಧವ ಭೇಟಿ ನೀಡಿ ಗೊಂಡ ಸಮಾಜದ ಮುಖಂಡರು ಮತ್ತು ತಹಸೀಲ್ದಾರ್ ಜತೆ ಚರ್ಚಿಸಿ ಸ್ಥಳದಲ್ಲಿಯೇ ಗೊಂಡ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಮೂಲಕ ಧರಣಿ ಸತ್ಯಾಗ್ರಹ ಅಂತ್ಯಗೊಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಗೊಂಡ ಸಂಘರ್ಷ ಸಮಿತಿ ಅಧ್ಯಕ್ಷ ಮಲಕಪ್ಪ ಬಿರಾಪುರ ಮಾತನಾಡಿ, ತಾಲೂಕಿನಲ್ಲಿರುವ ಗೊಂಡ ಮತ್ತು ಕುರುಬ ಜನಾಂಗದವರು ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುವಂತೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೂ ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅನೇಕ ವಿದ್ಯಾರ್ಥಿಗಳು ಸರ್ಕಾರದ ಮೆಡಿಕಲ್, ನವೋದಯ ಮತ್ತು ಸರ್ಕಾರಿ ನೌಕರಿ ಕಳೆದುಕೊಂಡಿದ್ದಾರೆ ಎಂದರು.
ಸಂವಿಧಾನಬದ್ಧ ಹಕ್ಕು: ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮವರೇ ಆಗಿದ್ದರು ಮತ್ತು ನಾವೆಲ್ಲರೂ ಕಾಂಗ್ರೆಸ್ ಪಕ್ಷದವರೇ ಆಗಿದ್ದರೂ ನಮಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡಲಿಲ್ಲ. ಸಂವಿಧಾನಬದ್ಧ ಹಕ್ಕು ಪಡೆದುಕೊಳ್ಳಲು ನಮಗೆ ಹಕ್ಕಿದೆ. ನಮ್ಮ ಸೌಲಭ್ಯ ನಮಗೆ ಸಿಗಬೇಕಾಗಿದೆ ಎಂದರು.
ತರಾಟೆ: ತಾಲೂಕು ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಅಣಕಲ್, ಕಾರ್ಯದರ್ಶಿ ಹಣಮಂತ ಪೂಜಾರಿ, ರಾಮಚಂದ್ರ ಪೂಜಾರಿ, ಡಾ. ಪಾಂಡುರಂಗ ಪೂಜಾರಿ, ಎನ್‌ಬಿಎಚ್ ಹಿರೇಕುರುಬ, ಮಲ್ಲಪ್ಪ ಪೂಜಾರಿ, ರವಿ ಗೊಲ್ಲ, ಜಗನ್ನಾಥ ಅಣವಾರ ಮುಂತಾದವರು ಶಾಸಕರನ್ನು ತರಾಟೆಗೆ ತೆಗೆದುಕೊಂಡಾಗ ಧರಣಿ ಸತ್ಯಾಗ್ರಹದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.
ಕೊನೆಗೂ ಶಾಸಕ ಡಾ. ಉಮೇಶ ಜಾಧವ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕಿಸಿ ಗೊಂಡ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸುವ ಮೂಲಕ ಎಲ್ಲ ಮುಖಂಡರನ್ನು ಮನವೊಲಿಸಿ ಧರಣಿ ಸತ್ಯಾಗ್ರಹ ಹಿಂದಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಬಾಸಿತ್, ಜಗದೀಶಸಿಂಗ್ ಠಾಕೂರ, ವಿಠಲ್ ಚವ್ಹಾಣ, ಶಿವಕುಮಾರ್ ಕೊಳ್ಳೂರ್, ಗೌತಮ್ಮ ಬೊಮ್ಮನಳ್ಳಿ, ಮಾಣಿಕರಾವ ಗುಲಗುಂಜಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

