ನಾಳೆ ಮೌನೇಶ್ವರ ತೊಟ್ಟಿಲೋತ್ಸವ
ಸುರಪುರ: ಇಲ್ಲಿನ ಕಬಾಡಗೇರಾ ಬಡಾವಣೆಯ ಕಾಳಿಕಾದೇವಿ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಘ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕ ಸಂಯುಕ್ತವಾಗಿ ಡಿ.17ರಂದು ಬೆ.10ಕ್ಕೆ 7ನೇ ವರ್ಷದ ಮೌನೇಶ್ವರರ ತೊಟ್ಟಿಲೋತ್ಸವ ಕಾರ್ಯಕ್ರಮ ಆಯೋಜಿಸಿದೆ ಎಂದು ಸಂಘ ತಿಳಿಸಿದೆ. ಬೆ.7ಕ್ಕೆ ಮಂಗಳ ವಾದ್ಯಗಳೊಂದಿಗೆ ಮೌನೇಶ್ವರರ ತೊಟ್ಟಿಲನ್ನು ಕಾಳಿಕಾ ದೇವಸ್ಥಾನಕ್ಕೆ ಕರೆತರುವುದು. ನಂತರ 8ಕ್ಕೆ ಮುತ್ತೈದೆಯರ ಕುಂಭ ಕಳಸದೊಂದಿಗೆ ಗಂಗಾಸ್ನಾನ ನೆರವೇರುವುದು. 10ಕ್ಕೆ ಮೌನೇಶ್ವರ ನಾಮಕರಣ ತೊಟ್ಟಿಲೋತ್ಸವ ಜರುಗಲಿದೆ. ಮ.1ಕ್ಕೆ ಶಾಸಕ ರಾಜಾ ವೆಂಕಟಪ್ಪನಾಯಕರಿಗೆ ಸಮಾಜದ ವತಿಯಿಂದ ಸನ್ಮಾನ ಸಮಾರಂಭ ಆಯೋಜಿಸಿದ್ದು, ಯಾದಗಿರಿ ವಿಶ್ವಕರ್ಮ ಏಕದಂಡಗಿಮಠದ ಪೀಠಾಧೀಶ ಗುರುನಾಥೇಂದ್ರ ಸರಸ್ವತಿ ಸ್ವಾಮೀಜಿ ಉದ್ಘಾಟಿಸುವರು. ಶಹಾಪುರ ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಹಾಗೂ ಸೂರ್ಯನಾರಾಯಣ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ ಅಧ್ಯಕ್ಷತೆ ವಹಿಸುವರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಐ.ಸಿ. ಪಂಚಾಳ ಮತ್ತು ಉತ್ತರ ಕರ್ನಾಟಕದ ಸಂಚಾಲಕ ವಿರೇಂದ್ರ ಇನಾಂದಾರ್ ಭಾಗವಹಿಸಲಿದ್ದಾರೆ ಎಂದು ವಿಶ್ವಕರ್ಮ ವಿಕಾಶ ಸಂಘ ತಿಳಿಸಿದೆ.
ಬಲಭೀಮೇಶ್ವರ ರಥೋತ್ಸವ ನಾಳೆ
ಸುರಪುರ: ತಾಲೂಕಿನ ಶೆಳ್ಳಗಿ ಗ್ರಾಮದ ಬಲಭೀಮೇಶ್ವರ ಜಾತ್ರಾ ಮಹೋತ್ಸವವು ಡಿ.16 ರಿಂದ ಪ್ರಾರಂಭವಾಗಲಿದೆ ಎಂದು ವೆಂಕಟೇಶ ನರಬೋಳಿ ತಿಳಿಸಿದ್ದಾರೆ. 16ರಂದು ಕಾರ್ತೀಕ, 17ರಂದು ರಾತ್ರಿ ರಥೋತ್ಸವ, 19ರಂದು ಕಡಬಿನ ಕಾಳಗದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ. ಜಾತ್ರೆಯಲ್ಲಿ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
17ರಿಂದ ಆಯುಷ್ ಆರೋಗ್ಯ ಮೇಳ
ಯಾದಗಿರಿ: ನಗರದ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಆಯುಷ್ ಆರೋಗ್ಯ ಮೇಳವನ್ನು ಡಿ.17ರಂದು ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ್ ಚಿಂಚನ್ಸೂರ್ ಉದ್ಘಾಟಿಸುವರು. ನಂತರ ಹಾಸ್ಯ ದಿಗ್ಗಜ ಗಂಗಾವತಿ ಪ್ರಾಣೇಶ ಹಾಗೂ ಸಂಗಡಿಗರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಿ.18 ಮತ್ತು 19ರಂದು ಆಯುಷ್ ಆರೊಗ್ಯ ಮೇಳ ಹಾಗೂ ಉಚಿತ ತಪಾಸಣೆ ಮತ್ತು ಚಿಕಿತ್ಸೆಯನ್ನು ಏರ್ಪಡಿಸಲಾಗಿದೆ. ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಲು ಜಿಲ್ಲಾ ಆಯುಷ್ ಅಧಿಕಾರಿಗಳು ಯಾದಗಿರಿ ಇವರು ಕೋರಿದ್ದಾರೆ. ವಿವರಕ್ಕೆ ದೂ. 08473-253870ಕ್ಕೆ ಸಂಪರ್ಕಿಸಬಹುದು.
ಸುಪ್ತ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ
ಸುರಪುರ: ಪ್ರತಿ ಮಗುವಿನಲ್ಲಿ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಹೊರಹಾಕಲು ವೇದಿಕೆಗಾಗಿ ಕಾಯುತ್ತಿರುತ್ತಾರೆ. ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರಹಾಕಲು ಈ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ನೌಕರರ ಸಂಘದ ತಾಲೂಕಾಧ್ಯಕ್ಷ ಭೀಮಣ್ಣ ಬೋಸ್ಗಿ ಹೇಳಿದರು. ರಂಗಂಪೇಟೆಯ ಕನ್ಯಾ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ 2013-14ನೇ ಸಾಲಿನ ರಂಗಂಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿತ್ವ ವಿಕಸನ: ಪಠ್ಯ ವಿಷಯಗಳಲ್ಲಿ ಹಿಂದುಳಿದ ಮಾತ್ರಕ್ಕೆ ಎಲ್ಲಾ ಚಟುವಟಿಕೆಗಳಲ್ಲಿ ಹಿಂದಿದ್ದಾರೆ ಎಂದು ಪರಿಗಣಿಸುವುದು ತಪ್ಪು. ಪ್ರತಿ ಮಗುವಿನಲ್ಲಿ ಕಲೆ ಎನ್ನುವುದು ಸುಪ್ತವಾಗಿ ಅಡಗಿರುತ್ತದೆ. ಶಿಕ್ಷಕರು ಅದನ್ನು ಸೂಕ್ಷ್ಮವಾಗಿ ಗುರುತಿಸಿ ಅವಕಾಶ ಮಾಡಿ ಕೊಡಬೇಕು. ನೀವು ನೀಡುವ ಪ್ರೋತ್ಸಾಹ ಆ ಮಗುವಿನ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹಳ್ಳೆಪ್ಪ ಕಾಂಜಾಂಜಿ ಮಾತನಾಡಿದರು. ನಾಟಕ, ಭರತ ನಾಟ್ಯ, ಕೋಲಾಟ, ಜಾನಪದ ನೃತ್ಯ, ಕವಾಲಿ. ಗಝಲ್, ಭಕ್ತಿ, ಭಾವಗೀತೆ ಸೇರಿದಂತೆ ಇತರೆ ಸ್ಪರ್ಧೆಗಳಲ್ಲಿ ಮಕ್ಕಳು ತಮ್ಮ ಪ್ರತಿಭೆಯನ್ನು ತೋರಿದರು. ನಾಲ್ಕು ಪ್ರೌಢಶಾಲೆ ಮತ್ತು 30 ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು. ನೌಕರರ ಸಂಘದ ರಾಜ್ಯಪರಿಷತ್ ಸದಸ್ಯ ದೇವರಾಜ ಪಾಟೀಲ, ಮುದ್ದಪ್ಪ ಕೊಡೇಕಲ್, ಶಿವಣ್ಣ ಅರಕೇರಿ, ಜಾಕೀರ್ ಹುಸೇನ್, ಶಿವುಕುಮಾರ ಕಮತಗಿ, ಅಮರಯ್ಯ ಸ್ವಾಮಿ, ಸಾಬಣ್ಣ ಪುರ್ಲೇ ವೇದಿಕೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

