ಗುಲ್ಬರ್ಗಾ

ಖಾಸಗಿ ಕಾಲೇಜುಗಳಿಗೆ ಸಿಇಟಿ ರದ್ದು; ಖಂಡನೆ

Published On :

ಯಾದಗಿರಿ: ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಕಾಯಿದೆ- 2006ನ್ನು ಜಾರಿಗೊಳಿಸುವ ಹೆಸರಿನಲ್ಲಿ ರಾಜ್ಯ ಸರ್ಕಾರ ಸಿಇಟಿ ಪರೀಕ್ಷೆಯನ್ನು ಕೇವಲ ಸರ್ಕಾರಿ ವೃತ್ತಿಪರ ಕಾಲೇಜುಗಳಿಗೆ ಸೀಮಿತಗೊಳಿಸುವ ಮೂಲಕ ಬಡ ವಿದ್ಯಾರ್ಥಿಗಳನ್ನು  ಧನದಾಹಿ ಖಾಸಗಿ ಆಡಳಿತ ಮಂಡಳಿಗಳ ತೆಕ್ಕೆಗೆ ತಳ್ಳಿದೆ ಎಂದು ಆರೋಪಿಸಿರುವ ಎಐಡಿಎಸ್‌ಒ ರಾಜ್ಯ ಸಮಿತಿ, ಸರ್ಕಾರದ ನೀತಿಯನ್ನು ಖಂಡಿಸಿದೆ.
ಹಿಂದೆ ಅಧಿಕಾರದಲ್ಲಿದ್ದ ಹಲವು ಸರ್ಕಾರಗಳು ಖಾಸಗಿ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿಗಳೊಂದಿಗೆ ಶಾಮೀಲಾಗಿ ಸಿಇಟಿಯನ್ನು ನಿಷ್ಪ್ರಯೋಜಕಗೊಳಿಸಿ, ದುಬಾರಿ ಶುಲ್ಕಗಳನ್ನು ಕಾನೂನು ಬದ್ಧಗೊಳಿಸಿರುವುದು ದುರಂತ. ಖಾಸಗಿ ಆಡಳಿತ ಮಂಡಳಿಗಳಿಗೆ ಪ್ರತಿಭೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದಿರುವುದರಿಂದ, ಅವರು ತಮಗಿಷ್ಟ ಬಂದಂತೆ ಸೀಟುಗಳನ್ನು ಮಾರಾಟ ಮಾಡುವುದಕ್ಕಾಗಿ ಕಾಮಡ್-ಕೆ ಪರೀಕ್ಷೆಯನ್ನು ಆರಂಭಿಸಿದವು. ಈ ಮೂಲಕ ಪ್ರತಿಭೆಯ ಸ್ಥಾನದಲ್ಲಿ ಹಣವೇ ಪ್ರಧಾನವಾಯಿತು ಎಂದು ತಿಳಿಸಿದೆ.
2006ರ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ: ಈಗ 2006ರ ಕಾಯಿದೆಯನ್ನು ಜಾರಿಗೊಳಿಸುವ ಹೆಸರಿನಲ್ಲಿ ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳ ಮಾರಾಟವನ್ನು ಕಾನೂನುಬದ್ಧಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಮುಂದೆ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸಂಪೂರ್ಣ ರದ್ದಾಗಿ, ಸಾವಿರಾರು ಬಡ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಲಿದ್ದಾರೆ. ಆದ್ದರಿಂದ ಸರ್ಕಾರ ಈ ತೀರ್ಮಾನ ಹಿಂಪಡೆದು ರಾಜ್ಯದಲ್ಲಿ ಸಿಇಟಿ ಮೂಲಕವೇ ಎಲ್ಲ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಸೀಟುಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಲು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ವೃತ್ತಿಪರರು ಮುಂದಾಗಬೇಕೆಂದು ಎಐಡಿಎಸ್‌ಓ ಕರೆ ನೀಡಿದೆ.
 ಜೊತೆಗೆ, ಇದಕ್ಕೆ ತಕ್ಕಂತೆ, ವೃತ್ತಿಪರ ಕಾಲೇಜುಗಳಲ್ಲಿ ಶ್ರೀಸಾಮಾನ್ಯರಿಗೂ ಕೈಗೆಟಕುವಂತಹ ಮತ್ತು ಆಡಳಿತ ಮಂಡಳಿಗಳ ಕೋಟಾವನ್ನು ರದ್ದುಪಡಿಸಿ, ಪ್ರತಿಭೆಯ ಆಧಾರದಲ್ಲೇ ಪ್ರವೇಶ ನೀಡುವಂತಹ ಕಾಯಿದೆಯನ್ನು ಕೇಂದ್ರ- ರಾಜ್ಯ ಸರ್ಕಾರ ಜಾರಿಗೆ ತರಬೇಕೆಂದೂ ಎಐಡಿಎಸ್‌ಓ ಒತ್ತಾಯಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.