ಅವಧಿಯೊಳಗೆ ಒಳಚರಂಡಿ, ರಸ್ತೆ ಪೂರ್ಣಗೊಳಿಸಿ
ಕನ್ನಡಪ್ರಭ ವಾರ್ತೆ, ಯಾದಗಿರಿ, ಡಿ.17
ನಗರದಲ್ಲಿ ಉತ್ತರಕರ್ನಾಟಕ ವಲಯ ಬಂಡವಾಳ ಅಭಿವೃದ್ಧಿ ಯೋಜನೆ ಮತ್ತು ಏಷಿಯನ್ ಬ್ಯಾಂಕ್ ನೆರವಿನಡಿ ನಡೆಯುತ್ತಿರುವ ಒಳಚರಂಡಿ ನಿರ್ಮಾಣ ಕಾಮಗಾರಿ, ನಗರೋತ್ಥಾನ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಸಚಿವ ಬಾಬುರಾವ್ ಚಿಂಚನಸೂರ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅವಧಿಯಲ್ಲಿ ಪೂರೈಸಿ: ನಗರದಲ್ಲಿ ಕಳೆದ 10 ವರ್ಷಗಳಿಂದ ಕೆಲಸ ಆಗದೇ ಇರುವಂತಹ ಲೋಕೋಪಯೋಗಿ ಇಲಾಖೆಯಿಂದ ಅಭಿರಾಮ ಕನ್ಸ್ಟ್ರಕ್ಷನ್ ವತಿಯಿಂದ ಉತ್ತರ ಕರ್ನಾಟಕ ವಲಯ ಬಂಡವಾಳ ಅಭಿವೃದ್ಧಿ ಯೋಜನೆಯಡಿ ಏಷ್ಯನ್ ಬ್ಯಾಂಕ್ ನೆರವಿನಡಿ ರು. 18.74 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ನಗರ ಒಳಚರಂಡಿ ವ್ಯವಸ್ಥೆ ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಿ, ಕಾಮಗಾರಿಗಳನ್ನು 18 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕಾಗಿದೆ. ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳು ಒತ್ತು ನೀಡಬೇಕೆಂದರು.
ಈ ಸೌಲಭ್ಯದಿಂದ ನಗರದ ಸುಮಾರು 13,000 ಮನೆಗಳ ಕುಟುಂಬಗಳಿಗೆ ಅನುಕೂಲವಾಗಲಿದೆ. ಈ ಯೋಜನೆಯಿಂದ ಸುಮಾರು 76,000 ಜನಸಂಖ್ಯೆಗೆ ಅನುಕೂಲವಾಗಲಿದೆ. ನಗರದ ಸ್ವಚ್ಫತೆ ಹಾಗೂ ಸೌಂದರ್ಯೀಕರಣಕ್ಕೆ ಸಹಾಯವಾಗುವುದರಿಂದ ಕಾಮಗಾರಿಗಳಿಗೆ ಆದ್ಯತೆ ನೀಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನಗರೋತ್ಥಾನ: ಅದೇ ರೀತಿ ರು. 3.75 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಾಲಾಜಿ ಮಂದಿರದಿಂದ ಪದವಿ ಕಾಲೇಜ್ ವರೆಗಿನ ರಸ್ತೆ ಕಾಮಗಾರಿಗಳನ್ನು ಬರುವ ಮಾರ್ಚ್ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಗರೋತ್ಥಾನ ಯೋಜನೆಯಡಿ ರು. 1.75 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಸಣ್ಣ ನೀರಾವರಿ ಇಲಾಖೆ ಸಮೀಪದಿಂದ ಹೊಸಳ್ಳಿ ಕ್ರಾಸ್ವರೆಗಿನ ರಸ್ತೆ ಕಾಮಗಾರಿ ಸಚಿವರು ವೀಕ್ಷಿಸಿದರು.
ರು. 1.52 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೊಸಳ್ಳಿ ಕ್ರಾಸ್ನಿಂದ ಅಜಿಜಿಯಾ ಕಾಲೋನಿವರೆಗಿನ ರಸ್ತೆ ಮತ್ತು ರಸ್ತೆ ಬದಿಯ ಚರಂಡಿ ಕಾಮಗಾರಿಯನ್ನು ಬರುವ ಜುಲೈ ಮಾಹೆಯೊಳಗೆ ಪೂರ್ಣಗೊಳಿಸಬೇಕು. ಅದೇ ರೀತಿ ನಗರದಲ್ಲಿ ರು. 12 ಕೋಟಿ ವೆಚ್ಚದ 24/7 ಕುಡಿಯುವ ನೀರಿನ ಯೋಜನೆಯಡಿ ಹೈ ಡೆನ್ಸಿಟಿ ಪವರ್ ಕೊಳವೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಅನುದಾನದ ಆಧಾರದ ಮೇಲೆ ಆದ್ಯತೆ ಮೇಲೆ ಈ ಕಾಮಗಾರಿ ಪೂರ್ಣಗೊಳಿಸಬೇಕು.
ಸೂಚನೆ: ನಗರದ ನೀರು ಶುದ್ಧಿಕರಣ ಘಟಕದ ಹತ್ತಿರದ ಉದ್ಯಾನವನ ಗೇಟ್ ಸಾರ್ವಜನಿಕರ ಅನುಕೂಲಕ್ಕೆ ತೆರೆದಿಡಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಚಿವರು ಸೂಚನೆ ನೀಡಿದರು.
ಆದ್ಯತೆ ಇರಲಿ: ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಅವರು ನಗರದಲ್ಲಿ ಒಳಚರಂಡಿ ಯೋಜನೆ, ನಗರೋತ್ಥಾನ ಯೋಜನೆಯಡಿ ರಸ್ತೆ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿಗಳನ್ನು ತೀವ್ರ ಗತಿಯಲ್ಲಿ ಕೈಗೊಳ್ಳಲಾಗುತ್ತಿದೆ.
ಲೆಪ್ರಸಿ ಕಾಲೋನಿಯಲ್ಲಿ ರು. 14 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ನಗರದಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಂಡಲ್ಲಿ ಯಾದಗಿರಿ ನಗರ ಸಂಪೂರ್ಣ ಸ್ವಚ್ಫತೆಗೂ ಸಹಕಾರಿಯಾಗಲಿದೆ. ಇತರೆ ಕಾಮಗಾರಿಗಳನ್ನು ಕೂಡ ಆದ್ಯತೆ ಮೇಲೆ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಚಿವರ ಗಮನಕ್ಕೆ ತಂದರು.
ಸಚಿವರೊಂದಿಗೆ ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಕೋಶ, ನಗರಸಭೆ ಅಧಿಕಾರಿಗಳು, ನೀರಾವರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

