ಗುವಿವಿ ಕುಲಪತಿ ಹಠಾವೋ ಹೋರಾಟ ಮುಂದುವರಿಕೆ
ಕ.ಪ್ರ. ವಾರ್ತೆ ಗುಲ್ಬರ್ಗ ಡಿ.19
ಗುಲ್ಬರ್ಗ ವಿವಿ ಅರ್ಥಶಾಸ್ತ್ರ ವಿಭಾಗದ ಪಿಎಚ್ಡಿ ವಿದ್ಯಾರ್ಥಿನಿಗೆ ಪ್ರೊಫೆಸರ್ ನೀಡಿರುವ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಅತಿರಂಜಿತ ವರದಿಯಾಗಿದೆ ಎಂದು ಖೇದ ವ್ಯಕ್ತಪಡಿಸಿರುವ ವಿಶ್ವವಿದ್ಯಾಲಯದ ಕುಲಸಚಿವ ಚಂದ್ರಕಾಂತ ಯಾತನೂರ್, ವಿಶ್ವವಿದ್ಯಾಲಯ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ಹಿತದೃಷ್ಟಿಯಿಂದ ಇಂತಹ ನಕರಾತ್ಮಾಕ ಪ್ರಚಾರ ಮಾಧ್ಯಮಗಳಲ್ಲಿ ಬೇಡ ಎಂದು ಹೇಳಿಕೆ ನೀಡಿದ್ದಾರೆ.
ಅರ್ಥಶಾಸ್ತ್ರ ವಿಭಾಗದಲ್ಲಿ ನಡೆದಂತಹ ಪ್ರಕರಣದಲ್ಲಿ ವಿವಿ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಹೇಗೆ ನಡೆದುಕೊಳ್ಳಬೇಕೋ ಹಾಗೆ ನಡೆದುಕೊಂಡಿದೆ. ಎಲ್ಲ ಸೂಕ್ತ ಕ್ರಮಗಳನ್ನು ಜರುಗಿಸಿದ್ದರೂ ಪ್ರಕರಣದ ಸುತ್ತಮುತ್ತ ಅತಿರಂಜಿತ ವರದಿಗಳು ಬರುತ್ತಲೇ ಇವೆ. ಎಲ್ಲ ಕ್ರಮ ಜರುಗಿಸಲಾಗಿದೆ, ಯಾವುದನ್ನೂ ಮುಚ್ಚಿಟ್ಟಿಲ್ಲ. ಈ ಸಂಗತಿ ನ್ಯಾಯಾಂಗ ಹಾಗೂ ತನಿಖಾ ನಿಯೋಗಗಳ ಮುಂದಿರುವುದರಿಂದ ಸತ್ಯಾಂಶ ಹೊರಬೀಳುತ್ತದೆ. ಶೈಕ್ಷಣಿಕ ಮತ್ತು ನೈತಿಕತೆಗೆ ಚ್ಯುತಿ ಬರುವಂತಹ ಹೇಳಿಕೆಗಳಿಂದ ವಿಶ್ವವಿದ್ಯಾಲಯ ಸಿಬ್ಬಂದಿಗೆ ವಿದ್ಯಾರ್ಥಿಗಳ ಸಮುದಾಯಕ್ಕೆ ನೋವುಂಟಾಗುತ್ತಿದೆ ಎಂದು ಕುಲಸಚಿವರು ಹೇಳಿದ್ದಾರೆ.
ನೇತ್ಯಾತ್ಮಕವಾಗಿ ಬಿಂಬಿಸುವಿಕೆ ಸರಿಯಲ್ಲ: 1980ರಲ್ಲಿ ಆರಂಭವಾಗಿರುವ ಗುಲ್ಬರ್ಗ ವಿವಿ ಹೈ-ಕ ನೆಲದಲ್ಲಿ ಉನ್ನತ ಶಿಕ್ಷಣ, ಗುಣಾತ್ಮಕ ಶಿಕ್ಷಣ ಪ್ರಸಾರಕ್ಕೆ ಅನೇಕ ಕ್ರಮಗಳನ್ನು ಜರುಗಿಸುತ್ತಿದೆ. 1,498 ಸಂಶೋಧನಾ ವಿದ್ಯಾರ್ಥಿಗಳ ಸಂಖ್ಯಾಬಲವಿರುವ ಇಲ್ಲಿ ವಿವಿ ಒಂದೆಂದು ಪರಿಗಣಿಸಲಾಗುತ್ತಿದೆ. ಉನ್ನತ ಸಂಸ್ಥೆಗಳ ಅನುದಾನದಿಂದ ಸಂಶೋಧನೆಗಳನ್ನೂ ಕೈಗೆತ್ತಿಕೊಳ್ಳಲಾಗಿದೆ. ಇಂತಹ ವಿವಿಗಳಲ್ಲಿ ಕೆಲವೊಮ್ಮೆ ಸಮಸ್ಯೆಗಳು ಎದುರಾಗುತ್ತವೆ. ಇದನ್ನೇ ಸಮಾಜದಲ್ಲಿ ಕೆಲವರು ನೇತ್ಯಾತ್ಮಕವಾಗಿ ಬಿಂಬಿಸುತ್ತಿದ್ದಾರೆ, ಇದು ಸರಿಯಾದ ಕ್ರಮವಲ್ಲ ಎಂದು ಕುಲಸಚಿವರು ಹೇಳಿದ್ದಾರೆ.
ಮುಂದುವರಿದ ಹೋರಾಟ: ವಿಸಿ ಪುಟ್ಟಯ್ಯ ಅವರನ್ನು ಕುಲಪತಿ ಸೇವೆಯಿಂದ ಕೆಳಗಿಳಿಸಬೇಕು ಎಂಬ ಹೋರಾಟಗಳು ನಿರಂತರವಾಗಿ ಸಾಗುತ್ತಿವೆ. ಗುರುವಾರ ನಗರದಲ್ಲಿ ವೀರ ಕನ್ನಡಿಗ ಸೇನೆಯ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಿದರು.
ಲೈಂಗಿಕ ಕಿರುಕುಳದಿಂದ ವಿಶ್ವವಿದ್ಯಾಲಯದ ಮಾನ ಹರಾಜಾಗಿದೆ. ಕುಲಪತಿ ಡಾ. ಪುಟ್ಟಯ್ಯನವರು ಪ್ರಕರಣ ಮುಚ್ಚಿ ಹಾಕಲು ಬೆಂಬಲಿಸಿದರೇ ಹೊರತು ತಪ್ಪಿತಸ್ಥರನ್ನು ಶಿಕ್ಷಿಸಲು ಆಸಕ್ತಿ ತೋರಿಸಲಿಲ್ಲ ಎಂದು ಆರೋಪಿಸಿದರು.
ನೆರವಿಗೆ ಬಾರದ್ದಕ್ಕೆ ಕೇಸ್ ದಾಖಲು: ವಿದ್ಯಾರ್ಥಿನಿ ತನಗಾಗುತ್ತಿರುವ ತೊಂದರೆಯನ್ನು ವಿವರಿಸಿ ಕುಲಪತಿಗಳಿಗೆ, ಸಹ ಪ್ರಾಧ್ಯಾಪಕರಿಗೆ ಮನವಿ ಸಲ್ಲಿಸಿದರೂ ಯಾರೂ ಅವಳ ನೆರವಿಗೆ ಬಂದಿಲ್ಲ. ಇದರಿಂದ ಕಂಗಾಲಾದ ವಿದ್ಯಾರ್ಥಿನಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾಳೆ. ಇಂತಹ ಪ್ರಕರಣದಿಂದ ಈ ಭಾಗದ ವಿವಿ ತಲೆ ತಗ್ಗಿಸುವಂತಾಗಿದೆ ಎಂದು ವೀರ ಕನ್ನಡಿಗ ಸೇನೆಯ ಕಾರ್ಯಕರ್ತರು ದೂರಿದ್ದಾರೆ.
ಅಮೃತ ಪಾಟೀಲ್ ಸಿರನೂರ್, ಸಿದ್ಧು ಕಂದಗಲ್, ಸಂತೋಷ ತಳವಾರ, ದತ್ತು ಭಾಸಗಿ, ಹಣಮಂತ ಸುಲ್ತಾನಪೂರ, ನಾಗರಾಜ ಬೆಡಪಳ್ಳಿ, ಶಿವಾಜಿ ಚವ್ಹಾಣ್, ಅಮೀತ ಪಾಟೀಲ್ ಸೇರಿದಂತೆ ಅನೇಕರು ಹೋರಾಟದಲ್ಲಿ ಭಾಗವಹಿಸಿದ್ದರು.
ಪಿಎಚ್ಡಿ ಮಾರಾಟಕ್ಕೆ- ಆರೋಪ: ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರೊ. ದಶರಥ ನಾಯಕ ಅವರು ಸಂಶೋಧನಾ ವಿದ್ಯಾರ್ಥಿನಿ ಜತೆ ಅನುಚಿತವಾಗಿ ನಡೆದುಕೊಂಡಿದ್ದಲ್ಲದೆ ಹಣಕಾಸಿನ ವ್ಯವಹಾರವನ್ನೂ ಮಾಡಿದ್ದಾರೆ. ಪಿಎಚ್ಡಿ ಪದವಿಗಳು ಇಲ್ಲಿ ಮಾರಾಟಕ್ಕೆ ಇದೆ ಎಂಬುದನ್ನು ಈ ಪ್ರಕರಣ ಸಾಬೀತುಪಡಿಸಿದೆ. ಸರ್ಕಾರ, ರಾಜ್ಯಪಾಲರು ಗುಲ್ಬರ್ಗ ವಿವಿಯಲ್ಲಿನ ಘಟನಾವಳಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಅಲ್ಲಿನ ಕುಲಪತಿಗಳನ್ನು ತಕ್ಷಣ ಬದಲಾವಣೆ ಮಾಡಬೇಕು. ಅಲ್ಲಿ ಉತ್ತಮ ಹಾಗೂ ಗುಣಾತ್ಮಕ ಶಿಕ್ಷಣ ವಿದ್ಯಾರ್ಥಿಗಳು ಹೊಂದುವಂತಹ ವಾತಾವರಣ ನಿರ್ಮಿಸಬೇಕೆಂದು ಅಮೃತ ಸಿರನೂರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

