ಸುರಪುರ: ವಿದ್ಯಾರ್ಥಿಗಳಿಂದ ಮಾನವ ಸರಪಳಿ ರಚನೆ
ಸುರಪುರ: ಗುಲ್ಬರ್ಗ ವಿಶ್ವ ವಿದ್ಯಾಲಯದ ಪ್ರೊ. ದಶರಥ ನಾಯಕ ಜಾಮೀನು ವಿರೋಧಿಸಿ ಮತ್ತು 2006ರ ವೃತ್ತಿ ಶಿಕ್ಷಣ ಕಾಯ್ದೆ ಜಾರಿ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕದ ನೇತೃತ್ವದಲ್ಲಿ ಪಟ್ಟಣದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಇಲ್ಲಿಯ ಗಾಂಧೀಜಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಿದರು.
ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ತರಗತಿಗಳನ್ನು ಬಿಟ್ಟು ಪ್ರತಿಭಟನೆಗೆ ಧುಮುಕಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಗಮನ ಸೆಳದರು. ಪ್ರತಿಭಟನಾ ನಿರತ ನೂರಾರು ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಗಾಂಧೀಜಿ ವೃತ್ತದಲ್ಲಿ ಜಮಾವಣೆಗೊಂಡು ವಿದ್ಯಾರ್ಥಿ ಸಮೂಹ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಗುಲ್ಬರ್ಗ ವಿವಿ ಪ್ರೊ. ದಶರಥ ನಾಯಕನಿಗೆ ಜಾಮೀನು ನೀಡಿದ ಕ್ರಮದ ವಿರುದ್ಧ ಕಿಡಿಕಾರಿದರು.
ತಕ್ಷಣ ವರ್ಗಾವಣೆ ಮಾಡಿ: ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರು ಮಾತನಾಡಿ, ಲೈಂಗಿಕ ಕಿರುಕುಳ ವಿರುದ್ಧ ನ್ಯಾಯ ಕೇಳಿ ಪೊಲೀಸ್ ಠಾಣೆ ಮೆಟ್ಟಲು ಏರಿದ ವಿದ್ಯಾರ್ಥಿನಿ ಮೇಲೆ ಜಾತಿ ನಿಂದನೆ ಆರೋಪ ಹೊರಸಿ, ಆಕೆ ಮಾಡುತ್ತಿರುವ ಆರೋಪ ಸುಳ್ಳು ಎಂದು ಕೇಸು ದಾಖಲಿಸದೇ ಪೊಲೀಸರು ವಿಳಂಬ ಅನುಸರಿಸಿರುವುದು ಸರಿಯಲ್ಲ ಎಂದು ದೂರಿದರು.
ವಿವಿ ಕುಲಪತಿ ಈ.ಟಿ.ಪುಟ್ಟಯ್ಯ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು. ಯುವತಿಗೆ ಸೂಕ್ತ ರಕ್ಷಣೆ ನೀಡಿ ನ್ಯಾಯ ಒದಗಿಸಲು ಆಗ್ರಹಿಸಿದರು.
ಸಿಇಟಿ ಗಗನ ಕುಸುಮ: 2006ರ ಕಾಯ್ದೆ ಜಾರಿಯಿಂದ ಬಡ, ಮಧ್ಯಮ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ (ಸಿಇಟಿ) ಪ್ರವೇಶದ ಕನಸು ಗಗನ ಕುಸುಮವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಒಂದೇ ಸರ್ಕಾರಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಬೇಕು. ಶೇ.50 ಸೀಟುಗಳಿಗೆ ಈಗಿರುವಂತೆ ಸರ್ಕಾರದ ಶುಲ್ಕವನ್ನು ಮುಂದುವರಿಸಬೇಕು.
ಉಳಿದ ಶೇ.50 ಸೀಟುಗಳಿಗೆ ವ್ಯವಸ್ಥಾಪಕ ಮಂಡಳಿಯೊಂದಿಗೆ ಕುಳಿತು ಶುಲ್ಕ ನಿರ್ಧರಿಸಬೇಕು. 2006ರ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿಗೆ ಸಲ್ಲಿಸಲಾಯಿತು.
ಎಬಿವಿಪಿಯ ಮುಖಂಡರಾದ ಉಪೇಂದ್ರ ನಾಯಕ, ಗಂಗಾಧರ ನಾಯಕ ಅರಳಹಳ್ಳಿ, ಶರಣು ನಾಯಕ, ವೀರಭದ್ರ ಕಿರದಳ್ಳಿ, ಸಂದೀಪ ನಾಯಕ, ಮಂಜುನಾಥ ಚೆಟ್ಟಿ, ಲಕ್ಷ್ಮೀಕಾಂತ ದೇವರಗೋನಾಲ, ವೀರೇಶ ರೆಡ್ಡಿ ಕೋನಾಳ, ಶರಣು, ಸಂತೋಷ, ಭೀಮು, ಭಾಗಣ್ಣ, ಶ್ರವಣ, ಕೊಟ್ರೇಶ, ಸುಭಾಷ, ವೀರೇಶ ಗೋನಾಲ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

