ಗುಲ್ಬರ್ಗಾ

20ನಿಮಿಷ 20 ಸುದ್ದಿ

Published On :

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಬಿಎಸ್‌ಪಿ ಧರಣಿ
ಗುಲ್ಬರ್ಗ/ಶಹಾಬಾದ್: ನಗರದಲ್ಲಿ ರಸ್ತೆ, ಕುಡಿವ ನೀರು ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಆಗ್ರಹಿಸಿ ಬಹುಜನ ಸಮಾಜ ಪಕ್ಷದಿಂದ ನಗರಸಭೆ ಕಚೇರಿ ಎದುರಿನ ಡಾ. ಅಂಬೇಡ್ಕರ್ ವೃತ್ತದಲ್ಲಿ ಧರಣಿ ನಡೆಸಲಾಯಿತು. ನಗರದಲ್ಲಿ ಕೆಟ್ಟ ರಸ್ತೆ, ಅವೈಜ್ಞಾನಿಕವಾಗಿ ನಿರ್ಮಿಸಿದ ಚರಂಡಿಗಳಿಂದ ಸಾರ್ವಜನಿಕರು ಓಡಾಡಲು ತೊಂದರೆಯಾಗುತ್ತಿದೆ. ಹಳೆ ಶಹಾಬಾದ್‌ನ ಅಂಬೇಡ್ಕರ್ ರಸ್ತೆಯಿಂದ ರೇಲ್ವೆ ನಿಲ್ದಾಣದವರೆಗಿನ ರಸ್ತೆ ಹಾಗೂ ನಗರದ ಎಲ್ಲ ರಸ್ತೆಗಳು ಹದಗೆಟ್ಟು ಹೋಗಿದೆ. ಇದರಿಂದ ಇಲ್ಲಿನ ಸಾರ್ವಜನಿಕರು ನಿತ್ಯ ಒಂದಿಲ್ಲೊಂದು ಸಮಸ್ಯೆಗಳಿಂದ ತೊಂದರೆ ಪಡುವಂತಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು. ಕೂಡಲೇ ಈ ರಸ್ತೆಯನ್ನು ಸಿಸಿ ರಸ್ತೆ ಕಾಮಗಾರಿ ಮಾಡದೇ ಡಾಂಬರೀಕರಣಗೊಳಿಸಬೇಕೆಂದು ಆಗ್ರಹಿಸಿದರು.

ಅಕ್ರಮ ಸಾರಾಯಿ ತಡೆಗೆ ಶಾಸಕ ಪಾಟೀಲ್ ತಾಕೀತು
ಆಳಂದ: ಅಕ್ರಮ ಸಾರಾಯಿ ಮಾರಾಟ ತಡೆಯುವಂತೆ ಶಾಸಕ ಬಿ.ಆರ್. ಪಾಟೀಲ್ ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಸಿದರು. ಪಟ್ಟಣದ ತಾಪಂ ಕಚೇರಿಯಲ್ಲಿ ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದ್ದರು, ಇದನ್ನು ತಡೆಯುವಂತೆ ನಾನು ಹೋರಾಟ ಮಾಡಿ ಕಾಲಾವಕಾಶ ಕೊಟ್ಟಿದ್ದಾಗಿದೆ. ಕಾಟಾಚಾರಕ್ಕೆ ಅಧಿಕಾರಿಗಳು ಬೆರಳೆಣಿಕೆಯಷ್ಟು ಪ್ರಕರಣ ದಾಖಲಿಸಿದ್ದು, ಇದೀಗ ಮತ್ತೆ ಯಥವತ್ತಾಗಿ ಕಾರ್ಯ ಸಾಗುತ್ತಿದೆ ಎಂದರು. ಅಕ್ರಮ ಮಾರಾಟಗಾರರ ಮೇಲೆ ಅಬಕಾರಿ ಹಾಗೂ ಪೊಲೀಸ್ ಠಾಣೆಯಲ್ಲಿ ತಲಾ ಎರಡೆರಡು ಪ್ರಕರಣಗಳಿದ್ದರೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ನಿರ್ಧಾರ. ಧಂಗಾಪುರ ಗ್ರಾಮದ ಮುಖ್ಯರಸ್ತೆಯಲ್ಲೇ ನಾಲ್ಕು ಅಂಗಡಿಗಳಲ್ಲಿ ಸಾರಾಯಿ ಮಾರಾಟ ನಡೆಯುತ್ತದೆ. ಅಧಿಕಾರಿಗಳು ಅಲ್ಲಿನ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಸಭೆಯಲ್ಲಿ ಗ್ರಾಮದ ಪ್ರಮುಖರೊಬ್ಬರು ಬಹಿರಂಗಪಡಿಸಿದಾಗ ಅಧಿಕಾರಿಗಳಿಗೆ ತೀವ್ರ ಮುಜುಗರಕ್ಕೀಡು ಮಾಡಿತು. ಗಡಿ ಭಾಗದ ಆಳಂಗಾ, ತಡೋಳಾ, ಖಂಡಾಳ ಜವಳಿ ಹೋದಲೂರ ಇನ್ನಿತರ ಕಡೆ ಮಹಾರಾಷ್ಟ್ರದ ಜೀಪ್‌ಗಳಿಂದ ಅಕ್ರಮ ಸಾರಾಯಿ ಪೂರೈಸಿ ಮಾಡಲಾಗುತ್ತಿದೆ ಎಂದರು.

ರೈತರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.: ಪ್ರಿಯಾಂಕ್
ಚಿತ್ತಾಪುರ: ದೇಶದ ಆರ್ಥಿಕ ಅಭಿವೃದ್ಧಿಗೆ ರೈತರು ಬೆನ್ನೆಲುಬಗಿದ್ದಾರೆ. ಅವರೇ ನಮಗೆ ಅನ್ನದಾತರು, ನಾವು ಓದಿ ಕಲಿಯುವುದನ್ನು ಅವರು ಕೃಷಿ ಕಾಯಕ ಮಾಡಿ ಕಲಿಯುತ್ತಾರೆಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು. ಇಲ್ಲಿಯ ಎಪಿಎಂಸಿ ಆವರಣದಲ್ಲಿ ವಿಶ್ವ ಗಂಗಾ ಶಿಕ್ಷಣ ಸಂಸ್ಥೆ ಹಮ್ಮಿಕೊಂಡ 120 ಅನ್ನದಾತನಿಗೆ ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ರೈತರು ಸಂಕಷ್ಟದಲ್ಲಿದ್ದರು. ಸ್ವಾತಂತ್ರ ನಂತರ ಪಂಚವಾರ್ಷಿಕ ಯೋಜನೆ ಜಾರಿಗೆ ತಂದು ರೈತರ ಅಭಿವೃದ್ಧಿಗೆ ಅನೇಕ ಯೋಜನೆಗಳು ಜಾರಿಗೊಳಿಸಿದರು. ರೈತರು ಅಭಿವೃದ್ಧಿಯಲ್ಲಿ ಹಿಂದೆ ಉಳಿಯುತ್ತಿದ್ದಾರೆಂದು ವಿಷಾದ ವ್ಯಕ್ತಪಡಿಸಿದರು. ರೈತರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಹಲವರು ರೈತರನ್ನು ರಾಜಕೀಯಕ್ಕೆ ಬಳಸಿಕೊಳ್ಳತ್ತಿದ್ದಾರೆ. ಅವರಿಂದ ಜಾಗೃತರಾಗಿ ರೈತಪರ ಕಾಳಜಿಯುಳ್ಳವರನ್ನು ಬೆಂಬಲಿಸಿ ಎಂದು ಸಲಹೆ ನೀಡಿದರು.

ಕ್ಷೇತ್ರದ ಅಭಿವೃದ್ಧಿಗೆ 100 ಕೋಟಿ: ಶಾಸಕ ಪ್ರಿಯಾಂಕ್
ಚಿತ್ತಾಪುರ: ಕೇವಲ 6 ತಿಂಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ನೂರಾರು ಕೋಟಿ ರುಪಾಯಿ ಕಾಮಗಾರಿಗೆ ಅನುದಾನ ಮಂಜೂರು ಮಾಡಲಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು. ಹಲಕರ್ಟಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನೂತನ ಶೈಲಿಯಲ್ಲಿ ಒಂದು ಶೌಚಾಲಯವನ್ನು ಪ್ರಾಯೋಗಿಕವಾಗಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದೆ. ಇದು ಯಶಸ್ವಿಯಾದರೇ ಇಲ್ಲಿ 6 ಶೌಚಾಲಯ ನಿರ್ಮಿಸುವ ಜತೆಗೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದರು. ಬಾಗೋಡಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೆ 22 ಕೋಟಿ, ಶಾಲಾ ಕಟ್ಟಡಗಳ ನಿರ್ಮಾಣಕ್ಕೆ 10 ಕೋಟಿ, ವಾಡಿ ಯುಜಿಡಿಗಾಗಿ 65 ಕೋಟಿ, ನಾಗಾವಿಯಲ್ಲಿ ಯಾತ್ರಿಕ ನಿವಾಸ ನಿರ್ಮಾಣಕ್ಕೆ 60 ಲಕ್ಷ ಒದಗಿಸಲಾಗಿದೆ ಎಂದು ಹೇಳಿದರು. ಮುತ್ತಗಿ ಬ್ಯಾರೇಜ್‌ಗೆ 10 ಲಕ್ಷ, ಚಿತ್ತಾಪುರ ಹಾಗೂ ವಾಡಿ ಪುರಸಭೆ ಅಭಿವೃದ್ಧಿಗೂ ಅನುದಾನ ಕಲ್ಪಿಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಎಎನ್‌ಎಂ ಕೇಂದ್ರಗಳಿಗೆ ಹಣ ಒದಗಿಸಲಾಗಿದೆ. ಜತೆಗೆ ಸುವರ್ಣ ಗ್ರಾಮೋದಯ ಯೋಜನೆಯಡಿ ಕೆಲ ಗ್ರಾಮಗಳಿಗೆ ಕೋಟಿಗಟ್ಟಲೇ ಅಭಿವೃದ್ಧಿಗೆ ಕಾಮಗಾರಿಗಳು ಕೈಗೊಳ್ಳಲಾಗುತ್ತಿದೆ ಎಂದರು.

ಗ್ರಾಹಕರ ಸುರಕ್ಷತೆಗೆ, ಸೇವೆಗೆ ಆದ್ಯತೆ ನೀಡಿ: ಪಾಟೀಲ್
ಚಿತ್ತಾಪುರ: ತಾಲೂಕಿನ ಠಾಣಾ ವ್ಯಾಪ್ತಿಯಲ್ಲಿ ಸಂಚರಿಸುವ ಆಟೋ ಚಾಲಕರು ಗ್ರಾಹಕರ ಸುರಕ್ಷತೆ ಹಾಗೂ ಮಾನವೀಯತೆ ಮೇಲೆ ಸೇವೆಗೆ ಆದ್ಯತೆ ನೀಡಬೇಕೆಂದು ಚಿತ್ತಾಪುರದ ನೂತನ ಸಿಪಿಐ ಶಂಕರಗೌಡ ಪಾಟೀಲ್ ಹೇಳಿದರು. ಪಟ್ಟಣದ ವ್ಯಾಪ್ತಿಯಲ್ಲಿ ಸಂಚರಿಸುವ ಆಟೋಗಳ ಚಾಲಕರು ಹಾಗೂ ಮಾಲೀಕರ ಸಭೆಯಲ್ಲಿ ಮಾತನಾಡುತ್ತ, ಆಟೋ ಚಾಲಕರು ಪ್ರಯಾಣಿಕರ ಸೇವೆ ಮಾಡುವ ಉದ್ದೇಶದಿಂದ ಕೆಲಸ ಮಾಡಬೇಕೇ ವಿನಃ ಅವರಿಗೆ ಹೊರೆಯಾಗದಂತೆ ಸೇವೆ ನೀಡಬಾರದು ಎಂದರು. ಪಿಎಸ್‌ಐ ಸಂಜೀವಕುಮಾರ್ ಮಾತನಾಡಿದರು. ಆಟೋ ಚಾಲಕರ ಸಂಘದ ಅನ್ನು ಕಾಶಿ, ಸುಭಾಷ, ಮಹ್ಮದ್ ಗೌಸ್, ಭೀಮು, ಮಕ್ತುಂ, ಶಿವು, ಜಾವಿದ್, ಜಗನ್ನಾಥ ಮೂಡಬೂಳಕರ್ ಸೇರಿದಂತೆ ಹಲವಾರು ಆಟೋ ಚಾಲಕರು ಭಾಗವಹಿಸಿದ್ದರು.

ವರನಾಳ ಗ್ರಾಮದಲ್ಲಿ ಮಾವನಿಂದ ಸೊಸೆ ಕೊಲೆ
ಗುಲ್ಬರ್ಗ: ತಾಲೂಕಿನ ವರನಾಳ ಗ್ರಾಮದಲ್ಲಿ ಸೊಸೆಯನ್ನು ಒದ್ದು ಮಾವನೊಬ್ಬ ಕೊಲೆ ಮಾಡಿದ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಲತಾ ಗಂಡ ಅರ್ಜುನ ಮಾಳಗೆ (30) ಯನ್ನು, ಆಕೆಯ ಮಾವ ಹುಸೇನಪ್ಪ ತಂದೆ ಮಲ್ಕಪ್ಪ ಮಾಳಗೆ (70) ಎಂಬಾತ ಅವಳ ಹೊಟ್ಟೆಗೆ ಒದ್ದ ಪರಿಣಾಮ ಅಸ್ವಸ್ಥಳಾದ ಅವಳು ಶುಕ್ರವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಲತಾಗೆ ಸಿಜೇರಿಯನ್ ಶಸ್ತ್ರ ಚಿಕಿತ್ಸೆಯಾಗಿತ್ತು. ಆಗಾಗ ಅವಳಿಗೆ ಹೊಟ್ಟೆ ನೋವು ಇತ್ತು. ಶುಕ್ರವಾರ ರಾತ್ರಿ ಯಾವುದೋ ವಿಷಯಕ್ಕೆ ಮಾವ ಹುಸೇನಪ್ಪ ಹೊಟ್ಟೆಗೆ ಒದ್ದಿದ್ದರಿಂದ ಸಾವಿಗೀಡಾಗಿದ್ದಾಳೆ. ಮೃತ ಲತಾಳಿಗೆ ಒಂದು ಹೆಣ್ಣು ಹಾಗೂ ಮೂರು ಗಂಡು ಮಕ್ಕಳಿದ್ದಾರೆ. ಅವಳ ಪತಿ ಮುಂಬೈಯಲ್ಲಿ ಕೆಲಸಕ್ಕೆಂದು ಹೋಗಿದ್ದು, ಅವಳು ಗಂಡನ ಮನೆಯಲ್ಲಿ ಇದ್ದಳು. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಗ್ರಾಮೀಣ ಸಿಪಿಐ ಡಿ.ಜಿ. ರಾಜಣ್ಣ, ಪಿಎಸ್‌ಐ ನಿಂಗಪ್ಪ ಶಿವೂರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ. ಈ ಕುರಿತು ಕಮಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳಪೆ ಸೈಕಲ್ ವಿತರಣೆ, ಪಾಲಕರ ಅಕ್ರೋಶ

ಚಿತ್ತಾಪುರ: ರಾಜ್ಯದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಉಚಿತವಾಗಿ ಸೈಕಲ್‌ಗಳನ್ನು ಪ್ರತಿ ವರ್ಷ ವಿತರಿಸುತ್ತದೆ. ಅದರಂತೆ ಈ ಬಾರಿಯು ತಾಲೂಕಿನಲ್ಲಿ 8ನೇ ತರಗತಿ ಮಕ್ಕಳಿಗೆ ಈಚೆಗೆ ನೀಡಿದ ಸೈಕಲ್‌ಗಳು ಕಳಪೆ ಮಟ್ಟದಾಗಿದ್ದು, ಅವುಗಳು ಈಗ ದುರಸ್ತಿ ಅಂಗಡಿ ಮುಂದಿವೆ. ಈ ಬಾರಿ ವಿತರಿಸಿದ ಸೈಕಲ್‌ಗಳು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು, ಕೊಟ್ಟ ಕೆಲ ದಿನಗಳಲ್ಲಿ ಅವುಗಳಲ್ಲಿ ಸಾಮಾನುಗಳು ದುರಸ್ತಿಗೆ ಬಂದಿರುವುದರಿಂದ ಅವುಗಳನ್ನು ಸೈಕಲ್ ದುರಸ್ತಿ ಅಂಗಡಿಯಲ್ಲಿ ದುರಸ್ತಿ ಮಾಡಿಸುವುದೇ ಒಂದು ಕೆಲಸವಾಗಿದೆ. ಇದರಿಂದ ಮಕ್ಕಳಿಗೆ ಉಪಯೋಗವಾಗುವ ಬದಲು ತೊಂದರೆಯಾಗುತ್ತಿದೆ ಎಂದು ಪಾಲಕರು ಹೇಳುತ್ತಾರೆ. ಏಕೆಂದರೆ ಸೈಕಲ್ ಸಿಕ್ಕ ಖುಷಿಯಲ್ಲಿ ಅದನ್ನು ತೆಗೆದುಕೊಂಡು ಹೊರಗೆ ಹೋದರೆ ಅದರ ಮೇಲೆ ಕೂತು ನಡೆಸುವ ಬದಲು ಅದನ್ನು ನಾವೇ ಹೊತ್ತುಕೊಂಡು ರಿಪೇರಿ ಅಂಗಡಿಗೆ ಹೋಗಬೇಕು ಎನ್ನುತ್ತಾರೆ ವಿದ್ಯಾರ್ಥಿಗಳು.

ಜಾಗೃತಿ ಅಭಿಯಾನ; ರೆಡಿಮೇಡ್ ಶೌಚಾಲಯ ವೀಕ್ಷಣೆ

ಆಳಂದ: ನಿರ್ಮಲ ಭಾರತ ಅಡಿಯಲ್ಲಿ ತಾಲೂಕಿನ ಪ್ರತಿಯೊಬ್ಬ ಬಡವರ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಶಾಸಕ ಬಿ.ಆರ್. ಪಾಟೀಲ್ ಕರೆ ನೀಡಿದರು. ಪಟ್ಟಣದ ಗುರುಭವನದಲ್ಲಿ ಶನಿವಾರ ಜಿಪಂ ಮತ್ತು ತಾಪಂ ಆಶ್ರಯದಲ್ಲಿ ನಿರ್ಮಲ ಭಾರತ ಅಭಿಯಾನ ಯೋಜನೆ ಶೀಘ್ರ ಅನುಷ್ಠಾನ ಕುರಿತು ಸ್ವಚ್ಛತಾ ಉತ್ಸವ ಹಾಗೂ ಉದ್ಯೋಗ ಖಾತ್ರಿ, ಮಾಹಿತಿ ಶಿಕ್ಷಣ ಹಾಗೂ ಸಂವಹನ ಕಾರ್ಯಕ್ರಮದ ಜಾಗೃತಿ ಬೃಹತ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸ್ವಚ್ಛತಾ ಮತ್ತು ಆರೋಗ್ಯದ ದೃಷ್ಟಿಯಿಂದ ಶೌಚಾಲಯ ಅಗತ್ಯ. ವಿಶೇಷವಾಗಿ ಮನೆಯಲ್ಲಿ ಮಹಿಳೆಯರಿಗೆ ಶೌಚಾಲಯ ಅತಿ ಜರೂರಿಯಾಗಿದ್ದು, ಬರುವ ವರ್ಷದೊಳಗಾಗಿ ಶೌಚಾಲಯ ಕಟ್ಟಿಕೊಂಡು ಸರ್ಕಾರದ ಸಂಕಲ್ಪಕ್ಕೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು ಕೈ ಜೋಡಿಸಬೇಕು ಎಂದರು. 11 ಸಾವಿರ ಬೆಲೆಯ ರೆಡಿಮೇಡ್ ಶೌಚಾಲಯವನ್ನು ಸಾವಿರದಿಂದ 2 ಸಾವಿರ ರು. ಕಟ್ಟಿದರೆ ಉಳಿದ ಹಣವನ್ನು ಖಾತ್ರಿ, ನಿರ್ಮಲ ಭಾರತ ಅಡಿಯಲ್ಲಿ ದೊರೆಯಲಿದೆ. ಅಧಿಕಾರಿಗಳು ಶೌಚಾಲಯ ಮಾದರಿಸಾರ್ವಜನಿಕ ವೀಕ್ಷಣೆಗೆ ಇಟ್ಟಿದ್ದಾರೆ. ಇದನ್ನು ನೋಡಿಕೊಂಡು ಅನುಷ್ಠಾನಕ್ಕೆ ತರುವ ಮೂಲಕ ಬಹಿರ್ದೆಸೆ ಮುಕ್ತವಾಗಿಸಲು ಪಣತೊಡಬೇಕು ಎಂದರು.

ನಿವೃತ್ತ ಕಾರ್ಮಿಕರ ಮರೆತ ಅಲ್ಸಟಾಮ್ ಕಾರ್ಖಾನೆ
ಗುಲ್ಬರ್ಗ/ಶಹಾಬಾದ್: ನಗರದಲ್ಲಿರುವ ಅಲ್ಸಟಾಮ್ ಕಾರ್ಖಾನೆಯ ಆಡಳಿತ ಮಂಡಳಿ ಕಷ್ಟ ಕಾಲದಲ್ಲಿ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಸಹಕರಿಸಿದ ನಿವೃತ್ತ ಕಾರ್ಮಿಕರನ್ನು ಕಾರ್ಖಾನೆ ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ ಮರೆತಿದೆ ಎಂದು ಮಾಜಿ ಕಾರ್ಮಿಕ ಮುಖಂಡ, ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಧರ್ಮವೀರ ಚವ್ಹಾಣ ದೂರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 50 ವರ್ಷಗಳ ಹಿಂದೆ ಎಸಿಸಿ ನ್ಯೂ ಎಂಜಿನಿಯರಿಂಗ್ ಕಾರ್ಖಾನೆ ಕಾಲಕಾಲಕ್ಕೆ ಹೆಸರು ಬದಲಾಯಿಸಿತು. 1986ರಲ್ಲಿ ಕಾರ್ಖಾನೆ ಆರ್ಥಿಕವಾಗಿ ದಿವಾಳಿಯಾದಾಗ ಕಾರ್ಮಿಕರು ಆಡಳಿತ ಮಂಡಳಿಯೊಂದಿಗೆ ಸೇರಿ ಕೇಂದ್ರ, ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು 22 ತಿಂಗಳ ನಂತರ ಪುನರಾರಂಭಗೊಂಡ ನಂತರ ಕಾರ್ಮಿಕರು 22 ತಿಂಗಳ ವೇತನದಲ್ಲಿ ಶೇ.25 ರಷ್ಟನ್ನು ಸರ್ಕಾರದಲ್ಲಿ ಠೇವಣಿ ಇಟ್ಟು, ಶೇ.25 ರಷ್ಟನ್ನು ತ್ಯಾಗ ಮಾಡಿ, ಶೇ.50 ರಷ್ಟು ವೇತನ ಪಡೆದು ಕಾರ್ಖಾನೆಯನ್ನು ಪುನರಾರಂಭಗೊಳಿಸಲು ಶ್ರಮಿಸಿದರು ಎಂದರು. ನಿವೃತ್ತ ಕಾರ್ಮಿಕರಾದ ಅಣ್ಣಾರಾವ ರಾಯಚೂರಕರ್, ಮರಲಿಂಗಪ್ಪ ಕಮರಡಗಿ, ಚಂದು ಜಾಧವ, ಜಬ್ಬಾರ್, ಜಾಹಾಗೀರದಾರ್ ಇತರರು ಇದ್ದರು.


ಮಾನವರ ಕಲ್ಯಾಣ ಬಯಸುವ ವೇದ: ಭಾರತೀಶ್ರೀ
ಆಳಂದ: ವೇದಗಳು ಎಲ್ಲ ಮಾನವರ ಕಲ್ಯಾಣ ಮತ್ತು ಏಕತೆಯನ್ನು ಬಯಸುತ್ತವೆ. ಅವುಗಳ ತತ್ವ ಪ್ರಸಾರದಿಂದ ಮಾನವೀಯತೆ ಹಾಗೂ ಏಕತೆ ಮೂಡಲಿದೆ, ಶಂಕರಾಚಾರ್ಯರು ಈ ತತ್ವ ಸಿದ್ಧಾಂತಗಳನ್ನು ಬೋಧಿಸಿದ್ದಾರೆಂದು ಮೈಸೂರು ಎಡತೊರೆ ಯೋಗಾನಂದ ಮಠದ ಶಂಕರ ಭಾರತೀಯ ಸ್ವಾಮೀಜಿ ಹೇಳಿದರು. ಪಟ್ಟಣದ ಬ್ರಾಹ್ಮಣಗಲ್ಲಿಯ ನಗರೇಶ್ವರ ರಾಮಮಂದಿರದಲ್ಲಿ ಬ್ರಾಹ್ಮಣ ಸಮಾಜವು ಹಮ್ಮಿಕೊಂಡ ಧಾರ್ಮಿಕ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಗುಲ್ಬರ್ಗದಲ್ಲಿ ನಡೆಯಲಿರುವ ಸಂಗೀತ ಲಹರಿ ಕಾರ್ಯಕ್ರಮದ ಪೂರ್ವಸಿದ್ಧತಾ ಅಂಗವಾಗಿ ಈ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡ ವಿಜಯಕುಮಾರ್ ಕೋಥಳ್ಕಿಕರ್ ಹೇಳಿದರು. ಕಾರ್ಯಕ್ರಮದಲ್ಲಿ ಸಮಾಜದ ದತ್ತಾತ್ರೇಯ ರಾಮದಾಸಿ ಬೂವಾ, ಪ್ರಭಾಕರ ದೇಸಾಯಿ, ಅವದೂತ್ ಕುಲಕರ್ಣಿ, ವಿಜಯ ಚಿಟಗುಪಕರ್, ವಿಜಯಕುಮಾರ್ ಕೋಥಳ್ಕಿಕರ್, ಕಿಶೋರ ದೇಶಪಾಂಡೆ, ಬಲಭೀಮ ಕುಲಕರ್ಣಿ, ಅನುಪಮಾ ಕುಲಕರ್ಣಿ, ಅರುಣಾ ಹೋದಲೂರಕರ್, ಶೋಭಾ ಕುಲಕರ್ಣಿ, ಗೀತಾ ಕುಲಕರ್ಣಿ, ಜಯಶ್ರೀ ದೀಕ್ಷಿತ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಶಿಕ್ಷಣಕ್ಕೆ ಪೂರಕ ಕಲಿಕೋತ್ಸವ: ಬನ್ನಿಕಟ್ಟಿ
ಗುಲ್ಬರ್ಗ/ಶಹಾಬಾದ್: ಮಕ್ಕಳ ಶಿಕ್ಷಣಕ್ಕೆ ಕಲಿಕೋತ್ಸವ ಪೂರಕವಾಗಿದ್ದು, ಬುದ್ಧಿಮಟ್ಟದ ಬೆಳವಣಿಗೆಗೆ ಹೆಚ್ಚು ಅನುಕೂಲ. ಪ್ರತಿಭಾ ಕಾರಂಜಿ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಿದರೆ, ಕಲಿಕೋತ್ಸವ ಮಕ್ಕಳ ಬುದ್ಧಿಶಕ್ತಿಗೆ ಸಹಕಾರಿ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಶರಣಪ್ಪ ಬನ್ನಿಕಟ್ಟಿ ಹೇಳಿದರು. ಭಂಕೂರಿನ ಗಣೇಶ ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಟಿಆರ್‌ಟಿ)ಯಲ್ಲಿ ಶಾಲಾ ಮಟ್ಟದಲ್ಲಿ ಹಮ್ಮಿಕೊಂಡ ಕಲಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಹಿತಿ ಪ್ರಸನ್ನ ಮಂಡಲಗಿರಿ ಕಲಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಹೆಬ್ಬಾಳಕರ್, ಉಪಾಧ್ಯಕ್ಷ ಶಿವಪುತ್ರ ಕರಣಿಕ, ಶಿಕ್ಷಣ ಸಂಯೋಜಕ ಸುಭಾಶ್ಚಂದ್ರ ಕಮಲಪುರ ಹಾಗೂ ಸಿಆರ್‌ಪಿ ಬಸವರಾಜ ಹೂಗಾರ, ಮಲ್ಲಿನಾಥ ಪಾಟೀಲ್ ಮತ್ತು ಶಿಕ್ಷಕರು, ಸಿಬ್ಬಂದಿ, ಮಕ್ಕಳು ಪಾಲ್ಗೊಂಡಿದ್ದರು. ಶಾಲೆಯ ವಿಜ್ಞಾನ, ಗಣಿತ, ಮಕ್ಕಳು ನಾಟಕ, ಸಂಭಾಷಣೆ, ಹಾಡು ಮತ್ತಿತರ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ನೀಡಿದರು. ರೋಹಿಣಿ ಪ್ರಾರ್ಥನೆ ಗೀತೆ ಹಾಡಿದರು. ಪಾರ್ವತಿ ರಟಕಲ್ ಸ್ವಾಗತಿಸಿದರು. ಪಾರ್ವತಿ ರಾಮಲಿಂಗ ನಿರೂಪಿಸಿದರು. ಶಿವಲಿಂಗಪ್ಪ ವಂದಿಸಿದರು.

ಜ.7ರಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ
ಗುಲ್ಬರ್ಗ: ರಾಷ್ಟ್ರಪತಿಗಳು ಬರುವ ಜನವರಿ 7ರಂದು ಕೇಂದ್ರ ಸರ್ಕಾರದ ಕೇಂದ್ರೀಯ ವಿಶ್ವವಿದ್ಯಾಲಯಗಳು, ಐಐಟಿ, ಐಐಐಟಿ ಮತ್ತು ಎನ್‌ಐಟಿ ಸಂಸ್ಥೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಸಂದೇಶ ನೀಡಲಿದ್ದಾರೆ. ವೀಡಿಯೋ ಕಾನ್ಫರೆನ್ಸ್‌ನಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಎಸ್.ಎಸ್. ಮೂರ್ತಿ ಸ್ವಾಗತ ಭಾಷಣ ಮಾಡಲಿದ್ದಾರೆ. ಕುರುಕ್ಷೇತ್ರದ ಎನ್‌ಐಟಿ ಸಂಸ್ಥೆಯ ನಿರ್ದೇಶಕರು ವಂದನಾರ್ಪಣೆ ಮಾಡಲಿದ್ದಾರೆಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಎಸ್.ಎಸ್.ಮೂರ್ತಿ ತಿಳಿಸಿದರು. 12ನೇ ಪಂಚವಾರ್ಷಿಕ ಯೋಜನೆ ಅಂತ್ಯದವರೆಗೆ 150 ಬೋಧಕ ಸಿಬ್ಬಂದಿ, 200 ಪೂರಕ ಸಿಬ್ಬಂದಿಯಲ್ಲಿ 100 ನೇರ ಮತ್ತು 100 ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಎಸ್.ಎಸ್. ಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 2014ರ ಫೆಬ್ರವರಿ 6 ಮತ್ತು 7 ರಂದು ಕೇಂದ್ರೀಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳ ಸಭೆಯನ್ನು ರಾಷ್ಟ್ರಪತಿ ಭವನದಲ್ಲಿ ಕರೆದಿದ್ದಾರೆ ಎಂದರು.

ಸೌಲಭ್ಯಪೂರ್ಣ ಸರ್ಕಾರಿ ಐಟಿಐ: ಸಚಿವ ನಾಯಕ
ಗುಲ್ಬರ್ಗ: ರಾಜ್ಯದಲ್ಲಿರುವ ಸರ್ಕಾರಿ ಐಟಿಐಗಳಿಗೆ ಕಟ್ಟಡ, ಕುಡಿವ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯ ನೀಡಲು ಸರ್ಕಾರ ಪಣ ತೊಟ್ಟಿದೆ. 58 ಐಟಿಐಗಳಿಗೆ ನಬಾರ್ಡ್ ಯೋಜನೆಯಲ್ಲಿ 110 ಕೋಟಿ ಮೀಸಲಿಡಲಾಗಿದ್ದು, ಈ ಹಣದಲ್ಲಿ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯಕ ಹೇಳಿದ್ದಾರೆ. ಕಾರ್ಮಿಕ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಗುಲ್ಬರ್ಗಕ್ಕೆ ಭೇಟಿ ನೀಡಿದ್ದ ಸಚಿವರು ಇಲ್ಲಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ರಾಜ್ಯದಲ್ಲಿರುವ 5 ದಶಕ ಕಂಡ ಐಟಿಐಗಳಿಗೂ ಆಧುನಿಕ ಸ್ಪರ್ಶ ನೀಡುವ ಅಗತ್ಯವಿದೆ. ಇಂತಹ 25 ಐಟಿಐಗಳನ್ನು ಪಟ್ಟಿ ಮಾಡಲಾಗಿದ್ದು, ಅವುಗಳ ಸರ್ವತೋಮುಖ ಪ್ರಗತಿಗೆ ಯೋಜನೆ ರೂಪಿಸಲಾಗಿದೆ ಎಂದರು. 5ದಶಕ ಕಂಡಿರುವ ಐಟಿಐಗಳ ಸೂರು ಸರಿ ಇಲ್ಲ, ತರಗತಿ ಕೋಣೆಗಳು ಬೀಳುವ ಹಂತ ತಲುಪಿವೆ. ಇಲ್ಲಿರುವ ಪ್ರಯೋಗಾಲಯಗಳು ಶಿಥಿಲವಾಗಿವೆ. ಅಲ್ಲಿನ ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಇದೆಲ್ಲ ಸಂಗತಿ ಗಮನದಲ್ಲಿದೆ. ಈಗಾಗಲೇ ಆಯ್ದ 25 ಐಟಿಐಗಳಿಗೆ ಆಧುನಿಕ ಸ್ವರೂಪ ನೀಡುವ ಯೋಜನೆ ರೂಪಿತವಾಗಿದ್ದು, ಶೀಘ್ರ ಕಾರ್ಯರೂಪಕ್ಕೆ ಬರುತ್ತದೆ. ಗುಣಾತ್ಮಕ ಬದಲಾವಣೆ ತರುವ ಸಂಕಲ್ಪ ತಮ್ಮದು ಎಂದರು.

ಬೆಳೆಗಳಿಗೆ 'ಬೆಂ'ಬೆಲೆಗೆ ಆಗ್ರಹಿಸಿ ಅನಿರ್ದಿಷ್ಟ ಧರಣಿ
ಗುಲ್ಬರ್ಗ/ಶಹಾಬಾದ್: ಗುಲ್ಬರ್ಗ ವಿಭಾಗದ ಪ್ರಮುಖ ಬೆಳೆಗಳಾದ ಬಿಳಿ ಜೋಳ, ತೊಗರಿ, ಕಡಲೆ, ಶೇಂಗಾ ಬೆಳೆಗಳಿಗೆ ಸರ್ಕಾರ ಕೂಡಲೇ ಸೂಕ್ತ ಬೆಂಬಲ ಬೆಲೆ ಘೋಷಿಸಲು ಆಗ್ರಹಿಸಿ ಕರ್ನಾಟಕ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಾಲವಾರ ನಾಡಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ. ರೈತಸಂಘದ ರಾಜ್ಯ ಉಪಾಧ್ಯಕ್ಷ ಬಸವರೆಡ್ಡಿ ಕರೆಡ್ಡಿ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡುತ್ತ, ಈ ಭಾಗದ ಬೆಳೆಗಳಿಗೆ ನೀಡಿರುವ ಕನಿಷ್ಠ ಬೆಂಬಲ ಬೆಲೆ ಅವೈಜ್ಞಾನಿಕವಾಗಿದ್ದು, ರೈತರು ಸುಧಾರಿತ ಬಹುರಾಷ್ಟ್ರೀಯ ಕಂಪನಿಗಳ ಕಪಿಮುಷ್ಠಿಗೆ ಸಿಲುಕಿ, ಬೆಳೆ ಬೆಳೆಯಲು ಅಧಿಕ ವೆಚ್ಚ ಮಾಡಿ ಸಾಲದ ಬಾಧೆಯಿಂದ ನರಳುತ್ತಿದ್ದಾರೆ ಎಂದರು.
ರೈತರ ನೆರವಿಗೆ ಧಾವಿಸಿ: ಸಾಲದಿಂದ ಮುಕ್ತರಾಗಲು ಆತ್ಮಹತ್ಯೆಗಳಂಥ ಮಾರ್ಗ ಅನುಸರಿಸುತ್ತಿದ್ದಾರೆ. ಕೂಡಲೇ ಕೇಂದ್ರ, ರಾಜ್ಯ ಸರ್ಕಾರಗಳು ರೈತರ ನೆರವಿಗೆ ಧಾವಿಸಬೇಕೆಂದು ಆಗ್ರಹಿಸಿದರು.

25ರಿಂದ ಕಡಕೋಳ ಜಾತ್ರಾ ಮಹೋತ್ಸವ
ಜೇವರ್ಗಿ: ತಾಲೂಕಿನ ಸುಕ್ಷೇತ್ರ ಕಡಕೋಳದ ಮಡಿವಾಳೇಶ್ವರರ ಜಾತ್ರಾ ಮಹೋತ್ಸವವು ಬರುವ ಡಿ.25 ಮತ್ತು 26ರಂದು ವೈಭವದಿಂದ ಜರುಗಲಿದೆ. ಡಿ.25ರಂದು ಬೆಳಗ್ಗೆ 6ಕ್ಕೆ ಮಡಿವಾಳೇಶ್ವರರ ಕರ್ತು ಗದ್ದುಗೆಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ. ನಂತರ ಗುರುಮೂರ್ತಿ ಶಿವಾಚಾರ್ಯರ ನೇತೃತ್ವದಲ್ಲಿ 8.30ಕ್ಕೆ ಜಂಗಮ ಮಹೇಶ್ವರರಿಗೆ ಅಯ್ಯಾಚಾರ ದೀಕ್ಷಾ ನಡೆಯಲಿದ್ದು, ಬೆಳಗ್ಗೆ 10.30ಕ್ಕೆ ಧರ್ಮ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 7.30ಕ್ಕೆ ಧರ್ಮಸಭೆ ನಡೆಯಲಿದ್ದು, ಚೌಡಾಪುರದ ಸಿದ್ಧರಾಮ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಡಕೋಳ ಮಡಿವಾಳೇಶ್ವರ ಮಠದ ರುದ್ರಮುನಿ ಶ್ರೀ ನೇತೃತ್ವ ವಹಿಸಲಿದ್ದಾರೆ. ಶಾಸಕ ಡಾ. ಅಜಯಸಿಂಗ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವ ಎಸ್.ಆರ್. ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವ ಬಾಬುರಾವ ಚಿಂಚನಸೂರ ಮಡಿವಾಳೇಶ್ವರ ವಿರಚಿತ ನಿಜಲೀಲಾಮೃತ ವಚನಗಳ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಶಾಸಕರಾದ ಮಾಲಿಕಯ್ಯ ಗುತ್ತೇದಾರ, ರಮೇಶ ಭೂಸನೂರ, ಗುರುಪಾಟೀಲ್, ನ್ಯಾಯವಾದಿ ಹಿರೇಮಠ, ರಾಜುಗೌಡ ಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ನಾಲವಾರ ಶ್ರೀಗೆ ತುಲಾಭಾರ
ಚಿತ್ತಾಪುರ: ತಾಲೂಕಿನ ಮರತೂರ ಗ್ರಾಮದ ಟೆಂಗಳಿ ದಂಪತಿಗಳು ಸುಕ್ಷೇತ್ರ ನಾಲವಾರದ ಡಾ. ಸಿದ್ದ ತೋಟೆಂದ್ರ ಶ್ರೀ ತುಲಾಭಾರವನ್ನು ಕೈಗೊಂಡು ಆಶೀರ್ವಾದ ಪಡೆದರು. ಸಂಜೆ ಗ್ರಾಮಕ್ಕೆ ಆಗಮಿಸಿ ಶ್ರೀಗಳಿಗೆ ಗ್ರಾಮದ ಮುಖ್ಯದ್ವಾರದಿಂದ ಪೂರ್ಣ ಕುಂಭ ಕಳಸಗಳೊಂದಿಗೆ ಸ್ವಾಗತಿಸಲಾಯಿತು. ಮೆರವಣಿಗೆಯೂ ಕಾಶಿ ವಿಶ್ವನಾಥ ದೇವಾಲಯ, ಹುಣಚಿರಾಯ ಮಠದ ಮೂಲಕ ಡೊಳ್ಳು, ಕುಣಿತ, ಸಿಡಿಮದ್ದು, ವಾಧ್ಯಗಳೊಂದಿಗೆ, ಜಯಘೋಷದೊಂದಿಗೆ ಅದ್ಧೂರಿ ಮೆರವಣಿಗೆ ನೆರವೇರಿತು. ಮೆರವಣಿಗೆಯ ನಂತರ ಗ್ರಾಮದ ಅಣವೀರಪ್ಪ ಟೆಂಗಳಿ ಕುಟುಂಬದ ದಂಪತಿಗಳು ಶ್ರೀಗಳಿಗೆ ನಾಣ್ಯಗಳಿಂದ ತುಲಾಭಾರವನ್ನು ನೆರವೇರಿಸಿ ಕೃತಾರ್ಥರಾದರು. ಕಾಶಿನಾಥ ಮಳಗ, ಸುನೀಲ್, ಅಭಿಷೇಕ ಯರಗೋಳರಿಂದ ಸಂಗೀತ ಸೇವೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.