ವಾರದ ಗಡುವು ಮೀರಿದರೆ ಪ್ರತಿಭಟನಾ ಬೆದರಿಕೆ
ಕನ್ನಡಪ್ರಭ ವಾರ್ತೆ , ಆಳಂದ , ಡಿ.24
ಸಕ್ಕರೆ ಕಾರ್ಖಾನೆ ಆರಂಭಗೊಂಡು ಎರಡು ತಿಂಗಳಾಗುತ್ತಾ ಬಂದರೂ ತಾಲೂಕಿನ ರೈತರ ಕಬ್ಬು ಪಡೆಯದೆ ಮಹಾರಾಷ್ಟ್ರ ಮತ್ತು ಇತರ ತಾಲೂಕುಗಳಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ಕಾರ್ಖಾನೆಯ ಆಡಳಿತ ಮಂಡಳಿಯ ಕಾರ್ಯವೈಖರಿಯ ವಿರುದ್ಧ ರೈತರು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಭೂಸನೂರ ಹತ್ತಿರದ ಎನ್ಎಸ್ಎಲ್ ಕಾರ್ಖಾನೆಯ ಆವರಣದಲ್ಲಿರುವ ಆಡಳಿತ ಮಂಡಳಿ ಕಚೇರಿಗೆ ಮಂಗಳವಾರ ಹಠಾತ್ ಭೇಟಿ ನೀಡಿದ ಬ್ಲಾಕ್ ಕಾಂಗ್ರೆಸ್ ಐ ಸಮಿತಿ ಅಧ್ಯಕ್ಷ, ಕಬ್ಬು ಬೆಳೆಗಾರ ಮೊಹ್ಮದ್ ಮುಕ್ದುಮ ಅನ್ಸಾರಿ ಕಾಲೇಮಿರ್, ಪ್ರಧಾನ ಕಾರ್ಯದರ್ಶಿ ತಾನಾಜಿ ಟಿ. ಸೂರ್ಯವಂಶಿ ಸೇರಿದಂತೆ ಭೂಸನೂರ ವಲಯದ ರೈತರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿ ಗಡುವು ನೀಡಿದರು.
ಇಂದಿನಿಂದಲೇ ತಾಲೂಕಿನ ರೈತರ ಕಬ್ಬು ಪಡೆಯಲು ಕ್ರಮಕೈಗೊಳ್ಳಬೇಕು. ನೂರಾರು ಲಾರಿಗಳನ್ನು ಅನ್ಯ ತಾಲೂಕುಗಳಿಗೆ ನೀಡಿ ಕಬ್ಬು ತರಿಸಿಕೊಳ್ಳಲಾಗಿದ್ದು, ಇಲ್ಲಿಯ ರೈತರ ಕಬ್ಬು ತರಿಸಿಕೊಳ್ಳುತ್ತಿಲ್ಲ ಏಕೆ? ಲಾರಿ, ಟ್ರ್ಯಾಕ್ಟರಗಳನ್ನು ಸ್ಥಳೀಯರಿಗೂ ಪೂರೈಸಿ ನಿಗದಿತ ಅವಧಿಯೊಳಗೆ ಕಬ್ಬು ಪೂರೈಸಿಕೊಳ್ಳಬೇಕು. ಇಲ್ಲವಾದಲ್ಲಿ ಬರುವ ವಾರದಲ್ಲಿ ಆಳಂದ ಚೆಕ್ಪೋಸ್ಟ್ ಬಳಿ ರೈತರ ಹಿತದೃಷ್ಟಿಯಿಂದ ರಸ್ತೆ ತಡೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ತಿಂಗಳಿಂದ ಲಾರಿ ಮತ್ತು ಕಟಾವು ತಂಡ ಕಳುಹಿಸುವುದಾಗಿ ಸುಳ್ಳು ಆಶ್ವಾಸನೆ ಕೊಡುತ್ತಲೆ ಬರಲಾಗಿದೆ. ಅನ್ಯ ತಾಲೂಕಿಗೆ ನೀಡಿದ ತಂಡ ಕರೆಯಿಸಿ ಮೊದಲು ಇಲ್ಲಿಯ ಕಬ್ಬ ಬೆಳೆಗಾರರಿಗೆ ಅವಕಾಶ ನೀಡಬೇಕು. ಕಬ್ಬು ಒಣಗಿ ಬೆಂಡಾಗುವ ಮೊದಲು ನುರಿಯಬೇಕು ಎಂದು ರೈತ ಶಿವುಕುಮಾರ ನಿಪಾಣಿ ಆಳಂದ ಒತ್ತಾಯಿಸಿದರು.
ಇದೇ ವೇಳೆ ಕಾರ್ಖಾನೆ ಉಪಾಧ್ಯಕ್ಷ ರಾಮಮೂರ್ತಿ ಮಾತನಾಡಿ, ಕಾರ್ಖಾನೆಯೊಂದಿಗೆ ಒಪ್ಪಂದ ಮಾಡಿಕೊಂಡ ಕಬ್ಬು ಕಟಾವು ತಂಡಗಳು ಬಂದಿಲ್ಲ. ಇದರಿಂದ ತೊಂದರೆಯಾಗಿದೆ. ವಾರದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿ ಸ್ಥಳೀಯರ ಕಬ್ಬು ಕಟಾವು ಮಾಡಿಕೊಳ್ಳಲು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು. ಅಧಿಕಾರಿ ವಿಜಯಕುಮಾರ್ ಕುಲಕರ್ಣಿ, ವ್ಯವಸ್ಥಾಪಕ ರಮೇಶ ಅವರು ಮಾತನಾಡಿ, ಸಮಸ್ಯೆ ನಿವಾರಿಸಲಾಗುವುದು ತಾಳ್ಮೆಯಿಂದ ಸಹಕರಿಸಬೇಕು ಎಂದು ಕೋರಿದರು.
ಕಬ್ಬು ಬೆಳೆಗಾರ ಶ್ರೀಶೈಲ್ ಯಂಕಂಚಿ, ದಸ್ತಗೀರ ಎಂ. ಗೌರ, ದಸ್ತಗೀರಸಾಬ್ ದೇವಂತಗಿ, ಮೈನೋದ್ದೀನ್ ಜವಳಿ, ಸಾಯಬಣ್ಣ ಕವಲಗ, ಸಂತೋಷ ಕಲಶೆಟ್ಟಿ, ರಮೇಶ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

