ಪಾಲಿಕೆಗೆ ಬೀಗ ಹಾಕಿ ತೊಂದರೆ; ಸಿಎಂಗೆ ಮನವಿ
ಗುಲ್ಬರ್ಗ: ಮಹಾನಗರ ಪಾಲಿಕೆಗೆ ಬೀಗ ಹಾಕಿ ಕೆಲಸ ಕಾರ್ಯಗಳಿಗೆ ಅಡಚಣೆ ಮಾಡಿ, ಪಾಲಿಕೆಯ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗುಲ್ಬರ್ಗ ಮಹಾನಗರ ಪಾಲಿಕೆ ಅಧಿಕಾರಿಗಳ ಹಾಗೂ ನೌಕರರ ಸಂಘ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದೆ. ಡಿ.17ರಂದು ಯಾವುದೇ ಮುನ್ಸೂಚನೆಯಿಲ್ಲದೆ ಕೆಲವು ಮಹಾನಗರ ಪಾಲಿಕೆ ಸದಸ್ಯರು ಪಾಲಿಕೆಗೆ ಬೀಗ ಹಾಕಿ ಪಾಲಿಕೆಯ ಅಧಿಕಾರಿ ಆರ್.ಪಿ. ಜಾಧವ ಹಾಗೂ ಅಭಯಕುಮಾರ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಿಲ್ಲಾಧಿಕಾರಿ ವಿರುದ್ಧವೂ ಹಗುರವಾಗಿ ಮಾತನಾಡಿರುವುದು ಖಂಡನೀಯವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು. ಇನ್ನು ಮಹಾನಗರ ಪಾಲಿಕೆ ಅಸ್ತಿತ್ವದಲ್ಲಿ ಬಂದಿಲ್ಲ, ಆಡಳಿತ ಅಧಿಕಾರಿಗಳ ಅಡಿಯಲ್ಲಿ ನಾವು ಕೆಲಸ ಮಾಡುತ್ತಿದ್ದು, ಕೆಲವು ಜನ ಪಾಲಿಕೆಯ ಸದಸ್ಯರು ದಿನನಿತ್ಯದ ನಮ್ಮ ಕೆಲಸ ಕಾರ್ಯಗಳಿಗೆ ವಿನಾಕಾರಣ ತೊಂದರೆ ಕೊಟ್ಟು ಕಾನೂನು ಬಾಹಿರ ಕೆಲಸ ಕಾರ್ಯಗಳಿಗೆ ನಮ್ಮ ಮೇಲೆ ನಿರಂತರ ಒತ್ತಡ ತರುತ್ತಿರುವುದು ನಮಗೆ ಮುಜುಗರವುಂಟು ಮಾಡುತ್ತಿದೆ ಎಂದು ಧರಣಿ ನಿರತರು ವಿಷಾದ ವ್ಯಕ್ತಪಡಿಸಿದರು.
ಬಿಜೆಪಿ; ಲೋಕಸಭೆ ಸಿದ್ಧತೆಗಾಗಿ ಸಭೆ
ಗುಲ್ಬರ್ಗ: ಬರುವ ಲೋಕಸಭೆ ಚುನಾವಣೆ ಸಿದ್ಧತೆಗಾಗಿ ನಗರದ ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ ಕರೆಯಲಾಗಿತ್ತು. ಬೀದರ್ ಮತ್ತು ಯಾದಗಿರಿ ಜಿಲ್ಲೆಯ ಜಿಲ್ಲಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಶಾಸಕ, ಮಾಜಿ ಶಾಸಕ ಹಾಗೂ ರಾಜ್ಯದ ಪದಾಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡು ಮುಂದಿನ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದರು. ಡಿ.26ರಂದು ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ವಿಶಿಷ್ಟ ರೀತಿಯಲ್ಲಿ ಆಚರಿಸಬೇಕು. ಬೂತ್ ಲೇವಲ್ ಏಜೆಂಟ್ ನೇಮಕ ಮಾಡುವುದು, ಡಿ.27ರಂದು ರಾಜ್ಯ ಕಾರ್ಯಕಾರಿಣಿಯಲ್ಲಿ ಹಾಗೂ ಜ.18 ಮತ್ತು 19ರಂದು ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುವುದು. ಪಕ್ಷದ ಚಟುವಟಿಕೆಗಳನ್ನು ಮನೆ-ಮನೆಗೆ ತಲುಪಿಸುವ ಕಾರ್ಯ ಆಗಬೇಕು. ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ನೋಂದಣಿ ಮಾಡುವುದು ಸೇರಿದಂತೆ ಇನ್ನಿತರ ವಿಷಯಗಳು ಬಗ್ಗೆ ಚರ್ಚೆ ನಡೆಸಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಂಎಲ್ಎ ರಘುನಾಥ ಮಲ್ಕಾಪುರೆ, ಕೆ.ಬಿ. ಶಾಣಪ್ಪ, ಎಂಎಲ್ಸಿ ಅಮರನಾಥ ಪಾಟೀಲ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ವಾಲ್ಮಿಕಿ ನಾಯಕ, ದೊಡ್ಡಪ್ಪಗೌಡ ಪಾಟೀಲ್, ಶರಣಪ್ಪ ತಳವಾರ, ಮುಕುಂದ ದೇಶಪಾಂಡೆ, ವಿದ್ಯಾಸಾಗರ ಕುಲ್ಕರ್ಣಿ, ಪ್ರಕಾಶ ಖಂಡ್ರೆ, ರಾಜೇಂದ್ರ ವರ್ಮಾ, ಶಿವಾನಂದ ಕಲ್ಲೂರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
27ರಂದು ಪ್ರತಿಭಟನೆ
ಗುಲ್ಬರ್ಗ: ಸಂವಿಧಾನದ ವಿಧಿ 371(ಜೆ) ಅಡಿಯಲ್ಲಿ ಮುಂಬಡ್ತಿ ಹಾಗೂ ಗುಲ್ಬರ್ಗ ಬಿ ನಗರವೆಂದು ಘೋಷಿಸಲು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ಡಿ.27ರಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಅಂದು ಬೆಳಗ್ಗೆ 10ಕ್ಕೆ ನಗರದ ಉದ್ಯಾನವನ(ಇಂದಿರಾ ಭವನ)ದಲ್ಲಿ ನೌಕರರು ಆಗಮಿಸಿ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿಗೆ ರಾಜ್ಯಪಾಲರಿಗೆ ಮತ್ತು ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಎಲ್ಲ ತಾಲೂಕು ಮತ್ತು ಯೋಜನಾ ಘಟಕದ ನೌಕರರು ಆಯಾ ತಾಲೂಕು ತಹಸೀಲ್ದಾರ್ ಕಚೇರಿಗೆ ತೆರಳಿ ಮಧ್ಯಾಹ್ನ 12.30ಕ್ಕೆ ಮನವಿ ಪತ್ರ ಸಲ್ಲಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಭಾಗವಹಿಸಲು ಸಂಘ ಕೋರಿದೆ.
'ಕ್ರೀಡೆಗೆ ಸೌಲಭ್ಯ ನೀಡಿ'
ಗುಲ್ಬರ್ಗ: ಹೈ-ಕ ಭಾಗದ 371(ಜೆ) ಕಲಂ ವಿಶೇಷ ಸ್ಥಾನಮಾನದಂತೆ ಕ್ರೀಡಾ ಕ್ಷೇತ್ರಕ್ಕೆ ಹಾಗೂ ಕ್ರೀಡಾಪಟುಗಳಿಗೆ ಮಾನ್ಯತೆ ನೀಡಿ ವಿಶೇಷ ಸೌಲತ್ತುಗಳನ್ನು ನೀಡಿಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಗುಲ್ಬರ್ಗ ಜಿಲ್ಲಾ ಕಾರ್ಯಾಧ್ಯಕ್ಷ ಮನೋಹರಕುಮಾರ್ ಬಿ. ಬೀರನೂರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಹೈ-ಕ ಪ್ರದೇಶಕ್ಕೆ ಸಂವಿಧಾನ 371(ಜೆ) ಕಲಂನಡಿ ವಿಶೇಷ ಸ್ಥಾನಮಾನ ನೀಡಿದೆ. ಈ ವಿಶೇಷ ಸ್ಥಾನಮಾನದಂತೆ ಕ್ರೀಡಾಪಟುಗಳನ್ನು ಗುರುತಿಸಿ ಸೂಪರ್ ಸ್ಪೇಷಾಲಿಟಿ ತರಬೇತಿ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿದ್ದಾರೆ. ಈ ವಿಶಾಲ ಕ್ರೀಡಾಂಗಣ ತರಬೇತಿ ಕೇಂದ್ರದಲ್ಲಿ ಎಲ್ಲ ರೀತಿಯ ಆಟಗಳ ತರಬೇತಿಗೆ ಎಲ್ಲ ರೀತಿಯ ಸೌಕರ್ಯ ತರಬೇತಿ ನೀಡುವ ಶಿಕ್ಷಕರು ಇರಬೇಕು. ದೇಶೀ ಕ್ರೀಡೆಗಳಾದ ಹಾಕಿ, ಕಬಡ್ಡಿ, ಖೊಖೊ, ವಾಲಿಬಾಲ್, ಗುಂಡು ಎಸೆತ, ಫುಟಬಾಲ್ ಕರಾಟೆ ಸೇರಿದಂತೆ ಎಲ್ಲ ರೀತಿಯ ಆಟಗಳ ತರಬೇತಿ ಯೋಗ್ಯವಾದ ತರಬೇತಿ ಕೇಂದ್ರ ಸ್ಥಾಪಿಸಬೇಕೆಂದು ಮನವಿ ಮಾಡಿದ್ದಾರೆ.
27ರಿಂದ ಟೆನ್ನಿಸ್
ಗುಲ್ಬರ್ಗ: ಪ್ರಸಕ್ತ ವರ್ಷದ ದಕ್ಷಿಣ ವಲಯ ಭಾರತ ಅಂತರ ವಿವಿ ಪುರುಷ ಟೇಬಲ್ ಟೆನ್ನಿಸ್ ಪಂದ್ಯಾಟವು ಡಿ.27 ರಿಂದ 31ರವರೆಗೆ ಕಾಕಿನಾಡದಲ್ಲಿರುವ ಜವಹರಲಾಲ್ ನೆಹರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಿದ್ದು, ಗುಲ್ಬರ್ಗ ವಿವಿ ತಂಡ ಡಿ.25ರಂದು ಕಾಕಿನಾಡಗೆ ಪ್ರಯಾಣ ಬೆಳಸಲಿದೆ. ತಂಡವನ್ನು ಮಂಜುನಾಥ ಎಸ್. ಅವರು ನಾಯಕರಾಗಿ ಮುನ್ನೆಡೆಸಲಿದ್ದಾರೆ. ವೀರೇಶ ಮಠಪತಿ, ಶ್ರೀನಾಥ, ಕಿರಣ ತಂಡದ ಇನ್ನುಳಿದ ಸದಸ್ಯರಾಗಿದ್ದಾರೆ. ಎಸ್.ಎಂ. ಸಜ್ಜನ್ ಇವರು ತರಬೇತಿದಾರರಾಗಿ ಪ್ರಯಾಣ ಬೆಳೆಸಲಿದ್ದಾರೆ.
ಇಂದು ಸಂವಾದ
ಗುಲ್ಬರ್ಗ: ನಗರದ ತಾಡತೆಗನೂರಲ್ಲಿರುವ ವಿವೇಕಾನಂದ ವಿದ್ಯಾಪೀಠದಲ್ಲಿ ಡಿ.25 ರಂದು ಬೆಳಗ್ಗೆ 10ಕ್ಕೆ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಯುಎಸ್ಎದ ಡಾ. ಭೀಮಸೇನರಾವ, ಡಾ. ಸುರೇಖಾ ಭೀಮಸೇನರಾವ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜಾನುವಾರು ಅಕ್ರಮ ಸಾಗಣೆ ತಡೆಗೆ ಸೂಚನೆ
ಗುಲ್ಬರ್ಗ: ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ, ಗೋವಾ ಮತ್ತು ಕೇರಳಕ್ಕೆ ಕರ್ನಾಟಕದಿಂದ ಅಕ್ರಮವಾಗಿ ಜಾನುವಾರುಗಳನ್ನು ಸಾಗಣೆ ಮಾಡಲಾಗುತ್ತಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯ ಗೋ ಸೇವಾ ಆಯೋಗದ ಸದಸ್ಯ ಡಾ. ಎಸ್.ಕೆ. ಮಿತ್ತಲ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಪಿಎಂಸಿ ಯಾರ್ಡ್ಗಳು, ಚೆಕ್ ಫೋಸ್ಟ್ಗಳು ಹಾಗೂ ಅಂತರಾರಾಜ್ಯ ವಾಹನಗಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ ಎಂದರು. ಲಾರಿಯಲ್ಲಿ ಜಾನುವಾರು ಅಕ್ರಮವಾಗಿ ಸಾಗಣೆ ಮಾಡುತ್ತಿರುವುದು ಪತ್ತೆಯಾಯಿತು. ಆದರೆ, ಆರೋಪಿಗಳು ಲಾರಿ ಸಮೇತ ಪರಾರಿಯಾಗಿದ್ದಾರೆ. ಇಲಾಖೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

