ಸತ್ಯಾತ್ಮತೀರ್ಥರ ಸಂಚಾರ; 'ನಗರ'ವಾಯ್ತು ಗುಲ್ಬರ್ಗ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಡಿ.29
ಸಂಸ್ಕೃತದಲ್ಲಿ ಗರ ಎಂದರೆ ವಿಷ, ನಗರ ಎಂದರೆ ವಿಷಮುಕ್ತ, ವಿಷವಿಲ್ಲದ್ದು ಎಂದರ್ಥ.
ಗುಲ್ಬರ್ಗ ಮಹಾನಗರದಲ್ಲಿ ವಾರಕ್ಕೂ ಅಧಿಕ ಕಾಲ ಮೊಕ್ಕಾಂ ಹೂಡಿ ಮೂಲರಾಮ- ಸೀತಾದೇವಿಯರ ಪೂಜೆ- ಪುನಸ್ಕಾರಗಳನ್ನು ಮಾಡುತ್ತ ಜನಮನದಲ್ಲಿ ಸತ್ಕಾರ್ಯಗಳ, ಭಗವಂತನ ನಾಮಸ್ಮರಣೆಯ ಬೀಜಗಳನ್ನು ಬಿತ್ತಿದ ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥರ ವಾಸ್ತವ್ಯದಿಂದ ಗುಲ್ಬರ್ಗ “«ÚVÚÁÚ’ÈÛ¾Úßß¡ ಎಂದು ಆಸ್ತಿಕ ಭಕ್ತ ಜನತೆ ಹೇಳುತ್ತಿದ್ದಾರೆ.
ಮಣ್ಣೂರಿನಿಂದ ಗುಲ್ಬರ್ಗಕ್ಕೆ ಆಗಮಿಸಿದ್ದ ಶ್ರೀಗಳು ಭಕ್ತರಿಗೆಲ್ಲರಿಗೂ ತಮ್ಮ ಅಮೃತವಾಣಿಯಿಂದ ಭಗವಂತನ ಹತ್ತು ಹಲವು ವಿಚಾರಗಳನ್ನು ಅರ್ಥವಾಗುವಂತೆ ಹೇಳಿದರು. ಈ ಬಾರಿಯ ಶ್ರೀಗಳ ಉಪನ್ಯಾಸದ ವಿಶೇಷವೆಂದರೆ- ಕೇವಲ ವಿಪ್ರ ಸಮುದಾಯದ ಜನರಷ್ಟೇ ಅಲ್ಲದೆ, ಇಲ್ಲಿನ ನೂತನ ವಿದ್ಯಾಲಯ ಮೈದಾನದ ಹಿಂಭಾಗದಲ್ಲಿ ಮುಸ್ಲಿಂ ಸೇರಿದಂತೆ ಇತರೆ ಹಲವು ಸಮಾಜಬಾಂಧವರೂ ಬಂದು ಶ್ರೀಗಳ ವಾಣಿ ಆಲಿಸಿದ್ದು.
ದುಶ್ಚಟದಿಂದ ದೂರವಾಗೋದ್ಹೇಗೆ?: ಧೂಮಪಾನ, ಮದ್ಯಪಾನದಂತಹ ದುಶ್ಚಟಗಳ ದಾಸರಾದವರಿಗೆ ಶ್ರೀಗಳು ಕರುಣೆಯಿಂದ ತಿಳಿ ಹೇಳುತ್ತ ಚಟಮುಕ್ತರಾಗಿ, ಚಟದ ವಿಚಾರ ಮನ ಕಾಡಿದಾಗ ಕೈಯಲ್ಲಿ ಜಪಮಾಲೆ ಹಿಡಿದು ಭಗವಂತನ ರೂಪ, ನಾಮಸ್ಮರಣೆ ಮಾಡಿಕೊಳ್ಳಿ. ದಿನದಲ್ಲಿ ಇಂತಹ ಸಂದರ್ಭಗಳು ಬಂದಾಗೆಲ್ಲ ಪರಮಾತ್ಮನ ಮೊರೆ ಹೋಗಿರಿ, ನೀವು ನಿಶ್ಚಿತವಾಗಿಯೂ ಚಟಮುಕ್ತರಾಗುತ್ತೀರಿ ಎಂದರು. ಇದಲ್ಲದೆ ಇಂದಿನ ಬದಲಾದ ಕಾಲದಲ್ಲಿ ಗೃಹಿಣಿಯರು, ಅನೇಕ ಪುರುಷರೂ ಟೀವಿಗಳ ಧಾರಾವಾಹಿ ನೋಡುತ್ತ ಕಾಲಹರಣ ಮಾಡುತ್ತಿದ್ದು, ಮನೋರಂಜನೆಗಿಂತ ಭಗವಂತನ ಸ್ಮರಣೆಯಲ್ಲಿ ತೊಡಗಿ. ನಿತ್ಯವೂ ಭಗವಂತನನ್ನು ಪೂಜಿಸಿ ಆನಂದ ಹೊಂದಿರಿ. ಕೇವಲ ಬೆಳಗ್ಗಷ್ಟೇ ಭಗವಂತನ ಸ್ಮರಣೆ ಅಂತೇನಿಲ್ಲ, ಕೆಲಸಕಾರ್ಯಗಳನ್ನು ಪೂರೈಸಿದ ನಂತರ ವಿರಮಿಸುವ ಮುನ್ನವು ಕೆಲಕಾಲ ಭಗವಂತನ ನಾಮಜಪ ಮಾಡಬಹುದು ಎಂದು ಹೇಳುತ್ತ ಅನುದಿನ, ಕ್ಷಣ ಬಿಡದಂತೆ ನಾರಾಯಣನ ನಾಮಸ್ಮರಣೆ ಮಾಡುವಂತೆ ಹೇಳಿದರು.
ನಗರ ಪರಮ ಪಾವನ: ಗರ ಎಂದರೆ ವಿಷ, ವಿಷವಿಲ್ಲದ ಊರು ಎಂದರೆ ನಗರ. ಗುಲ್ಬರ್ಗದಂತಹ ಊರಲ್ಲಿ ಹರಿದಾಸ ಸಾಹಿತ್ಯ ನಗರ ಸಂಕೀರ್ತನೆ ಕಳೆದೊಂದು ದಶಕದಿಂದ ಮಾಡುತ್ತ ಹೊರಟಿರುವ ಪಂಡಿತ ಗೋಪಾಲಾಚಾರ್ಯ ಅಕಮಂಚಿ, ಭೀಮಭಟ್ ಬೆಂಕಿಯವರ ತಂಡದ ಕೆಲಸಕಾರ್ಯಗಳನ್ನು ಮುಕ್ತವಾಗಿ ಶ್ಲಾಘಿಸಿದ ಶ್ರೀಗಳು, ಭಗವಂತನ ಭಜನೆ ಪ್ರತಿಧ್ವನಿಸುವ ಈ ಸಮಾರಂಭದಿಂದ ಇಡೀ ನಗರವೇ ಪರಮ ಪಾವನವಾಗುತ್ತಿದೆ ಎಂದರು.
ತಾವು ಗುಲ್ಬರ್ಗದಲ್ಲಿ ವಾಸ್ತವ್ಯ ಹೂಡಿದ್ದ ಎಲ್ಲ ದಿನ ಉಪನ್ಯಾಸದಲ್ಲಿ ಶ್ರೀಮನ್ನಾರಾಯಣನ ಮಹಿಮೆಗಳು, ಶಾಸ್ತ್ರೋಕ್ತ ಸಂಗತಿಗಳು, ಮಧ್ವ ಸಿದ್ಧಾಂತಗಳ ಜೊತೆ ಜೊತೆಗೇ ಉಪನ್ಯಾಸದಲ್ಲಿ ಶ್ರೀಗಳು ತಪ್ಪದೇ ಸಮಾಜದ ಓರೆಕೋರೆಗಳ ಮೇಲೆ ತಮ್ಮದೇ ಆದಂತಹ ಶೈಲಿಯಲ್ಲಿ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು. ಅಲ್ಲದೆ ಎಲ್ಲದಕ್ಕೂ ಪರಮಾತ್ಮನ ಸ್ಮರಣೆ, ಪೂಜೆಯೇ ಪರಿಹಾರ, ಸತ್ಕರ್ಮಗಳು ಹೆಚ್ಚುವಂತಾಗಲಿ, ಲೋಕಲ್ಯಾಣವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಗುಲ್ಬರ್ಗದಲ್ಲಿ ಶ್ರೀಗಳ ಕಾರ್ಯಕ್ರಮಗಳಿಗೆ ಸ್ಥಳೀಯವಾಗಿರುವ ಉತ್ತರಾದಿ ಮಠಾಧಿಕಾರಿ ಘಂಟಿ ರಾಮಾಚಾರ್ಯ ಉಸ್ತುವಾರಿ ವಹಿಸಿದ್ದರು. ಇವರೊಂದಿಗೆ ಪಂಡಿತರಾದ ಗೋಪಾಲಾಚಾರ್ಯ ಅಕಮಂಚಿ ಸೇರಿದಂತೆ ಅನೇಕರು ಶ್ರೀಗಳ ನಿತ್ಯದ ಎನ್ವಿ ಮೈದಾನದಲ್ಲಿನ ಉಪನ್ಯಾಸ ಕಾರ್ಯಕ್ರಮಗಳನ್ನು ಬಲು ಅಚ್ಚುಕಟ್ಟಾಗಿ ನಿರ್ವಹಿಸಿದರು. ಉತ್ತರಾದಿ ಶ್ರೀಗಳ ಗುಲ್ಬರ್ಗ ವಾಸ್ತವ್ಯದಲ್ಲಿ ಭಕ್ತ ಜನತೆ ನಿತ್ಯ 2 ಗಂಟೆ ಕಾಲ ಸತ್ಕಾಲಕ್ಷೇಪ ಮಾಡುವ ಮೂಲಕ ಭಗವಂತನ ಕರುಣೆ- ಪ್ರೀತಿಗೆ ಪಾತ್ರರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

