ಗುಲ್ಬರ್ಗಾ

ವಿದ್ಯಾರ್ಥಿಗಳಿಗೆ ಕ್ವಿಜ್, ಆಮ್‌ಆದ್ಮಿಗೆ ಆಹಾರ ಪಾಠ

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಡಿ.29
ಕಳೆದ ಒಂದೂವರೆ ದಶಕದಿಂದ ಹಲವು ವಿಧಾಯಕ ಕಾರ್ಯಕ್ರಮಗಳೊಂದಿಗೆ ಇಲ್ಲಿನ ಜನತೆಗೆ ಆರೋಗ್ಯ ಪಾಠ ಹೇಳಿಕೊಡುತ್ತಿರುವ ಡಾ. ಶಂಕರ್ ಪ್ರತಿಷ್ಠಾನ ಈ ಬಾರಿ 2014ರ ಜ.1ರಂದು ತಜ್ಞರಿಂದ ಆರೋಗ್ಯ ಸಂಬಂಧಿ ಉಪನ್ಯಾಸಗಳನ್ನು ಆಯೋಜಿಸಿದೆ. ಅಲ್ಲದೆ ಈ ಬಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ ಮಾದರಿ ಕ್ವಿಜ್ ನಡೆಸಲು ಮುಂದಾಗಿದೆ.
ಶ್ರೇಷ್ಠ ವೈದ್ಯ ಸಾಹಿತಿ, ವೈದ್ಯಶ್ರೀ ಪುರಸ್ಕಾರ ಹಾಗೂ ವೈದ್ಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ತನ್ನ ವಾರ್ಷಿಕ ಕಾರ್ಯಕ್ರಮಗಳೊಂದಿಗೇ ಈ ಸಮಾರಂಭಗಳನ್ನು ನಡೆಸಿಕೊಡಲು ಸಕಲ ಸಿದ್ಧತೆಗಳು ಶುರುವಾಗಿವೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಎಸ್.ಎಸ್. ಹಿರೇಮಠ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಷ್ಠಾನದ 14ನೇ ವಾರ್ಷಿಕೋತ್ಸವ ಹಾಗೂ ಆರೋಗ್ಯ ಕಾಳಜಿ ಉಪನ್ಯಾಸಗಳು ಸೇರಿದಂತೆ ಹಲವು ವಿಧಾಯಕ ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿದರು.
ಸ್ವಾಸ್ಥ ಚಿಂತನ: ಇಲ್ಲಿನ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜ.1ರ ಬೆ.10ರಿಂದ ಸಂಜೆ 9ರವರೆಗೆ ತರಹೇವಾರಿ ಕಾರ್ಯಕ್ರಮಗಳು ಜರುಗಲಿವೆ. ಸ್ವಾಸ್ಥ ಸಂಪದ, ಖ್ಯಾತ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯಂ ಉದ್ಘಾಟನೆ, ಅಂಬಿಕಾ ಶಂಕರ ಅಧ್ಯಕ್ಷತೆ, ಡಾ. ಶಂಕರ ಬರೆದಂತಹ ಪ್ರಿಸ್ಪೆಕ್ವಿವ್ ಇನ್ ಮೆಡಿಕಲ್ ಎಜುಕೇಷನ್ ಆಂಡ್ ಹೆಲ್ತ್ ಕೇರ್ ಕೃತಿ ಲೋಕಾರ್ಪಣೆ.
ಬೆ. 11.30ಕ್ಕೆ ಆರೋಗ್ಯ ಕಾಳಜಿ ಉಪನ್ಯಾಸ. ಖ್ಯಾತ ವೈದ್ಯೆ ಡಾ. ವಸುಂಧರಾ ಭೂಪತಿ ಇವರಿಂದ ಜೀವನಶೈಲಿ ಹಾಗೂ ಆಹಾರ ಪದ್ಧತಿ, ಡಾ. ನರಹಳ್ಳಿ ಅವರಿಂದ ಮಾನವ ಸಂಬಂಧಗಳು ಮತ್ತು ಸಾಮಾಜಿಕ ಸ್ವಾಸ್ಥ ವಿಷಯದ ಕುರಿತಂತೆ ಉಪನ್ಯಾಸ.
ಸಂಜೆ ಪುರಸ್ಕಾರ ಪ್ರದಾನ: ಪ್ರತಿಷ್ಠಾನದ 14ನೇ ವಾರ್ಷಿಕೋತ್ಸವದ ಪ್ರಮುಖ ಘಟ್ಟ ಪುರಸ್ಕಾರ ಪ್ರದಾನ. ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯಂ ಮುಖ್ಯ ಅತಿಥಿ.  ಡಾ. ಪಿ.ಎಸ್. ಶಂಕರ ಪ್ರತಿಷ್ಠಾದನ 2013ನೇ ಸಾಲಿನ ವೈದ್ಯಶ್ರೀ ಪ್ರಶಸ್ತಿ ಮುಂಬೈನ ಕೆ.ಜಿ. ಸೋಮಯ್ಯ ಮೆಡಿಕಲ್ ಕಾಲೇಜಿನ ಟಿ.ಬಿ. ಹಾಗೂ ಚೆಸ್ಟ್ ಮೆಡಿಸಿನ್ ವಿಭಾಗದ ನಿರ್ದೇಶಕ ಡಾ. ಕೆ.ಸಿ. ಮೊಹಂತಿ ಆಯ್ಕೆಯಾಗಿದ್ದು ಇವರನ್ನು ಫಲಕ, ನಗದು ಪುರಸ್ಕಾರ ನೀಡಿ ಸತ್ಕರಿಸಲಾಗುತ್ತದೆ.
ಇದೇ ವೇಳೆ 2012ನೇ ಸಾಲಿನ ಶ್ರೇಷ್ಠ ವೈದ್ಯ ಸಾಹಿತ್ಯ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿರುವ ಬೆಂಗಳೂರಿನ ಖ್ಯಾತ ಆಯುರ್ವೇದ ತಜ್ಞೆ ವೈದ್ಯ ಲೇಖಕಿ ಡಾ. ವಸುಂಧರಾ ಭೂಪತಿ ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ವೈದ್ಯಶ್ರೀ ಹಾಗೂ ವೈದ್ಯ ಶ್ರೇಷ್ಠ ಸಾಹಿತ್ಯ ಪ್ರಶಸ್ತಿಯು ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿದೆ.
ಬಡ ವೈದ್ಯವಿದ್ಯಾರ್ಥಿಗಳಿಗೆ ಬೆಂಬಲ:
ಮೂವರು ಬಡವೈದ್ಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರು ವೈದ್ಯಕೀಯ ಪದವಿ ಅಧ್ಯಯನ ಸಂದರ್ಭದಲ್ಲಿ ಪ್ರತಿ ತಿಂಗಳು 1 ಸಾವಿರದಂತೆ ವಿದ್ಯಾರ್ಥಿ ವೇತನ ನೀಡುವ ಯೋಜನೆ ಜನಮನ ಸೆಳೆದಿದೆ. ಅದರಂತೆ ಈಗಾಗಲೇ 22 ವಿದ್ಯಾರ್ಥಿಗಳಿಗೆ ಆಯ್ಕೆಮಾಡಿ 54 ಸಾವಿರ ನೀಡಿದೆ.
2013-14ನೇ ಸಾಲಿನ ವೈದ್ಯ ವಿದ್ಯಾರ್ಥಿ ವೇತನದ ಫಲಾನುಭವಿಗಳಾಗಿ ಬೀದರ ಸರ್ಕಾರಿ ಮೆಡಿಕಲ್ ಕಾಲೇಜಿನ (ಬ್ರಿಮ್ಸ್) ಸುಕನ್ಯಾ ಆರ್.ಬಿರಾದಾರ, ದಾವಣಗೆರೆ ಜೆಜೆಎಂ ಮೆಡಿಕಲ್ ಕಾಲೇಜಿನ ವಿದ್ಯಾ ಎಂ.ಎಲ್. ಹಾಗೂ ಹುಬ್ಬಳ್ಳಿಯ ಕಿಮ್ಸ್ ವಿದ್ಯಾರ್ಥಿ ಶಂಕರ ಗೆಜ್ಜಿ ಆಯ್ಕೆಗೊಂಡಿದ್ದು ಇವರೆಲ್ಲರಿಗೂ ಸಮಾರಂಭದಲ್ಲಿ ಆಹ್ವಾನಿಸಿ ಚೆಕ್ ನೀಡಲಾಗುತ್ತಿದೆ..
ಗ್ರಾಮೀಣ ಭಾಗದ, ಬಡ ರೈತಾಪಿ ಕುಟುಂಬದ ಹಾಗೂ ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿರುವ ಈ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2013 ಅಕ್ಟೋಬರ್‌ನಿಂದಲೇ ಪ್ರತಿ ತಿಂಗಳು ತಲಾ 1 ಸಾವಿರ ವೈದ್ಯ ವಿದ್ಯಾರ್ಥಿ ವೇತನವನ್ನು ಅವರ ಎಂಬಿಬಿಎಸ್ ಅಧ್ಯಯನದ ನಾಲ್ಕೂವರೆ ವರ್ಷದ ಅವಧಿಯವರೆಗೆ ನೀಡಲಾಗುವುದು.
ಕ್ವಿಜ್ ಕಾರ್ಯಕ್ರಮ
ಆಯ್ದ 35 ಪಪೂ ಕಾಲೇಜುಗಳಲ್ಲಿನ ವಿಜ್ಞಾನ ವಿದ್ಯಾರ್ಥಿಗಳನ್ನೆಲ್ಲ ಕಲೆಹಾಕಿ ಸಿಇಟಿ ಮಾದರಿಯಲ್ಲಿ ಕ್ವಿಜ್ ಸಂಘಟಿಸಲಾಗುತ್ತಿದೆ. ಇದು ವಿನೂತನ ಕಾರ್ಯಕ್ರಮ. ನರೇಂದ್ರ ಬಡಶೇಷಿ, ಡಾ. ಶ್ರೀನಿವಾಸರೆಡ್ಡಿ ಪಾಟೀಲ್ ಹಾಗೂ ಇತರರು ಸಂಘಟಿಸುತ್ತಿರುವ ರಸಪ್ರಶ್ನೆ ಸಿಇಟಿಯಲ್ಲಿ ಮಕ್ಕಳ ಸಾಧನೆಗೆ ಪೂರಕವಾಗಲಿದೆ. ಇದಲ್ಲದೆ ರಂಗ ಮಂದಿರದಲ್ಲಿ ಜ.1ರ ಸಂಜೆ ಓಂಕಾರ ನೃತ್ಯ ತಂಡದ ಶುಭಾಂಗಿ ಇವರ ತಂಡದಿಂದ ನೃತ್ಯ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ಇವೆಲ್ಲ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹಿರೇಮಠ ಮನವಿ ಮಾಡಿದ್ದಾರೆ. ಪ್ರತಿಷ್ಠಾನದ ಸದಾನಂದ, ಮಣಿಲಾಲ ಶಹಾ, ಮಕ್ಕಳ ತಜ್ಞ ಡಾ. ವೀರಭದ್ರಪ್ಪ ಹರವಾಳ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.