ಯಾದಗಿರಿ ಜಿಲ್ಲೆಯಲ್ಲಿ ಅಂಗನವಾಡಿಗೆ ಜಾಗವಿಲ್ಲ!
ಯಾದಗಿರಿ: ಮಕ್ಕಳ ಪೂರ್ವ ಪ್ರಾಥಮಿಕ ಕಲಿಕೆಗೆ ನೆರವಾಗುವ ಹಾಗೂ ಅಪೌಷ್ಟಿಕತೆ ತಡೆಯುವ ಉದ್ದೇಶದಿಂದ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರಗಳು ಹೇರಳ ಅನುದಾನ ನೀಡುತ್ತಿವೆ. ಆದರೆ ಜಿಲ್ಲೆಯಲ್ಲಿ ಮಾತ್ರ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಜಾಗವೇ ಸಿಗದಂತಾಗಿದ್ದು, ಮಕ್ಕಳು ಬಿಸಿಲಲ್ಲಿ ಕೂರುವಂತಾಗಿದೆ.
ಆದ್ದರಿಂದ ಜಿಲ್ಲೆಯ 3ರಿಂದ 6 ವರ್ಷದೊಳಗಿನ ಮಕ್ಕಳು ಮರದ ನೆರಳು, ಬಿಸಿಲಿಗೆ ಕಾದು ಕಾವಲಿಯಾಗುವ ಟಿನ್ ಶೆಡ್ಗಳಲ್ಲಿ ಕುಳಿತುಕೊಳ್ಳಬೇಕು. ಜಿಲ್ಲೆಯಲ್ಲಿ ಒಟ್ಟು 1,300 ಅಂಗನವಾಡಿ ಕೇಂದ್ರಗಳಿವೆ. ಅವುಗಳ ಪೈಕಿ 865 ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡವಿದೆ. ಉಳಿದ 435 ಕೇಂದ್ರಗಳಲ್ಲಿ ಕೆಲವು ಬಾಡಿಗೆ ಕಟ್ಟಡದಲ್ಲಿ, ಉಚಿತ ಕಟ್ಟಡ, ದೇವಸ್ಥಾನದ ಜಗುಲಿಯಲ್ಲಿ ನಡೆಯುತ್ತದೆ. ಇನ್ನು ಕೆಲವು ಮರದ ಕೆಳಗೆ ನಡೆಯುತ್ತವೆ. ಕಟ್ಟಡ ನಿರ್ಮಾಣಕ್ಕೆ ಕೇಂದ್ರ- ರಾಜ್ಯ ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಾಕಷ್ಟು ಅನುದಾನ ಬರುತ್ತಿದೆ. ಆದರೆ ಅದನ್ನು ಬಳಸಲು ಸಾಧ್ಯವಾಗದ ಪರಿಸ್ಥಿತಿಯಿದೆ. ಇದಕ್ಕೆ ಕಾರಣ ನಿವೇಶನ ಸಮಸ್ಯೆ.
ನಿವೇಶನ ಸಮಸ್ಯೆ: 2010- 11ನೇ ಸಾಲಿನ ಆರ್ಐಡಿಎಫ್ ಯೋಡನೆಯಡಿ 48 ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಆದರೆ 8 ಕೇಂದ್ರಗಳಿಗೆ ನಿವೇಶನ ಸಿಗುತ್ತಿಲ್ಲ. 10- 11ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ಮತ್ತೆ 45 ಅಂಗನವಾಡಿ ಕಟ್ಟಡಕ್ಕೆ ಅನುದಾನ ಬಂದಿದೆ. ಅವುಗಳ ಪೈಕಿ 10 ಕಡೆ ಜಾಗದ ಸಮಸ್ಯೆ ಉದ್ಭವಿಸಿದೆ. ಎಂಎಸ್ಡಿಪಿ ಯೋಜನೆಯಲ್ಲಿ 60 ಕಟ್ಟಡಕ್ಕೆ ಅನುದಾನ ದೊರೆತಿದೆ. ಅವುಗಳ ಪೈಕಿ 7 ಕಡೆ ನಿವೇಶನ ಸಮಸ್ಯೆ ಎದುರಾಗಿದೆ. ಇದು ಭೂಸೇನಾ ನಿಗಮ ನಿರ್ವಹಿಸುತ್ತಿರುವ ಕಾಮಗಾರಿಯಾಗಿದೆ.
ಇದೇ ರೀತಿ ಇತರ ಇಲಾಖೆಯಡಿ ನಿರ್ವಹಿಸುತ್ತಿರುವ ಅಂಗನವಾಡಿ ಕಟ್ಟಡ ಕಾಮಗಾರಿಯಲ್ಲೂ ಸಮಸ್ಯೆ ಎದುರಾಗಿದೆ. ಇದು ಕಾಯಂ ಸಮಸ್ಯೆ ಎಂಬಂತಾಗಿದ್ದು, ಜಿಪಂ ಪ್ರತಿ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪ್ರಯತ್ನ ಆಗುತ್ತಿಲ್ಲ.
ಕೆಂಭಾವಿಯಲ್ಲಿ ಬಿಸಿಲಲ್ಲಿ ಮಕ್ಕಳು: ಕೆಂಭಾವಿಯ ಸಂಜೀವನಗರದಲ್ಲಿನ ಅಂಗನವಾಡಿ ಕೇಂದ್ರ ಬಿಸಿಲಲ್ಲೇ ನಡೆಯುತ್ತಿದೆ. ಮಕ್ಕಳು ಮಣ್ಣಿನ ನೆಲದ ಮೇಲೆ ಕುಳಿತು, ಬಿಸಿಲಲ್ಲಿ ಬಸವಳಿಯುವಂತಾಗಿದೆ. ಸ್ಥಳೀಯ ಗ್ರಾಪಂ.ನ ಮೊದಲ ಸಭೆಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸುವ ನಿರ್ಣಯ ಕೈಗೊಂಡರೂ ಇನ್ನೂ ಅದು ಕಾರ್ಯಗತವಾಗಿಲ್ಲ. ಈ ಕೇಂದ್ರ ಪ್ರಾರಂಭವಾಗಿ 6 ವರ್ಷಗಳೇ ಗತಿಸಿದರೂ ಇಲ್ಲಿನ ಮಕ್ಕಳಿಗೆ ಕಟ್ಟಡದ ಭಾಗ್ಯ ದೊರಕಿಲ್ಲ.
42 ಮಕ್ಕಳು ಕಲಿಯುವ ಈ ಕೇಂದ್ರದಲ್ಲಿ ಅಂಗನವಾಡಿ ಶಿಕ್ಷಕಿ ಅಂಗವಿಕಲೆಯಾಗಿದ್ದು ಮನೆ ಮನೆಗೆ ಹೋಗಿ ಮಕ್ಕಳನ್ನು ಕರೆತಂದು ಕಲಿಸಲು ಶ್ರಮಿಸುತ್ತಿದ್ದಾರೆ. ಆದರೆ ಅನಿವಾರ್ಯವಾಗಿ ಮಕ್ಕಳನ್ನು ಬಿಸಿಲಲ್ಲಿ ಕೂರಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಮನ ಕಲಕುತ್ತದೆ: ಕೆಂಭಾವಿ ಅಂಗನವಾಡಿ ಕೇಂದ್ರಗಳಲ್ಲಿ ಬಿಸಿಲಲ್ಲಿ ಮಕ್ಕಳಿಗೆ ಊಟಕ್ಕೆ ಬಡಿಸುತ್ತಿದ್ದಾರೆ. ಇದನ್ನು ಕಂಡ ಎಂಥವರ ಮನವೂ ಕರಗುತ್ತದೆ. ಆದರೆ ಅಧಿಕಾರಿಗಳಿಗೆ ಈ ಕೇಂದ್ರ ಬಯಲಲ್ಲಿ ನಡೆಯುತ್ತಿದೆ ಎಂಬುದು ಗಮನಕ್ಕೆ ಬಂದರೂ ಕ್ರಮ ಕೈಗೊಳ್ಳುತ್ತಿಲ್ಲ. ಕಟ್ಟಡವಿಲ್ಲದಿದ್ದರೂ ಬಾಡಿಗೆ ಕಟ್ಟಡದಲ್ಲಾದರೂ ಈ ಕೇಂದ್ರವನ್ನು ನಡೆಸಬೇಕಾಗಿತ್ತು. ಈ ಬಗ್ಗೆ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಇಲ್ಲಿ ಪಾಲನೆ ಆಗುತ್ತಿಲ್ಲ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಏನ್ ಮಾಡುದ್ರಿ ಸರ್, ಬಿಸಿಲಾಗ ಮಕ್ಕಳ ಕೂಡಿಸಿ ಹೋಗಬೇಕಂದ್ರ ಕರಳ ಚುರ್ ಅಂತದ್ರಿ. ಪಾಪ, ಟೀಚರ್ ಎಲ್ಲಿ ನೆರಳ ಇರತದೋ ಅಲ್ಲಿ ಕರಕೊಂಡ ಕೂರತಾರ. ಅಲ್ಲಿ ಬಿಸಲು ಬಂತಂದ್ರ ಮತ್ತೊಂದ ಕಡಿ ಕರಕೊಂಡ ಹೋಗ್ತಾರ್ರಿ. ಇದು ನಮ್ಮ ಅಂಗನವಾಡಿ ®ÚÂÒ¤~’ ಎನ್ನುತ್ತಾರೆ ಬಡಾವಣೆಯ ಸಂಜೀವರೆಡ್ಡಿ ಪಾಟೀಲ ವಿಷಾದದ ಧ್ವನಿಯಲ್ಲಿ. ಇದು ಸ್ವಂತ ಕಟ್ಟಡವಿಲ್ಲದ ಬಹುತೇಕ ಎಲ್ಲ ಅಂಗನವಾಡಿ ಕೇಂದ್ರಗಳ ಪರಿಸ್ಥಿತಿ.
ಅನುದಾನ ಇದ್ದರೂ ಅದು ಬಳಕೆಯಾಗದಿರುವುದು ಜಿಲ್ಲೆಯ ಜನರ ದೌರ್ಭಾಗ್ಯ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬಡ ಹಾಗೂ ಪುಟ್ಟ ಮಕ್ಕಳು ತೊಂದರೆ ಎದುರಿಸುವಂತಾಗಿದೆ. ಜಾಗದ ಸಮಸ್ಯೆ ನಿವಾರಿಸಿಕೊಂಡು ಕಟ್ಟಡ ಕಟ್ಟಲು ಆಸಕ್ತಿ ವಹಿಸಬೇಕಿದೆ.
-ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

