ರಾಜಕೀಯ ದೊಂಬರಾಟಕ್ಕೆ ಕಮಿಷನರ್ ಹುದ್ದೆಯೇ ಕಾಲ್ಚೆಂಡು
ಗುಲ್ಬರ್ಗ: ಸರ್ಕಾರ, ಜನನಾಯಕರೇ ಜಂಟಿಯಾಗಿ ಪ್ರಾಯೋಜಿಸಿರುವ ಹುಡುಗಾಟಿಕೆ ಹಾಗೂ ಬೇಜವಾಬ್ದಾರಿತನದ ಪರಾಕಾಷ್ಠೆಯಿಂದ ಇಲ್ಲಿಯ ಪಾಲಿಕೆಯಲ್ಲಿ ಕಳೆದೈದು ವರ್ಷಗಳಲ್ಲಿ ಬರೋಬ್ಬರಿ 15 ಕಮಿಷನರ್ ಕುರ್ಚಿ ಹತ್ತಿ ಇಳಿದಿದ್ದಾರೆ!
ಕಮಿಷನರ್ ಹುದ್ದೆಗೆ ಒಬ್ಬ ಅಧಿಕಾರಿಯನ್ನು ನೇಮಿಸಿದ ನಂತರ ಕೊನೆಪಕ್ಷ ಎರಡು ವರ್ಷಗಳಾದರೂ ನೇಮಕಗೊಂಡ ಸ್ಥಳದಲ್ಲೇ ಇರುವಂತಾಗಬೇಕೆಂಬುದು ಕರ್ನಾಟಕ ಪೌರಾಡಳಿತ ನಿಯಮಗಳಲ್ಲಿಯೇ ನಮೂದಾಗಿರುವ ಮಹತ್ವದ ವಿಚಾರ.
ಆದರೆ, ರಾಜಕೀಯ ಪುಢಾರಿಗಳ ವಶೀಲಿಬಾಜಿತನ, ಬೇಳೆ ಬೇಯಿಸಿಕೊಳ್ಳುವ ಪ್ರವೃತ್ತಿಯಿಂದ ಈ ಹುದ್ದೆಗೆ ನಿಯೋಜನೆಗೊಳ್ಳುವ ಅಧಿಕಾರಿಗಳು ನಿಯಮಗಳ ವಿರುದ್ಧವಾಗಿ ವರ್ಗವಾಗುತ್ತಾರೆ. ಇಲ್ಲಿ ಅಧಿಕಾರಿಗಳು ಅದಲ್ ಬದಲ್ ಆಗುವುದು ಸಾಮಾನ್ಯ ಸಂಗತಿ. ಇವರಲ್ಲಿ ಕೆಎಎಂಸಿ, ಬಡ್ತಿ ಹೊಂದಿದವರು, ಪ್ರೊಬೇಷನರಿ, ಅನುಭವಿ ಐಎಎಸ್ ಅಧಿಕಾರಿಗಳು, ಕೆಎಎಸ್ ಅಧಿಕಾರಿಗಳೆಲ್ಲರೂ ಸೇರಿದ್ದಾರೆ. ಇಂಥ ಅಪಸವ್ಯಗಳಿಂದ ಪಾಲಿಕೆ ಜನಸ್ನೇಹಿ ಆಗುವ ಬದಲು, ಜನ ವಿರೋಧಿಯಾಗುತ್ತಿದೆ.
ಅಧಿಕಾರಿಗಳು ಅದಲ್ ಬದಲ್: ಮುಧೋಳ, ಬಿ.ಸಿ ಪೂಜಾರಿ, ಸಿರಸಗಿ ನಾಗಪ್ಪ, ಜಿ.ಎಂ ಚೌಧರಿ, ಕೆ.ಜೆ ಜಗದೀಶ (ಐಎಎಸ್), ರಣದೀಪ (ಐಎಎಸ್), ಮನೋಜ್ ಜೈನ್ (ಐಎಎಸ್), ವಾಸುದೇವರಾವ್ (ಪಾಲಿಕೆ ಲೆಕ್ಕಾಧಿಕಾರಿ ಪ್ರಭಾರಿ), ಡಾ. ಸಿ. ನಾಗಯ್ಯ, ಎ.ಎಸ್ ರಾಯ್ಕರ್ ಹೀಗೆ ಅಧಿಕಾರಿಗಳು ಅದಲ್ ಬದಲ್ ಆಗಿದ್ದಾರೆ.
ಪ್ರಸ್ತುತ ಡಾ. ನಾಗಯ್ಯ ಆಯುಕ್ತರಾಗಿದ್ದರೂ ಸ್ಥಾನ ಖಾಲಿ ಇದೆ ಎಂದು ಸರ್ಕಾರ ರಾಯ್ಕರ್ ಅವರನ್ನು ನೇಮಿಸಿದೆ. ಅಲ್ಲದೇ ಈ ಪಟ್ಟಿಯಲ್ಲಿರುವ ಚೌಧರಿ, ಮುಧೋಳ, ವಾಸುದೇವರಾವ್, ಮನೋಜ್ ಜೈನ್, ನಾಗಪ್ಪ ಸಿರಸಗಿ ಎರಡೆರಡು ಬಾರಿ ಪ್ರಭಾರಿಯಾಗಿಯೂ ಕಮಿಷನರ್ ಕುರ್ಚಿ ಹತ್ತಿ ಇಳಿದವರು ಎಂಬುದು ಗಮನಾರ್ಹ. ಇವೆಲ್ಲವುಗಳನ್ನು ಕೂಡಿ ಕಳೆದು ನೋಡಿದರೆ 5 ವರ್ಷಗಳಲ್ಲಿ ಬರೋಬ್ಬರಿ 15 ಅಧಿಕಾರಿಗಳು ಪಾಲಿಕೆ ಕಮಿಷನರ್ ಹುದ್ದೆಯನ್ನು ಅಲಂಕರಿಸಿದ್ದಾರೆ.
ಹೀಗೇಕೆ?: 55 ವಾರ್ಡ್‌ಗಳಿರುವ ಇಲ್ಲಿನ ಮಹಾನಗರ ಪಾಲಿಕೆ ಗುಲ್ಬರ್ಗ (ದಕ್ಷಿಣ), (ಉತ್ತರ) ಎಂದು 2 ಅಸೆಂಬ್ಲಿ ಕ್ಷೇತ್ರಗಳಲ್ಲಿ ವಿಗಂಡಣೆಯಾಗಿದೆ. ಇಲ್ಲಿನ ರಾಜಕೀಯವೆಲ್ಲದಕ್ಕೂ ಪಾಲಿಕೆಯೇ ಮೂಲಸೆಲೆ. ಈ ಎರಡೂ ಕ್ಷೇತ್ರಗಳ ಶಾಸಕರ ಮರ್ಜಿ ಕಾಯ್ದುಕೊಂಡೇ ಕಮಿಷನರ್ ಆದವರು ಇಲ್ಲಿ ಕೆಲಸಕ್ಕಿರಬೇಕು. ಜತೆಗೆ 55 ಪುರಪಿತೃಗಳೊಂದಿಗೂ ಹೆಜ್ಜೆ ಹಾಕಬೇಕು. ಚೂರು ಹೆಚ್ಚುಕಮ್ಮಿಯಾದರೂ ತೀರಿತು, ಕಮಿಷನರ್ ಹಠಾವೋ ಚಳವಳಿ ಶುರುವಾಗುತ್ತದೆ.
ಐಎಎಸ್ ಕಮಿಷನರ್ ಬೇಕೆಂಬ ಜನರ ಒತ್ತಾಸೆಯಂತೆ ಅವರೂ ಇಲ್ಲಿಗೆ ಬಂದು ಹೋದರು. ಆದರೆ ಪಾಲಿಕೆ, ಅಲ್ಲಿನ ಆಡಲಿತ ವೈಖರಿ ಇನ್ನೂ ತುಸು ಹೆಚ್ಚು ಹದಗೆಟ್ಟಿದೆಯೇ ಹೊರತು ಸುಧಾರಣೆ ಮಾತ್ರ ಕನಸು ಎಂದು ಜನರೇ ಆಡಿಕೊಳ್ಳುವಂತಾಗಿದೆ.
ಜನಪ್ರತಿನಿಧಿಗಳಿಗೆ ತಿಳಿ ಹೇಳುತ್ತ, ನಗರ ನಿವಾಸಿಗಳ ಏಳಿಗೆ ಬಯಸುವ, ಪ್ರಾಮಾಣಿಕ, ಕಾಯ್ದೆಯಂತೆ ಕಾರ್ಯೋನ್ಮುಖರಾಗುವ ಆಯುಕ್ತ ಇಲ್ಲಿನ ಪಾಲಿಕೆಗೆ ಅದ್ಯಾವಾಗ ಬರುವರೋ ಎಂದು ಜನತೆ ನಿರೀಕ್ಷಿಸುತ್ತಿದ್ದಾರೆ. ಈಗಂತೂ ಕಳೆದ ನಾಲ್ಕು ದಿನಗಳಿಂದ ಪಾಲಿಕೆಯ ಆಯುಕ್ತರ ಹುದ್ದೆಗೆ ಇಬ್ಬರು ಅಧಿಕಾರಿಗಳ ನಡುವೆ ಸಾಗಿರುವ ಮ್ಯೂಸಿಕಲ್ ಛೇರ್ ಆಟ ನಾಗರಿಕರ ಮುಂದೆಯೇ ನಗೆಪಾಟಲಿಗೀಡಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

