ಪ್ರಾದೇಶಿಕ ಪಕ್ಷ ಗಟ್ಟಿಯಾದ್ರೆ, ಪ್ರಧಾನಿಯೂ ಭೇಟಿಯಾಗ್ತಾರೆ
ಸೇಡಂ: ಪ್ರಾದೇಶಿಕ ಪಕ್ಷ ಗಟ್ಟಿಯಾಗಿದ್ದರೆ, ಪ್ರಧಾನ ಮಂತ್ರಿಗಳೇ ಮುಖ್ಯಮಂತ್ರಿಗಳನ್ನು ಕಾಣಲು ಬರುತ್ತಾರೆ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಇಲ್ಲಿನ ಕೊತ್ತಲ ಬಸವೇಶ್ವರ ದೇವಾಲಯದ ಮುಂಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ಕರ್ನಾಟಕ ಜನತಾ ಪಕ್ಷದ ಬೃಹತ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
26ನೇ ಮುಖ್ಯಮಂತ್ರಿಯಿದ್ದಾಗ ಅಪ್ಪ- ಮಕ್ಕಳು ಮೋಸ ಮಾಡಿದರು. 27ನೇ ಮುಖ್ಯಮಂತ್ರಿಯಾದಾಗ ಜೊತೆಗಿದ್ದವರೇ ಬೆನ್ನಿಗೆ ಚೂರಿ ಹಾಕಿದ್ದು, ಈಗ ನನ್ನ ಪ್ರಾದೇಶಿಕ ಪಕ್ಷದ ಬೆಳವಣಿಗೆಯನ್ನು ಕೆಲವರು ಸಹಿಸುತ್ತಿಲ್ಲ ಎಂದ ಅವರು ಮುಖ್ಯಮಂತ್ರಿಯಿದ್ದಾಗ ಹಲವಾರು ಜನಪರ ಯೋಜನೆಗಳ ಮೂಲಕ ರಾಜ್ಯವನ್ನು ಅಭಿವೃದ್ಧಿಪಡಿಸುವುದನ್ನು ಸಹಿಸದ ಹಿಂದೆ ಇದ್ದ ಪಕ್ಷದ ಹಲವರು ಪಿತೂರಿ ನಡೆಸಿ 24 ದಿವಸ ಜೈಲಿನಲ್ಲಿರುವಂತೆ ಮಾಡಿದರು ಎಂದರು.
ಜನರ ಹಿತಕ್ಕಾಗಿ ವೃದ್ಧಾಪ್ಯ, ಭಾಗ್ಯಲಕ್ಷ್ಮೀಯಂತಹ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಯುವ ಜನತೆ ಸದೃಢವಾಗಬೇಕು ಎಂಬ ಕನಸು ಕಂಡೆ. ದೇಶದ ಸಂಪತ್ತು ಉಳಿಸಲು ಅಕ್ರಮ ಗಣಿಗಾರಿಕೆಯನ್ನು ತಡೆಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಪಟ್ಟಣದ ಅಭಿವೃದ್ಧಿಗಾಗಿ ಮುಂಬರುವ ಪುರಸಭೆ ಚುನಾವಣೆಯಲ್ಲಿ ಕೆಜೆಪಿಗೆ ಬೆಂಬಲಿಸುವಂತೆ ಕೋರಿದರು.
ಈಗಿನ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿರಬೇಕು. ಆದರೆ ಮಾತ್ರ ರಾಜ್ಯಕ್ಕೆ ಬೇಕಾದ ಸೌಲಭ್ಯ ದೊರಕುತ್ತದೆ. ಇದಕ್ಕೆ ಉದಾಹರಣೆಯಾಗಿ ತಮಿಳುನಾಡು ಹಾಗೂ ಇನ್ನಿತರ ರಾಜ್ಯಗಳನ್ನು ಕಾಣುತ್ತಿದ್ದೇವೆ.
ಶ್ರೀನಾಥ ಪಿಲ್ಲಿ ಸೇಡಂ ಅಭ್ಯರ್ಥಿ: ಮುಂಬರುವ ಸೇಡಂ ವಿಧಾನಸಭಾ ಚುನಾವಣೆಯಲ್ಲಿ ಯುವಕರು ಆದ ಒಬ್ಬ ಹಿಂದುಳಿದ ನಾಯಕನನ್ನು ಬೆಂಬಲಿಸಿ, ಗೆಲ್ಲಿಸಿಕೊಡಿ ಎಂದು ಹೆಸರು ಹೇಳದೇ ಶ್ರೀನಾಥ ಪಿಲ್ಲಿಯವರೇ ಮುಂದಿನ ಅಭ್ಯರ್ಥಿ ಎಂದು ಸೂಚ್ಯವಾಗಿ ತಿಳಿಸಿದರು.
ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಕಷ್ಟದ ಕಾಲದಲ್ಲಿ ತಾವು ಕೈ ಹಿಡಿದು ಬೆಳೆಸಿದ ಇಲ್ಲಿನವರೇ ಆದ ಜಿಲ್ಲಾಧ್ಯಕ್ಷರು ಕಷ್ಟದ ಕಾಲದಲ್ಲಿ ಯಡಿಯೂರಪ್ಪನವರಿಗೆ ಕೈ ಬಿಟ್ಟು ಹೋದರು ಎಂದು ಪರೋಕ್ಷವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲರನ್ನು ಉದ್ದೇಶಿಸಿ ಮಾತನಾಡಿದರು.
ಮುಖಂಡರಾದ ನಾಸೀರ ಹುಸೇನ್, ಬಿ.ಆರ್. ಪಾಟೀಲ ಮಾತನಾಡಿದರು. ಮುಖಂಡರಾದ ತಿಪ್ಪಣ್ಣಪ್ಪ ಕಮಕನೂರ, ಸುಭಾಶ ಬಿರಾದಾರ, ಸತೀಶ ಗುತ್ತೇದಾರ, ಬಸವರಾಜ ಇಂಗಿನ, ಶಿವಾನಂದ ಮಾಲಗಾರ, ಶ್ರೀನಾಥ ಪಿಲ್ಲಿ, ಸುರೇಶ ಸಜ್ಜನ್, ಕರಿಸಿದ್ದಪ್ಪ ಪಾಟೀಲ, ಜ್ಯೋತಿ ಕೊರವಿ, ನಾಗರತ್ನ, ಮಲ್ಲಿಕಾರ್ಜುನ ಗುಡ್ಡದ, ಡಾ. ಶರಣಭೂಪಾಲರೆಡ್ಡಿ, ಗೋಪಾಲ ರಾಠೋಡ, ಎಚ್.ಎಂ. ರಾಠೋಡ, ಸೂರ್ಯಕಾಂತ ಲಿಂಬಾಳಕರ್, ರವಿ ಸಜ್ಜನ್ ವೇದಿಕೆಯಲ್ಲಿದ್ದರು.
ಪಟ್ಟಣದ ಮುಖ್ಯ ಬೀದಿಯಲ್ಲಿ ಬೃಹತ್ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆ ತರಲಾಯಿತು. ಶಾಂತು ಕಾರ್ಯಕ್ರಮ ನಿರೂಪಿಸಿದರು. ಸಿದ್ದು ಕಾಮಣಿ ಸ್ವಾಗತ ಗೀತೆ ಹಾಡಿದರು. ವೀರೇಶ ಹೂಗಾರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

