ಕರುನಾಡ ಜನರ ಸಾಕ್ಷಿಪ್ರಜ್ಞೆಗೆ ಅನಂತ ಸವಾಲ್
ಗುಲ್ಬರ್ಗ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಸಾಮಾನ್ಯ ಶಾಲೆಗಳಲ್ಲಿ ಸಮಾನತೆ ಶಿಕ್ಷಣ ಎಲ್ಲ ಮಕ್ಕಳಿಗೂ ದಕ್ಕುವಂತಾಗಬೇಕು ಎಂದು ಹೇಳುವ ಮೂಲಕ ಸರ್ಕಾರಿ ಶಾಲೆಗಳ ಮಹತ್ವ, ಜನ ಸಾಮಾನ್ಯರ ಪ್ರಗತಿಗೆ ಶಿಕ್ಷಣವೇ ಊರುಗೋಲು ಎಂಬ ಸಂಗತಿಯನ್ನು ಬಲವಾಗಿ ಪ್ರತಿಪಾದಿಸಿದ್ದಾರೆ.
ಜಾತಿ, ಮತಗಳು ಹುಟ್ಟುಹಾಕಿರೋ ಅಂತರ, ತಾರತಮ್ಯ, ಇಂದು ಹಣ, ಅದನ್ನಾಧರಿಸಿಯೇ ಸಾಗಿರುವ ಶಾಲಾ ಶಿಕ್ಷಣದಿಂದ ಹುಟ್ಟಿಕೊಳ್ಳುತ್ತಿದೆ. ಈ ಬೆಳವಣಿಗೆ ನಾವೇ ಕಟ್ಟಿಕೊಂಡಿರುವ ವ್ಯವಸ್ಥೆಯೊಳಗಿನ ದೋಷವಲ್ಲದೆ ಮತ್ತೇನು ಎಂದು ಖಾರವಾಗಿ ಪ್ರಶ್ನಿಸಿ, ನಾಡಿನ ಜನರ ಸಾಕ್ಷಿಪ್ರಜ್ಞೆಗೆ ಸವಾಲೆಸೆದಿದ್ದಾರೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿರುವ ಡಾ. ಅನಂತಮೂರ್ತಿ ಕಳೆದೆರಡು ದಿನಗಳಿಂದ ಗುಲ್ಬರ್ಗ ಸಂಚಾರದಲ್ಲಿದ್ದಾರೆ. ಮಂಗಳವಾರ ಕೇಂದ್ರೀಯ ವಿವಿ ಲೇಖಕರೊಂದಿಗೆ ಮುಖಾಮುಖಿ ಎಂಬ ತನ್ನ ವಿಶಿಷ್ಟ ಕಾರ್ಯಕ್ರಮ ಸರಣಿಯಲ್ಲಿ ಡಾ. ಅನಂತಮೂರ್ತಿ ಅವರ ಸಭೆ ಆಯೋಜಿಸಿತ್ತು. ಜ್ಞಾನಗಂಗೆಯಲ್ಲಿ ನಡೆದ ಈ ಸಭೆಯಲ್ಲಿ ಅನಂತಮೂರ್ತಿ ತಮ್ಮನ್ನು ಕಾಡುತ್ತಿರುವ ಅನಾರೋಗ್ಯವನ್ನೂ ಮರೆತು 45 ನಿಮಿಷಗಳ ಕಾಲ ಯುಗಧರ್ಮದ ಸುತ್ತಮುತ್ತಲೇ ಕೇಂದ್ರಿತವಾಗಿರುವಂತೆ ಸುದೀರ್ಘ ಹಾಗೂ ಚಿಂತನೆಗೆ ಹಚ್ಚುಂತಹ ಹತ್ತು ಹಲವು ಸಂಗತಿಗಳನ್ನೊಳಗೊಂಡ ಮಾತುಗಳನ್ನಾಡಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.
ಕೊರಗು: ಆಧುನಿಕತೆ ಹಸಿವು ಬದುಕನ್ನೇ ಹಾಳು ಮಾಡುತ್ತಿದೆ ಎಂಬ ಕೊರಗು, ಕೆಟ್ಟು ಹೋಗಿರುವ ಆಧ್ಯಾತ್ಮ, ಮರೆತು ಹೋಗಿರುವ ಸಮಾನತೆಯಿಂದಾಗಿ ಭಾರತ ಕವಲು ದಾರಿಯಲ್ಲಿದೆ ಎಂಬ ಕಳವಳ, ಮಕ್ಕಳನ್ನು ಗೃಹಬಂಧನದಲ್ಲಿಟ್ಟು ಪೋಷಕರು ಮಕ್ಕಳ ಮೇಲೆಯೇ ಸವಾರಿ ಮಾಡುತ್ತ ಅವರ ದಿಕ್ಕುತಪ್ಪಿಸುತ್ತಿದ್ದಾರೆಂಬ ಆತಂಕ ಅವರ ಮಾತುಗಳಲ್ಲಿ ಸ್ಫುಟವಾಗಿ ವ್ಯಕ್ತವಾಯ್ತು.
ಸಾಮಾನ್ಯ (ಸರ್ಕಾರಿ) ಶಾಲೆಗಳಲ್ಲಿ ಎಲ್ಲ ಮಕ್ಕಳೂ (ಬಡವ- ಬಲ್ಲಿದ ಬೇದವಿಲ್ಲದೆ) ಒಂದಾಗಿ ಸಮಾನತೆ ಶಿಕ್ಷಣ ಪಡೆಯದ ಹೊರತು ಈ ದೇಶದಲ್ಲಿ ಚರ್ಚೆಯಲ್ಲಿರುವ ಸಮಾನತೆ ತತ್ವ- ಸಿದ್ಧಾಂತ ಅಪೂರ್ಣ, ಅರ್ಥಹೀನ ಎಂದು, ಡಾ. ಅನಂತಮೂರ್ತಿ ಸಮಾನ್ಯ ಶಾಲೆಗಳಲ್ಲಿ ಎಲ್ಲಾ ಮಕ್ಕಳು ಸಮಾನ ಶಿಕ್ಷಣ ಪಡೆಯುವುದನ್ನು ನೋಡಬೇಕು ಎಂಬುದೇ ತಮ್ಮ ಜೀವಿತವಾಧಿಯ ಕೊನೆಯ ಆಶಯ ಎಂದು ಭಾವುಕರಾಗಿ ನುಡಿದರು.
ಮೂರು ನಮೂನೆ ಹಸಿವು: ಸಮಾನತೆ, ಆಧುನಿಕತೆ ಹಾಗೂ ಆಧ್ಯಾತ್ಮ ಇವು ಮೂರು ಬಗೆಯ ಆಸೆಗಳಾದರೂ ಇವುಗಳನ್ನು ಹಸಿವು ಎಂದೇ ಕರೆಯುವುದಾಗಿ ಹೇಳುತ್ತ ಯುಗಧರ್ಮದ ಮಾತಿಗೆ ಮುಂದಾದ ಅನಂತಮೂರ್ತಿ ಆಧುನಿಕತೆ ಹಾಗೂ ಆಧ್ಯಾತ್ಮದ ಹಸಿವುಗಳು ಹಾಳಾಗಿ ಹೋಗಿವೆ. ಆದ್ದರಿಂದ ಸಮಾನತೆ ಹಂದರ ಮುರಿದು ಬೀಳುವ ಅಪಾಯದಲ್ಲಿದೆ ಎಂದರು.
ನೀಲಿಚಿತ್ರ ತೋರಿಸುವ, ಭಕ್ತರನ್ನು ಮರಳು ಮಾಡುವ, ಭಾವನೆಗಳೊಂದಿಗೆ ಆಟವಾಡುವ ಢೋಂಗಿ ಸ್ವಾಮೀಜಿಗಳು, ಸನ್ಯಾಸಿಗಳ ಹಾವಳಿ ಹೆಚ್ಚಾದಂತೆ ಆಧಾಯತ್ಮದ ಹಸಿವು ಶಂಕೆಗೊಳಗಾಯ್ತು ಎಂದು ವಿಷಾದಿಸಿದ ಅವರು ಆಧಾಯ್ಮ, ಆಧುನಿಕತೆ ಹಸಿವು ಸರಿ ದಾರಿಯಲ್ಲಿದ್ದರೆ ಮಾತ್ರ ಸಮಾನತೆ ತಾನಾಗಿಯೇ ತನ್ನ ಅಸ್ತಿತ್ವ ಕಾಪಾಡಿಕೊಂಡು ಬರಲು ಸಾಧ್ಯ ಎಂದು ಮಾರ್ಮಿಕವಾಗಿ ಹೇಳಿದರು.
ಕೆಟ್ಹೋದ್ವು ಅಂತ ಬಿಟ್ಟೀರಿ ಜೋಕೆ: ಆಧುನಿಕತೆ, ಆಧ್ಯಾತ್ಮ ಹಾಗೂ ಸಮಾನತೆ ಹಸಿವುಗಳು ಹಾಳಾಗಿವೆ ಎಂದು ಬಿಡಲಾಗದು. ಇವುಗಳನ್ನು ಹೊಂದುವ ದಿಶೆಯಲ್ಲಿ ನಾವು ಎಲ್ಲರೂ ಹೊಸತನೊಂದಿಗೆ ಪ್ರಯತ್ನಿಸಲೇಬೇಕಾಗಿದೆ. ಈ ವಿಷಯಗಳನ್ನು ಮುಂದಿಟ್ಟುಕೊಂಡು ಆಳವಾದಂತಹ, ಜ್ಞಾನಪೂರ್ಣ ವಿಮರ್ಶೆಗಳು ಸಾಗಬೇಕು. ಅಂದಾಗ ಮಾತ್ರ ನಾವೆಲ್ಲರೂ ಪರಿಪೂರ್ಣ ಮಾನವರಾಗಲು ಸಾಧ್ಯ ಎಂದರು.
ಭಾರತದ ಬೀದಿಗಳಂದ್ರೆ ಜ್ಞಾನದ ಖಣಿ: ಶಾಲೆ, ಮನೆಪಾಠ, ಮನೆಯೊಳಗೆ ಹಿಡಿದುಹಾಕಿ ಟಿವಿ ನೋಡುವಂತೆ, ಪುಸಲಾಯಿಸುತ್ತ ಇಂದಿನ ಮಕ್ಕಳ ಅಂತಸತ್ವ, ಚುರುಕುತನ, ಸೃಜನಶೀಲತೆಗೆ ಪೋಷಕರು ಪೆಟ್ಟು ಕೊಡುತ್ತಿದ್ದಾರೆ. ಈ ಪ್ರವೃತ್ತಿ ಸರಿಯಲ್ಲ. ಮಕ್ಕಳು ಆಟೋಟಗಳಲ್ಲಿ ತೊಡಗಬೇಕು. ನೆರೆಹೊರೆಯರೊಂದಿಗೆ ಬೆರೆತು ಬದುಕಿದಾಗಲೇ ಹಲವು ಸಂಗತಿಗಳು ಅನುಭವಕ್ಕೆ ಬರುತ್ತವೆ. ಅದರಿಂದಲೇ ಮಕ್ಕಳು ಅನೇಕ ಸಂಗತಿಗಳನ್ನು ಅರಿಯಬಲ್ಲರು.
ಸಮುದ್ರಕ್ಕೇ ಬಲೆ ಹಾಕೋಣ: ಮೀನು ಹಿಡಿಯುವಾಗ ಜಾತಿವಾರು ಕೊಳಗಳನ್ನು ರಚಿಸಿದ್ರೆ ಪ್ರಯೋಜನ ಏನು, ಹಾಗೆಯೇ ಸಮುದ್ರಕ್ಕೆ ಬಲೆ ಹಾಕಿದಾಗಲೇ ದೊಡ್ಡ ಮೀನುಗಳು ಬಲೆಗೆ ಬೀಳೋದು. ಯಾವ ಮಕ್ಕಳಲ್ಲಿ ಅದ್ಯಾವ ಪ್ರತಿಭೆ ಅಡಗಿದೆಯೋ ಯಾರಿಗೆ ಗೊತ್ತು, ಭಿಕ್ಷುಕರ ಮಕ್ಕಳಲ್ಲಿನ ಚುರುಕುತನ ಕಂಡಿದ್ದೇನೆ. ಅವರಿಗೆ ಶಾಲೆ, ಉತ್ತಮ ಊಟ ದೊರಕಿದಲ್ಲಿ ಆ ಮಗು ಮುಂದೆ ಏನಾಗಿ ಬೆಳೆಯುದೋ ಅಗಾಧ ಸತ್ವಃ ಜಾಣತನ ಇರುವ ಮಕ್ಕಳಲ್ಲಿ ಬಡವ- ಬಲ್ಲಿದ ಎಂಬ ಭೇದ ಮಾಡದೆ ಸಮಾನತೆ ಶಿಕ್ಷಣದಲ್ಲಿ ಅವರು ಬೆಳೆದು ದೊಡ್ಡವರಾಗುವಂತಹ ವಾತಾವರಣ ಕಲ್ಪಿಸಬೇಕಾಗಿದೆ ಎಂದರು ಡಾ. ಅನಂತಮೂರ್ತಿ.
ಶಿಕ್ಷಣ- ಆರೋಗ್ಯ ಖಾಸಗೀಕರಣ ಬೇಡ: ಶಿಕ್ಷಣ ಹಾಗೂ ಆರೋಗ್ಯ ರಂಗದ ಖಾಸಗೀಕರಣ ವಿರೋಧಿಸಿದ ಡಾ. ಅನಂತಮೂರ್ತಿ ತಮ್ಮ ಮಾತುಗಳಲ್ಲಿ ಅದರಿಂದ ಬರುವ ದಿನಗಳಲ್ಲಿ ಆಗಬಹುದಾದಂತಹ ಅಪಾಯಗಳನ್ನು ಉದಾಹರಣೆ ಸಮೇತ ವಿವರಿಸಿದರು.
ಶಾಲೆ ಮನೆಯಷ್ಟೇ ಅಲ್ಲ, ಬೀದಿಯೂ ಗೊತ್ತಿದ್ದಾಗ ಮಾತ್ರ ಮಕ್ಕಳು ಪರಿಪೂರ್ಣವಾಗಿ ಬೆಳೆಯುತ್ತಾರೆ. ಗುಲ್ಬರ್ಗದ ಜಾತಿ- ಧರ್ಮಗಳ ಸಾಮರಸ್ಯ- ಸಮಾನತೆಯ ತತ್ವಗಳ ಬಗ್ಗೆ ಮೆಚ್ಚುಗೆ ನುಡಿಗಳನ್ನಾಡಿದರು.
ಕೇಂದ್ರೀಯ ವಿವಿ ಕುಲಪತಿ ಡಾ. ಶ್ರೀನಿವಾಸಮೂರ್ತಿ, ಕುಲಸಚಿವ ಎಂ. ನಾಗರಾಜ, ಗುಲ್ಬರ್ಗ ವಿವಿ ಕುಲಸಚಿವ ಡಾ. ದಯಾನಂದ ಅಗಸರ್ ಉಪಸ್ಥಿತರಿದ್ದರು. ಅಪ್ಪಗೆರೆ ಸೋಮಶೇಖರ ನಿರೂಪಿಸಿದರು. ಬಸವರಾಜ ಡೋಣೂರ ಡಾ. ಅನಂತಮೂರ್ತಿ ಅವರನ್ನು ಸಭೆಗೆ ಪರಿಚಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

