ಪಟಾಕಿಯಲ್ಲಿ ಕುರಾನ್ ಹಾಳೆ: ಕ್ರಮಕ್ಕೆ ಮುಸ್ಲಿಮರ ಒತ್ತಾಯ
ಯಾದಗಿರಿ: ಕುರಾನ್ ಗ್ರಂಥದ ಪುಟಗಳನ್ನು ಬಳಸಿ ಪಟಾಕಿ ತಯಾರಿಸಿದ್ದನ್ನು ಕಂಡ ಇಲ್ಲಿಯ ಮುಸ್ಲಿಂರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಶನಿವಾರ ರಾತ್ರಿಯಿಂದಲೇ ಸುದ್ದಿ ನಗರಾದ್ಯಂತ ಹರಡಿದ್ದರಿಂದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿತ್ತು. ಆದರೆ ಜಿಲ್ಲಾಧಿಕಾರಿ ಸಮಯ ಪ್ರಜ್ಞೆಯಿಂದ ಪರಿಸ್ಥಿತಿ ಶಾಂತವಾಗಿದೆ.
ಇಲ್ಲಿಯ ಗಾಂಧಿ ಚೌಕ ಪ್ರದೇಶದಲ್ಲಿ ಸಿಡಿದ ಪಟಾಕಿಯಲ್ಲಿ ಕುರಾನ್ ಹಾಳೆಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದದ್ದನ್ನು ಶನಿವಾರ ರಾತ್ರಿ ನೋಡಿದ್ದಾರೆ. ಇದು ಎಲ್ಲೆಡೆ ಹರಡಿ ಶನಿವಾರ ರಾತ್ರಿ ಗಾಂಧಿ ಚೌಕದಲ್ಲಿ ಮುಸ್ಲಿಂ ಸಮುದಾಯದ ನೂರಾರು ಜನರು ಸೇರಿದ್ದಾರೆ. ಕುರಾನ್ ಗ್ರಂಥದ ಹಾಳೆಗಳು ನೆಲಕ್ಕೆ ಬಿದ್ದಿರುವುದು ಅವರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು, ತೀವ್ರ ಆಕ್ಷೇಪಕ್ಕೆ ಕಾರಣವಾಯಿತು. ಮಧ್ಯ ರಾತ್ರಿವರೆಗೂ ಈ ಕುರಿತು ಬಿಸಿಬಿಸಿ ಚರ್ಚೆ ನಡೆಯಿತು.
ಈ ಸುದ್ದಿ ಭಾನುವಾರ ಮತ್ತಷ್ಟು ಹರಡಿತು. ರಜಾ ದಿನವಾದರೂ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ನೂರಾರು ಜನರು ಆಗಮಿಸಿದರು. ಪಟಾಕಿ ಬಾಕ್ಸ್ ಹಿಡಿದು ತಂದು ಅದರಲ್ಲಿ ಇರುವ ಕುರಾನ್ ಹಾಳೆಗಳನ್ನು ಬಿಚ್ಚಿ ತೋರಿಸಿದರು. ಧಾರ್ಮಿಕ ಭಾವನೆಗೆ ಧಕ್ಕೆ ತರುವ ವಿಚಾರವಾದ್ದರಿಂದ ಘಟನೆ ಖಂಡಿಸಿ ಸೋಮವಾರ ಯಾದಗಿರಿ ಬಂದ್ಗೆ ಕರೆ ಕೊಡಲು ಮುಖಂಡರು ನಿರ್ಧರಿಸಿದರು. ನಂತರ ಈ ಕುರಿತು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ ಅವರಿಗೆ ಮನವಿ ಸಲ್ಲಿಸಿದರು.
ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ನಿಮ್ಮ ಭಾವನೆಗಳು ಅರ್ಥವಾಗುತ್ತವೆ. ಆದರೆ ಇದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ, ಇಂಥ ಪಟಾಕಿಗಳನ್ನು ಮಾರಾಟ ಮಾಡದಂತೆ ಅಂಗಡಿ ಮಾಲೀಕರಿಗೆ ಸೂಚಿಸುವುದಾಗಿ ಹೇಳಿದರು. ಬಂದ್ ಹಾಗೂ ಮೆರವಣಿಗೆ ನಡೆಸುವುದು ಬೇಡ. ಚುನಾವಣಾ ಸಮಯವಾದ್ದರಿಂದ ತೊಂದರೆಯಾಗಬಹುದು ಎಂದು ತಿಳಿಹೇಳಿದರು. ಇದಕ್ಕೆ ಒಪ್ಪಿದ ಮುಸ್ಲಿಂ ಮುಖಂಡರು, ಶಿವಕಾಶಿಯಲ್ಲಿ ಪಟಾಕಿ ತಯಾರಾಗಿದ್ದು, ಕಂಪನಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಮಹ್ಮದ್ ಇಸಾಕ್, ಜಹೀರ್, ಅಬ್ದುಲ್ ಗಫಾರ್ ವರ್ಚಸ್, ಅಬ್ದುಲ್ ಕರೀಂ, ಜಕಿಯುದ್ದೀನ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

