ಗುಲ್ಬರ್ಗಾ

ದಕ್ಷಿಣದಿಂದ ದತ್ತಾತ್ರೇಯ ಕಣಕ್ಕೆ: ಎಚ್ಡಿಕೆ

Published On :

ಗುಲ್ಬರ್ಗ: ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರದ ಮುಂದಿನ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಶಾಸಕಿ ಅರುಣಾ ಪಾಟೀಲ್ ರೇವೂರ ಅವರ ಸುಪುತ್ರ ಜಿಪಂ ಮಾಜಿ ಸದಸ್ಯ ದತ್ತಾತ್ರೇಯ ಪಾಟೀಲ್ ರೇವೂರ ಅವರನ್ನು ಕಣಕ್ಕಿಳಿಸಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದರು.
ಲಿಂ. ಚಂದ್ರಶೇಖರ ಪಾಟೀಲ್ ರೇವೂರ ಅವರ 56ನೇ ಜನ್ಮ ದಿನದ ನೆನಪಿಗಾಗಿ ಅಭಿಮಾನಿಗಳ ಬಳಗ ಸೋಮವಾರ ನಗರದ ಶರಣಬಸವೇಶ್ವರ ದೇವಸ್ಥಾನದ ಮೈದಾನದಲ್ಲಿ ಆಯೋಜಿಸಿದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಈ ಘೋಷಣೆ ಮಾಡಿದರು.
ಜನರ ಮನಗೆದ್ದರು: ಚಂದ್ರಶೇಖರ ಪಾಟೀಲ್ ರೇವೂರ ಅವರು ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಕೈಗೊಂಡಿದ್ದರು. ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿದ್ದ ಕ್ಷೇತ್ರಕ್ಕೆ ಪಕ್ಷವು ಅವರ ಧರ್ಮಪತ್ನಿ ಅರುಣಾ ಪಾಟೀಲ್ ರೇವೂರ ಅವರಿಗೆ ಟಿಕೆಟ್ ನೀಡಿ ಅವರ ಗೆಲುವಿಗೆ ಶ್ರಮಿಸಲಾಗಿತ್ತು. ಅವರು ಶಾಸಕರಾಗಿ ಅಧಿಕಾರ ವಹಿಸಿಕೊಂಡು ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಮಾಡದಿದ್ದರೂ ಪ್ರಾಮಾಣಿಕವಾಗಿ ಕೆಲಸ ಮಾಡಿ ಅವರ ಪತಿಯಂತೆ ಜನರ ಮನಗೆದಿದ್ದಾರೆ ಎಂದರು.
ಮನವಿ: ಬರುವ ವಿಧಾನಸಭಾ ಚುನಾವಣೆಗೂ ಅರುಣಾ ಪಾಟೀಲ್ ರೇವೂರ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕೆಂಬ ಹೆಬ್ಬಯಕೆ ಪಕ್ಷಕ್ಕಿತ್ತು. ಆದರೆ, ಅರುಣಾ ಅವರು ನಾನು ರಾಜಕೀಯಕ್ಕೆ ಅನಿರೀಕ್ಷತವಾಗಿ ಬಂದವಳು. ತಮ್ಮ ಸುಪುತ್ರ ದತ್ತಾತ್ರೇಯ ಪಾಟೀಲ್‌ಗೆ ಭವಿಷ್ಯವಿದೆ ಆತನಿಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಆಸೆಯಂತೆ ಅವರ ಸುಪುತ್ರ ದತ್ತಾತ್ರೇಯ ಪಾಟೀಲ್ ಅವರಿಗೆ ಮುಂದಿನ ವಿಧಾನಸಭಾ ಗುಲ್ಬರ್ಗ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗುತ್ತಿದೆ. ಅವರ ತಂದೆ, ತಾಯಿಗಳಿಗೆ ಆಶೀರ್ವದಿಸಿದಂತೆ ಇತನಿಗೂ ಆಶೀರ್ವದಿಸಿ ಕ್ಷೇತ್ರ ಅಭಿವೃದ್ಧಿಗೆ ಸಹಕರಿಸಿ ಎಂದು ಕೋರಿದರು.
ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವ ದಂಪತಿಗಳ ಜೀವನ ಸುಖಮಯವಾಗಿರಲಿ ಎಂದು ಶುಭ ಹಾರೈಸಿದ ಕುಮಾರಸ್ವಾಮಿ ಅವರು, ಚಂದ್ರಶೇಖರ ಪಾಟೀಲ್ ಅವರು ಎಲ್ಲರ ಹೃದಯದಲ್ಲಿ ಸದಾಕಾಲ ನೆಲೆಸಿದ್ದಾರೆ. ಇಂದೊಂದು ಐತಿಹಾಸಿಕ ವಿಶೇಷ ಕಾರ್ಯಕ್ರಮ ಎಂದರು.
ಒತ್ತಾಯ: ಉತ್ತರ ಕರ್ನಾಟಕ ಅದರಲ್ಲಿಯೂ ಹೈ.ಕ. ಭಾಗದಲ್ಲಿ ಅಪೌಷ್ಠಿಕತೆಯ ಕೊರತೆಯಿಂದಾಗಿ ಗರ್ಭಿಣಿ ಮಹಿಳೆಯರು ರಕ್ತಹಿನತೆಯಿಂದ ಬಳಲುತ್ತಿದ್ದಾರೆ. ಇದರ ಪರಿಣಾಮವಾಗಿ ಗರ್ಭಿಣಿ ಮಹಿಳೆಯರು, ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಕೆಲವು ಮಕ್ಕಳು ಅಂಗವಿಕಲರಾಗಿ ಜನಿಸುತ್ತಿದ್ದಾರೆ. ಈ ಘಟನೆಗಳು ಮರುಕಳಿಸದಂತೆ ಸರ್ಕಾರ ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕಾಂಶ ಆಹಾರ ಪದಾರ್ಥ ಸೇವಿಸಲು ಪ್ರತಿ ತಿಂಗಳು ತಲಾ 5 ಸಾವಿರ ನೀಡುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಮಧುಗಿರಿ ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಕುಮಾರಸ್ವಾಮಿ 20 ತಿಂಗಳ ಅಧಿಕಾವಾಧಿಯಲ್ಲಿ ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಮನೆ ಮಾತಾಗಿದ್ದಾರೆ. ಬರುವ ಚುನಾವಣೆಯಲ್ಲಿ ಅವರ ಕೈಬಲಪಡಿಸಲು ಮತ್ತೊಮ್ಮ ಜನತೆ ಆಶೀರ್ವದಿಸಬೇಕು, ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಸಹಕರಿಸಿ: ಗುಲ್ಬರ್ಗ ದಕ್ಷಿಣ ಮತಕ್ಷೇತ್ರದ ಶಾಸಕಿ ಅರುಣಾ ಪಾಟೀಲ್ ಅವರು ತಮ್ಮ ಪತಿ ಚಂದ್ರಶೇಖರ ಪಾಟೀಲ್ ಅವರ ಜನ್ಮದಿನದ ಸವಿ ನೆನಪಿಗಾಗಿ 151 ಜೋಡಿ ಸಾಮೂಹಿಕ ವಿವಾಹ ಕೈಗೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರ ಕುಟುಂಬಕ್ಕೆ ಎಲ್ಲರೂ ಸಹಕರಿಸಬೇಕೆಂದು ಕೋರಿದರು.
ಸಮಾರಂಭದಲ್ಲಿ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಸಚಿವ ರೇವು ನಾಯಕ ಬೆಳಮಗಿ, ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ, ಸುಭಾಷ ಗುತ್ತೇದಾರ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಂಡೆಪ್ಪ ಕಾಶಂಪುರ, ಅರುಣಾ ಪಾಟೀಲ್ ರೇವೂರ, ಡಾ. ಬಸವರಾಜ ಪಾಟೀಲ್ ಸೇಡಂ, ಎಂ.ವೈ. ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ, ಅಲೋಕ ಪಾಟೀಲ್, ಸಾತಲಿಂಗಪ್ಪ ಮೇತ್ರೆ ಇತರ ಗಣ್ಯರು ಉಪಸ್ಥಿತರಿದ್ದರು.
ಗುರುನಾಥ ಸ್ವಾಮೀಜಿ, ಚನ್ನವೀರ ಶಿವಾಚಾರ್ಯರು, ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ, ಡಾ. ಶರಣಬಸವಪ್ಪ ಅಪ್ಪ, ಮಹಾಂತ ಶಿವಾಚಾರ್ಯರು, ಚನ್ನಮಲ್ಲ ಶಿವಾಚಾರ್ಯರು, ಗುರುಪಾದಲಿಂಗ ಶಿವಯೋಗಿ, ದ್ವೀಪಸಿಂಗ್ ಬಾಬಾಜಿ ಇತರ ಮಠಗಳ ಮಠಾಧೀಶರು ದಿವ್ಯ ಸಾನಿಧ್ಯ ವಹಿಸಿದ್ದರು. ಸುಮಾರು 50 ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.