ಶಿಕ್ಷಕರಿಂದ ಸಾಮೂಹಿಕ ಆತ್ಮಹತ್ಯೆ ಎಚ್ಚರಿಕೆ!
ಗುಲ್ಬರ್ಗ: ಸಂತ ಕಬೀರದಾಸ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಗಂಗಾಧರ ಬಕ್ಕಪ್ರಭು ಪ್ರೌಢಶಾಲೆ ಮತ್ತು ಚನ್ನವೀರ ಶಿವಯೋಗಿ ಸ್ಮಾರಕ ಪ್ರೌಢಶಾಲೆ 11 ಶಿಕ್ಷಕರು ಸಂಸ್ಥೆ ಅಧ್ಯಕ್ಷರ ಶೋಷಣೆಗೆ ಬೇಸತ್ತು ಕೂಡಲೇ ಅವರ ವಿರುದ್ಧ ಸರ್ಕಾರ ಕ್ರಮ ಜರುಗಿಸದಿದ್ದರೆ ಸಾಮೂಹಿಕವಾಗಿ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಪ್ರತಿಯೊಬ್ಬ ಶಿಕ್ಷಕರು ಪ್ರತಿ ತಿಂಗಳು ತಮ್ಮ ಸಂಬಳದಲ್ಲಿ ತಲಾ # 3 ಸಾವಿರ ಚೆಕ್ ಮೂಲಕ ನೀಡಬೇಕು. ಇಲ್ಲವಾದರೆ ಹಾಜರಾತಿ ನೀಡದೆ ಕರ್ತವ್ಯ ನಿರ್ವಹಿಸಿದರೂ ಗೈರು ಹಾಜರಿ ಎಂದು ಹಾಜರಿ ಪುಸ್ತಕದಲ್ಲಿ ಬರೆದು ಕೇವಲ 3 ದಿನಗಳ ಸಂಬಳ ನೀಡಲಾಗುತ್ತಿದೆ. ಈ ಧೋರಣೆ ವಿರೋಧಿಸಿದ ಮೂರು ಜನ ಶಿಕ್ಷಕರಿಗೆ ಯಾವುದೇ ಕಾರಣ ನೀಡದೆ ಅಮಾನತುಗೊಳಿಸಿದ್ದಾರೆ ಎಂದು ಸಂಸ್ಥೆ ನೌಕರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪ್ರಕಾಶ ಎಂ. ಪ್ರಸಾದ್ ತಿಳಿಸಿದರು.
ಸ್ಪಂದಿಸದ ಸರ್ಕಾರ: ಅವರು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆ ಅಧ್ಯಕ್ಷರ ಧೋರಣೆಯನ್ನು ಖಂಡಿಸಿ ಗುಲ್ಬರ್ಗ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಎದುರು 51 ದಿನಗಳ ಕಾಲ ಧರಣಿ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಧರಣಿ ಇನ್ನೂ ಮುಂದುವರೆಯಲಿದ್ದು, ಕೂಡಲೇ ನಮ್ಮ ಸಮಸ್ಯೆಗೆ ಸ್ಪಂದಿಸದಿದ್ದರೆ ಅನಿವಾರ್ಯವಾಗಿ ಸಾಮೂಹಿಕವಾಗಿ ಆತ್ಮಾಹುತಿ ಮಾಡಿಕೊಳ್ಳಲಾಗುವುದು. ಇದಕ್ಕೆ ಸರ್ಕಾರವೇ ಹೊಣೆ ಎಂದರು.
ಆಕ್ರೋಶ: ಸಂಸ್ಥೆಗೆ ಆಡಳಿತಾಧಿಕಾರಿ ನೇಮಿಸಬೇಕು ಮತ್ತು ಅಮಾನತುಗೊಂಡಿರುವ ಮೂರು ಜನ ಶಿಕ್ಷಕರನ್ನು ಸೇವೆಗೆ ತೆಗೆದುಕೊಳ್ಳಬೇಕು ಎಂದು ಇಲ್ಲಿನ ಶಿಕ್ಷಣ ಇಲಾಖೆಯ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರಿಗೆ ಸೂಚಿಸಿದ್ದರೂ, ಉಪನಿರ್ದೇಶಕರು ಯಾವುದೇ ಕ್ರಮ ಕೈಗೊಳ್ಳದೆ ಸಂಸ್ಥೆ ಅಧ್ಯಕ್ಷರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಮಸ್ಯೆ ಬಗೆಹರಿಸುವಂತೆ ಶಿಕ್ಷಣ ಸಚಿವರಿಗೆ ಮತ್ತು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಮನವಿ ಮಾಡಿದ್ದು, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಆದರೆ, ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜಶೇಖರ, ಗೀತಾ ಹಿರೇಮಠ, ದಿಲೀಪಕುಮಾರ, ಸಂತೋಷ ಸಜ್ಜನ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

