ಹೈ-ಕ ನಿವಾಸಿ: ಹೇಗೆ ಗುರುತಿಸಿದರೆ ವಾಸಿ?
ಕ.ಪ್ರ.ವಾರ್ತೆ , ಗುಲ್ಬರ್ಗ , ಜು.1
ಹೈದರಾಬಾದ್ ಕರ್ನಾಟಕ ಅಂದ್ರೆ 6 ಜಿಲ್ಲೆ ಓಕೆ. ಈ ಸೀಮೆಯ ನಿವಾಸಿ ಎಂದು ಗುರುತಿಸೋದು ಹ್ಯಾಂಗ್ರಿ? ಅದಕ್ಕೆ ಯಾವ ಮಾನದಂಡ ಅನ್ವಯಿಸಬೇಕು? ಹೈ-ಕ ನೆಲದಲ್ಲೇ ಹುಟ್ಟಿರಬೇಕು ಎಂದು ಬೈ ಬರ್ಥ್ (ಹುಟ್ಟಿದಾರಭ್ಯ) ಅಂಶ ಗಮನಿಸಬೇಕೋ? ಅಥವಾ ಹೈ-ಕ ಪ್ರದೇಶದಲ್ಲಿ ಇಂತಿಷ್ಟು ವರ್ಷ ವಾಸವಾಗಿರಬೇಕು ಅಂತ ನಿಯಮ ರೂಪಿಸಬೇಕೋ? ಯಾವುದು ಹೆಚ್ಚು ಸೂಕ್ತ.
ಕಲಂ 371 (ಜೆ) ಕುರಿತು ಅಭಿಪ್ರಾಯಯ ಸಲಹೆ ಪಡೆದು ನಿಯಮ ರೂಪಿಸಲು ಹೈ-ಕ ಪ್ರದೇಶಗಳಾದ ಗುಲ್ಬರ್ಗ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬಳ್ಳಾರಿಗಳಲ್ಲಿ ಸಂಚಾರದಲ್ಲಿರುವ ಹಿರಿಯ ಸಚಿವ ಎಚ್.ಕೆ. ಪಾಟೀಲ್ ಅಧ್ಯಕ್ಷತೆಯ ಸಂಪುಟ ಉಪ ಸಮಿತಿಯನ್ನು ಈ ಪ್ರಶ್ನೆಗಳು ಕಾಡಲಾರಂಭಿಸಿವೆ.
ವೃತ್ತಿ ಶಿಕ್ಷಣ (ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಹಲವು ಕೋರ್ಸ್ಗಳು), ಉದ್ಯೋಗ ಹಾಗೂ ಅಭಿವೃದ್ಧಿ ರಂಗಗಳನ್ನು ಗುರುತಿಸಿ ಹೈ-ಕ ನೆಲಕ್ಕೆ, ಇಲ್ಲಿನ ನಿವಾಸಿಗಳಿಗೆ ಈ ಕ್ಷೇತ್ರಗಳಲ್ಲೆಲ್ಲ ಹೆಚ್ಚಿನ ಪ್ರಾಶಸ್ತ್ಯ ನೀಡುವುದೇ ಕಲಂ 371(ಜೆ) ಹಿಂದಿನ ಸದಾಶಯ. ಈ ಆಶಯ ಈಡೇರಬೇಕಾದಲ್ಲಿ ಹೈ-ಕ ನಿವಾಸಿ ಹೇಗೆ ನಿರ್ಧರಿಸುವುದು ತುಂಬ ಮಹತ್ವದ್ದು. ಎಲ್ಲ ಮಗ್ಗುಲಗಳಿಂದಲೂ ಈ ಅಂಶ ಪಕ್ಕಾ ನಿರ್ಧಾರವಾಗಬೇಕಷ್ಟೆ. ಇಲ್ಲಿರುವವರಿಗೆ, ಗುಳೆ ಹೋಗುವವರಿಗೆ, ಬಿಜಾಪುರ, ಹುಬ್ಬಳ್ಳಿ- ಧಾರವಾಡ ಸೇರಿ ಮುಂಬೈ ಕರ್ನಾಟಕ ಭಾಗದಿಂದ ಇಲ್ಲಿ ಬಂದು ನೆಲೆ ನಿಂತವರಿಗೆಲ್ಲರಿಗೂ ಯಾವ ಹಂತದಲ್ಲಿಯೂ ಅನ್ಯಾಯವಾಗದಂತೆ ನಿವಾಸಿತನ (ಡೋಮಿಸೈಲ್) ಪ್ರಶ್ನೆ ನಿರ್ಧಾರವಾಗಲೇಬೇಕು.
ನಿವಾಸಿತನ ನಿರ್ಧರಿಸಲು ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಯಮ ರೂಪಿಸಬೇಕು. ಎಲ್ಲರಿಗೂ ಕಲಂ 371 (ಜೆ) ಸಿಹಿಫಲ ದಕ್ಕುವಂತೆ ಮಾಡುವ ದಾರಿಯಲ್ಲಿರುವ ರಹವಾಸಿತ್ವದ ವಿಚಾರ ತುಂಬ ಸ್ಪಷ್ಟವಾಗಿ ನಿರ್ಣಯಿಸಲೇಬೇಕು. ಇದು ಎಲ್ಲರಿಂದಲೂ ಭೇಷ್ ಎನ್ನಿಸುವಂತೆ ಹಾಗೂ ಪ್ರಶ್ನಾತೀತವಾಗಿರಬೇಕಲ್ಲ ಎಂದು ಯೋಚಿಸುತ್ತಿರುವ ಸಂಪುಟ ಉಪ ಸಮಿತಿ ತಾನು ಹೋದ ಕಡೆಗಳಲ್ಲೆಲ್ಲಾ ಅಭಿಪ್ರಾಯ ನೀಡಲು ಬರುವವರೊಂದಿಗೆ ಈ ವಿಚಾರವಾಗಿ ತಾನೇ ಪ್ರಶ್ನಿಸಿ ಅವರ ಸಲಹೆ- ವಿಚಾರಗಳನ್ನು ಪಡೆಯಲಾರಂಭಿಸಿದೆ.
ಹೀಗೆಲ್ಲಾ ಇದ್ರೆ: ಭೌಗೋಳಿಕವಾಗಿ ಹೈ-ಕ 6 ಜಿಲ್ಲೆ ಹಾಗೂ 31 ತಾಲೂಕುಗಳ ವ್ಯಾಪ್ತಿಯ ಪ್ರದೇಶ. ಇಲ್ಲಿ ವಲಸೆ ಹೋಗುವವರೇ ಅಧಿಕ. ಬಡ- ಮಧ್ಯಮವರ್ಗದ ಜನತೆ ಇಲ್ಲಿಂದ ಪುಣೆ- ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವು ಮಹಾನಗರಗಳಿಗೆ ಕೆಲಸ ಅರಸಿ ಹೋಗುತ್ತಾರೆ. ನಿವಾಸಿತನ ನಿರ್ಧರಿಸುವಾಗ ಹುಟ್ಟಿದಾರಭ್ಯ ಅಂಶ ಆಧಾರವಾಗಿಟ್ಟುಕೊಳ್ಳಬೇಕೋ? ಹತ್ತೋ, ಇಪ್ಪತ್ತೋ ವರ್ಷದ ಅವಧಿ ನಿಗದಿಪಡಿಸಿ ಇದರ ವ್ಯಾಪ್ತಿಗೆ ರಹವಾಸಿತನದ ಸಂಬಂಧ ಹೊಸತಾಗಿ ಕಲ್ಪಿಸಬೇಕೋ ಇವೆರಡನ್ನು ಹೊರತುಪಡಿಸಿ ಪ್ರಸ್ತುತ ಈ 6 ಜಿಲ್ಲೆಗಳಲ್ಲಿ ವಾಸವಾಗಿರುವ ಎಲ್ಲರು ಹೈ-ಕ ನಿವಾಸಿಗಳು ಎಂದು ಕಲಂ ಸಿಹಿಫಲ ಹಂಚಿಕೆ ಮಾಡಬೇಕೋ? ಎಂದು ಸಂಪುಟ ಉಪ ಸಮಿತಿ ಚಿಂತನೆಗೆ ಇಳಿದಿದೆ.
ಕಲಂ 371 (ಜೆ) ಹೈ-ಕ ಭಾಗಕ್ಕೆ ದಕ್ಕಿದ್ದು ಇಲ್ಲಿನ ದಶಕಗಳ ಹೋರಾಟ ಹಾಗೂ ಜನರ ಆಶೋತ್ತರಗಳ ಪ್ರತಿಫಲ. ನಾವೇ ನಿಯಮ ರಚಿಸಬಹುದಿತ್ತು. ಜನಾಭಿಪ್ರಾಯ ನಿಯಮಗಳಲ್ಲಿ ಪ್ರತಿಫಲವಾಗಲೇಬೇಕು ಎಂದು ಸಲಹೆ- ಸೂಚನೆ ಪಡೆಯುತ್ತಿದ್ದೇವೆ.
- ಎಚ್.ಕೆ. ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ
ನಿಜಾಂ ಆಡಳಿತದಿಂದ ಇಲ್ಲಿದ್ದವರು ಮಾತ್ರ ಪಕ್ಕಾ ಹೈ- ಕ ಮಂದಿ. ಇದಾದ ಮ್ಯಾಗ ಹೊರ ರಾಜ್ಯದವರು ಇಲ್ಲಿಗೆ ಬಂದಾರ, ಮುಂಬೈ ಕರ್ನಾಟಕದವರು ಬಂದಾರ. ಮುಂದುವರಿದವರೆಲ್ಲರು ಹಿಂದುಳಿದವರು ಆದ್ರ ನಿಜವಾದವರಿಗೆ ಕಲಂ 371 ನಿಂದ ನ್ಯಾಯ ದೊರಕೋದೇ ಕಷ್ಟ. ನಿಯಮ ಮಾಡೋವಾಗ ಇವೆಲ್ಲ ಗಮನಿಸ್ಲೇಬೇಕು.
- ವೆಂಕಣಗೌಡ ಕೆಂಭಾವಿ, ಯಾದಗಿರಿ ಜಿಲ್ಲೆ
ಹುಟ್ಟಿದಾರಭ್ಯ ಎಂಬ ಅಂಶದಿಂದ ಹೈ- ಕ ರಹವಾಸಿತನ ಗುರ್ತಿಸಬೇಕು. ಇದಲ್ದೆ ನಮ್ಮ ನೆರವಿಗೆ ಬಂದಿರುವ ಮುಂಬೈ ಕರ್ನಾಟಕ ಜಿಲ್ಲೆಗಳ ಜನ ಇಲ್ಲೇ ಇದ್ದಾರ. ನಮ್ಗ ಚೊಲೋ ಆದಾಗ ಅವರನ್ನ ದೂರ ಇಡೋದು ಬೇಡ. ಅವರಿಗೂ ನಮಗೆ ದೊರಕುವ ಸೌಕರ್ಯಗಳು ದಕ್ಕಲೇಬೇಕಲ್ಲ.
- ಡಾ. ಚೆನ್ನಬಸಪ್ಪ ಹಾಲಹಳ್ಳಿ, ಬೀದರ್ ಅಭಿವೃದ್ಧಿ ಸಮಿತಿ ಅಧ್ಯಕ್ಷ
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

