ಗುಲ್ಬರ್ಗಾ

ಈಶಾನ್ಯ ಸಾರಿಗೆ ಸಂಸ್ಥೆಗೆ ಕೋಟ್ಯಂತರ ನಷ್ಟ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.2
ರಹದಾರಿ ಪರವಾನಗಿ ನಿಯಮ ಅನುಷ್ಠಾನದಲ್ಲಿ ಗುಲ್ಬರ್ಗ ಕೇಂದ್ರವಾಗಿರುವ ಈಶಾನ್ಯ ಸಾರಿಗೆ ಸಂಸ್ಥೆ ವಿಫಲವಾಗಿರುವುದರಿಂದ ಸಂಸ್ಥೆಯ ಆದಾಯಕ್ಕೆ ವಾರ್ಷಿಕ ಕೋಟ್ಯಂತರ ರುಪಾಯಿ ನಷ್ಟವಾಗುತ್ತಿದೆ.
ಸಂಪೂರ್ಣ ರಾಷ್ಟ್ರೀಕರಣಗೊಂಡಿರುವ ಗುಲ್ಬರ್ಗ ವಿಭಾಗದ ವ್ಯಾಪ್ತಿಯಲ್ಲಿ ಖಾಸಗಿ ವಾಹನಗಳು ಸರ್ಕಾರವೇ ರೂಪಿಸಿರುವ ಸ್ಟೇಜ್ ಕ್ಯಾರೇಜ್ ಸೇವೆಯಲ್ಲಿ ತೊಡಗಿಕೊಳ್ಳುತ್ತಿಲ್ಲ. ಆದರೆ, ರಹದಾರಿ ಪರವಾನಗಿ ನಿಯಮಗಳನ್ನೆಲ್ಲ ಗಾಳಿಗೆ ತೂರಿರುವ ಇಲ್ಲಿ 20ಕ್ಕೂ ಅಧಿಕ ಖಾಸಗಿ ಟ್ರಾವೆಲ್‌ನವರು ಕಾಂಟ್ರ್ಯಾಕ್ಟ್ ಕ್ಯಾರೇಜ್ ಪರವಾನಗಿ ಪಡೆದಿದ್ದರೂ ಸ್ಟೇಜ್ ಕ್ಯಾರೇಜ್‌ಗಳಾಗಿ ಅನಧಿಕೃತ ಕಾರ್ಯಾಚರಣೆ ನಡೆಸಿ ಈ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಏಳು ಜಿಲ್ಲೆಗಳ ಸರ್ಕಾರಿ ಬಸ್‌ಗಳಿಗೇ ಪೈಪೋಟಿ ನೀಡುತ್ತಿವೆ.
ಗುಲ್ಬರ್ಗದಿಂದ ನಿತ್ಯವೂ 20ಕ್ಕೂ ಹೆಚ್ಚು ಖಾಸಗಿ ಟ್ರಾವೆಲ್‌ನವರು ಸುರಪುರ, ಬಿಜಾಪುರ, ಬೀದರ್, ಹೈದರಾಬಾದ್, ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಪುಣೆ, ಬೆಳಗಾವಿ ಸೇರಿದಂತೆ ರಾಜ್ಯದ ಪ್ರಮುಖ ನಗರ ಪಟ್ಟಣಗಳಿಗೆ ಬಸ್‌ಗಳನ್ನು ಓಡಿಸುತ್ತಿವೆ.
ಏನಿದು ಕ್ಯಾರಿಯೇಜ್?: ಕಾಂಟ್ರ್ಯಾಕ್ಟ್ ಕ್ಯಾರೇಜ್ ಎಂದರೆ ಒಪ್ಪಂದದ ಸಾರಿಗೆ ಅಥವಾ ಗುತ್ತಿಗೆ ಸಾರಿಗೆ. ಒಂದೂರಿನಿಂದ ಮತ್ತೊಂದೂರಿಗೆ ಸಂಚರಿಸಲು ಮಾತ್ರ ಇಂಥ ಸೇವೆಗೆ ರಹದಾರಿ ಪರವಾನಗಿ ನೀಡಲಾಗುತ್ತದೆ. ಹೀಗೆ ಪರವಾನಗಿ ಪಡೆಯುವವರು ನಿಯಮ ಪಾಲಿಸಲೇಬೇಕು. ಇದರ ಮೇಲೆ ನಿಗಾ ಇಡುವುದು ಸಾರಿಗೆ ಇಲಾಖೆಯ ಕೆಲಸ.
ಸ್ಟೇಜ್ ಕ್ಯಾರೇಜ್ ಎಂದರೆ ಊರಿಂದೂರಿಗೆ ಹೋಗುವಾಗ ಮಾರ್ಗ ಮಧ್ಯೆ ಬರುವ ನಗರ, ಪಟ್ಟಣಗಳಲ್ಲಿ ನಿಲ್ಲುವ ಮೂಲಕ ಜನರಿಗೆ ಸೇವೆ ಕೊಡುವ ರಹದಾರಿ ಪರವಾನಗಿ.
ಖಾಸಗಿ ಬಸ್‌ಗಳು, ಮ್ಯಾಕ್ಸಿಕ್ಯಾಬ್, ಜೀಪ್, ಟೆಂಪೋ ಮುಂತಾದ ವಾಹನಗಳೆಲ್ಲ ಕಾಂಟ್ರಾಕ್ಟ್ ಕ್ಯಾರೇಜ್ ಪರವಾನಗಿ ಹೊಂದಿದ್ದರೂ ಸ್ಟೇಜ್ ಕ್ಯಾರೇಜ್‌ಗಳಾಗಿ ಸಂಚರಿಸುತ್ತಿವೆ. ಇದರಿಂದ ನಿತ್ಯ ಅಂದಾಜು 15-20 ಲಕ್ಷ ಆದಾಯ ಸಂಸ್ಥೆಯ ಕೈತಪ್ಪುತ್ತಿದೆ. ಪ್ರಸ್ತುತ ಈಶಾನ್ಯ ಸಾರಿಗೆ ಸಂಸ್ಥೆ ಪ್ರತಿ ಕಿ.ಮೀ.ಗೆ 27 ವ್ಯಯಿಸುತ್ತಿದೆ. ಆದಾಯ 25-50 ಪೈಸೆ ಮಾತ್ರ. ಒಂದು ಅಂದಾಜಿನ ಪ್ರಕಾರ ನಿತ್ಯ 25 ಲಕ್ಷ, ವಾರ್ಷಿಕ 90 ಕೋಟಿಗೂ ಹೆಚ್ಚು ನಷ್ಟ ಸಂಭವಿಸುತ್ತಿದೆ.
ಸಾರಿಗೆ ಇಲಾಖೆ ಪತ್ರ ಕಳುಹಿಸಿದೆ: ಕ್ಯಾರೇಜ್ ಪರವಾನಗಿದಾರರ ರಹದಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಜರುಗಿಸಿ. ಇಲ್ಲದಿದ್ದಲ್ಲಿ, ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ರವಿಕುಮಾರ್ ಒಂದೂವರೆ ತಿಂಗಳ ಹಿಂದೆಯೇ ಸುತ್ತೋಲೆ ಹೊರಡಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.
ಖಾಸಗಿ ಜೀಪ್, ಕ್ರೂಸರ್ ಮುಂತಾದ ಮಿನಿ ವಾಹನಗಳ ಮಾಲೀಕರು ತಮ್ಮ ಸ್ವಂತ ಉಪಯೋಗಕ್ಕೆಂದು ಪರವಾನಗಿ ಪಡೆದು, ಇದೀಗ ಸ್ಟೇಜ್ ಕ್ಯಾರೇಜ್ ರೂಪದಲ್ಲಿ ಬಳಸುತ್ತಿರುವುದು ಸಂಸ್ಥೆ ವ್ಯಾಪ್ತಿಯ ಎಲ್ಲೆಡೆ ಕಾಣುತ್ತಿದೆ.
ಜಿಲ್ಲಾ ದಂಡಾಧಿಕಾರಿ ಆದೇಶಕ್ಕೂ ಕಾಸಿನ ಕಿಮ್ಮತ್ತಿಲ್ಲ: ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ 500 ಮೀ. ಪರಿಧಿಯಲ್ಲಿ ಖಾಸಗಿ ವಾಹನ ನಿಲುಗಡೆ ನಿಷೇಧಿಸಿ ಆದೇಶಿಲಾಗಿದೆ. ಆದರೂ, ಖಾಸಗಿ ಟ್ರಾವಲ್‌ಗಳ ಅನೇಕ ಬಸ್‌ಗಳು ನಿಲ್ದಾಣದ ಅಕ್ಕಪಕ್ಕ, ಹಿಂದೆ, ಮುಂದೆಯೇ ಠಿಕಾಣಿ ಹೂಡಿ ಪ್ರಯಾಣಿಕರನ್ನು ಆಕರ್ಷಿಸುತ್ತಿವೆ. ಈ ನಿಟ್ಟಿನಲ್ಲಿ ಗಮನ ನೀಡುವವರು ಯಾರು?
 -ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.