ಆಳಂದದಲ್ಲಿ ಶೂನ್ಯ ಸಾಧನೆ: ಸಿಇಒ ತರಾಟೆ
ಕನ್ನಡಪ್ರಭ ವಾರ್ತೆ, ಆಳಂದ, ಜು.3
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನಗತ್ಯವಾಗಿ ಹೆಚ್ಚುವರಿ ಸಿಬ್ಬಂದಿಯಿದ್ದರೆ ಅಂತವರನ್ನು ನಿರ್ದಾಕ್ಷಿಣ್ಯವಾಗಿ ತೆಗೆದು ಹಾಕುವ ಅಧಿಕಾರ ಗ್ರಾಮ ಪಂಚಾಯಿತಿಗೆ ಇದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಲ್ಲವಿ ಆಕುರಾತಿ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರಿಗೆ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ವಿ.ಕೆ.ಸಲಗರ ಗ್ರಾಪಂ ಅಧ್ಯಕ್ಷರು ಮಾತನಾಡಿ, ಹೆಚ್ಚುವರಿ ಹಾಗೂ ವಯೋವುತಿ ಮೀರಿದವರು ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕರ ವಸೂಲಿ ಕಷ್ಟವಾಗಿದ್ದು, ಬಂದ ಅನುದಾನ ಸಿಬ್ಬಂದಿ ಸಂಬಳಕ್ಕೆ ಹೋದರೆ ಇನ್ನಿತರ ಅಭಿವೃದ್ಧಿ ಹೇಗೆ ಮಾಡಬೇಕು ಎಂದಾಗ ಸಿಇಒ ಅವರು, ಕಾಯಂ ಸಿಬ್ಬಂದಿಗೆ ಮಾತ್ರ ಮುಂದುವರೆಸಿ ಹೆಚ್ಚುವರಿ ಅಥವಾ ಅನಗತ್ಯ ಜಿಪಂ ಅನುಮೋದನೆಯಿಲ್ಲದ ಸಿಬ್ಬಂದಿಯಿದ್ದರೆ ತೆಗೆದು ಹಾಕಬೇಕು ಎಂದರು.
ಕ್ರಮಕ್ಕೆ ಅಧಿಕಾರಿಗಳು ಮುಂದಾಗಲಿ: ಇಂಥ ಸಮಸ್ಯೆಗಳಿರುವ ಕಡೆ ಕ್ರಮ ಕೈಗೊಳ್ಳಲು ಅಭಿವೃದ್ಧಿ ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ಇಲಾಖೆಯಿಂದ ನಮೂನೆ ಮಾದರಿಯಲ್ಲಿ ಮಾಹಿತಿ ಕೇಳಿ ಅವರನ್ನು ತೆಗೆದು ಹಾಕಲಾಗುವುದು ಎಂದು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಡಿ 2013ರ ಏ.1ರಿಂದ ಜೂನ್ ಅಂತ್ಯದವರೆಗಿನ ಮೂರು ತಿಂಗಳ ಯಾವುದೇ ಖರ್ಚು ಮಾಡಿಲ್ಲ ಎಂದು ಸಿಡಿಮಿಡಿಗೊಂಡರು. ಗ್ರಾಮ ಸಭೆ, ವಾರ್ಡ್ ಸಭೆ ಮತ್ತು ಸಾಮಾನ್ಯ ಸಭೆಯ ನಡಾವಳಿಗಳು ಮತ್ತು ಜಮಾಬಂದಿ ವರದಿ ಹಾಗೂ ಪಂಚಾಯಿತಿ ಸ್ಥಾಯಿ ಸಮಿತಿ ರಚನೆಯ ವಿವರ ಸೇರಿ ಇನ್ನಿತರ ಎಲ್ಲ ಕ್ರಿಯಾಯೋಜನೆಯ ಕುರಿತು ಪಂಚತಂತ್ರದಲ್ಲಿ ಕಡ್ಡಾಯವಾಗಿ ಅಳವಡಿಸಬೇಕು ಎಂದರು.
2 ತಿಂಗಳಿಗೊಮ್ಮೆ ಸಭೆ ಕಡ್ಡಾಯ; ಕಡ್ಡಾಯವಾಗಿ ಪ್ರತಿ 2 ತಿಂಗಳಿಗೊಮ್ಮೆ ಪಂಚಾಯಿತಿ ಸಾಮಾನ್ಯ ಸಭೆ ನಡೆಸಬೇಕು. ಸರ್ಕಾರದ ಸುತ್ತೋಲೆಯಂತೆ ಗ್ರಾಮಸಭೆ ನಡೆಸಬೇಕು. ಈ ಸಭೆ ನಡೆಸಲು ನಿರ್ಲಕ್ಷ್ಯ ತೋರಿದರೆ ಅಧ್ಯಕ್ಷರನ್ನು ವಜಾಗೊಳಿಸಿ ಪಿಡಿಒ ಅವರನ್ನು ಅಮಾನತುಗೊಳಿಸಲಾಗುವುದು ಎಂದು ಉಪ ಕಾರ್ಯದರ್ಶಿ ವಸಂತ ಕುಲಕರ್ಣಿ ಎಚ್ಚರಿಸಿದರು.
ಶೇ.15ರಷ್ಟು ಕರ ವಸೂಲಿ ಗುರಿಯಲ್ಲಿ ಕೇವಲ ಶೇ.7ರಷ್ಟು ಗುರಿ ಸಾಧಿಸಲಾಗಿದೆ. ಬರುವ ಜು.20ರೊಳಗೆ ಗುರಿ ತಲುಪದಿದ್ದಲ್ಲಿ ಕ್ರಮ ಅನಿವಾರ್ಯ. 39 ಗ್ರಾಪಂ ಪೈಕಿ ಸರಸಂಬಾ ಸೇರಿ ಬೆರಳೆಣಿಕೆಯಷ್ಟೇ ಪಂಚಾಯಿತಿಗಳು ಕರ ವಸೂಲಿಯಲ್ಲಿ ಯಶಸ್ವಿಯಾಗಿವೆ ಎಂದು ಪಿಡಿಒಗಳಿಗೆ ತರಾಟೆಗೆ ತೆಗೆದುಗೊಂಡರು.
ಕ್ರಿಯಾಯೋಜನೆ ಸಿದ್ಧಪಡಿಸಿ: ಬೆಳಮಗಿ, ಕೊಡಲಂಗರಗಾ ಇತರ ಗ್ರಾಪಂ.ಗಳಲ್ಲಿ ಕರವಸೂಲಿ ಹಿನ್ನಡೆಗೆ ತರಾಟೆಗೆ ತೆಗೆದುಕೊಳ್ಳಲಾಯಿತು. 13ನೇ ಹಣಕಾಸು ಅಡಿಯಲ್ಲಿ ಅಗತ್ಯವಿರುವ ಶಾಲೆಗಳಿಗೆ ಪೀಠೋಪಕರಣ, ನೀರು ಮತ್ತು ರಸ್ತೆ ನಿರ್ಮಾಣಕ್ಕೆ ಹಣ ಬಳಿಸಿಕೊಳ್ಳುವ ಕುರಿತು ತಕ್ಷಣವೇ ಕ್ರಿಯಾಯೋಜನೆ ಸಿದ್ಧಪಡಿಸಿ ಪಟ್ಟಿ ಸಲ್ಲಿಸಬೇಕು ಎಂದರು.
ಮುಖ್ಯ ಯೋಜನಾಧಿಕಾರಿ ವಿರೂಪಾಕ್ಷಪ್ಪ, ಲೆಕ್ಕ ವಿಭಾಗದ ಹೊನ್ನಲಿಂಗಪ್ಪ, ಇಒ ಅಬ್ದುಲ್ ಸಲಾಂ, ವ್ಯವಸ್ಥಾಪಕ ಬಸವರಾಜ ಪಾಟೀಲ್, ಯೋಜನಾಧಿಕಾರಿ ಗುರುನಾಥ ಗೌಡಪ್ಪನವರ್ ಸೇರಿದಂತೆ ವಿವಿಧ ಗ್ರಾಪಂ ಪಿಡಿಒ, ಅಧ್ಯಕ್ಷರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

