ಗುಲ್ಬರ್ಗಾ

ತಹಸೀಲ್ದಾರ್ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಜು.3
ಜಿಲ್ಲಾಡಳಿತ ಜಪ್ತಿ ಮಾಡಿರುವ ಮರಳನ್ನು ಗುಲ್ಬರ್ಗ ತಹಸೀಲ್ದಾರರು ಅಕ್ರಮವಾಗಿ ಕದ್ದು ಮುಚ್ಚಿ ಮರಳು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಮರಳು ಸಾಗಾಣಿಕೆ ಲಾರಿ, ಟಿಪ್ಪರ್ ಮಾಲೀಕರ ಸಂಘ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಕೂಡಲೇ ತಹಸೀಲ್ದಾರರನ್ನು ವಜಾ ಮಾಡಬೇಕು. ಜಪ್ತಿ ಮಾಡಿರುವ ಮರಳನ್ನು ಜಿಲ್ಲಾಡಳಿತ ಕೂಡಲೇ ರಾಯಲ್ಟಿ ಕಟ್ಟಿದ ಲಾರಿ ಮಾಲೀಕರಿಗೆ ಮರಳಿ ನೀಡಬೇಕೆಂದು ಲಾರಿ ಮಾಲೀಕರು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.
ಮರಳು ನೀತಿ ಪುನರ್ ಪರಿಶೀಲಿಸಿ: 2013- 14ನೇ ಸಾಲಿನಲ್ಲಿ ಮರಳು ಸಾಗಾಣಿಕೆ ನೀತಿಯನ್ನು ಸರಳೀಕರಣಗೊಳಿಸಬೇಕು. ನೂತನ ಮರಳು ನೀತಿ- 2011ನ್ನು ಪುನರ್ ಪರಿಶೀಲಿಸಬೇಕು. ಈ ಹಿಂದೆ 2011ಕ್ಕಿಂತ ಮುಂಚಿನಂತೆ ಇರುವ ಮರಳು ಸಾಗಾಣಿಕೆ ಕಾನೂನು ನೀತಿ ನಿಯಮಾವಳಿಗಳ ಅನುಷ್ಠಾನಕ್ಕೆ ಏಕಗವಾಕ್ಷಿ ಪ್ರತ್ಯೇಕ ಇಲಾಖೆ(ಭೂ ವಿಜ್ಞಾನ ಮತ್ತು ಗಣಿ ಇಲಾಖೆ) ರಚನೆ ಮಾಡಬೇಕೆಂದು ಒತ್ತಾಯಿಸಿದರು.
ಸರಳ ನೀತಿ ಜಾರಿಗೆ ಮನವಿ: ಮರಳು ಸಾಗಾಣಿಕೆಯನ್ನು ಪುನಾರಂಭಿಸಲು ಜಿಲ್ಲಾಡಳಿತ ಸಹಾನುಭೂತಿಯಿಂದ ಪರಿಗಣಿಸಬೇಕು. ಮರಳು ಟೆಂಡರ್ ದಾರಿಕೆಯನ್ನು ಭೂ ವಿಜ್ಞಾನ ಮತ್ತು ಗಣಿ ಇಲಾಖೆ ವ್ಯಾಪ್ತಿಯಲ್ಲಿ ಟೆಂಡರ್ ಕರೆದು ಆಯಾ ಸಾಲಿನ ಆರ್ಥಿಕ ರಾಯಲ್ಟಿಯನ್ನು ಏಕಗವಾಕ್ಷಿ ಮೂಲಕ ಪಡೆದು ಮರಳು ಸಾಗಾಣಿಕೆಗೆ ಸರಳ ನೀತಿಯನ್ನು ಜಾರಿಗೊಳಿಸಬೇಕೆಂದು ಮನವಿ ಮಾಡಿದರು.
ನಗರದಲ್ಲಿ ಮರಳು ಸಾಗಾಣಿಕೆ ಮಾಡುವ ಲಾರಿ, ಟಿಪ್ಪರ್ ಇತರೆ ವಾಹನಗಳ ತಂಗುದಾಣ ಸ್ಥಳ ನಿರ್ಮಿಸಬೇಕು. ಕನಿಷ್ಠ 10 ಎಕರೆ ಸರ್ಕಾರಿ ಜಮೀನು ಸ್ಥಳಾವಕಾಶ ನೀಡಬೇಕು. ಮರಳು ಸಾಗಾಣಿಕೆ ನಿರ್ಬಂಧ ಮಾಡಿರುವುದರಿಂದ ಚಿಕ್ಕ ಮನೆ, ಕಟ್ಟಡ ನಿರ್ಮಾಣದ ಎಲ್ಲ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಸಹಸ್ರಾರು ಕಾರ್ಮಿಕರು ಉದ್ಯೋಗವಿಲ್ಲದೆ ಬದುಕು ಕಷ್ಟವಾಗಿದೆ.
ಏಕಗವಾಕ್ಷಿ ಪ್ರತ್ಯೇಕ ಇಲಾಖೆ ರಚಿಸಿ: ಆದ್ದರಿಂದ ಶೀಘ್ರದಲ್ಲಿ 2013- 14ನೇ ಸಾಲಿನ ಬಜೆಟ್ ಮರಳು ಸಾಗಾಣಿಕೆ ಸರಳ ನೀತಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಮತ್ತು ಮರಳು ಸಾಗಾಣಿಕೆಗೆ ಏಕಗವಾಕ್ಷಿ ಪ್ರತ್ಯೇಕ ಇಲಾಖೆ ರಚನೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಲ್ಲಿನಾಥ ಬಾಗಿಲಮನಿ ಹಾಗರಗಿ, ರಾಮಯ್ಯ ಜನಿವಾರ, ಬಿ.ಎಂ. ರವಿಕುಮಾರ್, ವೆಂಕಣ್ಣಗೌಡ ಆಲೂರ್, ಮಹೆಬೂಬಸಾಬ್ ಮೊರಟಗಿ, ಮಹ್ಮದ್ ಜಿಲಾನಿ ಮಡಿಕಿ, ರಾಜಕುಮಾರ್ ಟಿ. ದೇವಕರ್, ವೆಂಕಟೇಶ ಯಾದವ, ಬಿ.ಎಂ. ರಾವೂರ, ಈರಣ್ಣ ಗುತ್ತೇದಾರ ಸೇರಿದಂತೆ ನೂರಾರು ಲಾರಿ ಮಾಲೀಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.