ಹಸಿರೀಕರಣಕ್ಕಾಗಿ ಅರಣ್ಯ ಪ್ರೋತ್ಸಾಹ ಯೋಜನೆ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಯಾದಗಿರಿ ಜು.5
ರೈತರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಗೆ ಅವರು ಬಯಸಿದ ಸಸಿಗಳನ್ನು ರಿಯಾಯತಿ ದರದಲ್ಲಿ ವಿತರಿಸಿ, ಅವರು ತಮ್ಮ ಜಮೀನಿನಲ್ಲಿ ಗಿಡ ಬೆಳೆಸಲು ಸರ್ಕಾರದಿಂದ ಪ್ರೋತ್ಸಾಹ ನೀಡುವ ವಿನೂತನ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಆರಂಭವಾಗಿದ್ದು, ಅರಣ್ಯೀಕರಣದ ಜತೆಗೆ ಇದು ಸಾರ್ವಜನಿಕರಿಗೆ ಆರ್ಥಿಕ ಲಾಭವನ್ನೂ ತಂದುಕೊಡಲಿದೆ.
ಅರಣ್ಯ ಇಲಾಖೆಯಿಂದ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ರಾಜ್ಯಾದ್ಯಂತ ಈ ಯೋಜನೆ ಎರಡು ವರ್ಷಗಳಿಂದ ಜಾರಿಯಲ್ಲಿದೆ. ಅರಣ್ಯೇತರ ಜಮೀನಿನಲ್ಲಿ ಗಿಡ ಮರಗಳನ್ನು ಬೆಳೆಸಿ ಹಸಿರು ಹೊದಿಕೆ ಪ್ರಮಾಣವನ್ನು ಹೆಚ್ಚಿಸುವುದು ಹಾಗೂ ರೈತರು ಇದರಿಂದ ಆದಾಯ ಗಳಿಸುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಇದರಲ್ಲಿ ಭಾಗವಹಿಸಲು ಇಚ್ಛಿಸುವವರು ಹೆಸರನ್ನು ನೋಂದಾಯಿಸಿಕೊಂಡು ರಿಯಾಯಿತಿ ದರದಲ್ಲಿ ಸಸಿಗಳನ್ನು ಸರ್ಕಾರಿ ಸಸ್ಯಕ್ಷೇತ್ರಗಳಿಂದ ಪಡೆಯಬೇಕು. ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದಲ್ಲಿ ಪ್ರತಿ ಬದುಕುಳಿದ ಸಸಿಗೆ ಸರ್ಕಾರದಿಂದ ಪ್ರೋತ್ಸಾಹಧನ ಸಿಗಲಿದೆ.
ಬೇಕಾದ ಸಸಿ ನೆಡಬಹುದು: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಸುಮಾರು 1 ಲಕ್ಷ ಸಸಿಗಳನ್ನು ನೀಡಲಾಗುತ್ತಿದೆ. ರಿಯಾಯಿತಿ ದರ ಪಾವತಿಸಿ ಲಭ್ಯವಿರುವ ಯಾವ ಜಾತಿಯ ಎಷ್ಟು ಸಸಿಯನ್ನಾದರೂ ಪಡೆಯಬಹುದು. ವಿವಿಧ ಅಳತೆಯ ಪಾಲಿಥಿನ್ ಚೀಲದಲ್ಲಿ ಬೆಳೆದ ಸಸಿಗಳು 1, 3 ಹಾಗೂ 5ರಂತೆ ರಿಯಾಯತಿ ದರದಲ್ಲಿ ವಿತರಣೆ ಮಾಡಲಾಗುತ್ತದೆ. ಸಸಿಗಳನ್ನು ಸಮೀಪದ ಅರಣ್ಯ ಇಲಾಖೆ ನರ್ಸರಿಗಳಿಂದ ಪಡೆಯಬಹುದು.
ಪ್ರೋತ್ಸಾಹಧನ ಲಭ್ಯ: ಬದುಕುಳಿದ ಪ್ರತಿ ಸಸಿಗೆ ಮೊದಲನೇ ವರ್ಷದ ಅಂತ್ಯದಲ್ಲಿ 10, 2ನೇ ವರ್ಷಾಂತ್ಯದಲ್ಲಿ 15 ಹಾಗೂ 3ನೇ ವರ್ಷದ ಅಂತ್ಯದಲ್ಲಿ 20 ಪ್ರೋತ್ಸಾಹಧನ ನೀಡಲಾಗುತ್ತದೆ. ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಗರಿಷ್ಠ 400 ಸಸಿಗಳಿಗೆ ಸಹಾಯಧನ ಸಿಗುತ್ತದೆ. ಸಸಿ ನೆಟ್ಟ ಮರು ವರ್ಷದ ಜೂನ್ ತಿಂಗಳಲ್ಲಿ ಬದುಕುಳಿದ ಸಸಿಗಳನ್ನು ಲೆಕ್ಕಹಾಕಿ ಪ್ರೋತ್ಸಾಹಧನ ನೀಡಲಾಗುತ್ತದೆ.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ವಿವಿಧ ಜಾತಿಯ ಸಸಿಗಳನ್ನು ಈ ಯೋಜನೆಯಡಿ ವಿತರಣೆ ಮಾಡುವ ಗುರಿಯನ್ನು ಅರಣ್ಯ ಇಲಾಖೆ ಹೊಂದಿದೆ. 10 ಸಾವಿರ ಸಾಗುವಾನಿ, 15 ಸಾವಿರ ಬೇವು, 10 ಸಾವಿರ ಹೊಂಗೆ ಸಸಿಗಳನ್ನು ಯಾದಗಿರಿ ವಲಯದಲ್ಲಿ ವಿತರಿಸಲಾಗುತ್ತಿದೆ. ಸುರಪುರ ವಲಯದಲ್ಲಿ 8 ಸಾವಿರ ಕರಿಬೇವು, 8 ಸಾವಿರ ನುಗ್ಗೆ, 11 ಸಾವಿರ ಹೊಂಗೆ, 5 ಸಾವಿರ ನೇರಳೆ ಸಸಿಗಳನ್ನು ನೀಡಲಾಗುತ್ತಿದೆ.
ಎನ್ಜಿಒ ನೇಮಕ: ಪ್ರಸಕ್ತ ವರ್ಷದಿಂದ ಎನ್ಜಿಒ ಮೂಲಕವೂ ಸಾರ್ವಜನಿಕರಿಗೆ ಸಸಿ ವಿತರಿಸುವ ಯೋಜನೆ ಆರಂಭವಾಗಿದೆ. ಇದರಲ್ಲಿ ಅರಣ್ಯ ಇಲಾಖೆಯಿಂದ ನೋಂದಾಯಿತ ಎನ್ಜಿಒಗಳು ಸಸಿಗಳನ್ನು ಪಡೆದು ಸಾರ್ವಜನಿಕರಿಗೆ ವಿತರಣೆ ಮಾಡಬೇಕು. ಸಾರ್ವಜನಿಕರಿಗೆ ವಿತರಣೆ ಮಾಡಿದ ಸಸಿಗಳ ಸಂಖ್ಯೆಯ ಆಧಾರದ ಮೇಲೆ ಎನ್ಜಿಒ ಅರಣ್ಯ ಇಲಾಖೆ ಪ್ರೋತ್ಸಾಹಧನ ನೀಡುತ್ತದೆ.
ಮೊದಲ ವರ್ಷ ಪ್ರತಿ ಸಸಿಗೆ 2 ನೀಡಲಾಗುತ್ತದೆ. ನಂತರ ಬದುಕುಳಿದ ಸಸಿಗಳಿಗೆ ಎರಡನೇ ವರ್ಷ ಪ್ರತಿ ಸಸಿಗೆ ತಲಾ 1ರಂತೆ ಎನ್ಜಿಒಗಳಿಗೆ ಸಂದಾಯವಾಗಲಿದೆ. ಹೀಗೆ ಪ್ರೋತ್ಸಾಹಧನ ನೀಡುವ ಮೂಲಕ ಅರಣ್ಯೀಕರಣಕ್ಕೆ ಪ್ರಾಶಸ್ತ್ಯ ನೀಡಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರಸಕ್ತ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಕನಿಷ್ಠ 1 ಲಕ್ಷ ಸಸಿಯನ್ನಾದರೂ ನೆಡುವ ಗುರಿ ಹೊಂದಲಾಗಿದೆ. ಮಳೆ ವಿಳಂಬದಿಂದ ಹಸಿರೀಕರಣ ಯೋಜನೆಗೆ ತೊಡಕಾಗಿದೆ. ಅಗತ್ಯವಿರುವಷ್ಟು ಸಸಿಗಳನ್ನು ಇಲಾಖೆ ಬೆಳೆಸಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ದೌಲತ್ ಹುಸೇನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

