ಬದುಕು ಕಟ್ಟಿಕೊಡುವ ಶಕ್ತಿ ಸಾಹಿತ್ಯಕ್ಕಿದೆ
ಸುರಪುರ: ಸಾಹಿತ್ಯ ರಚನೆ ಎಂದರೆ ಕೆಲಸವಿಲ್ಲದವರ ಚಟುವಟಿಕೆ ಎಂದು ಮೂಗು ಮುರಿಯುವವರೇ ಹೆಚ್ಚು. ಆದರೆ ಆದರ್ಶ ಬದುಕನ್ನು ಕಟ್ಟಿಕೊಡುವ ಸಾಮರ್ಥ್ಯ ಸಾಹಿತ್ಯಕ್ಕಿದೆ ಎಂದು ಸಾಹಿತಿ, ವಿಮರ್ಶಕ ಶ್ರೀನಿವಾಸ ಜಾಲವಾದಿ ಹೇಳಿದರು.
ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದಲ್ಲಿ ಶನಿವಾರ ಕಸಾಪ ತಾಲೂಕು ಘಟಕ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯದ ಗಂಧಗಾಳಿ ಇರದವರು ಜೀವನದಲ್ಲಿ ಬರುವ ಕೆಲ ಸಮಸ್ಯೆಗಳಿಗೆ ಹೆದರುತ್ತಾರೆ. ಪ್ರಸಂಗ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಇದನ್ನು ಅರಗಿಸಿಕೊಳ್ಳುವವರು ಮತ್ತು ಗೀಳು ಬೆಳಸಿಕೊಳ್ಳುವವರು ಧೈರ್ಯವಾಗಿ ಎದುರಿಸುತ್ತಾರೆ. ಸಾಹಿತ್ಯ ಬದುಕಿನ ಚಿಂತನೆಗಳನ್ನು ಕ್ಷಣ ಹೊತ್ತು ಮರೆಸಿ, ನಮ್ಮನ್ನು ಕಲ್ಪನಾ ಲೋಕಕ್ಕೆ ಕರೆದೊಯುತ್ತದೆ. ಸಾಹಿತ್ಯದಲ್ಲಿ ಸಿಗುವ ಆನಂದ ಬೇರೆ ಯಾವುದರಲ್ಲಿಯೂ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಇಂದಿನ ಯುವಕರು ಸಾಹಿತ್ಯದ ಒಲವು ಬೆಳಸಿಕೊಳ್ಳಬೇಕು ಎಂದು ಕರೆನೀಡಿದರು.
ಭಾಷೆ ಮೇಲೆ ಪ್ರಭುತ್ವ ಅಗತ್ಯ: ಸಾಹಿತ್ಯ ರಚನೆ ಮಾಡುವ ಮೊದಲು ಕವಿಯಾದವನು ಭಾಷೆಯ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಬೇಕು. ಶಬ್ದ ಸಂಗ್ರಹವಾದಾಗ ಸಾಹಿತ್ಯಕ್ಕೆ ಇನ್ನಷ್ಟು ಶಕ್ತಿ ಬರುತ್ತದೆ. ಕಾರಣ ಇಂದಿನ ಯುವಕರು ಹೆಚ್ಚು ಹೆಚ್ಚು ಕವಿತೆಗಳನ್ನು ಓದಬೇಕು. ಓದಿನಿಂದ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯುತ್ತದೆ. ಇದು ಮುಂದೆ ನಿಮ್ಮಲ್ಲಿ ಸಾಹಿತ್ಯದ ಗೀಳು ಬೆಳೆಸಿ ಕವಿಯನ್ನಾಗಿ ಮಾಡುತ್ತದೆ ಎಂದರು. ಸಮಾಜ ಪರಿವರ್ತನೆಯಾಗುವ ನಿಟ್ಟಿನಲ್ಲಿ ಸಾಹಿತ್ಯ ರಚನೆಯಾದಾಗ ಅದು ಬಹುಕಾಲ ಸಮಾಜದ ಮಧ್ಯ ಜೀವಂತ ಉಳಿಯುತ್ತದೆ. ಕಾರಣ ಸಾಹಿತಿಗಳು ಸೃಜನಶೀಲ ಸಾಹಿತ್ಯ ರಚನೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಚುಟುಕು ಸಾಹಿತಿ ನಾಗಪ್ಪ ತ್ರಿವೇದಿ, ಇಂದಿನ ಯುವಕರು ಕೆಟ್ಟ ಹವ್ಯಾಸಗಳಿಗೆ ಹೆಚ್ಚಿನ ಸಮಯ ನೀಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಸಾಹಿತ್ಯ ಅಭ್ಯಾಸ ಮಾಡುವುದನ್ನು ಚಟವಾಗಿ ಬೆಳಸಿಕೊಳ್ಳಬೇಕು. ದಿನಕಳೆದಂತೆ ಇದು ನಿಮ್ಮಲ್ಲಿ ಓದುವ ಹವ್ಯಾಸ ಹೆಚ್ಚಾಗಿ ಸಾಹಿತ್ಯದ ಒಲವು ತಾನಾಗಿಯೆ ಬೆಳೆಯುತ್ತದೆ. ಇದರಿಂದ ನಿಮ್ಮಲ್ಲಿ ಉತ್ತಮ ಸಂಸ್ಕಾರ ಬೆಳೆದು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬಾಳಲು ಸಾಧ್ಯವಾಗುತ್ತದೆ ಎಂದು ಯುವಕರಿಗೆ ಸಲಹೆ ನೀಡಿದರು.
ಯುವ ಜನತೆ ದಾರಿ ತಪ್ಪದಿರಲಿ: ಇಂದಿನ ಆಧುನಿಕತೆಯ ಟಿವಿ ಮಾಧ್ಯಮ ಮತ್ತು ಮೊಬೈಲ್ ಸಂದೇಶಗಳಿಂದ ಅನೇಕ ಯುವಕ, ಯುವತಿಯರು ಹಾದಿ ತಪ್ಪುತ್ತಿದ್ದಾರೆ. ಇದು ಕನ್ನಡದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕಾರಣ ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಮತ್ತು ಪಾಲಕರು ಇವುಗಳನ್ನು ಮಿತವಾಗಿ ಬಳಸಬೇಕು. ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವುದರಿಂದ ಅಭ್ಯಾಸಕ್ಕೂ ತೊಂದರೆಯಾಗುತ್ತದೆ. ಕಾರಣ ಮಕ್ಕಳಿಗೆ ಮೊಬೈಲ್ ನೀಡುವ ಹವ್ಯಾಸ ಬಿಡಬೇಕು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪರಿಷತ್ ತಾಲೂಕಾಧ್ಯಕ್ಷ ಶಾಂತಪ್ಪ ಬೂದಿಹಾಳ, ಮಲ್ಲಿಕಾರ್ಜುನ ಸತ್ಯಂಪೇಟೆ, ಬಿಸಿಎನ್ ದೇಶಮುಖ್ ಇದ್ದರು. ಪ್ರಕಾಶ ಸ್ವಾಗತಿಸಿದರು. ಶರಣಬಸಪ್ಪ ಯಾಳವಾರ ನಿರೂಪಿಸಿದರು. ಸೋಮಶೇಖರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

