ರಾಣಿ ಚೆನ್ನಮ್ಮ ಹಾಸ್ಟೆಲ್ ಅವ್ಯವಸ್ಥೆ; ಜಾಧವ ಕಿಡಿ
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಜು.7
ತಾಲೂಕಿನ ಕೋಡ್ಲಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ವಸತಿ ನಿಲಯಕ್ಕೆ ಶಾಸಕ ಡಾ. ಉಮೇಶ ಜಾಧವ ಶನಿವಾರ ದಿಢೀರ್ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಕಂಡು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೋಡ್ಲಿ ಗ್ರಾಮದ ಕಿತ್ತೂರು ಚೆನ್ನಮ್ಮ ಶಾಲೆಯ ವಸತಿ ನಿಲಯವು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ವ್ಯಾಪ್ತಿಯಲ್ಲಿದ್ದು, ಶಾಸಕ ಡಾ. ಉಮೇಶ ಜಾಧವ ಶನಿವಾರ ಅಡುಗೆ ಕೋಣೆ, ಶಾಲೆ ಕೋಣೆ ಹಾಗೂ ಮಕ್ಕಳು ಮಲಗುವ ಕೋಣೆ(ಶೆಡ್) ಮುಂತಾದವುಗಳನ್ನು ಪರಿಶೀಲನೆ ನಡೆಸಿದರು. ಅಲ್ಲಿನ ವಿದ್ಯಾರ್ಥಿಗಳು, 'ನಮಗೆ ಸರಿಯಾಗಿ ಊಟ ಕೊಡುವುದಿಲ್ಲ, ಎಣ್ಣೆ, ಸಾಬೂನು, ಟೂಥ್ಪೇಸ್ಟ್ ನೀಡುವುದಿಲ್ಲ. ಊಟ ಮಾಡಬೇಕೆಂದರೆ ತಟ್ಟೆಗಳಿಲ್ಲ, ನೀರು ಕುಡಿಯಲು ಗ್ಲಾಸ್ಗಳಿಲ್ಲ, ಸ್ನಾನಕ್ಕೆ ಬಿಸಿ ನೀರಿಲ್ಲ' ಎಂದು ಗೋಳು ತೋಡಿಕೊಂಡರು.
ಸಮಸ್ಯೆಗಳ ಸರಮಾಲೆ: 'ಶೌಚಾಲಯವಿಲ್ಲದೆ ಬಯಲಿಗೆ ಹೋಗಬೇಕಾಗಿದೆ. ಹೊಲಗಳಲ್ಲಿ ಬಹಿರ್ದೆಸೆಗೆ ಹೋದರೆ ಹೊಲದ ಮಾಲೀಕರು ಬೈಯುತ್ತಾರೆ. ನಾವು ಮಲಗುವ ಕೋಣೆ ದನಗಳ ಕೊಟ್ಟಿಗೆಯಾಗಿದೆ. ದೀಪಗಳಿಲ್ಲ, ನೆಲದ ಹಾಸಿಗೆಗಳಿಲ್ಲ, ಮಂಚಗಳಿಲ್ಲ, ಮಳೆಗಾಲದಲ್ಲಿ ಸೋರುತ್ತವೆ. ಚಳಿಗಾಲದಲ್ಲಿ ಇಂತಹ ಸಮಸ್ಯೆಗಳಲ್ಲಿ ಹೇಗೆ ಇದ್ದು ವಿದ್ಯಾಭ್ಯಾಸ ಮಾಡಬೇಕ್ರಿ' ಎಂದು ಬಾಲಕಿಯೊಬ್ಬಳು ಶಾಸಕರಿಗೆ ಪ್ರಶ್ನಿಸಿದಳು.
ಕೋಡ್ಲಿ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ವಸತಿ ನಿಲಯವು 2009ರಲ್ಲಿ ಪ್ರಾರಂಭಗೊಂಡಿದೆ. 6ರಿಂದ 10ನೇ ತರಗತಿವರೆಗೆ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 220 ಇದೆ. ಊಟದ ತಟ್ಟೆಗಳು ಕೇವಲ 75 ಇವೆ. ಗ್ಲಾಸ್ಗಳಿಲ್ಲ, ಅಡುಗೆ ಸಾಮಗ್ರಿಗಳು ತುಂಬಾ ಹಳೆಯದಾಗಿವೆ. ಚಮಚ, ಇನ್ನಿತರ ಸಾಮಗ್ರಿಗಳಿಲ್ಲ, ಹೀಗಾಗಿ ಕೈ ಸುಟ್ಟುಕೊಳ್ಳಬೇಕಾಗಿದೆ ಎಂದು ಅಡುಗೆ ಸಹಾಯಕಿಯೊಬ್ಬಳು ಶಾಸಕರಿಗೆ ಕೈ ತೋರಿಸಿದಳು.
ಪ್ರಾಚಾರ್ಯರನ್ನು ಅಮಾನತುಗೊಳಿಸಿ: ವಸತಿ ನಿಲಯದ ಪ್ರಾಚಾರ್ಯರು ನಮಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಏನಾದರೂ ಕೇಳಿದರೆ ಗದರಿಸುತ್ತಾರೆಂದು ವಸತಿ ನಿಲಯದ ಮೇಲ್ವಿಚಾರಕಿ ಶೈಲಜಾ ಕಟ್ಟಿಮನಿ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀದೇವಿ ಶಾಸಕರಿಗೆ ದೂರಿದರು.
ವಸತಿ ನಿಲಯದಲ್ಲಿ ಗಬ್ಬು ವಾಸನೆ, ಕಳಪೆ ಮಟ್ಟದ ಊಟ ಮತ್ತು ನಿರ್ಲಕ್ಷ್ಯತನ ಹಾಗೂ ಮಕ್ಕಳ ಬಗ್ಗೆ ಕಾಳಜಿ ವಹಿಸದ ಪ್ರಾಚಾರ್ಯರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಶಾಸಕ ಡಾ. ಉಮೇಶ ಜಾಧವ ಅವರು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ದೂರವಾಣಿ ಮೂಲಕ ತಿಳಿಸಿದರು.
ಮಕ್ಕಳಿಗೆ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಬೇರೆ ಖಾಸಗಿ ಮನೆಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮೇಲ್ವಿಚಾರಕರಿಗೆ ಶಾಸಕರು ಎಚ್ಚರಿಕೆ ನೀಡಿದರು. ಗೌರಿಶಂಕರ ಉಪ್ಪಿನ, ಮಾರುತಿ, ಶಿವರಾಜ ಬುಬಲಿ, ಅಲೀಮ ನಾಯ್ಕೋಡಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

