ಅರ್ಧಕ್ಕೆ ನಿಂತ ಅಂಗನವಾಡಿ ಕಟ್ಟಡ ಈಗ ಶೌಚಾಲಯ...
ಗುಲ್ಬರ್ಗ: ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದಲ್ಲಿ ಕೊಂಚೂರ ರಸ್ತೆಯಲ್ಲಿ ಅಂಗನವಾಡಿ ಕೇಂದ್ರಕ್ಕಾಗಿ ನಿರ್ಮಿಸುತ್ತಿರುವ ಕಟ್ಟಡ ಹಲವು ವರ್ಷಗಳಿಂದ ಪೂರ್ಣಗೊಳ್ಳದೆ ಇದ್ದುದರಿಂದ ಈಗ ಅದು ಸಾರ್ವಜನಿಕ ಶೌಚಾಲಯವಾಗಿ ಮಾರ್ಪಟ್ಟಿದೆ.ಗ್ರಾಮದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಲ್ಲದೆ ಇದ್ದರು, ಆಹಾರ ಧಾನ್ಯ ಮಾತ್ರ ಸರಿಯಾಗಿ ವಿತರಣೆಯಾಗುತ್ತಿದೆ.
ನಿರ್ಲಕ್ಷ್ಯವೇ ಕಾರಣ: ಗ್ರಾಮದ ಹೊರವಲಯದಲ್ಲಿ 2008- 09ನೇ ಸಾಲಿನಲ್ಲಿ ತಾಲೂಕು ಪಂಚಾಯ್ತಿ ವತಿಯಿಂದ ಅಂಗನವಾಡಿ ಕೇಂದ್ರ ನಿರ್ಮಿಸಲು ಕಟ್ಟಡ ಕಾಮಗಾರಿ ಕೈಗೊಳ್ಳಲಾಯಿತು. ಆದರೆ, ಗುತ್ತಿಗೆದಾರರು ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸದೆ ಇದ್ದು, ಕಟ್ಟಡಕ್ಕೆ ಕಿಟಕಿ, ಬಾಗಿಲುಗಳನ್ನು ಅಳವಡಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಕಾಮಗಾರಿ ಅಪೂರ್ಣಗೊಂಡಿದೆ.ಕಟ್ಟಡದ ಸುತ್ತಲು ಮುಳ್ಳು ಕಂಟಿಗಳು ಬೆಳೆದು ನಿಂತಿದೆ. ಇದರಿಂದ ಗ್ರಾಮದ ಹೊರ ವಲಯದಲ್ಲಿರುವುದರಿಂದ ಸಾರ್ವಜನಿಕರು ಇದನ್ನು ಶೌಚಾಲಯವಾಗಿ ಮಾರ್ಪಡಿಸಿಕೊಂಡಿದ್ದಾರೆ. ಒಂದು ಮೂಲದ ಪ್ರಕಾರ ಗುತ್ತಿಗೆದಾರರು ಸದರಿ ಕಾಮಗಾರಿಯ ಸಂಪೂರ್ಣ ಬಿಲ್ಲನ್ನು ಎತ್ತಲಾಗಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ತಾಲೂಕು ಪಂಚಾಯತಿ ಅಧಿಕಾರಿಗಳು ಪರಿಶೀಲನೆ ನಡೆಸಬೇಕಾಗಿದೆ.ಮಕ್ಕಳೇ ಬರುವುದಿಲ್ಲ: ಕಟ್ಟಡದ ಸ್ಥಿತಿ ಇದಾದರೆ, 2011-12ರಲ್ಲಿ ಚಿತ್ತಾಪುರ ಶಿಶು ಅಭಿವೃದ್ಧಿ ಅಧಿಕಾರಿಗಳು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ನೀಡಿದ ಮಾಹಿತಿ ಪ್ರಕಾರ ಗ್ರಾಮದಲ್ಲಿ ಒಟ್ಟು 10 ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ ಕೇವಲ ನಾಲ್ಕು ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡವಿದೆ. ಉಳಿದ ಕೇಂದ್ರಗಳು ಬಾಡಿಗೆ ಮನೆಯಲ್ಲಿ ನಡೆಸಲಾಗುತ್ತಿದೆ. ಕೆಲ ಕೇಂದ್ರಗಳಲ್ಲಿ ಕೇವಲ 10 ರಿಂದ 15 ಮಕ್ಕಳು ಮಾತ್ರ ಇದ್ದು, ಅವುಗಳಲ್ಲಿ ಕೆಲ ಕೇಂದ್ರಗಳಿಗೆ ಮಕ್ಕಳೇ ಬರುವುದಿಲ್ಲ ಎನ್ನಲಾಗಿದೆ.ಆದರೆ, ಶಿಶು ಅಭಿವೃದ್ಧಿ ಇಲಾಖೆ ಪೂರೈಸುವ ಎಆರ್ಇಎಫ್, ಇಎಫ್, ಆಹಾರ ಸಾಮಗ್ರಿಗಳು ಮಾತ್ರ ಸರಿಯಾಗಿ ಪೂರೈಕೆಯಾಗುತ್ತಿದ್ದು, ಮಕ್ಕಳಿಗೆ ಮಾತ್ರ ಅವುಗಳು ತಲುಪುತ್ತಿಲ್ಲ. ಆ ಧಾನ್ಯಗಳು ಎಲ್ಲಿಗೆ ಹೋಗುತ್ತಿವೆ ಎನ್ನುವ ಕುರಿತು ಜಿಲ್ಲಾ ಶಿಶು ಅಭಿವೃದ್ಧಿ ಇಲಾಖೆ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

