ಇನ್ಮುಂದೆ ವಾಹನ ಮಾಲೀಕರ ಜೇಬಿಗೆ ಕತ್ತರಿ
ಕನ್ನಡಪ್ರಭ ವಾರ್ತೆ ಯಾದಗಿರಿ ಜು.15
ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಜವಳಿ ಪಾರ್ಕ್ ಸ್ಥಾಪನೆ ಬಗ್ಗೆ ಮುಂಗಡಪತ್ರದಲ್ಲಿ ಘೋಷಣೆ ಮಾಡಿದ್ದನ್ನೇ ದೊಡ್ಡ ಪ್ರಚಾರ ಮಾಡುತ್ತಿರುವ ಸರ್ಕಾರ, ಜಿಲ್ಲೆಯ ವಾಹನ ಸವಾರರ ಜೇಬಿಗೆ ಸದ್ದಿಲ್ಲದೇ ಕತ್ತರಿ ಹಾಕುತ್ತಿರುವುದನ್ನು ಮಾತ್ರ ಎಲ್ಲೂ ಹೇಳುತ್ತಿಲ್ಲ. ಈಚೆಗೆ ಸಿದ್ದರಾಮಯ್ಯ ಮಂಡಿಸಿದ ಬಜೆಟ್ನಲ್ಲಿ ಇಂಥ ಆತಂಕಗೊಳ್ಳುವ ಅಂಶ ಬಹಿರಂಗವಾಗಿದೆ. ಜಿಲ್ಲೆಯ ಜನರಿಗೆ ಸದ್ದಿಲ್ಲದೇ ಬರೆ ಎಳೆಯಲು ಸರ್ಕಾರ ಮುಂದಾಗಿದೆ.
ಹೌದು. ಜಿಲ್ಲೆಯಲ್ಲಿ ಹಾದುಹೋಗುವ ಮೂರು ರಾಜ್ಯ ಹೆದ್ದಾರಿಗಳನ್ನು 10 ವರ್ಷಗಳ ಅವಧಿಗೆ ಟೋಲ್ ಸಂಗ್ರಹಣೆ ಆಧಾರದಲ್ಲಿ ಗುತ್ತಿಗೆ ನೀಡುತ್ತಿರುವ ಅಂಶ ಇದೇ ಬಜೆಟ್ನಲ್ಲಿ ಸೇರಿದೆ. ಯಾದಗಿರಿಯಿಂದ ಆಂಧ್ರಪ್ರದೇಶ ಗಡಿಯವರೆಗೆ, ಆಂಧ್ರಪ್ರದೇಶ ಗಡಿಯಿಂದ ಶಹಾಪುರದವರೆಗೆ ಹಾಗೂ ಶಹಾಪುರ ತಾಲೂಕಿನ ಹತ್ತಿಗೂಡೂರಿನಿಂದ ಬೀದರ್ ಸಂಪರ್ಕಿಸುವ ರಾಜ್ಯ ಹೆದ್ದಾರಿಗೆ ಟೋಲ್ ಸಂಗ್ರಹಣೆಗೆ ಅವಕಾಶ ನೀಡುವ ನಿರ್ಧಾರವನ್ನು ಸರ್ಕಾರ ಮುಂಗಡಪತ್ರದಲ್ಲಿ ಘೋಷಿಸಿದೆ.
ಗುತ್ತಿಗೆ ಆಧಾರದಲ್ಲಿ: ಜಿಲ್ಲೆಯ ಮೂಲಕ ಹಾದುಹೋಗಿರುವ ಈ 3 ಹೆದ್ದಾರಿಗಳನ್ನು ಯೂಸರ್ ಫೀ ಟೋಲ್ ಆಧಾರದಲ್ಲಿ ಗುತ್ತಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಕಾರ್ಯಾಚರಣೆ, ನಿರ್ವಹಣೆ ಹಾಗೂ ಶುಲ್ಕ ಸಂಗ್ರಹಣೆ (ಒಎಂಟಿ) ಆಧಾರದಲ್ಲಿ ಜಿಲ್ಲೆಯಲ್ಲಿ ಹಾದುಹೋಗಿರುವ ಮೂರು ಹೆದ್ದಾರಿಗಳನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗುತ್ತಿದೆ. ಗುತ್ತಿಗೆ ಪಡೆದ ಸಂಸ್ಥೆಯವರೇ ರಸ್ತೆ ನಿರ್ವಹಣೆ ಮಾಡಿ, ನಿಗದಿಪಡಿಸಿದ ಶುಲ್ಕ ವಸೂಲಿ ಮಾಡುತ್ತಾರೆ.
ಶುಲ್ಕ ನೀಡಿ ಸಾಗಬೇಕು: ಸರ್ಕಾರದ ಈ ನಿರ್ಧಾರದಿಂದ ಇನ್ನು ಮುಂದೆ ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಸಾಗಲು ಶುಲ್ಕ ಪಾವತಿಸಬೇಕಾಗುತ್ತದೆ. ಈ ಹೆದ್ದಾರಿಗಳು ಸದ್ಯ ಉತ್ತಮ ಸ್ಥಿತಿಯಲ್ಲಿದ್ದರೂ ಅದನ್ನು ಖಾಸಗಿಯವರಿಗೆ ಗುತ್ತಿಗೆ ನೀಡುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ದ್ವಿಚಕ್ರ ವಾಹನ, ಕಾರು, ಆಟೋರಿಕ್ಷಾ, ಲಾರಿ ಸೇರಿದಂತೆ ಎಲ್ಲಾ ವಿಧದ ವಾಹನಗಳು ಶುಲ್ಕ ಪಾವತಿಸಿಯೇ ಸಂಚರಿಸಬೇಕು. ಇದು ಹಿಂದುಳಿದ ಹಾಗೂ ಬಡವರೇ ಹೆಚ್ಚಾಗಿರುವ ಈ ಜಿಲ್ಲೆಯ ಜನರಿಗೆ ಮತ್ತಷ್ಟು ಹೊರೆಯಾಗುವುದರಲ್ಲಿ ಸಂಶಯವಿಲ್ಲ. ರಾಜ್ಯ ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುವ ಎಲ್ಲ ಸಾಧ್ಯತೆಗಳಿವೆ.
ಜನವಿರೋಧಿ ಕ್ರಮ: ಸಾರ್ವಜನಿಕರ ಅಭಿಪ್ರಾಯ ಪಡೆಯದೇ ಸರ್ಕಾರ ಏಕಾಏಕಿಯಾಗಿ ಜಿಲ್ಲೆಯಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸಲು ಮುಂದಾಗಿರುವುದು ಸರಿಯಲ್ಲ. ಇದು ಜನವಿರೋಧಿ ನೀತಿಯಾಗಿದ್ದು, ಹಿಂದುಳಿದ ಈ ಭಾಗಕ್ಕೆ ಸರ್ಕಾರ ಮಾಡುತ್ತಿರುವ ಅನ್ಯಾಯವಾಗಿದೆ. ಆದ್ದರಿಂದ ಟೋಲ್ ಸಂಗ್ರಹ ನಿರ್ಧಾರವನ್ನು ಸರ್ಕಾರ ಕೈಬಿಡದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಎಚ್ಚರಿಸಿದ್ದಾರೆ.
ಈ ರೀತಿ ಖಾಸಗಿಯವರಿಗೆ ರಸ್ತೆ ಅಡವಿಡುವ ಬದಲು ಸರ್ಕಾರವೇ ನಿರ್ವಹಣೆ ಮಾಡಲು ಮುಂದಾಗಬೇಕು. ಒಂದು ವೇಳೆ ಗುತ್ತಿಗೆ ನೀಡುವುದಿದ್ದರೂ ಸ್ಥಳೀಯರಿಗೆ ಶುಲ್ಕ ಸಂಗ್ರಹಣೆಯಿಂದ ವಿನಾಯತಿ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
- ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

