ಕಾಲೇಜು ದುರಸ್ತಿ ಕಾಮಗಾರಿಗೆ ರು. 50 ಲಕ್ಷ
ಕ.ಪ್ರ.ವಾರ್ತೆ ಯಾದಗಿರಿ ಜು.15
ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಇಲ್ಲಿಯ ಸರ್ಕಾರಿ ಪದವಿ ಮಹಾವಿದ್ಯಾಲಯದ ದುರಸ್ತಿ ಕಾಮಗಾರಿಗೆ ಸರ್ಕಾರ ರು. 50 ಲಕ್ಷ ಅನುದಾನ ಬಿಡುಗಡೆ ಮಾಡಿ ಆದೇಶಿಸಿದೆ.
ಕಾಲೇಜು ಕಟ್ಟಡ ದುರಸ್ತಿ ಹಾಗೂ ಇನ್ನಿತರ ಅಗತ್ಯ ಕಾಮಗಾರಿ ಕೈಗೊಳ್ಳಲು ರು. 50 ಲಕ್ಷ ಬಿಡುಗಡೆ ಮಾಡಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಾಮಗಾರಿಗಳ ಅನುಷ್ಠಾನಗಳ ಮೇಲುಸ್ತುವಾರಿ ನೋಡಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಜಿಲ್ಲಾಧಿಕಾರಿಯವರಿಗೆ ಜು.8ರಂದು ಪತ್ರ ಬರೆದಿದ್ದಾರೆ. ಇದರಿಂದ ಕಳೆದ ಅನೇಕ ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಪಟ್ಟು ಅವ್ಯವಸ್ಥೆಗಳ ಆಗರವಾಗಿದ್ದ ಇಲ್ಲಿಯ ಡಿಗ್ರಿ ಕಾಲೇಜು ಇನ್ನು ಅಭಿವೃದ್ಧಿ ಕಾಣುವ ಸಮಯ ಬಂದಿದೆ.
ಅಗತ್ಯ ಕಾಮಗಾರಿ ನಿರ್ವಹಣೆ: ಕಳೆದ ಜು.2ರಂದು ಕನ್ನಡಪ್ರಭ ಕಾಲೇಜಿನ ದುರವಸ್ಥೆ ಕುರಿತು ಕೋರ್ಟ್ ಆದೇಶವಿದ್ದರೂ ಕಾಲೇಜಿನತ್ತ ಸರ್ಕಾರದ ನಿರ್ಲಕ್ಷ್ಯ ಎಂಬ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ತಕ್ಷಣ ಅನುದಾನ ಬಿಡುಗಡೆ ಮಾಡಿದೆ. ಅನುದಾನ ಬಿಡುಗಡೆ ಮಾಡಿರುವ ಆದೇಶದ ಪ್ರತಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದೆ. ಈ ಕುರಿತು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಅವರನ್ನು ಕೇಳಿದಾಗ, ಬಿಡುಗಡೆಯಾಗಿರುವ ಅನುದಾನದಲ್ಲಿ ಕಾಲೇಜಿನಲ್ಲಿ ತುರ್ತು ಅಗತ್ಯ ಕಾಮಗಾರಿಗಳನ್ನು ನಿರ್ವಹಿಸಲಾಗುವುದು. ಲೋಕೋಪಯೋಗಿ ಇಲಾಖೆ ಮೂಲಕ ಶೀಘ್ರದಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲಾಗುವುದು. ತಾವೇ ಈ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವುದಾಗಿ ತಿಳಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ಸುಭಾಶ್ಚಂದ್ರ ಕೌಲಗಿ ಮಾತನಾಡಿ, ಕಾಲೇಜು ನೆಲ ಅಂತಸ್ತಿನಲ್ಲಿ ಅಳವಡಿಸಲಾಗಿದ್ದ ಕಲ್ಲುಹಾಸು ಕಿತ್ತು ಹೋಗಿವೆ. ಕೆಲ ಕೊಠಡಿಗಳಲ್ಲಿ ದೊಡ್ಡ ಬಿರುಕು ನಿರ್ಮಾಣವಾಗಿವೆ. ಅವುಗಳನ್ನೆಲ್ಲ ಸರಿಪಡಿಸುವುದು ತುರ್ತು ಅಗತ್ಯವಾಗಿದೆ. ಅಲ್ಲದೇ ಕುಡಿವ ನೀರು, ಕಾಂಪೌಂಡ್, ಸುಣ್ಣಬಣ್ಣ ಇತ್ಯಾದಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನ್ಯಾಯಮೂರ್ತಿಗಳ ದಿಗ್ಭ್ರಮೆ: ಕಳೆದ ಆಗಸ್ಟ್ ತಿಂಗಳಲ್ಲಿ ಕನ್ನಡಪ್ರಭದಲ್ಲಿ ಕಾಲೇಜಿನ ದುಸ್ಥಿತಿ ಕುರಿತು ಪ್ರಕಟವಾಗಿದ್ದ ಹಾವು ಚೇಳುಗಳಿರಬಹುದು ಹುಷಾರು... ಎಂಬ ವರದಿ ನೋಡಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಚ್.ಎನ್. ನಾಗಮೋಹನದಾಸ್ ಹಾಗೂ ಎಲ್.ನಾರಾಯಣಸ್ವಾಮಿ ಅವರು ಕಾಲೇಜಿಗೆ ಭೇಟಿ ನೀಡಿದ್ದರು. ಕಾಲೇಜಿನ ದುರವಸ್ಥೆ ಕಂಡು ನ್ಯಾಯಮೂರ್ತಿಗಳು ದಿಗ್ಭ್ರಮೆ ವ್ಯಕ್ತಪಡಿಸಿದ್ದರು. ನಂತರ ಕಾನೂನು ಸೇವಾ ಪ್ರಾಧಿಕಾರದಲ್ಲಿ ದೂರು ದಾಖಲಿಸಿಕೊಂಡು ಸರ್ಕಾರದ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ಸಂಬಂಧಪಟ್ಟ ಅಧಿಕಾರಗಳನ್ನು ನ್ಯಾಯಾಲಯಕ್ಕೆ ಎಳೆದಿದ್ದರು. ಆದರೆ ಕೋರ್ಟಿನಲ್ಲಿ ಸೌಲಭ್ಯ ಕಲ್ಪಿಸುವುದಾಗಿ ಹೇಳಿದ ಸರ್ಕಾರ ಮತ್ತೆ ಈ ಕಡೆ ತಿರುಗಿ ನೋಡಿರಲಿಲ್ಲ. ಆದರೆ ಈಗ ಸರ್ಕಾರ ಅಂತೂ ಎಚ್ಚೆತ್ತುಕೊಂಡು ಅನುದಾನ ಬಿಡುಗಡೆ ಮಾಡಿದೆ.
ಯುಜಿ, ಪಿಜಿಗೆ ಪ್ರವೇಶ: ಪದವಿ ಹಾಗೂ ಸ್ನಾತಕೋತ್ತರ ಕೇಂದ್ರಗಳನ್ನು ಒಳಗೊಂಡಿರುವ ಕಾಲೇಜಿಗೆ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಪದವಿ ತರಗತಿಗಳಿಗೆ ಸುಮಾರು 1 ಸಾವಿರ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿಭಾಗಕ್ಕೆ ಸುಮಾರು 350 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 90ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆಯೂ ನಡೆದಿದೆ. ಮೂಲಭೂತ ಸೌಕರ್ಯ ಹಾಗೂ ಕಟ್ಟಡ ದುರಸ್ತಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿರುವುದರಿಂದ ವಿದ್ಯಾರ್ಥಿಗಳು ಈ ವರ್ಷ ಹಾವು ಚೇಳುಗಳ ಅಂಜಿಕೆಯಿಲ್ಲದೇ ಪಾಠ ಕೇಳಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

