ಬ್ಯಾರೇಜ್ ಹಿನ್ನೀರು: ಹೂಳು ತೆಗೆಯಲು ಒತ್ತಾಯ
ಕ.ಪ್ರ. ವಾರ್ತೆ,ಯಾದಗಿರಿ, ಜು.16
ತಾಲೂಕಿನ ಗೂಡುರು ಹಿರೇನೂರನಲ್ಲಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಬ್ಯಾರೇಜ್ನ ಹಿನ್ನೀರು ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಹೂಳು ತುಂಬಿದ್ದು, ಇದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಜಿಲ್ಲಾಡಳಿತ ಕೂಡಲೇ ಹೂಳು ತೆಗೆಯಲು ಕ್ರಮ ಕೈಗೊಳ್ಳಬೇಕೆಂದು ಜಿಪಂ ಉಪಾಧ್ಯಕ್ಷ ಶರಣಿಕಕುಮಾರ ದೋಖಾ ಒತ್ತಾಯಿಸಿದ್ದಾರೆ.
ಮಂಗಳವಾರ ರೈತರೊಂದಿಗೆ ಗೊಂದಡಗಿ ಹತ್ತಿರವಿರುವ ಗೂಡುರು ಬ್ಯಾರೇಜ್ಗೆ ಭೇಟಿ ನೀಡಿದ ಅವರು, ಹಿನ್ನೀರು ಸಂಗ್ರಹವಾಗಬೇಕಾದ ಸ್ಥಳದಲ್ಲಿ ಮರಳು, ಕಲ್ಲು, ಮಣ್ಣು, ಕಸ ರಾಶಿ ರಾಶಿಯಾಗಿ ಸಂಗ್ರಹವಾಗಿರುವುದನ್ನು ವೀಕ್ಷಿಸಿದರು.
ನೀರಾವರಿಗೆ ತೊಂದರೆ: ಸ್ಥಳದಲ್ಲಿದ ರೈತರು ನಮ್ಮ ಜಮೀನಿಗೆ ನೀರಾವರಿ ಸೌಕರ್ಯ ಮಾಡಿಕೊಳ್ಳಲು ವಿವಿಧ ಬ್ಯಾಂಕ್ಗಳಿಂದ ಲಕ್ಷಾಂತರ ರು. ಸಾಲ ಮಾಡಿದ್ದೇವೆ. ನದಿ ನೀರು ಒಂದು ಕಿಮೀ ದೂರದಲ್ಲಿ ಬೇರೆ ದಂಡೆಯ ಹತ್ತಿರ ಹರಿಯುತ್ತಿದೆ. ಕಳೆದ ಎರಡು ವರ್ಷದಿಂದ ನದಿ ದಂಡೆಯ ಹತ್ತಿರವಿರುವ ಗೊಂದಡಗಿ, ಗೂಡುರು, ಭೀಮನಳ್ಳಿ, ಬೆಳಗುಂದಿ, ಜೋಳದಡಗಿ, ಶಿವನೂರ, ಬೆನಕನಳ್ಳಿ ಗ್ರಾಮದ ಸುಮಾರು 2500 ಎಕರೆ ಜಮೀನು ನೀರಾವರಿಗೆ ತೊಂದರೆಯಾಗಿದೆ. ಬತ್ತ ನಾಟಿ ಮಡಿಗೆ ಕೂಡ ನೀರು ಸರಿಯಾಗಿ ತಲುಪುತ್ತಿಲ್ಲ ನಾವು ಹೇಗೆ ಬೆಳೆ ಬೆಳೆಯಲು ಸಾಧ್ಯ. ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ನಮ್ಮ ನೋವನ್ನು ತೋಡಿಕೊಂಡರು.
ಅರ್ಧ ಟಿಎಂಸಿ ನೀರು ಕೂಡ ಇಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ದೋಖಾ, ಗೂಡುರು ಹಾಗೂ ಹಿರೇನೂರ ಬ್ಯಾರೇಜ್ ಮಧ್ಯೆ ಕೆಬಿಜೆಎನ್ಎಲ್ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ 1 ಟಿಎಂಸಿ ನೀರು ಸಂಗ್ರಹವಿರಬೇಕು. ಆದರೆ ಮರಳು, ಮಣ್ಣು, ಕಲ್ಲು ಸಂಗ್ರಹದಿಂದ ಅರ್ಧ ಟಿಎಂಸಿ ನೀರು ಕೂಡ ಸಂಗ್ರಹವಾಗುವುದಿಲ್ಲ. ಪರಿಣಾಮ ರೈತರು ನೀರಾವರಿ ಸೌಕರ್ಯದಿಂದ ವಂಚಿತರಾಗುವಂತಾಗಿದೆ.
ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ಹಾಗೂ ಸಚಿವರ ಗಮನಕ್ಕೆ ತರಲಾಗಿದೆ. ಕೂಡಲೇ ಸರ್ಕಾರ ರೈತರ ಸಮಸ್ಯೆ ಗಂಭೀರತೆ ಅರಿತು ಹೂಳು ತೆಗೆಯಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರೊಂದಿಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ರೈತರಾದ ಬಸವರಾಜಪ್ಪಗೌಡ ಗೊಂದಡಗಿ, ಮಹಿಪಾಲರಡ್ಡಿ ದುಪ್ಪಲ್ಲಿ, ಸಾಬಣ್ಣ, ಬಸವರಾಜ, ಸಂಗಾರಡ್ಡಿ ಸೇರಿದಂತೆ ನೂರಾರು ರೈತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

