ಗುಲ್ಬರ್ಗಾ

ಕಲಬೆರಕೆ ಹೆಂಡ: ಅಪರಾಧಿಗಳಿಗೆ ಶಿಕ್ಷೆ

Published On :

ಗುಲ್ಬರ್ಗ: ಜೀವಕ್ಕೆ ಕುತ್ತು ತರುವ ಕಲಬೆರಕೆ ಹೆಂಡ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಇಬ್ಬರು ಅಪರಾಧಿಗಳಿಗೆ ಗುಲ್ಬರ್ಗದ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯ 22 ಸಾವಿರ ದಂಡ ಹಾಗೂ ಒಂದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಗುಲ್ಬರ್ಗ ವ್ಯಾಪ್ತಿಯ ತಾರಫೈಲಿನ ಖರ್ಗೆ ಶಾಲೆಯ ಬಳಿ 2011ರ ಮಾ.11ರ ರಾತ್ರಿ 7.15ರ ವೇಳೆಗೆ ಅಂಬವ್ವ ಗಂಡ ನಾಗರಾಜ ಚವ್ಹಾಣ ಮತ್ತು ಮರಿಲಿಂಗಪ್ಪ ಇಟಗಿ ಅವರು ಮಾನವ ದೇಹಕ್ಕೆ ಕುತ್ತು ತರುವ ಕಲಬೆರಕೆ ಹೆಂಡ ತಯಾರಿಸಿ ತಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಮಾರಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆಸಿದ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ವಿಭಾಗದ ವಿಶೇಷ ಪೊಲೀಸ್ ಠಾಣೆಯ ಸಿಬ್ಬಂದಿ ಆರೋಪಿಗಳನ್ನು ದಸ್ತಗಿರಿ ಮಾಡಿ ಮಾಲು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಜಿಲ್ಲೆಯ ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದು ಸಾಕ್ಷ್ಯಾಧಾರ ಪರಿಶೀಲಿಸಿದ ನ್ಯಾಯಾಧೀಶ ಪೃಥ್ವಿರಾಜ ವರಣೇಕರ್ ಅವರು ಆರೋಪಿಗಳನ್ನು ತಪ್ಪಿತಸ್ಥರೆಂದು ತೀರ್ಪು ನೀಡಿ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಅಭಿಯೋಜಕ ಎಸ್.ಆರ್. ನರಸಿಂಹಲು ಅವರು ವಾದ ಮಂಡಿಸಿದ್ದರು.
ಅಪರಿಚಿತ ಶವ ಪತ್ತೆ
ಗುಲ್ಬರ್ಗ: ಸೇಡಂ ತಾಲೂಕಿನ ಮಳಖೇಡದ ಸೌಥ ಇಂಡಿಯಾ ಸಿಮೆಂಟ್ ಕಂಪನಿಗೆ ಹೋಗುವ ಮಾರ್ಗದ ಮಾನಸಿಂಗ್ ಅವರ ಹೊಲದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿಯ ಮೈಮೇಲೆ ಯಾವುದೇ ಬಟ್ಟೆಗಳು ಇರುವುದಿಲ್ಲ. ಶವದ ಎದೆಯ ಭಾಗ ಮತ್ತು ಬಲಗೈ ಭುಜದವರೆಗೆ ಸಂಪೂರ್ಣವಾಗಿ ಯಾವುದೋ ಕಾಡುಪ್ರಾಣಿಗಳು ತಿಂದಂತೆ ಕಾಣುತ್ತಿದ್ದು, ಮೃತನು ಅಂದಾಜು 50- 60 ವರ್ಷ ಅಂದಾಜಿಸಲಾಗಿದೆ. 4-5 ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಹೂಡಾ ಬಿ ಗ್ರಾಮದ ರಾಜೇಂದ್ರ ತಂದೆ ಸತ್ಯನಾರಾಯಣ ಅವರು ಮಳಖೇಡ ಠಾಣೆಯಲ್ಲಿ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.