ಗುಲ್ಬರ್ಗಾ

ರೇಲ್ವೆ ಜೋಡಿ ಮಾರ್ಗಕ್ಕೆ ಹಸಿರು ನಿಶಾನೆ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.23
ಗುಲ್ಬರ್ಗ ಸಂಸದ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ರೇಲ್ವೆ ಸಚಿವರಾಗುತ್ತಿದ್ದಂತೆಯೇ ಈ ಭಾಗದಲ್ಲಿ ಕೊರಡಾಗಿ ಕುಳಿತಿದ್ದ ರೇಲ್ವೆ ಮೂಲ ಸೌಕರ್ಯ ಕೊನರಲಾರಂಭಿಸಿದೆ ಎಂದೇ ಹೇಳಬೇಕು.
ಗುಲ್ಬರ್ಗ ರೈಲು ನಿಲ್ದಾಣವನ್ನು ಮಾದರಿ ನಿಲ್ದಾಣವಾಗಿಸುವೆ ಎಂದು ಹೇಳುವ ಮೂಲಕ ಈಗಾಗಲೇ ಅಲ್ಲಿ ಹೊಸತಾಗಿ 4ನೇ ಪ್ಲಾಟ್‌ಫಾರ್ಮ್ ಹಾಗೂ ಪಾದಚಾರಿ ಪಥ ಅಭಿವೃದ್ಧಿಪಡಿಸುವ ಯೋಜನೆಗೆ ಚಾಲನೆ ನೀಡಿರುವ ಖರ್ಗೆಯವರು ಇದರೊಂದಿಗೆ ಈ ಭಾಗದ ಬಹುವರ್ಷಗಳ ಬೇಡಿಕೆಯಾಗಿದ್ದ ಹೊಟಗಿವರೆಗಿನ 98 ಕಿ.ಮೀ. ಉದ್ದದ ರೇಲ್ವೆ ಮಾರ್ಗದ ಡಬ್ಲಿಂಗ್(ಜೋಡಿ ಹಳಿ ನಿರ್ಮಾಣ) ಕಾಮಗಾರಿಗೆ ಸೋಮವಾರ ಶಿಲಾನ್ಯಾಸ ನೆರವೇರಿಸಿದ್ದಾರೆ.
ಗುಲ್ಬರ್ಗ- ಹೊಟಗಿ 98 ಕಿ.ಮೀ. ರೇಲ್ವೆ ಮಾರ್ಗ ದೌಂಡ್- ಸೊಲ್ಲಾಪುರ- ಗುಲ್ಬರ್ಗ- ವಾಡಿ(337 ಕಿ.ಮೀ.) ಸೆಕ್ಷನ್‌ನ ಮಧ್ಯ ರೇಲ್ವೆ ವ್ಯಾಪ್ತಿಯ ಮಹತ್ವದ ಮಾರ್ಗ. ನಿತ್ಯವೂ ಇಲ್ಲಿ 70ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ರೈಲುಗಳು ದೇಶದ ನಾನಾ ಮೂಲೆಗಳಿಂದ ಹೊರಟು ಈ ಮಾರ್ಗದಲ್ಲಿ ಸಂಚರಿಸುವ ಮೂಲಕ ಸಂಪರ್ಕ ಕ್ರಾಂತಿಗೆ ಕಾರಣವಾಗುತ್ತಿವೆ.
ಆದರೆ ಈ ಮಾರ್ಗ ಜೋಡಿ ಹಳಿ ಕೊರತೆಯಿಂದಾಗಿ ರೈಲುಗಳ ಸುಗಮ ಸಂಚಾರಕ್ಕೆ ತುಂಬ ತೊಂದರೆ ಕಾಡುತ್ತಿತ್ತು. ಇಂತಹ ಐತಿಹಾಸಿಕ ತೊಂದರೆಯನ್ನು ನಿವಾರಿಸಲು ರೇಲ್ವೆ ಸಚಿವಾಲಯದಡಿಯಲ್ಲಿ 350 ಕೋಟಿ ವೆಚ್ಚದ ಹೊಸ ಯೋಜನೆ ಸಿದ್ಧಪಡಿಸಿ ಅದನ್ನು 30 ತಿಂಗಳಲ್ಲಿ ಅನುಷ್ಠಾನಕ್ಕೆ ತರುವ ಭರವಸೆಯೊಂದಿಗೆ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಈ ಯೋಜನೆಯ ಕಾಮಗಾರಿಗೆ ಹಸಿರು ನಿಶಾನೆ ನೀಡಿದ್ದಾರೆ.
ಗೋಲ್ಡನ್ ಕ್ವಾಡ್ರಿಲಾಟರಲ್ ಮಾರ್ಗ: ಗೋಲ್ಡನ್ ಕ್ವಾಡ್ರಿಲಾಟರಲ್‌ನ ಮುಂಬೈ- ಚೆನ್ನೈ ಟ್ರಂಕ್ ರೂಟ್‌ನ ಒಂದು ಭಾಗವಾಗಿ ಗುಲ್ಬರ್ಗ- ಹೊಟಗಿ ಮಾರ್ಗ ಮಾರ್ಪಟ್ಟಿದೆ. ಮಧ್ಯ ರೇಲ್ವೆಯ ಸೊಲ್ಲಾಪುರ ವಿಭಾಗದಲ್ಲಿ ಬರುವ ಈ ಮಾರ್ಗ 140 ವರ್ಷಗಳಷ್ಟು ಹಳೆಯದು.
ದಖನ್ ಪ್ರಸ್ಥಭೂಮಿಯ ಪ್ರದೇಶಗಳಲ್ಲಿ ಸಾಗಿ ಹೋಗುವ ಈ ಮಾರ್ಗಕ್ಕೆ ಜೋಡಿ ಹಳಿ ಹಾಕುವ ಕಾರ್ಯಕ್ಕೆ ಏಶಿಯನ್ ಅಭಿವೃದ್ಧಿ ಬ್ಯಾಂಕ್‌ನಿಂದಲೂ ಸಾಲ ಪಡೆಯಲಾಗುತ್ತಿದೆ. ಇದೇ ಬ್ಯಾಂಕಿನಿಂದಲೇ ಗುಲ್ಬರ್ಗ- ದೌಂಡ್ 225 ಕಿ.ಮೀ. ಮಾರ್ಗ ಜೋಡಿ ಹಳಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಮಹತ್ವದ  ಜೋಡಿ ಹಳಿ ಕಾಮಗಾರಿಯನ್ನು ರೈಲ್ ವಿಕಾಸ ನಿಗಮದ ವಹಿಸಿಕೊಂಡಿದ್ದು, 30 ತಿಂಗಳಲ್ಲಿ ಈ ಕೆಲಸ ಮಾಡಿ ಮುಗಿಸುವುದಾಗಿ ಹೇಳಿದ್ದಾರೆ.
ಖರ್ಗೆ ಹಸಿರು ನಿಶಾನೆ: ಗುಲ್ಬರ್ಗದ ಪಂಡಿತ ರಂಗಮಂದಿರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಈ ಯೋಜನೆಗೆ ಚಾಲನೆ ನೀಡಿದರು. ಲಭ್ಯವಿರುವ ಅವಧಿಯಲ್ಲಿ ಗುಲ್ಬರ್ಗ ಭಾಗಕ್ಕೆ ಹೆಚ್ಚಿನ ರೇಲ್ವೆ ಮೂಲ ಸೌಕರ್ಯ ತಂದು ಕೊಡುವುದು ತಮ್ಮ ಗುರಿ. ಈ ಭಾಗ ಕಳೆದ ನೂರು ವರ್ಷಗಳಿಂದ ರೇಲ್ವೆ ಮೂಲ ಸೌಕರ್ಯದಲ್ಲಿ ತುಂಬ ಹಿಂದೆ ಬಿದ್ದಿದೆ ಎಂದರು.
ಗುಲ್ಬರ್ಗ- ಹೊಟಗಿ ಮಾರ್ಗ ಜೋಡಿ ಹಳಿ ನಿರ್ಮಾಣವಾದಲ್ಲಿ ರೇಲ್ವೆಗಳ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಅಲ್ಲದೆ ಹೆಚ್ಚಿನ ರೈಲುಗಳ ಸಂಚಾರಕ್ಕೂ ಇದು ಅವಕಾಶ ಕಲ್ಪಿಸುತ್ತದೆ. ರೇಲ್ವೆ ಕ್ರಾಸಿಂಗ್, ಎಲ್ಲಿ ಬೇಕಾದಲ್ಲಿ ರೈಲುಗಳ ನಿಲುಗಡೆಯಂತಹ ಸಮಸ್ಯೆಗಳಿಗೆ ಈ ಯೋಜನೆ ಪರಿಹಾರ ಒದಗಿಸುತ್ತದೆ ಎಂದರು.
4ನೇ ಪ್ಲಾಟ್‌ಫಾರ್ಮ್- ಪಾದಚಾರಿ ಸೇತುವೆ: ಇದೇ ಸಂದರ್ಭದಲ್ಲಿ ಗುಲ್ಬರ್ಗ ರೈಲು ನಿಲ್ದಾಣವನ್ನು ಮಾದರಿ ನಿಲ್ದಾಣವಾಗಿಸುವ ತಮ್ಮ ಇಂಗಿತ ಹೊರಹಾಕಿದ ಖರ್ಗೆಯವರು, ಈ ಮಾತಿಗೆ ಪೂರಕವಾಗಿ 4ನೇ ಪ್ಲಾಟ್‌ಫಾರ್ಮ್ ಹಾಗೂ ಪಾದಚಾರಿ ಸೇತುವೆ ನಿರ್ಮಾಣದ 5 ಕೋಟಿ ವೆಚ್ಚದ ಯೋಜನೆಗೂ ಚಾಲನೆ ನೀಡಿದರು.
ಶೀಘ್ರ ಹೊಂದಲಿರುವ ಸೌಕರ್ಯಗಳಿವು
1) 4ನೇ ಪ್ಲಾಟ್‌ಫಾರ್ಮ್- (6 ತಿಂಗಳ ಅವಧಿ)
2) ಎಸ್ಕಲೇಟರ್(ಸ್ವಯಂಚಾಲಿತ ಮೆಟ್ಟಿಲು)- (4 ತಿಂಗಳು ಅವಧಿ)
3) ಗೂಡ್ಸ್ ಶೆಡ್ ನವೀಕರಣ, ಹೊಸ ಪಾರ್ಕಿಂಗ್ ಸ್ಥಳ
4) ರೈಲು ಕೋಚ್‌ಗಳ ನಿರ್ವಹಣೆ(ಶುಚಿಕರಣ ಘಟಕ)
5) ತಾರಫೈಲ್ ಬದಿಯ ರೈಲು ಕಟ್ಟೆಯಲ್ಲೂ ಟಿಕೆಟ್ ನೀಡುವ ಸೌಕರ್ಯ
ಮಧ್ಯ ರೇಲ್ವೆ ಗುಲ್ಬರ್ಗದಲ್ಲಿ ಸೋಮವಾರ ಜೋಡಿ ಹಳಿ ಮಾರ್ಗ ಹಾಗೂ ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣ ಯೋಜನೆಗೆ ಚಾಲನೆ ನೀಡಲು ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಧಾನ ವ್ಯವಸ್ಥಾಪಕ ಬಿ.ಪಿ. ಖರೆ ಸ್ವಾಗತಿಸಿದರು.
ರೇಲ್ವೆ ಬೋರ್ಡ್‌ನ ಸದಸ್ಯ ಸುಬೋಧ ಜೈನ್, ರೈಲ್ ವಿಕಾಸ ನಿಗಮದ ವ್ಯವಸ್ಥಾಕ ನಿರ್ದೇಶಕ ಸತೀಶ ಅಗ್ನಿಹೋತ್ರಿ, ಮಾಜಿ ಸಿಎಂ, ಸಂಸದ ಧರಂಸಿಂಗ್, ಶಾಸಕರಾದ ಅಲ್ಲಂಪ್ರಭು ಪಾಟೀಲ್, ಜಿ. ರಾಮಕೃಷ್ಣ, ಮಾಜಿ ಸಂಸದರಾದ ಬಿ.ಜಿ. ಜವಳಿ, ಇಕ್ಬಾಲ್ ಅಹ್ಮದ್ ಸರಡಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗಣಗೌಡ, ಪ್ರಾದೇಶಿಕ ಆಯುಕ್ತ(ಪ್ರಭಾರಿ) ಅಮ್ಲನ್ ಆದಿತ್ಯಾ ಬಿಸ್ವಾಸ್, ಜಿಲ್ಲಾಧಿಕಾರಿ ಪ್ರಸನ್ನಕುಮಾರ್, ಜಿಪಂ ಸಿಇಒ ಪಲ್ಲವಿ, ಐಜಿಪಿ ವಜೀರ್ ಅಹ್ಮದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.