ಗುಲ್ಬರ್ಗಾ

ಈ ಗಡ್ಡೆಯಲ್ಲಿ ಈಸಬೇಕು, ಇದ್ದು ಜೈಸಬೇಕು

Published On :

ಕ.ಪ್ರ.ವಾರ್ತೆ, ಯಾದಗಿರಿ, ಜು. 25
ಕೃಷ್ಣಾ ನದಿಗೆ ನೀರು ಬಂದಾಗ ಪ್ರತಿ ವರ್ಷ ಈ ಪುಟ್ಟ ಗ್ರಾಮ ನಡುಗಡ್ಡೆಯಾಗುತ್ತದೆ. ನಾರಾಯಣಪುರ ಜಲಾಶಯದಿಂದ ಕಳೆದೊಂದು ವಾರದಿಂದ ನೀರು ಬಿಡುತ್ತಿರುವುದರಿಂದ ಮತ್ತೆ ಈ ಗ್ರಾಮಕ್ಕೆ ಇತರೆ ಪ್ರದೇಶಗಳೊಂದಿಗೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಈ ದ್ವೀಪ ಗ್ರಾಮದ ಜನರು ಆಹಾರ ಧಾನ್ಯಕ್ಕೂ ಪರದಾಡಬೇಕಾಗಿದೆ.
ಇದು ಜಿಲ್ಲೆಯ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡೆ ಎಂಬ ಗ್ರಾಮದ ಕಥೆ. ನಾರಾಯಣಪುರ ಜಲಾಶಯದಿಂದ ಬಿಟ್ಟ ನೀರು ಎರಡು ಕವಲುಗಳಾಗಿ ಹರಿದು ಮತ್ತೆ ಒಂದಾಗುವ ಪ್ರದೇಶಲ್ಲಿ ನಿರ್ಮಾಣವಾಗಿರುವ ನಡುಗಡ್ಡೆ ಇದು. ಮಳೆ ಹಾಗೂ ಉಕ್ಕಿ ಹರಿಯುತ್ತಿರುವ ನದಿಯನ್ನು ನೋಡುತ್ತ ನಡುಗಡ್ಡೆಯಲ್ಲೇ ಅಲ್ಲಿಯ ನಿವಾಸಿಗಳು ಕಾಲ ಕಳೆಯುತ್ತಿದ್ದಾರೆ.
ಆತಂಕದಲ್ಲಿ 45 ಕುಟುಂಬಗಳು: ನೀಲಕಂಠರಾಯನಗಡ್ಡೆ ಗ್ರಾಮದಲ್ಲಿ ಸುಮಾರು 45 ಕುಟುಂಬಗಳು ವಾಸಿಸುತ್ತಿದ್ದು, 300ರಷ್ಟು ಜನಸಂಖ್ಯೆಯಿದೆ. 1 ರಿಂದ 5ನೇ ತರಗತಿಯವರೆಗೂ ಪ್ರಾಥಮಿಕ ಶಾಲೆಯಿದೆ. ಸುಮಾರು 1 ಸಾವಿರ ಎಕರೆ ಫಲವತ್ತಾದ ಜಮೀನಿದ್ದು, ತಲೆತಲಾಂತರದಿಂದ ಗಡ್ಡೆಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಜಾನುವಾರುಗಳೊಂದಿಗೆ ಅಲ್ಲಿಯೇ ಕೃಷಿ ಮಾಡುತ್ತಿದ್ದಾರೆ. ಆದರೆ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಬೀಡಲಾಗುತ್ತಿರುವ ನೀರಿನಿಂಜ ಗ್ರಾಮ ಜಲಾವೃತಗೊಳ್ಳುತ್ತದೆ. ಪ್ರತಿ ವರ್ಷವೂ ಇವರದ್ದು ಇದೇ ಪರಿಸ್ಥಿತಿ. ನದಿಯಲ್ಲಿ ನೀರು ಯಾವಾಗ ಕಡಿಮೆಯಾಗುತ್ತದೆ ಎಂದು ಆತಂಕದಲ್ಲೇ ದಿನ ದೂಡುತ್ತಿದ್ದಾರೆ.
ಈಜುಗಾಯಿಯಿಂದ ದಾಟುವ ಜನ: ಕೃಷ್ಣಾ ನದಿಗೆ ನೀರು ಬಂದಾಗ ಈ ಗಡ್ಡೆ ಜನರು ಪಡುವ ಪಾಡು ಅಷ್ಟಿಷ್ಟಲ್ಲ. ಅದರಲ್ಲೂ ಪ್ರವಾಹ ಬಂದಾಗಲೇ ಇಲ್ಲಿಯ ಜನರಿಗೆ ಅನಾರೋಗ್ಯ ಕಾಡಿದರಂತೂ ಮುಗಿಯಿತು. ಮಳೆ ಆರಂಭವಾಗುತ್ತಿದ್ದಂತೆ ಅಲ್ಲಿಯ ನಿವಾಸಿಗಳು ಮುಂಜಾಗ್ರತಾ ಕ್ರಮವಾಗಿ ಆಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ವಾರಕ್ಕಿಂತಲೂ ಹೆಚ್ಚಿನ ದಿನ ನದಿ ದಾಟಲು ಆಗದೇ ಹೋದರೆ, ಬಡವರಂತೂ ಪರದಾಡಬೇಕಾಗುತ್ತದೆ. ನದಿ ದಾಟಲು ದೋಣಿ, ಬೋಟ್ ಇತ್ಯಾದಿ ಯಾವ ಸೌಲಭ್ಯವೂ ಇಲ್ಲಿಲ್ಲ. ಕೆಲವು ಸಾಹಸಿಗಳು ಈಜುಗಾಯಿ ಕಟ್ಟಿಕೊಂಡು ನದಿ ದಾಟುತ್ತಾರೆ. ಆದ್ದರಿಂದ ಈಜಬೇಕು ಇದ್ದು ಜೈಸಬೇಕು ಎಂಬ ಸ್ಥಿತಿಯಲ್ಲೇ ವರ್ಷದ ನಾಲ್ಕು ತಿಂಗಳ ಕಾಲ ಇವರು ಜೀವನ ಸಾಗಿಸುತ್ತಾರೆ.
ಸೇತುವೆ ನಿರ್ಮಿಸಿಕೊಡಿ: ನಡುಗಡ್ಡೆ ನಿವಾಸಿಗಳು ಪ್ರತಿ ವರ್ಷ ಸಂಪರ್ಕ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದರೂ ಇದುವರೆಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ ಅವರು ನದಿ ದಡದಿಂದಲೇ ಗ್ರಾಮವನ್ನು ನೋಡಿ ಬಂದಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆ ನಿವಾರಣೆಗೆ ಶಾಶ್ವತ ಯೋಜನೆ ರೂಪಿಸುವ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಗಡ್ಡೆ ನಿವಾಸಿಗಳು ಅಲ್ಲಿಯ ಕೃಷಿ ಜಮೀನು, ಮನೆ ಬಿಟ್ಟು ಬರಲು ಸಿದ್ಧರಿಲ್ಲ. ಬೇರೆಡೆ ಸ್ಥಳಾಂತಿರಿಸುವುದು ಬೇಡ, ನದಿಗೊಂದು ಸೇತುವೆ ನಿರ್ಮಿಸಿಕೊಟ್ಟರೆ ಸಾಕು ಎಂದು ಗ್ರಾಮದ ಯಲ್ಲಪ್ಪ, ಬಸಣ್ಣ ದೊರೆ ಇತರರು ಹೇಳುತ್ತಾರೆ.

ನೀಲಕಂಠರಾಯನಗಡ್ಡೆ; ಮೋಟಾರ್ ಬೋಟ್ ವ್ಯವಸ್ಥೆ
ಯಾದಗಿರಿ: ಪ್ರವಾಹದಂಥ ತುರ್ತು ಸಂದರ್ಭದಲ್ಲಿ ಸುರಪುರ ತಾಲೂಕಿನ ಬೆಂಚಿಗಡ್ಡಿ ಸಮೀಪದ ನೀಲಕಂಠರಾಯನಗಡ್ಡೆ ನಾಗರಿಕರ ರಕ್ಷಣೆಗಾಗಿ ನುರಿತ ಚಾಲಕರೊಂದಿಗೆ ಮೋಟಾರ್ ಬೋಟ್‌ವೊಂದನ್ನು ರಾಯಚೂರು ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿ ಗುರುವಾರ ಸಂಜೆ ಬೆಂಚಿಗಡ್ಡಿಗೆ ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ತಿಳಿಸಿದ್ದಾರೆ.
ಅದರಂತೆ ಬಸವಸಾಗರ ಜಲಾಶಯದಿಂದ ಬಿಡಲಾಗುವ ನೀರಿನಿಂದ ಪ್ರವಾಹದಂತಹ ಪರಿಸ್ಥತಿ ಎದುರಾದಲ್ಲಿ ಅಂತಹ ಸಂದರ್ಭದಲ್ಲಿ ಜನರ ರಕ್ಷಣೆಗಾಗಿ ಸದ್ಯಕ್ಕೆ ಒಂದು ಬೋಟ್ ತರಿಸಿದ್ದು, ತಕ್ಷಣವೇ ಇನ್ನೂ ಎರಡು ಬೋಟ್‌ಗಳನ್ನು ಖರೀದಿಸಿ ತುರ್ತು ಸಂದರ್ಭದಲ್ಲಿ ಅವುಗಳನ್ನು ಸದುಪಯೋಗಪಡಿಸಲು ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಜನರ ರಕ್ಷಣೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವ ವ್ಯವಸ್ಥೆಯನ್ನು ಸಹ ಮಾಡಲಾಗುತ್ತಿದೆ. ಪ್ರವಾಹದಂತಹ ಪರಿಸ್ಥಿತಿ ಎದುರಾದಲ್ಲಿ ನಾಗರಿಕರು ಸಂಬಂಧಪಟ್ಟ ತಹಸೀಲ್ದಾರರನ್ನು ಸಂಪರ್ಕಿಸಿ ಸುರಕ್ಷತಾ ನೆರವನ್ನು ಪಡೆಯುವಂತೆ ತಿಳಿಸಿರುವ ಜಿಲ್ಲಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳು ಸಹ ತುರ್ತು ಸಂದರ್ಭದಲ್ಲಿ ಜನರಿಗೆ ನೆರವಾಗಬೇಕು. ನೀಡಲಾಗುವ ಬೋಟ್‌ಗಳ ಉಪಯೋಗ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಮಾದಾರ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.