ರಾಜ್ಯ ಸರ್ಕಾರಕ್ಕೆ ಭಾಷಾ ಪ್ರೇಮವಿಲ್ಲ: ಕಂಬಾರ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಜು.27
ಕಂಪ್ಯೂಟರ್ ಯುಗದಲ್ಲಿ ಇಂಗ್ಲಿಷ್ ಸರ್ವವ್ಯಾಪಿ ಆಗುತ್ತಿರುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕೂಡಲೇ ಕಂಪ್ಯೂಟರ್ಗೆ ಕನ್ನಡ ಅಳವಡಿಸಬೇಕು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಒತ್ತಾಯಿಸಿದರು.
ನಗರದ ಸಂಗಮೇಶ್ವರ ಸಭಾಂಗಣದಲ್ಲಿ ಶನಿವಾರ ನೂತನ ವಿದ್ಯಾಲಯ ಸಂಸ್ಥೆಯ ವತಿಯಿಂದ 2012ನೇ ಸಾಲಿನ ದತ್ತಾತ್ರೇಯ ಹೇರೂರ ರಂಗ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಕಂಪ್ಯೂಟರ್ ಬಳಕೆ ಇಂದು ಸಾಮಾನ್ಯವಾಗಿದ್ದು, ಈ ಕಂಪ್ಯೂಟರ್ನಲ್ಲಿ ಕನ್ನಡ ಅಳವಡಿಸಬೇಕು ಎಂದು ಪೂರ್ಣಚಂದ್ರ ತೇಜಸ್ವಿ ಮತ್ತು ತಾವು ಮಾಡಿದ ಪ್ರಯತ್ನಗಳು ರಾಜಕೀಯ ವ್ಯವಸ್ಥೆಯ ಕಿವಿಗೆ ಬೀಳಲಿಲ್ಲ ಎಂದರು.
ಸರ್ಕಾರ ಕನ್ನಡ ಪ್ರೇಮ ಮೆರೆಯಲಿ: ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಕಳೆದ 15 ವರ್ಷಗಳ ಹಿಂದೆಯೇ ಆಗಿನ ಮುಖ್ಯಮಂತ್ರಿ ಕರುಣಾನಿಧಿ ಕಂಪ್ಯೂಟರ್ನಲ್ಲಿ ತಮಿಳು ಅಳವಡಿಸುವ ಮೂಲಕ ಹೆಗ್ಗಳಿಕೆ ಪಾತ್ರರಾದರು. ತಮಿಳುನಾಡಿನವರ ಭಾಷಾ ಪ್ರೇಮ ನಮ್ಮ ಕನ್ನಡ ನಾಡಿನ ಸರ್ಕಾರಕ್ಕಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಇಂದಿನ ಶಿಕ್ಷಣ ಪದ್ಧತಿಯಿಂದ ಮಕ್ಕಳ ಸೃಜನಶೀಲತೆ ಕಸಿದುಕೊಳ್ಳಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ಮರೆಯಾಗಿದೆ. ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಗ್ಗೂಡಿ ಶಿಕ್ಷಣ ಪದ್ಧತಿಯನ್ನು ಬದಲಾವಣೆ ತರುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ನೀಡುವ ಸರ್ಕಾರಗಳು ನೌಕರಿ ನೀಡುವ ಕುರಿತು ಪ್ರಣಾಳಿಕೆಯಲ್ಲಿ ಅಳವಡಿಸುವುದಿಲ್ಲ. ನೌಕರಿ ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕನ್ನಡ ಭಾಷೆ ಉಳಿಸಲು ಸರ್ಕಾರ, ಸಂಘ- ಸಂಸ್ಥೆಗಳು, ಸಾರ್ವಜನಿಕರು ಪ್ರಯತ್ನಿಸಬೇಕು ಎಂದರು.
ಕಂಬಾರರು ಆಧುನಿಕ ಋಷಿ: ಗುಲ್ಬರ್ಗದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಎಸ್. ಮೂರ್ತಿ ಮಾತನಾಡಿ, ಚಂದ್ರಶೇಖರ ಕಂಬಾರ ಅವರು ಆಧುನಿಕ ಋಷಿ ಇದ್ದಂತೆ. ನಿಷ್ಠುರವಾಗಿ, ನೇರವಾಗಿ ಸಮಾಜಕ್ಕೆ ಒಳಿತಾಗುವ ಹಾಗೆ ಸಮಾಜ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಡಾ. ಮುರಳೀಧರ ಎಸ್. ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಶಾಮರಾವ ಖಣಗೆ, ಪ್ರಭಾಕರ ಸಾತಖೇಡ, ಡಾ. ಸ್ವಾಮಿರಾವ ಕುಲಕರ್ಣಿ, ಡಾ. ವಸಂತ ಕುಷ್ಟಗಿ, ಹೇಮಂತ ಕೊಲ್ಹಾಪುರೆ, ಸುರೇಶ ಹೇರೂರ, ಶ್ರೀಕಾಂತ ಕುಲಕರ್ಣಿ, ಆರ್.ಆರ್. ಜಾಗೀರದಾರ ಇತರರು ಇದ್ದರು. ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು, ಸಂಸ್ಥೆಯ ಪದಾಧಿಕಾರಿಗಳು, ಉಪನ್ಯಾಸಕರು, ಸಿಬ್ಬಂದಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

