ಗುಲ್ಬರ್ಗಾ

ಚೌಡಾಪುರ- ಕರ್ಜಗಿ ರಸ್ತೆ ಕಾಮಗಾರಿಗೆ ಚಾಲನೆ

Published On :

ಕನ್ನಡಪ್ರಭ ವಾರ್ತೆ   ಅಫಜಲ್ಪುರ   ಜು.30
ಅಂತೂ ಇಂತು ಹದಗೆಟ್ಟ ಅಫಜಲ್ಪುರ ತಾಲೂಕಿನ ರಸ್ತೆಗೆ ದುರಸ್ಥಿ ಕಾಣುವ ಯೋಗಾಯೋಗ ಕೂಡಿ ಬಂದಿದೆ. ಕುಳಿ ತುಂಬಿ ಸಂಚಾರಕ್ಕೆ ಸಂಚಕಾರ ಉಂಟಾಗಿದ್ದ ಈ ರಸ್ತೆಯನ್ನು ಅಂತರಾಜ್ಯ ಸಂಪರ್ಕ ಯೋಜನೆಯಲ್ಲಿ ಕೇಂದ್ರ ಸರ್ಕಾರ ಬಹುಕೋಟಿ ರುಪಾಯಿ ಮಂಜೂರಿ ಮಾಡಿ, ಕಾಯಕಲ್ಪ ನೀಡಲು ಮುಂದಾಗಿದೆ. ಇದು ಸಂಸದ ಹಾಗೂ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜು ಖರ್ಗೆ ಅವರ ಪ್ರಯತ್ನದ ಫಲ ಎಂಬುದು ಸ್ಪಷ್ಟ.
ಅಂತಾರಾಜ್ಯ ಸಂಪರ್ಕ ರಸ್ತೆ ಯೋಜನೆಯಡಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಚೌಡಾಪುರದಿಂದ ಕರ್ಜಗಿವರೆಗೆ ಒಟ್ಟು 46.825 ಕಿ.ಮೀ. ಉದ್ದದ ರಸ್ತೆ ನಿಮಾಣ ಕಾಮಗಾರಿಗೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯ ಚಾಲನೆ ನೀಡಿದೆ.
ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಮಧ್ಯೆ ಸಂಪರ್ಕ ಕಲ್ಪಿಸುವ ಈ ಗಡಿ ರಸ್ತೆಗೆ ರು. 76.36 ಕೋಟಿ  ಕೇಂದ್ರ ಸಕಾರದ ಭೂ ಸಾರಿಗೆ ಮಂತ್ರಾಲಯದಿಂದ ಮಂಜೂರಾಗಿದೆ. ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿದರು.
ಶಿಲಾನ್ಯಾಸ: ಅವರು ಮಂಗಳವಾರ ಅಫಲಜಲ್ಪುರದ ನ್ಯಾಷನಲ್ ಫಂಕ್ಷನ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಗುಲ್ಬರ್ಗದಿಂದ ಮಹಾರಾಷ್ಟ್ರದವರೆಗೆ ರಸ್ತೆ ಕಲ್ಪಿಸುವ ಅಂತಾರಾಜ್ಯ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಈ ರಸ್ತೆಯಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದ್ದು, ರೈತರು ಬೆಳೆದ ಬೆಳೆಗಳನ್ನು ಪಟ್ಟಣಕ್ಕೆ ಕೊಂಡೊಯ್ದು ಮಾರಾಟ ಮಾಡಬಹುದು. ಅಲ್ಲದೆ ನೆರೆಯ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದಿಂದ ಜಿಲ್ಲೆಯ ಪವಿತ್ರ ಯಾತ್ರಾಕ್ಷೇತ್ರ ಗಾಣಗಾಪುರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲ್ಲ ಎಂಬ ಕೊರಗಿತ್ತು.  ಇದೀಗ ರಾಷ್ಟ್ರೀಯ ಹೆದ್ದಾರಿ 150ರ ನಿರ್ಮಾಣದಿಂದ ಅದು ದೂರಾಗಿದೆ ಎಂದು ಅವರು ಹೇಳಿದರು.
ಕೇಂದ್ರ ರೇಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಲೋಕೋಪಯೋಗಿ ಸಚಿವ ಎಚ್.ಸಿ. ಮಹಾದೇವಪ್ಪ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕ್ಷೇತ್ರದ ಶಾಸಕ ಮಾಲೀಕಯ್ಯ ಗುತ್ತೇದಾರ, ಮಾಜಿ ಸಂಸದ ಐ.ಜಿ. ಸನದಿ, ಜಿಪಂ ಅಧ್ಯಕ್ಷ ಶರಣಪ್ಪ ಪಾಟೀಲ್ ತೇಲ್ಕೂರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗನಗೌಡ ಸಂಕನೂರ, ಜಿಪಂ ಸದಸ್ಯ ನಿತೀನ್ ಗುತ್ತೇದಾರ, ತಾಪಂ ಅಧ್ಯಕ್ಷೆ ಶಾರದಾಬಾಯಿ ಗಂಡೋಳ್ಳಿ, ಮಕ್ಬೂಲ್ ಪಟೇಲ್, ಮಹಾಂತೇಶ ಪಾಟೀಲ್, ವಿಶ್ವನಾಥ ರೇವೂರ, ರಿತೀಶ ಗುತ್ತೇದಾರ, ಮಲ್ಲಿನಾಥ ಕುಂಬಾರ, ಶಿವಪುತ್ರಪ್ಪ ಗೌಡಗಾಂವ, ಶಾಂತಯ್ಯ ಹಿರೇಮಠ, ಪಾಶಾ ಮಣ್ಣೂರ, ರಝಾಕ್ ಪಟೇಲ್, ಜಿಲ್ಲಾಧಿಕಾರಿ ಪ್ರಸನ್ನಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಅಮಿತಸಿಂಗ್ ಸೇರಿದಂತೆ ಅನೇಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.