ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಸೌಕರ್ಯ ನೀಡಿ
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.3
ಸಾಮಾಜಿಕ ಭದ್ರತಾ ಯೋಜನೆಗಳಡಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ಮಾಸಾಶನ ಸೇರಿದಂತೆ ಇತರೆ ಸೌಲಭ್ಯಗಳನ್ನು ನಿಗದಿತ ಅವಧಿಯೊಳಗೆ ಅರ್ಹ ಫಲಾನುಭವಿಗಳಿಗೆ ತಪ್ಪದೇ ದೊರಕಿಸಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್, ಇದಕ್ಕೆ ತಪ್ಪಿದಲ್ಲಿ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಮುಖ್ಯಮಂತ್ರಿಗಳ ನಿರ್ದೇಶನದಂತೆ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಕರೆದಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿ: ಸಕಾಲ ಯೋಜನೆಯಡಿ ಬರುವ ಅರ್ಜಿಗಳ ಮೇಲೆ ನಿಗದಿತ ಅವಧಿಯೊಳಗೆ ಕ್ರಮ ಕೈಗೊಂಡು ಇತ್ಯರ್ಥಗೊಳಿಸಬೇಕು. ವಿಶೇಷವಾಗಿ ಬಡ ಜನರಿಗೆ ಅನುಕೂಲವಾಗುವಂತಹ ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ಮಾಸಾಶನ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ ಅರ್ಹ ಬಡ ಫಲಾನುಭವಿಗಳಿಗೆ ಸೌಲಭ್ಯ ದೊರೆಯುವಂತೆ ವಿಶೇಷ ತಹಸೀಲ್ದಾರರು ವಿಶೇಷ ಗಮನ ನೀಡಬೇಕು. ಇದಕ್ಕೆ ತಪ್ಪಿದಲ್ಲಿ ಅವರನ್ನೇ ಹೊಣೆಗಾರರನ್ನಾಗಿ ಮಾಡಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಆಮ್ ಆದ್ಮಿ- ಜಾಗೃತಿ ಅಗತ್ಯ: ಬಡ ಜನರಿಗಾಗಿ ಇರುವ ಆಮ್ ಆದ್ಮಿ ವಿಮಾ ಯೋಜನೆಯಡಿ ಸಕಾಲಕ್ಕೆ ದೊರಕಿಸಬೇಕಾದ ಸೌಲಭ್ಯ ನೀಡದೇ ಇರುವುದು ವಿಷಾದನೀಯ. ನೈಸರ್ಗಿಕ ಮತ್ತು ಅಪಘಾತಕ್ಕೆ ಈಡಾಗಿ ತೊಂದರೆಯಲ್ಲಿರುವ ಬಡ ಕುಟುಂಬಗಳಿಗೆ ಸಕಾಲಕ್ಕೆ ಈ ಸೌಲಭ್ಯ ದೊರಕಿಸಬೇಕಾಗಿದೆ. ಅರ್ಹ ಫಲಾನುಭವಿಗಳ ನೋಂದಣಿ ಕಾರ್ಯ ಅಚ್ಚುಕಟ್ಟಾಗಿ ಮಾಡುವಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಈ ಕುರಿತು ಬಡ ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.
ಒತ್ತುವರಿ- ಮುಲಾಜಿಲ್ಲದೆ ಕ್ರಮ: ಜಿಲ್ಲೆಯಲ್ಲಿ ಒತ್ತುವರಿ ಸರ್ಕಾರಿ ಜಮೀನು ಶೀಘ್ರ ಗುರುತಿಸಬೇಕು. ಗುರುತಿಸಿದ ಜಮೀನಿನಲ್ಲಿ ಸರ್ಕಾರಿ ಜಮೀನು ಇರುವ ಬಗ್ಗೆ ಕಡ್ಡಾಯವಾಗಿ ಮಾಹಿತಿ ಫಲಕ ಹಾಕಬೇಕು. ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ತಪ್ಪದೇ ನೀಡಬೇಕು. ಅದರಂತೆ ಪಾರ್ಕ್ ಒತ್ತುವರಿಯಾಗಿರುವ ಬಗ್ಗೆ ನೋಡಿಕೊಂಡು ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಈ ಕುರಿತು ಸರ್ಕಾರಕ್ಕೂ ವರದಿ ಸಲ್ಲಿಸಲಾಗುವುದು. ಅದೇ ರೀತಿ ಭೂಸ್ವಾಧೀನ ಪ್ರಕರಣಗಳಲ್ಲಿ ವಿಳಂಬ ನೀತಿಯನ್ನು ಅನುಸರಿಸದಿರಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಾಂಶುಪಾಲ, ಮುಖ್ಯಗುರುಗಳೇ ಹೊಣೆ: ಜಿಲ್ಲೆಯ ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪಡೆಯುವ ಸಂದರ್ಭದಲ್ಲಿ ನಿಯಮಾವಳಿಯನ್ವಯ ಜಾತಿ ಪ್ರಮಾಣ ಪತ್ರ ಇದ್ದರೂ ನೂತನ ಜಾತಿ ಪ್ರಮಾಣ ಪತ್ರ ಕೇಳಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವಂತಹ ದೂರುಗಳು ಬಂದಲ್ಲಿ ಪ್ರಾಂಶುಪಾಲರು, ಶಾಲಾ ಮುಖ್ಯಾಧ್ಯಾಪಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಸಂಬಂಧಪಟ್ಟ ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಕುರಿತು ಸೂಕ್ತ ಸೂಚನೆ ನೀಡಬೇಕು. ಅದೇ ರೀತಿ ಶಾಲೆಗಳಲ್ಲಿ ಕುಡಿವ ನೀರು, ಶೌಚಾಲಯ ವ್ಯವಸ್ಥೆ ಮತ್ತು ಶೌಚಾಲಯಗಳಿಗೆ ಅವಶ್ಯ ನೀರಿನ ಸೌಲಭ್ಯ ಕಲ್ಪಿಸಬೇಕು. ಶಾಶ್ವತ ನೀರು ಸೌಲಭ್ಯ ಇಲ್ಲದಿದ್ದಲ್ಲಿ ಅಲ್ಲಿ ತಾತ್ಕಾಲಿಕ ನೀರಿನ ವ್ಯವಸ್ಥೆ ಮಾಡಬೇಕು. ಈ ಕುರಿತು ತಾವು ಹಾಗೂ ಜಿಪಂ ಸಿಇಒ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಆಗ ಏನಾದರೂ ಅಲ್ಲಿ ಅವ್ಯವಸ್ಥೆ ಕಂಡರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿ ದಿನ ವರದಿ ಸಲ್ಲಿಸಿ: ಜಿಲ್ಲೆಯಲ್ಲಿ ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆ ಮೂಲಕ ಎಲ್ಲ ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸುವ ಕಾರ್ಯ ಚುರುಕುಗೊಳಿಸಬೇಕು. ಅನಧಿಕೃತ ಬೀಜ ಮತ್ತು ಗೊಬ್ಬರ ಮಾರಾಟಗಾರರ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಬೇಕು. ಈ ವಿಷಯದಲ್ಲಿ ಪೊಲೀಸ್ ಇಲಾಖೆ ಸಹಕಾರ ಪಡೆಯುವುದರ ಜತೆಗೆ ಪ್ರತಿ ದಿನ ಕೈಗೊಂಡ ಕ್ರಮಗಳ ಬಗ್ಗೆ ಮತ್ತು ಬೀಜ, ರಸಗೊಬ್ಬರ, ಸಬ್ಸಿಡಿ ವಿತರಣೆ ಕುರಿತಂತೆ ಪ್ರತಿದಿನ ವರದಿ ನೀಡಬೇಕು.
ಬೀಜ ದಾಸ್ತಾನು ಗೋದಾಮು, ಹಣ್ಣು ಹಂಪಲ ಇಡುವ ಕೋಲ್ಡ್ ಸ್ಟೋರೇಜ್ ಕುರಿತು ಪ್ರಸ್ತಾವನೆ ನೀಡಬೇಕು. ಅದೇ ರೀತಿ ಕುಡಿವ ನೀರಿಗಾಗಿ ಬಿಡುಗಡೆ ಮಾಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸಬೇಕು. ವಿಶೇಷವಾಗಿ ಶಹಾಪುರದಲ್ಲಿ ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದು ನೀರು ಪೂರೈಕೆ ಕಾರ್ಯ ತೀವ್ರಗೊಳಿಸದಿದ್ದಲ್ಲಿ ಸಂಬಂಧಿಸಿದ ಪುರಸಭೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಮಾದಾರ್ ತಿಳಿಸಿದರು.
ಕಿರುಕುಳ ನೀಡಿದ್ರೆ ತಕ್ಷಣ ಅಮಾನತು: ಜಿಲ್ಲಾ ಅಂಗವಿಕಲರ ಪುನಾವಸತಿ ಕೇಂದ್ರ ಸ್ಥಾಪಿಸಬೇಕು. ಯಾದಗಿರಿಯಲ್ಲಿ ಜನಸ್ನೇಹಿ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ನಿರಂತರ ಜ್ಯೋತಿ ಯೋಜನೆಯಡಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ಅಧೀನ ಅಧಿಕಾರಿಗಳ ಚಟುವಟಿಕೆಗಳ ಬಗ್ಗೆ ಅನಿರೀಕ್ಷಿತವಾಗಿ ಪರಿಶೀಲನೆ ನಡೆಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಬಡ ಜನರಿಗೆ ಸಾಮಾಜಿಕ ನ್ಯಾಯ ದೊರೆಯುವಂತೆ ನೋಡಿಕೊಳ್ಳಬೇಕು. ಬಡ ಫಲಾನುಭವಿಗಳಿಗೆ ಕಿರುಕುಳ ನೀಡುವ ಸಿಬ್ಬಂದಿಯನ್ನು ತಕ್ಷಣ ಅಮಾನತು ಮಾಡುವಂಥ ಕಠಿಣ ಕ್ರಮ ಕೈಗೊಳ್ಳಬೇಕು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 1ರಂತೆ ಅಕ್ಕಿ ವಿತರಣೆ, ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಣೆ ಕಾರ್ಯ ಕೈಗೊಳ್ಳಬೇಕೆಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಮನ್ವಯತೆಯಿಂದ ಕೆಲಸ ಮಾಡಿ: ಪೊಲೀಸ್ ಇಲಾಖೆ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಜನಾಂಗ ಹಾಗೂ ಅಲ್ಪಸಂಖ್ಯಾತರ ಹಿತರಕ್ಷಣೆ ಕಾಪಾಡುವ ಮತ್ತು ತಾಲೂಕು ಮಟ್ಟದಲ್ಲಿ ಅವಶ್ಯಕತೆ ಇರುವ ವೈದ್ಯರಿಗೆ ರಕ್ಷಣೆ ಕೊಡುವ ಕಾರ್ಯ ಮಾಡಬೇಕು. ಕಾನೂನು ಸುವ್ಯವಸ್ಥೆಗೆ ಸಕಲ ಕ್ರಮಗಳನ್ನು ಕೈಗೊಳ್ಳಬೇಕು. ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿ, ಎಲ್ಲ ಇಲಾಖೆಗಳ ಮತ್ತು ಅಧಿಕಾರಿಗಳ ನಡುವೆ ಪರಸ್ಪರ ಸಮನ್ವಯತೆ ಸಾಧಿಸಿಕೊಂಡು ಸರ್ಕಾರದ ನಿರ್ದೇಶನದಂತೆ ಎಲ್ಲ ಸೌಲಭ್ಯಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಿಇಒ ಎಸ್.ಎ. ಜಿಲಾನಿ ಅವರು ಶಿಕ್ಷಕರ ಗೈರು ಹಾಜರಿ, ಶಾಲೆಗಳಿಗೆ ಶೌಚಾಲಯ ವ್ಯವಸ್ಥೆ, ಮಧ್ಯಾಹ್ನದ ಬಿಸಿಯೂಟ ಸಮರ್ಪಕ ಪೂರೈಕೆ, ಎಲ್ಲ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯವನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಬಿಸಿಯೂಟದ ಅಡುಗೆಕೋಣೆ ವ್ಯವಸ್ಥೆ, ಅಡುಗೆ ಅನಿಲ, ಸಮವಸ್ತ್ರ, ಪಠ್ಯಪುಸ್ತಕ, ನೋಟ್ಬುಕ್ ವಿತರಣೆ ಕುರಿತು ವರದಿ ನೀಡಬೇಕು. ಮಕ್ಕಳ ಕುಂದುಕೊರತೆ ಕೋಶ ಸ್ಥಾಪಿಸಿ ವರದಿ ನೀಡಬೇಕು. ಶಾಲೆಗಳಲ್ಲಿ ನೀರಿನ ಮತ್ತು ಶೌಚಾಲಯ ವ್ಯವಸ್ಥೆ ತಪ್ಪದೇ ಮಾಡುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಎಸ್ಪಿ ಸಿ.ವಂಶಿಕೃಷ್ಣ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

