ಗುಲ್ಬರ್ಗಾ

ನೀರಿಲ್ಲದ ಗುಲ್ಬರ್ಗದಲ್ಲಿ ಬೀರಿಗೆ ಬರವಿಲ್ಲ!

Published On :

ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಮಳೆಯಿಲ್ಲದೇ ಕೆರೆ ಕಟ್ಟೆಗಳೆಲ್ಲ ಬತ್ತಿವೆ. ನೀರಿಲ್ಲದೆ ಜನ ಜನವಾರುಗಳು ಬಸವಳಿದಿವೆ. ಆದರೆ, ಸಾರಾಯಿಗೆ ಮಾತ್ರ ಬರವಿಲ್ಲ. ಕಳೆದ ಐದು ತಿಂಗಳಲ್ಲಿ ಅಬಕಾರಿ ಆದಾಯ ದಶಕದ ಎಲ್ಲ ದಾಖಲೆಗಳನ್ನೂ ಮುರಿದು 41 ಕೋಟಿ ವಹಿವಾಟು ನಡೆಸಿದೆ.
ಇಲ್ಲಿನ ಬಿಸಿಲು ಒಂದೆಡೆ ಏರುತ್ತಿದ್ದರೆ, ಬಿಯರ್ ಮಾರಾಟದ ಕಿಕ್ ಸಹ ಏರುತ್ತಲೇ ಇದೆ. ರಾಜ್ಯದ ಉಳಿದೆಲ್ಲ ಜಿಲ್ಲೆಗಳ ಅಬಕಾರಿ ಆದಾಯ ಇಲ್ಲಿಯ ಆದಾಯದ ಶೇ.50ರಷ್ಟು ಪ್ರಮಾಣ ತಲುಪಿಲ್ಲವೆಂಬುದು ಅಬಕಾರಿ ಇಲಾಖೆ ಮೂಲಗಳೇ ಹೇಳುತ್ತಿವೆ. ಈ ಜಿಲ್ಲೆಯ ಜಿಪಂ ಬಜೆಟ್ ಸಹ ಜಿಲ್ಲೆಯಿಂದ ರಾಜ್ಯ ಬೊಕ್ಕಸ ಸೇರಿರುವ ಅಬ್ಕಾರಿ ವಾರ್ಷಿಕ ಆದಾಯದಷ್ಟಿಲ್ಲ ಎಂದು ಅನೇಕರು ಜಿಲ್ಲೆಯ ಅಬಕಾರಿ ಹೆಚ್ಚಿರುವುದಕ್ಕೆ ಟೀಕಿಸುತ್ತಿದ್ದಾರೆ.
ಬರಗಾಲ, ಮಳೆಯ ಅಭಾವ, ಉರಿಬಿಸಿಲ ತಾಪ, ಕುಡಿಯುವ ನೀರಿನ ಹಾಹಾಕಾರ... ಹೀಗೆ ಸಮಸ್ಯೆಗಳನ್ನೇ ಹೊದ್ದು ಮಲಗಿರುವ ಜಿಲ್ಲೆಯ 7 ತಾಲೂಕುಗಳ ಸುಮಾರು ಸಾವಿರ ಹಳ್ಳಿ-ತಾಂಡಾಗಳ ಜನಮಾನಸ ಸಮಸ್ಯೆಗಳ ಜೊತೆಗೇ ಮದ್ಯಪಾನವನ್ನೂ ತನ್ನ ಕಂಕುಳದಲ್ಲೇ ಇಟ್ಟುಕೊಂಡಿದೆ ಎನ್ನಲು ಜಿಲ್ಲೆಯ ಅಬಕಾರಿ ಆದಾಯದಲ್ಲಿನ ಏರುಗತಿಯೇ ಕನ್ನಡಿ.
ಭರ್ಜರಿ ಬೀಯರ್ ಮಾರಾಟ: ದಶಕದ ಹಿಂದೆ ಜಿಲ್ಲೆಯ ವಾರ್ಷಿಕ ಅಬಕಾರಿ ಆದಾಯ ದೇಶಿ, ಸಾರಾಯಿ, ಬೀಯರ್ ಎಲ್ಲ ಸೇರಿ 55 ಕೋಟಿ ಇತ್ತು. ಆದರೆ 2013ನೇ ಸಾಲಿನ ಜನವರಿ-ಮೇವರೆಗಿನ 5 ತಿಂಗಳಲ್ಲೇ 4,22,900 ಬಿಯರ್ ಪೆಟ್ಟಿಗೆಗಳು ಬಿಕರಿಯಾಗಿ, ಆದಾಯ 41 ಕೋಟಿ ದಾಟಿದೆ. ಈ ಮಾರಾಟ ಶೇ.21ರಷ್ಟು ಹೆಚ್ಚಳ ಕಂಡಿದೆ. ಹೀಗಾಗಿ ಗುಲ್ಬರ್ಗವನ್ನು 'ಬೀಯರ್‌ಬಲ್ಲರ ಜಿಲ್ಲೆ' ಎನ್ನಲಡ್ಡಿಯಿಲ್ಲ ಎನ್ನುತ್ತಿದ್ದಾರೆ ಪಾನಪ್ರೀಯರು.
ರಾಜಧಾನಿ ಬೆಂಗಳೂರೇ ರಾಜ್ಯದಲ್ಲಿ ಅಧಿಕ ಬಿಯರ್ ಮಾರಾಟವಾಗುವ ಪ್ರದೇಶವಾಗಿತ್ತು. ಆದರೊಂದಿಗೆ ಈಗ ಗುಲ್ಬರ್ಗವೂ ಒಂದಾಗುತ್ತಿದೆ.
ಬೇಸಿಗೆಯಲ್ಲಿ ಹೆಚ್ಚು: ಅಬಕಾರಿ ಇಲಾಖೆ ಲೆಕ್ಕಾಚಾರವೇ ಸಾರುವಂತೆ ಪ್ರತಿ ತಿಂಗಳು ಗುಲ್ಬರ್ಗದಲ್ಲಿ ಹೆಚ್ಚುಕಮ್ಮಿ 8 ರಿಂದ 9 ಲಕ್ಷ ಲೀಟರ್ ಬಿಯರ್ ಸೇವನೆಯಾಗುತ್ತದೆ. ಬೇಸಿಗೆಯ ಐದಾರು ತಿಂಗಳಲ್ಲಿ ಈ ಪ್ರಮಾಣ ಸಹಜವಾಗಿಯೇ ಹೆಚ್ಚುತ್ತದೆ. ಬಾರ್- ಮದ್ಯದಂಗಡಿ ಮಾಲೀಕರ ಪ್ರಕಾರ ಜಿಲ್ಲೆಯಲ್ಲಿ ಶೇ.70ರಷ್ಟು ಬಿಯರ್ ಸೇವಿಸುವವರಿದ್ದಾರೆ. ಆದಾಯವೂ ಇದರಿಂದ ಹೆಚ್ಚುತ್ತಲೇ ಇದೆ.
ಎಲೆಕ್ಷನ್ ಎಫೆಕ್ಟ್: 2013ರ ಮೊದಲೈದು ತಿಂಗಳಲ್ಲಿ ಬಿಯರ್ ಆದಾಯ ಬಹುಕೋಟಿ ಸಾಧನೆ ಮಾಡಲು ಚುನಾವಣೆಯೂ ಕಾರಣ. ಬಿಸಿಲಿನಿಂದ ಮೊದಲೇ ಬಿಯರ್ ಹೀರುವ ಇಲ್ಲಿನವರು ಚುನಾವಣೆ ಗರ್ಮಿಯಿಂದಲೂ ಹೆಚ್ಚಿನ ಸಮಯ ಪಾನಗೋಷ್ಠಿಯಲ್ಲಿಯೇ ಕಳೆದಿದ್ದಾರೆ. ಹಿಂದೆಂದಿಗಿಂತಲೂ ಈ ಬಾರಿ ಬಿಸಿಲಿನ ಪ್ರಖರತೆ ಜೋರಾಗಿತ್ತು. ನೀರಿನ ಸಮಸ್ಯೆಯೂ ಹೆಚ್ಚಿತ್ತು. ಹೀಗಾಗಿ ಚುನಾವಣೆ, ಗರ್ಮಿಹವಾ, ನೀರಿನ ಬವಣೆಗಳನ್ನೆಲ್ಲ ಮರೆತು ಕೆಲವು ಸಮಯವಾದರೂ ಕಳೆಯೋಣ ಎಂದು ಜನ ಬಿಯರ್‌ಗೆ ಮನಸೋತಿರಬಹುದು.
125 ವೈನ್ ಶಾಪ್, 25 ಪರವಾನಗಿ ಸಹಿತ ಬೋರ್ಡಿಂಗ್- ಹೊಟೇಲ್, 51 ಬಾರ್- ರೆಸ್ಟೋರೆಂಟ್, 14 ಎಂಎಸ್‌ಐಎಲ್ ವೈನ್ ಶಾಪ್, 2 ಕ್ಲಬ್ ಸೇರಿದಂತೆ ಗುಲ್ಬರ್ಗ ಮಹಾನಗರ ಹಾಗೂ ಜಿಲ್ಲೆಯ 7 ತಾಲೂಕುಗಳಲ್ಲಿ ವಿವಿಧ ನಮೂನೆಯ 220 ಮದ್ಯದಂಗಡಿಗಳಿವೆ.


2013ರ ಮೊದಲೈದು ತಿಂಗಳ ಬೀಯರ್ ಮಾರಾಟ ಹೀಗಿತ್ತು..


ಜನವರಿ ರು. 05 ಕೋಟಿ
ಫೆಬ್ರವರಿ ರು.07 ಕೋಟಿ
ಮಾರ್ಚ್ ರು.09 ಕೋಟಿ

ಏಪ್ರಿಲ್ ರು.11 ಕೋಟಿ

ಮೇ (27ರವರೆಗೆ) ರು. 9.96 ಕೋಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.