ತಾತ್ಕಾಲಿಕ ಬಂದ್
ಕನ್ನಡಪ್ರಭ ವಾರ್ತೆ ಯಾದಗಿರಿ ಜೂ.4
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲೇ 8ನೇ ತರಗತಿಯನ್ನೂ ಸೇರಿಸಿ ಮಾಡಿದ್ದ 'ಉನ್ನತೀಕರಿಸಿದ ಪ್ರೌಢಶಾಲೆ'ಗಳು ಈ ಬಾರಿ ಬಾಗಿಲು ಹಾಕಿವೆ!
ಹೌದು. ಯಾವುದೇ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಹೇಳುತ್ತಲೇ ಕಾಂಗ್ರೆಸ್ ಸರ್ಕಾರ ಒಂದೊಂದೇ ತರಗತಿಗಳನ್ನು ಬಂದ್ ಮಾಡುತ್ತಿದೆ. ಕೌನ್ಸೆಲಿಂಗ್ ನಡೆಸಿ ಪ್ರವೇಶ ಪಡೆದ ಹೊಸ ಮೊರಾರ್ಜಿ ಶಾಲೆಗಳನ್ನು ಪ್ರಾರಂಭಿಸದಂತೆ ಈಚೆಗೆ ಸರ್ಕಾರ ನಿರ್ದೇಶನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಹೊಸ ಬೆಳವಣಿಗೆಯಲ್ಲಿ ಕಳೆದ ಮೂರು ವರ್ಷಗಳಿಂದ 1ರಿಂದ 7ನೇ ತರಗತಿವರೆಗಿನ ಶಾಲೆಯನ್ನು ಉನ್ನತೀಕರಿಸಿ ಅದೇ ಶಾಲೆಯಲ್ಲಿ ಪ್ರಾರಂಭಿಸಿದ್ದ 8ನೇ ತರಗತಿಯನ್ನು ಈ ವರ್ಷದಿಂದ ಬಂದ್ ಮಾಡಲಾಗಿದೆ. ಈ ವರ್ಷ ವಿದ್ಯಾರ್ಥಿಗಳ ಪ್ರವೇಶ ಪಡೆದುಕೊಳ್ಳುತ್ತಿಲ್ಲ.
ಯಾದಗಿರಿ ಜಿಲ್ಲೆಯಲ್ಲಿ 47 ಶಾಲೆ ಬಂದ್: ಟಿಜಿಟಿ (ಟ್ರೇನ್ಡ್ ಗ್ಯಾಜುವೇಟ್ ಟೀಚರ್ಸ್) ಶಿಕ್ಷಕರಿರುವ ಉನ್ನತೀಕರಿಸಿದ ಪ್ರೌಢಶಾಲೆಗಳನ್ನು ಹಾಗೇ ಉಳಿಸಿಕೊಳ್ಳಲಾಗುತ್ತಿದ್ದು, ಅಗತ್ಯ ಶಿಕ್ಷಕರನ್ನು ಮಂಜೂರು ಮಾಡದೇ ಮೂರು ವರ್ಷಗಳಿಂದ ಉನ್ನತೀಕರಿಸುತ್ತ ಬಂದಿದ್ದ ಶಾಲೆಗಳನ್ನು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಬಂದ್ ಮಾಡಲಾಗಿದೆ. ರಾಜ್ಯಾದ್ಯಂತ ಈ ಪ್ರಕ್ರಿಯೆ ನಡೆದಿದ್ದು, ಯಾದಗಿರಿ ಜಿಲ್ಲೆಯಲ್ಲಿ ಇಂಥ ಹಿರಿಯ ಪ್ರಾಥಮಿಕ ಶಾಲೆಯಲ್ಲೇ 8ನೇ ತರಗತಿಯನ್ನೂ ಒಳಗೊಂಡಿದ್ದ 47 ಉನ್ನತೀಕರಿಸಿದ ಹೈಸ್ಕೂಲ್ಗಳನ್ನು ಬಂದ್ ಮಾಡಲಾಗಿದೆ. ಕಳೆದ ವರ್ಷ 8ನೇ ತರಗತಿ ಕಲಿತವರಿಗೆ ಟಿಸಿ ಕೊಟ್ಟು ಬೇರೆ ಶಾಲೆಗೆ ಕಳುಹಿಸಲಾಗಿದೆ. ಇದರಿಂದ ಪ್ರಾಥಮಿಕ ಶಾಲೆ ಮುಗಿಸಿ ಅದೇ ಶಾಲೆಯಲ್ಲಿ 8ನೇ ತರಗತಿ ಓದಬೇಕು ಎಂದುಕೊಂಡಿದ್ದ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಭ್ರಮನಿರಸನ ಉಂಟಾಗಿದೆ.
ಆದೇಶದ ಹಿನ್ನೆಲೆಯಲ್ಲಿ ಸ್ಥಗಿತ: ಯಾವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಟಿಜಿಟಿ ಶಿಕ್ಷಕರಿಲ್ಲದೇ ಉನ್ನತೀಕರಿಸಿದ ಪ್ರೌಢಶಾಲೆ ಆರಂಭಿಸಲಾಗಿತ್ತೋ ಅವುಗಳನ್ನು ಬಂದ್ ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಇದರಿಂದ ಜಿಲ್ಲೆಯ ಗ್ರಾಮೀಣ ಭಾಗ ಹಾಗೂ ಗಡಿ ಭಾಗದ ವಿದ್ಯಾರ್ಥಿಗಳು ಒಂದು ವರ್ಷ ಮುಂಚಿತವಾಗಿ ಪ್ರೌಢಶಾಲೆಯಿರುವ ಬೇರೆ ಊರಿಗೆ ಹೋಗುವಂತಾಗಿದೆ. ಈ ಕುರಿತು ಡಿಡಿಪಿಐ ರಾಮಾಂಜನೇಯ ಅವರನ್ನು ಕೇಳಿದಾಗ, 'ಮೂಲಭೂತ ಸೌಲಭ್ಯ ಹಾಗೂ ಶಿಕ್ಷಕ ಹುದ್ದೆ ಮಂಜೂರಾಗದೇ ಇರುವ ಉನ್ನತೀಕರಿಸಿದ ಶಾಲೆಗಳನ್ನು ಮಾತ್ರ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಕಟ್ಟಡ, ಶಿಕ್ಷಕರು ಹಾಗೂ ಸಿಬ್ಬಂದಿ ನೇಮಕಾತಿ ಮಾಡಿ ಮತ್ತೆ ಮುಂದಿನ ದಿನಗಳಲ್ಲಿ ಪ್ರಾರಂಭಿಸಬಹುದು. ಆದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಮೀಪದ ಹೈಸ್ಕೂಲ್ಗಳಿಗೆ ಅವರಿಗೆ ಪ್ರವೇಶ ನೀಡಲಾಗಿದೆ' ಎಂದು ತಿಳಿಸಿದ್ದಾರೆ.
ವ್ಯಾಪಕ ವಿರೋಧ: ಸರ್ಕಾರ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಉನ್ನತೀಕರಿಸಿದ ಶಾಲೆಯನ್ನು ಬಂದ್ ಮಾಡಿರುವುದನ್ನು ಖಂಡಿಸಿ ಯಾದಗಿರಿ ತಾಲೂಕಿನ ದುಪ್ಪಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಮೂರು ವರ್ಷಗಳಿಂದ ನಡೆಯುತ್ತಿದ್ದ 8ನೇ ತರಗತಿಯನ್ನು ಏಕಾಏಕಿಯಾಗಿ ಸ್ಥಗಿತಗೊಳಿಸಿದ್ದಕ್ಕೆ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಾಲಿನಿಂದಲೇ ಮತ್ತೆ ಪ್ರಾರಂಭಿಸುವಂತೆಯೂ ಒತ್ತಾಯಿಸಿದ್ದಾರೆ.
ಈ ಕುರಿತು ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಇತರರು ಪ್ರತಿಕ್ರಿಯಿಸಿ, ಸರ್ಕಾರದ ಈ ನೀತಿಯನ್ನು ಖಂಡಿಸಿದ್ದಾರೆ. ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂದು ಹೇಳುತ್ತಲೇ ಮೂಲಭೂತ ಸೌಲಭ್ಯದ ಕೊರತೆಯ ನೆಪವೊಡ್ಡಿ ಸರ್ಕಾರಿ ವಸತಿ ಶಾಲೆಗಳನ್ನು ಮುಚ್ಚಿದೆ. ಈಗ 8ನೇ ತರಗತಿಯನ್ನೂ ಬಂದ್ ಮಾಡಿದ್ದು ಖಂಡನೀಯ. ಸರ್ಕಾರ ಈ ಆದೇಶ ವಾಪಸ್ ಪಡೆದು ಈ ಹಿಂದೆ ನಡೆಯುತ್ತಿದ್ದ ಉನ್ನತೀಕರಿಸಿದ ಹೈಸ್ಕೂಲ್ಗಳನ್ನು ಪ್ರಾರಂಭಿಸದಿದ್ದರೆ ಹೋರಾಟ ಕೈಗೆತ್ತಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
-ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

