ಗುಲ್ಬರ್ಗಾ

ವರ್ತಮಾನ ಸಮಸ್ಯೆಗಳಿಗೆ ವಚನಗಳಲ್ಲಿದೆ ಪರಿಹಾರ

Published On :

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಜೂ.8
ವರ್ತಮಾನದ ಸಮಸ್ಯೆಗಳು ಅನಂತ. ಅವುಗಳಿಗೆಲ್ಲ ಸಮಾಧಾನದ ಪರಿಹಾರ ಶರಣರ ವಚನಗಳಲ್ಲಿದ್ದು ಅಂತಹ ಸಾಹಿತ್ಯ ಓದುವ ಅಭಿರುಚಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕೆಂದು ಗುಲ್ಬರ್ಗ ಜಿಲ್ಲಾ ಪ್ರಥಮ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಕರೆ ನೀಡಿದ್ದಾರೆ.
ಎಂ.ಎಸ್. ಲಠ್ಠೆ ಮಂಟಪ, ಎಸ್ಜಿ ಮೇಲ್ಕುಂದಿ ವೇದಿಕೆ, ಬಿ. ಮಹಾದೇವಪ್ಪ ಮಹಾದ್ವಾರದ ಇಲ್ಲಿನ ಎಂಜಿನಿಯರ್ಸ್ ಸಂಸ್ಥೆಯ ಸಭಾ ಭವನದಲ್ಲಿ ಶನಿವಾರದಿಂದ ಆರಂಭವಾಗಿರುವ ಎರಡು ದಿನಗಳ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.
ವಚನಗಳ ಓದಿನಲ್ಲಿ ನಿಷ್ಠೆ ಇದ್ದಾಗ ಮಾತ್ರ ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಬರಬಲ್ಲದು. ಶರಣರು ನಮ್ಮೆಲ್ಲರ ಮುಂದೆ ತೆರೆದಿಟ್ಟಿರುವ ಮಾರ್ಗದಲ್ಲಿ ನಡೆದದ್ದೇ ಆದಲ್ಲಿ ಅನೇಕ ಸಮಸ್ಯೆಗಳಿಂದ ಮುಕ್ತಿ ಕಾಣಲು ಸಾಧ್ಯ ಎಂದರು.
ಲೌಕಿಕ- ಅಲೌಕಿಕ: ಬಸವಾದಿ ಶರಣರ ಮಾನವೀಯ ಮತ್ತು ಲೌಕಿಕ ಬದುಕಿನ ಮೌಲ್ಯಗಳನ್ನು ಅರ್ಥಮಾಡಿಕೊಂಡು ಬದುಕಿದಾಗಲೇ ಅಲೌಕಿಕ ಬದುಕಿನ ಮೌಲ್ಯಗಳ ದರ್ಶನವಾಗಿ ಉತ್ತಮ ಬದುಕು ನಿರ್ವಹಿಸಲು ಸಾಧ್ಯವಾಗುತ್ತದೆ. ಪ್ರಾಪಂಚಿಕ ಪ್ರಲೋಭನೆಗಳಿಗಾಗಿ ಮಾನವೀಯ ಮೌಲ್ಯಗಳನ್ನು ಮೀರಿ ನಡೆಯುವ ಮನುಜರಿಗೆ ಅತಿಯಾಸೆಯಿಂದ ಹೊರಗೆ ಬರಲು ಬಸವಣ್ಣನವರೇ ಕರೆ ನೀಡಿದ್ದಾರೆಂದು ಹೇಳುತ್ತ ಅನೇಕ ವಚನಗಳನ್ನು ಸೋದಾಹರಣವಾಗಿ ವಿವರಿಸಿದರು.
ಕಾಳ ಬೆಳದಿಂಗಳು, ಸಿರಿ ಎರಡೂ ಶಾಶ್ವತವಲ್ಲ. ಆಸೆ ಮಾನವರಲ್ಲಿ ದಾನವತೆ ತರುತ್ತದೆ. ಮರೆತು ಮಾನವರಾಗುವುದಕ್ಕಿಂತ ಅರಿತು ಶರಣರಾಗುವುದು ಲೇಸೆಂದರಲ್ಲದೆ ಶರಣರು ಮಹಿಳೆಯರ ಪ್ರತಿಭೆಗಳಿಗೆ ಮುಕ್ತ ವೇದಿಕೆ ನಿರ್ಮಿಸಿಕೊಟ್ಟವರೆಂದು ಕೊಂಡಾಡಿದರು.
ಶರಣರಿಂದ ಮಹಿಳೆಯರಿಗೆ ಮನ್ನಣೆ: ಧಾರ್ಮಿಕ, ಸಾಹಿತ್ಯಿಕ, ಸಾಮಾಜಿಕ ಗೌರವ ಮಹಿಳೆಯರಿಗೆ 12ನೇ ಶತಮಾನದಲ್ಲಿ ಸಿಕ್ಕಷ್ಟು ಬೇರಾವ ಕಾಲದಲ್ಲೂ ಸಿಕ್ಕಿಲ್ಲ. ಅಂತಲೇ ಆಗಿನ ಕಾಲದಲ್ಲೇ 35ಕ್ಕೂ ಹೆಚ್ಚು ಮಂದಿ ಶರಣೆಯರು ವತಚನಕಾತಿರ್ಯರಾದರು. ಅವರೆಲ್ಲರ ವಚನಗಳು ಸಂಗ್ರಹಿಸಲ್ಪಟ್ಟಿವೆ ಎಂದು ಹೆಮ್ಮೆಯಿಂದ ಹೇಳಿದ ಅವರು ಅಕ್ಕಮಹಾದೇವಿ, ಅಕ್ಕ ನಾಗಮ್ಮ, ಕಾಳವ್ವೆ, ಲಕ್ಕಮ್ಮ, ಮುಕ್ತಾಯಕ್ಕ ಸೇರಿದಂತೆ ಅನೇಕ ಶರಣೆಯರನ್ನು ಸ್ಮರಿಸುತ್ತ ಇಂತಹವರ ಬದುಕು, ಚಿಂತನೆಗಳು ಇಂದಿನ ಮಹಿಳೆಯರಿಗೆ ಆದರ್ಶವಾಗಲಿ ಎಂದು ಹಾರೈಸಿದರು.
ಅಂಬೇಡ್ಕರ್ ಸ್ಮರಣೆ: ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕ ಎಂವೈ ಪಾಟೀಲ್, ಶರಣ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಉಪಾಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರು ಬಸವಣ್ಣನವರ ವಚನಗಳ ವಿಚಾರ- ಪ್ರಚಾರದ ಬಗ್ಗೆ ಹೇಳುತ್ತ ಅಂಬೇಡ್ಕರರನ್ನು ಸ್ಮರಿಸಿದರು.
ಎಂ.ವೈ. ಪಾಟೀಲ್ ಮಾತನಾಡಿ, 12ನೇ ಶತಮಾನದ ಶರಣರ ಕ್ರಾಂತಿಕಾರಿ ಚಿಂತನೆಗಳು ಅಪರೂಪದ್ದು. ಎಲ್ಲ ಕಾಲದ ಉತ್ಕೃಷ್ಟ ಮೌಲ್ಯಗಳಾಗಿ ದಾಖಲಾದಂಥವು. ಅಂಬೇಡ್ಕರ್ ಅಂಥವರಿಂದ ಈ ವಿಚಾರಗಳು ಪ್ರಚಾರ ಕಂಡಿದ್ದರೆ ಇನ್ನೂ ಹೆಚ್ಚು ವ್ಯಾಪಕವಾಗುತ್ತಿದ್ದವು ಎಂದರು.
ಚಂದ್ರಕಾಂತ ಬೆಲ್ಲದ ಮಾತನಾಡಿ, ಅನುಭವ ಮಂಟಪದ ಪರಿಕಲ್ಪನೆ ಮೂಲಕ ಶರಣರು ಸಾಮಾಜಿಕ ನ್ಯಾಯ- ಸಮಾನತೆ ತತ್ವಗಳನ್ನು ಸಾರಿದವರು. ಸಂವಿಧಾನ ರಚಿಸಿರುವ ಡಾ. ಅಂಬೇಡ್ಕರ್ ಅವರು ಬಸವಣ್ಣನವರ ವಿಚಾರಧಾರೆಗಳ ಅನುಸಾರವೇ ಅನೇಕ ವಿಷಯಗಳ ಮೇಲೆ ಬೆಳಕು ಬೀರಿದ್ದಾರೆಂದರು.
ಶರಣರ ಚಿಂತನೆ ಸದಾ ದಾರಿದೀಪ: ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮಾತನಾಡಿ, ಶರಣರ ಚಿಂತನೆಗಳು ಸದಾ ಕಾಲ ದಾರಿದೀಪ. ವಚನಗಳ ಸಾರ ಅರಿತು ಬದುಕಿದವರು ಎಲ್ಲ ಸಮಸ್ಯೆಗಳಿಂದ ಮುಕ್ತಿ ಹೊಂದುತ್ತಾರೆಂದರು.
ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದ್ದೇವರು ಸಮ್ಮೇಳನ ಸಾನ್ನಿಧ್ಯ ವಹಿಸಿ ಮಾತನಾಡಿ, ಶರಣರ ಕ್ರಾಂತಿಕಾರಿ ಚಿಂತನೆಗಳನ್ನರಿತು ಎಲ್ಲರೂ ಬಾಳಿದಾಗ ಮಾತ್ರ ಸುಂದರ ಬದುಕು ಸಾಧ್ಯ ಎಂದರು.
ಮಾಜಿ ಶಾಸಕ ಶಶಿಲ್ ನಮೋಶಿ, ಡಾ. ನಾಗಾಬಾಯಿ ಬುಳ್ಳಾ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ, ಸ್ವಾಗತ ಸಮಿತಿ ಅಧ್ಯಕ್ಷ ಅಲ್ಲಂಪ್ರಭು ಪಾಟೀಲ್ ಮಾತನಾಡಿದರು.
ಮಾಜಿ ಎಂಎಲ್ಸಿ ಮಾರುತಿರಾವ ಮಾಲೆ, ಜಿಲ್ಲಾ ವೀರಶೈವ ಸಮಾಜದ ಡಿವಿ ಪಾಟೀಲ್, ಜೈಕರವೇ ಅಧ್ಯಕ್ಷ ಅರುಣ ಕುಮಾರ್ ಪಾಟೀಲ್, ಗೋರು ಚನ್ನಬಸಪ್ಪ ಸೇರಿದಂತೆ ಅನೇಕರು ವೇದಿಕೆಯ ಮೇಲಿದ್ದರು.
ಮಳಿಗೆಗಳ ಉದ್ಘಾಟನೆ: ಸಮ್ಮೇಳನದ ಅಂಗವಾಗಿ ಬೆಳಗ್ಗೆ ಪರಿಷತ್ತಿನ ಧ್ವಜಾರೋಹಣ, ಪುಸ್ತಕ ಮಳಿಗೆಗಳ ಉದ್ಘಾಟನೆ ಕಾರ್ಯ ನಡೆದವು. ಭೋಜನದ ನಂತರ ಮಧ್ಯಾಹ್ನದ 2 ಗೋಷ್ಠಿಗಳಲ್ಲಿ ವಿಷಯ ಪರಿಣಿತರು ಉರಿ ಬರಲಿ, ಸಿರಿ ಬರಲಿ ಹಾಗೂ ವಚನ ಸಂಸ್ಕೃತಿ ಮತ್ತು ಮಹಿಳಾ ದೌರ್ಜನ್ಯ ವಿಷಯವಾಗಿ ಉಪನ್ಯಾಸ ನೀಡಿದರು. ಸಮ್ಮೇಳನದಲ್ಲಿ ಮಾಲಾಶ್ರೀ ಕಣವಿ ಹಾಗೂ ತಂಡ, ಛಾಯಾ ಭರತನೂರ್ ಹಾಗೂ ಸಿ.ಎಸ್. ಮಾಲೀಪಾಟೀಲ್ ತಂಡದವರಿಂದ ವಚನ ಗಾಯನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.