ದಾಸ್ತಾನುದಾರರಿಗೆ ಗುಟ್ಕಾ ನಿಷೇಧ ವರದಾನ!
ಕನ್ನಡಪ್ರಭ ವಾರ್ತೆ, ಸೇಡಂ, ಜೂ.10
ರಾಜ್ಯ ಸರ್ಕಾರ ತಂಬಾಕು ವಿರೋಧಿ ದಿನದ ಕೊಡುಗೆಯಾಗಿ ರಾಜ್ಯಕ್ಕೆ ಗುಟ್ಕಾ ನಿಷೇಧದ ಆಜ್ಞೆ ಹೊರಡಿಸಿದ್ದು, ಮೇ 31ರಿಂದ ಏಕಾಏಕಿ ಜಾರಿಯಾಗಿದ್ದೇ ತಡ ಗುಟ್ಕಾ ವ್ಯಸನಿಗಳಿಗೆ ಮಾನಸಿಕ ತಯಾರಿಯ ಅವಕಾಶವೂ ಸಿಗಲಿಲ್ಲ. ಹಾಗಾಗಿ ಗುಟ್ಕಾ ಮಾರಾಟ ಒಂದು ಕಾಳಸಂತೆ ದಂಧೆಯಾಗಿ ಪರಿಣಮಿಸಿದೆ.
ಗುಟ್ಕಾ ನಿಷೇಧದ ಸುಳಿವು ಸಿಕ್ಕ ಕೂಡಲೇ ರಾಜ್ಯದ ಹಲವಾರು ಗುಟ್ಕಾ ಸಗಟು ಮಾರಾಟಗಾರರು ಹಾಗೂ ದಾಸ್ತಾನುದಾರರು ವಿವಿಧ ಬ್ರ್ಯಾಂಡ್ಗಳ ಹೇರಳವಾದ ಗುಟ್ಕಾ ದಾಸ್ತಾನು ಸಂಗ್ರಹಿಸಿದ್ದು, ಈಗ ಆ ಸಂಗ್ರಹಕ್ಕೆ ಸರಿಸುಮಾರು ನಾಲ್ಕರಿಂದ ಐದು ಪಟ್ಟು ಹೆಚ್ಚು ಬೆಲೆ ಲಭಿಸುತ್ತಿದೆ ಎನ್ನಲಾಗುತ್ತಿದೆ.
ಹೇರಳ ಹಣ ಮಾಡುವ ದಂಧೆ: ಸೇಡಂ ತಾಲೂಕಿನ ಪ್ರಮುಖ ಗುಟ್ಕಾ ಸಗಟು ಮಾರಾಟಗಾರರು ಈಗಾಗಲೇ ಸುಮಾರು ಒಂದು ಕೋಟಿಗಿಂತಲೂ ಹೆಚ್ಚಿನ ಮೌಲ್ಯದ ವಿವಿಧ ಬ್ರ್ಯಾಂಡ್ಗಳ ಗುಟ್ಕಾ ದಾಸ್ತಾನು ಮಾಡಿದ್ದಾರೆ. ಬೇಕಾಬಿಟ್ಟಿ ಬೆಲೆಗೆ ತಮಗೆ ನಂಬಿಕೆಯುಳ್ಳ ಹಾಗೂ ಕಾಯಂ ಚಿಲ್ಲರೆ ಮಾರಾಟಗಾರರಿಗೆ ಮಾತ್ರ ಮಾರಾಟ ಮಾಡುತ್ತಿದ್ದು, ಹೇರಳ ಹಣ ಮಾಡುವ ದಂಧೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ಮೊನ್ನೆಯಷ್ಟೇ ಅಧಿಕಾರಿಗಳು ಸೇಡಂ ಪಟ್ಟಣದಲ್ಲಿ ರೌಂಡ್ ಹೊಡೆದು ಅಂಗಡಿಗಳಲ್ಲಿ ಚೆಕ್ ಮಾಡುವ ಶಾಸ್ತ್ರ ಮುಗಿಸಿದ್ದು, ಹಲವು ಸಣ್ಣ ಪುಟ್ಟ ಪಾನ್ ಬೀಡಾ ಅಂಗಡಿಗಳಲ್ಲಿ ದೊರೆತ ಗುಟ್ಕಾಗಳನ್ನು ವಶಪಡಿಸಿಕೊಂಡು ಎಚ್ಚರಿಕೆ ಕೊಟ್ಟು ಹೋಗಿದ್ದಾರೆ. ಆದರೆ ಈಗಲೂ ಕಾಳಸಂತೆಯಲ್ಲಿ ಗುಟ್ಕಾ ಮಾರಾಟ ಯಥೇಚ್ಛವಾಗಿ ನಡೆಯುತ್ತಿದೆ. ಗುಟ್ಕಾ ಖರೀದಿಸಬೇಕಾದರೆ ಖರೀದಿದಾರ ಪರಿಚಯದವನಿರಬೇಕಷ್ಟೆ.
ಕಟ್ಟುನಿಟ್ಟಿನ ತಪಾಸಣೆ ಅಗತ್ಯ: ಒಟ್ಟಾರೆಯಾಗಿ ರಾಜ್ಯದಲ್ಲಿ ದಿಢೀರ್ ಗುಟ್ಕಾ ನಿಷೇಧಿಸಿದ ರಾಜ್ಯ ಸರ್ಕಾರದ ಆದೇಶದಿಂದ ಗುಟ್ಕಾ ವ್ಯಸನಿಗಳು ಏಕಾಏಕಿ ಚಟ ಬಿಡಲಾಗದೆ ನಾಲ್ಕೈದು ಪಟ್ಟು ಹಣ ತೆತ್ತು ಹಂತ ಹಂತವಾಗಿ ಬಿಡುವ ಪ್ರಯತ್ನ ಮಾಡುತ್ತಿರುವುದಾಗಿ ವ್ಯಸನಿಗಳು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಾರೆ.ಇದೇ ಸಂದರ್ಭದ ದುರ್ಲಾಭ ಪಡೆಯುವ ಹುನ್ನಾರದಿಂದಾಗಿ ಸಗಟು ಮಾರಾಟಗಾರರು ಕೋಟ್ಯನುಗಟ್ಟಲೇ ಬೆಲೆಯ ಗುಟ್ಕಾವನ್ನು ಅನಧಿಕೃತವಾಗಿ ದಾಸ್ತಾನು ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ತಪಾಸಣೆ ನಡೆಸಿದರೆ ಕಾಳ ಸಂತೆಕೋರರ ಬಣ್ಣ ಬಯಲಾಗಲಿದೆ ಹಾಗೂ ನಿಷೇಧದ ಆದೇಶ ತನ್ನಿಂತಾನೇ ಜಾರಿಗೊಳ್ಳುತ್ತದೆ. ಅದನ್ನು ಬಿಟ್ಟು ಬಡ ಬೀಡಾ ಅಂಗಡಿಗಳಿಗೆ ದಾಳಿ ನಡೆಸಿ ಹಳೆಯ ಅಳಿದುಳಿದ ಗುಟ್ಕಾ ವಶಪಡಿಸಿಕೊಂಡು ದಿನದ ದುಡಿಮೆ ಮೇಲೆ ಅವಲಂಬಿತ ವ್ಯಾಪಾರಿಗಳನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಅದರ ಬದಲು ದೊಡ್ಡ ದೊಡ್ಡ ವ್ಯಾಪಾರಿಗಳ ಹಾಗೂ ಪಟ್ಟಭದ್ರ ದಾಸ್ತಾನುಗಾರರನ್ನು ನಿಯಂತ್ರಿಸಲಿ ಎನ್ನುವುದು ಸಾರ್ವಜನಿಕರ ಒತ್ತಾಯ.
ಕ್ಯಾನ್ಸರ್ಗೆ ಕಾರಣವಾಗುವ ಗುಟ್ಕಾ ನಿಷೇಧದ ಹಿಂದಿನ ಸರ್ಕಾರದ ಉದ್ದೇಶ ಈಡೇರಬೇಕಾದರೆ ಸರ್ಕಾರ ಮೊದಲು ಉತ್ಪನ್ನ ಹಾಗೂ ಲಭ್ಯತೆಯ ನಿಯಂತ್ರಿಸಿದಲ್ಲಿ ಸರ್ಕಾರದ ಜನಪರ ಕಾಳಜಿಯ ಆಶಯ ಸಾಕಾರವಾಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

