ಗುಲ್ಬರ್ಗಾ

ಅಪರಾಧ ಕಡಿವಾಣಕ್ಕೆ ಬಂದಿದೆ 'ಟ್ಯಾಂಗೋ'!

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.12
ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸರು ಹೊಸ ವಾಹನಗಳ ವ್ಯವಸ್ಥೆ ಮಾಡಿದ್ದಾರೆ. ಟ್ಯಾಂಗೋ ಎಂಬ ಹೆಸರಿನ ಈ ವಾಹನಗಳನ್ನು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶಕುಮಾರ್ ಜನಸೇವೆಗೆ ಸಮರ್ಪಣೆ ಮಾಡಿದರು.
ದಿನದ 24 ಗಂಟೆಗಳ ಕಾಲ ನಗರದ ಮೂಲೆಮೂಲೆಯಲ್ಲಿ ಗಸ್ತು ತಿರುಗುವ ಟ್ಯಾಂಗೋ(ಕ್ಯಾಬ್) ಪೊಲೀಸ್ ಪಹರೆ ರೌಡಿಗಳ, ಸಮಾಜಘಾತಕ ಶಕ್ತಿಗಳ ಮತ್ತು ಸರಗಳ್ಳರ ಮೇಲೆ ಮಾತ್ರವಲ್ಲದೆ ಬೀದಿ ಕಾಮಣ್ಣರ, ಪುಂಡ ಪೋಕರರಿಗಳ ಮೇಲೂ ಹದ್ದಿನ ಕಣ್ಣಿಡಲಿದೆ.
ಲಭ್ಯ ವಾಹನಗಳಲ್ಲೇ ಮಾರ್ಪಾಡು: ಆರಂಭಿಕ ಹಂತವಾಗಿ 9 ಟ್ಯಾಂಗೋ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಪೊಲೀಸರ ಬೀಟ್ ಸಿಸ್ಟಿಂ(ಪಹರೆ, ಗಸ್ತು ತಿರುಗುವಿಕೆ) ಬಲಪಡಿಸುವುದಕ್ಕೆ ಈ ವಾಹನಗಳು ಸಹಕಾರಿಯಾಗಿವೆ. ಗೃಹ ಇಲಾಖೆ ಇದಕ್ಕಾಗಿಯೇ ಜಿಲ್ಲಾ ಪೊಲೀಸರಿಗೆ ಪ್ರತ್ಯೇಕ ವಾಹನಗಳನ್ನು ನೀಡಿಲ್ಲ. ಬದಲಿಗೆ ಜಿಲ್ಲಾ ಪೊಲೀಸ್ ಪಡೆಯಲ್ಲಿ ಲಭ್ಯವಿರುವ ವಾಹನಗಳಲ್ಲಿನ ಕೆಲ ವಾಹನಗಳಿಗೆ ಅಗತ್ಯ ಮಾರ್ಪಾಡುಗಳನ್ನು ಮಾಡಿ ಅವುಗಳಿಗೆ ಟ್ಯಾಂಗೋ ಎಂದು ನಾಮಕರಣ ಮಾಡಿ ಬೀಟ್ ಸಿಸ್ಟಮ್‌ಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಎಸ್ಪಿ ಸತೀಶಕುಮಾರ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಸಿಬ್ಬಂದಿ ನಿಯೋಜನೆ: ಪ್ರತಿಯೊಂದು ಟ್ಯಾಂಗೋ ವಾಹನಕ್ಕೆ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್, ಇಬ್ಬರು ಕಾನ್ಸ್‌ಟಬಲ್ ಮತ್ತು ಚಾಲಕನನ್ನು ನಿಯೋಜನೆ ಮಾಡಲಾಗಿದೆ. ದಿನಗಳೆದಂತೆ ಇಂಥ ಇನ್ನೂ ಹಲವಾರು ವಾಹನಗಳು ರಸ್ತೆಗಿಳಿಯಲಿವೆ. ಇವುಗಳನ್ನು ಮೊದಲ ಹಂತವಾಗಿ ಆಯ್ದ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ (ಅಪರಾಧ ಪ್ರಕರಣ ಹೆಚ್ಚಳವಾಗಿರುವ ಠಾಣೆಗಳಿಗೆ) ನೀಡಲಾಗುವುದು ಎಂದರು.
ಮುಂಬರುವ ದಿನಗಳಲ್ಲಿ ಹಂತಹಂತವಾಗಿ ಈ ವಾಹನಗಳನ್ನು ಇನ್ನುಳಿದ ಎಲ್ಲ ಇನ್ಸ್‌ಪೆಕ್ಟರ್‌ಗಳಿಗೆ ನೀಡಲಾಗುವುದು. ಟ್ಯಾಂಗೋ ಪೊಲೀಸರ ಬೀಟ್ ಸಿಸ್ಟಮ್‌ನ ಒಂದು ಭಾಗ ಮಾತ್ರ. ಟ್ಯಾಂಗೋ ವಾಹನಗಳು ರಸ್ತೆಗಿಳಿದ ತಕ್ಷಣ ಇತರೆ ಎಲ್ಲ ಪೊಲೀಸರ ಗಸ್ತು, ಪಹರೆಯನ್ನು ಖಂಡಿತವಾಗಿ ನಿಲ್ಲಿಸಲಾಗದು ಎಂದು ಸತೀಶಕುಮಾರ್ ಸ್ಪಷ್ಟಪಡಿಸಿದರು.
ಅಧಿಕ ಹಣವಿದ್ದಲ್ಲಿ ಬೆಂಗಾವಲು ಸೇವೆ: ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವುದು ಈ ವಾಹನಗಳ ಪ್ರಮುಖ ಉದ್ದೇಶ ಎಂದು ಹೇಳಿದರು.
ಎಸ್ಪಿ ಸತೀಶಕುಮಾರ್ ಅವರು ಬುಧವಾರ ತಮ್ಮ ಅಧೀನ ಅಧಿಕಾರಿಗಳ ಜತೆ ಸಭೆ ನಡೆಸಿ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಹಾಗೂ ರೌಡಿಗಳನ್ನು, ಮರಿ ರೌಡಿಗಳನ್ನು, ಸಮಾಜಘಾತುಕ ಶಕ್ತಿಗಳನ್ನು ಮಾತ್ರವಲ್ಲದೆ ರೋಡ್ ರೋಮಿಯೋಗಳನ್ನು ಹದ್ದುಬಸ್ತಿನಲ್ಲಿಡಲು ಅನುಸರಿಸಬೇಕಾದ ಹೊಸ ಕಾರ್ಯ ತಂತ್ರಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದರಲ್ಲದೆ ಟ್ಯಾಂಗೋ- ಪೊಲೀಸರ ಗಸ್ತು ವಾಹನಗಳ ಕಾರ್ಯಶೈಲಿಯ ರೂಪುರೇಷ ಸಿದ್ಧಪಡಿಸಿದರು.
ಅಪರಾಧ ಪ್ರಕರಣ ಹೆಚ್ಚಳ: ಗುಲ್ಬರ್ಗ ನಗರ- ಜಿಲ್ಲೆ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ವಿಶೇಷವಾಗಿ ಗುಲ್ಬರ್ಗ ನಗರದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತು ಹಣಕಾಸಿನ ವಹಿವಾಟುವಿನಲ್ಲಿ ಗಣನೀಯ ಹೆಚ್ಚಳವಾಗಿದೆ. ಎಲ್ಲಕ್ಕಿಂತ ಮೀಗಿಲಾಗಿ ಗುಲ್ಬರ್ಗ ನಗರ- ಜಿಲ್ಲೆಯಲ್ಲಿನ ಜನಸಂಖ್ಯೆ ಕೂಡ ಹೆಚ್ಚುತ್ತಲಿದೆ. ಹೀಗಾಗಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ಟ್ಯಾಂಗೋ- ಪೊಲೀಸರ ಗಸ್ತು ವಾಹನಗಳಂಥ ಹೊಸ ಕಾರ್ಯತಂತ್ರ ಅನುಸರಿಸುವುದು ಅಗತ್ಯ ಎಂದು ಎಸ್ಪಿ ಹೇಳಿದರು.


ಜಪ್ತಿ ಮಾಡಿದ್ದ 1. 54 ಕೋಟಿ
ಸ್ವತ್ತು ವಾರಸುದಾರರಿಗೆ ಹಸ್ತಾಂತರ
ಗುಲ್ಬರ್ಗ: ಪ್ರಸಕ್ತ ವರ್ಷದ ಜನವರಿಯಿಂದ ಏಪ್ರಿಲ್ ಅಂತ್ಯದವರೆಗೆ ಜಿಲ್ಲೆಯಲ್ಲಿ 2.16 ಕೋಟಿ ಮೌಲ್ಯದ ಸ್ವತ್ತುಗಳ ಕಳ್ಳತನವಾಗಿದ್ದು, ಅದರಲ್ಲಿ ಜಪ್ತಿ ಮಾಡಿದ 1.54 ಕೋಟಿ ಮೌಲ್ಯದ ಸ್ವತ್ತನ್ನು ಅವುಗಳ ವಾರಸುದಾರರಿಗೆ ಬುಧವಾರ ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶಕುಮಾರ್ ಹಸ್ತಾಂತರ ಮಾಡಿದರು.
ಕಳ್ಳರಿಂದ ಜಪ್ತಿ ಮಾಡಲಾದ ವಸ್ತುಗಳನ್ನು ಅವುಗಳ ವಾರಸುದಾರರಿಗೆ ಹಸ್ತಾಂತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿಯಿಂದ ಏಪ್ರಿಲ್‌ವರೆಗೆ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ 125 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 80 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಪತ್ತೆ ಹಚ್ಚಲಾದ ಪ್ರಕರಣಗಳಲ್ಲಿ 743 ಗ್ರಾಂ ಚಿನ್ನ, 815 ಗ್ರಾಂ ಬೆಳ್ಳಿ, 21 ಬೈಕ್ ಜಪ್ತಿ ಮಾಡಿ ಅವುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದರು.
ನ್ಯಾಯಾಂಗ ಬಂಧನಕ್ಕೆ68 ಆರೋಪಿಗಳು: ಇದಲ್ಲದೆ ಇತರ 18 ಪ್ರಕರಣಗಳನ್ನು ಪತ್ತೆ ಹಚ್ಚಿ 68 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪರಾಧ ಪ್ರಕರಣಗಳ ತಡೆಗೆ ನಗರದ 15 ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಇನ್ನೂ ಕೆಲವು ಕಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಸಾರ್ವಜನಿಕರ ಸಹಭಾಗಿತ್ವದ ಅಗತ್ಯವಿದೆ. ಸಾರ್ವಜನಿಕರು ಸಹಕಾರ ನೀಡಿದರೆ ಉಳಿದ ಕಡೆಯೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.